
The *Prana Pratishthapana* (consecration) of new stone idols, including that of Goddess Kariyamma Devi, was conducted with great grandeur in Kesarahatti.

ಕೇಸರಹಟ್ಟಿಯಲ್ಲಿ ಕರಿಯಮ್ಮ ದೇವಿ ಸೇರಿದಂತೆ ನೂತನ ಶಿಲಾಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ವೈಭವದಿಂದ ನೆರವೇರಿತು

ಸಾವಿರಾರು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳು; ತವರು ಮನೆಗೆ ಆಗಮಿಸಿದ ಹೆಣ್ಣುಮಕ್ಕಳ ಸಂಭ್ರ
ಕೇಸರಹಟ್ಟಿ: ಗ್ರಾಮದ ಆರಾಧ್ಯ ದೇವತೆ ಶ್ರೀ ಕರಿಯಮ್ಮ ದೇವಿ ಸೇರಿದಂತೆ ಶ್ರೀ ಈಶ್ವರ, ನಂದಿ ಹಾಗೂ ಬನ್ನಿಮಹಾಂಕಾಳಿ ದೇವರುಗಳ ನೂತನ ಶಿಲಾಮೂರ್ತಿಗಳ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮ ಸೋಮವಾರ ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಅದ್ದೂರಿಯಾಗಿ ನೆರವೇರಿತು.
ಹೆಬ್ಬಾಳ ಸಂಸ್ಥಾನ ಮಠದ ಷ.ಬ್ರ.108 ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಕನಕಗಿರಿಯ ಸುವರ್ಣಗಿರಿ ವಿರಕ್ತಮಠದ ಶ್ರೀ ಶ್ರೀ ಮ.ನಿ.ಪ್ರ. ಡಾ. ಚನ್ನಮಲ್ಲ ಮಹಾಸ್ವಾಮಿಗಳು, ಷ.ಬ್ರ. ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಅರಳಹಳ್ಳಿಯ ವೇ.ಮೂ. ಶ್ರೀ ಗವಿಸಿದ್ಧಯ್ಯ ಸ್ವಾಮಿಗಳು, ಸುಳೇಕಲ್ನ ವೇ.ಮೂ. ಶ್ರೀ ಪದ್ಮಾಕ್ಷರಯ್ಯ ಸ್ವಾಮಿಗಳು, ವೇ.ಮೂ. ಶ್ರೀ ವೀರೇಶಯ್ಯ ಸ್ವಾಮಿಗಳು, ವೇ.ಮೂ. ಶ್ರೀ ಅಮರಯ್ಯ, ವೇ.ಮೂ. ಶ್ರೀ ನಿಜಲಿಂಗಯ್ಯ ಹಾಗೂ ವೇ.ಮೂ. ಶ್ರೀ ಶರಣಯ್ಯ ಸ್ವಾಮಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಹಾಗೂ ಪ್ರಾಣಪ್ರತಿಷ್ಠಾಪನಾ ಕಾರ್ಯಗಳು ವೈಭವಯುತವಾಗಿ ಜರುಗಿದವು.
ಕಾರ್ಯಕ್ರಮದ ಅಂಗವಾಗಿ ಕಳೆದ ಒಂದು ವಾರದಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು. ಗ್ರಾಮದ ಪ್ರಮುಖ ಬೀದಿಗಳು ತಳಿರು-ತೋರಣ, ಕೇಸರಿ ಧ್ವಜಗಳು ಹಾಗೂ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದವು. ಮನೆಗಳ ಮುಂದೆ ಮಹಿಳೆಯರು ಆಕರ್ಷಕ ರಂಗೋಲಿಗಳನ್ನು ಬಿಡಿಸಿ ಸಂಭ್ರಮಿಸಿದರು.
ಈ ಧಾರ್ಮಿಕ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಗ್ರಾಮದ ಹೆಣ್ಣುಮಕ್ಕಳು ತಮ್ಮ ಗಂಡನ ಮನೆಯಿಂದ ತವರು ಮನೆಗೆ ಆಗಮಿಸಿ, ಹೊಸ ಸೀರೆ ಧರಿಸಿ, ಉಡಿ ತುಂಬಿಸಿಕೊಂಡು ಸಂಪ್ರದಾಯಬದ್ಧವಾಗಿ ದೇವಿಯ ದರ್ಶನ ಪಡೆದರು. ಹಲವು ನಗರಗಳಲ್ಲಿ ಉದ್ಯೋಗ ಹಾಗೂ ವಿವಿಧ ಕಾರಣಗಳಿಂದ ನೆಲೆಸಿರುವ ಗ್ರಾಮದ ಮೂಲ ನಿವಾಸಿಗಳು ಕೂಡ ತಮ್ಮ ಊರಿಗೆ ಆಗಮಿಸಿ ಕುಟುಂಬ ಸಮೇತರಾಗಿ ದೇವಿಯ ದರ್ಶನ ಪಡೆದು ಪುನೀತರಾದರು.
ಕಾರ್ಯಕ್ರಮದಲ್ಲಿ ಗ್ರಾಮದ ಗುರುಹಿರಿಯರು, ಮಹಿಳೆಯರು, ಮಕ್ಕಳು, ಯುವಕರು, ಶ್ರೀ ಕರಿಯಮ್ಮ ದೇವಿ ಸೇವಾ ಟ್ರಸ್ಟ್ ಸಮಿತಿಯ ಪದಾಧಿಕಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.
ಪ್ರಾಣಪ್ರತಿಷ್ಠಾಪನಾ ಮಹೋತ್ಸವವನ್ನು ಯಶಸ್ವಿಗೊಳಿಸಲು ತನು, ಮನ, ಧನ ಹಾಗೂ ಧಾನ್ಯಗಳ ರೂಪದಲ್ಲಿ ಸೇವೆ ಸಲ್ಲಿಸಿ, ಸಹಾಯ-ಸಹಕಾರ ನೀಡಿದ ದಾನಿಗಳು, ಭಕ್ತರು, ಗ್ರಾಮಸ್ಥರು ಹಾಗೂ ಪ್ರತಿಯೊಬ್ಬ ಸಹೃದಯಿಗಳಿಗೂ ಶ್ರೀ ಕರಿಯಮ್ಮ ದೇವಿ ಸೇವಾ ಟ್ರಸ್ಟ್ ಸಮಿತಿಯ ಪದಾಧಿಕಾರಿಗಳು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.


