
88% rainfall deficit during the Northeast Monsoon;
Directive issued to conduct a joint survey and submit a report within a stipulated timeframe.

ಈಶಾನ್ಯ ಮುಂಗಾರಿನಲ್ಲಿ ಶೇ. 88ರಷ್ಟು ಮಳೆ ಕೊರತೆ;
ಜಂಟಿ ಸಮೀಕ್ಷೆ ನಡೆಸಿ ಕಾಲಮಿತಿಯೊಳಗೆ ವರದಿ ಸಲ್ಲಿಸಲು ಸೂಚನೆ

ಬೆಳೆ ಕಟಾವು ಪ್ರಯೋಗ ತ್ವರಿತಗೊಳಿಸಿ; ಅರ್ಹ ರೈತರಿಗೆ ಬೆಳೆ ವಿಮೆ ಪರಿಹಾರ ದೊರಕಿಸಿ: ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ
ಕೊಪ್ಪಳ, ನವೆಂಬರ್ 16, : ಬೆಳೆ ಕಟಾವು ಪ್ರಯೋಗಗಳ ಬಾಕಿ ವಿವರಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಹಾಗೂ ಮಳೆ ಕೊರತೆಯಿಂದ ಬಾಧಿತರಾದ ಅರ್ಹ ರೈತರಿಗೆ ಬೆಳೆ ವಿಮೆ ಪರಿಹಾರ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳೆ ಕಟಾವು ಪ್ರಯೋಗಗಳು ಹಾಗೂ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ (ಬೆಳೆ ವಿಮೆ) ಬಿತ್ತನೆ ವಿಫಲ ವಿಕೋಪ (ಬಿತ್ತನೆ ವೈಫಲ್ಯ) ಮತ್ತು ಮಧ್ಯ ಹಂಗಾಮಿನ ಪ್ರತಿಕೂಲತೆ ಕುರಿತು ನ. 16ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿ, ತೋಟಗಾರಿಕೆ, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಅಧಿಕಾರಿಗಳೊಂದಿಗೆ ತಾಲ್ಲೂಕುವಾರು ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಬೆಳೆ ವಿಮೆ ಮತ್ತು ಕಟಾವು ಪ್ರಯೋಗಗಳ ವಿಚಾರದಲ್ಲಿ ಯಾವುದೇ ನಿರ್ಲಕ್ಷö್ಯ ತೋರದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಳೆ ಕೊರತೆ; ಜಂಟಿ ಸಮೀಕ್ಷೆಗೆ ಸೂಚನೆ: ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ಪ್ರಮುಖವಾಗಿ ಕಡಲೆ ಮತ್ತು ಹಿಂಗಾರು ಜೋಳ ಬೆಳೆಗಳಿಗೆ ಹಿನ್ನಡೆಯಾಗಿದೆ.
ಬಿತ್ತನೆ ವಿಫಲ ವಿಕೋಪ ಹಾಗೂ ಮಧ್ಯ ಹಂಗಾಮಿನ ಪ್ರತಿಕೂಲತೆ ಕುರಿತು ಸಂಬಂಧಪಟ್ಟ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ, ನಿಗದಿತ ಅವಧಿಯೊಳಗೆ ವರದಿ ಸಲ್ಲಿಸುವ ಮೂಲಕ ಅರ್ಹ ರೈತರಿಗೆ ವಿಮಾ ಪರಿಹಾರ ದೊರೆಯುವಂತೆ ನೋಡಿಕೊಳ್ಳಬೇಕು. ದಿನಪತ್ರಿಕೆಗಳ ಮೂಲಕ ರೈತರಿಗೆ ಬೆಳೆ ವಿಮೆ ಕುರಿತು ವ್ಯಾಪಕ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಂಟಿ ಕೃಷಿ ನಿರ್ದೇಶಕ ಕೃಷ್ಣಮೂರ್ತಿ ಜಿ.ಡಿ ಮಾತನಾಡಿ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆ.ಎಸ್.ಎನ್.ಡಿ.ಎಂ.ಸಿ) ನ. 15ರ ವರದಿಯಂತೆ, ಈಶಾನ್ಯ ಮುಂಗಾರು ಅವಧಿಯಲ್ಲಿ (ಅ. 1 ರಿಂದ ನ. 15ರವರೆಗೆ) ಜಿಲ್ಲೆಯಲ್ಲಿ 127.7 ಮಿ.ಮೀ. ವಾಡಿಕೆ ಮಳೆಗೆ ಬದಲಾಗಿ 15.2 ಮಿ.ಮೀ. ಮಳೆಯಾಗಿದ್ದು, ಶೇ. 88ರಷ್ಟು ಕೊರತೆ ಉಂಟಾಗಿದೆ. ಜಿಲ್ಲೆಯ ಎಲ್ಲಾ ಏಳು ತಾಲ್ಲೂಕುಗಳಲ್ಲೂ ಶೇ. 84ಕ್ಕಿಂತ ಹೆಚ್ಚು ಮಳೆ ಕೊರತೆ ದಾಖಲಾಗಿದೆ. ಹಿಂಗಾರು ಹಂಗಾಮಿನಲ್ಲಿ ನ. 13ರವರೆಗೆ 1,70,315 ಹೆಕ್ಟೇರ್ ಗುರಿಯ ಪೈಕಿ 1,30,165 ಹೆಕ್ಟೇರ್ (ಶೇ. 76.4) ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಹಿಂಗಾರು ಜೋಳ 25,950 ಹೆಕ್ಟೇರ್ ಗುರಿಯ ಪೈಕಿ 10,855 ಹೆಕ್ಟೇರ್ (ಶೇ. 41.8) ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಯೋಜನೆಯ ಮಾರ್ಗಸೂಚಿಯಂತೆ, ವಿಮಾ ಘಟಕದ ಸಾಮಾನ್ಯ ಬಿತ್ತನೆ ಕ್ಷೇತ್ರದ ಶೇ. 75ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗದಿದ್ದಲ್ಲಿ ಅಥವಾ ಮೊಳಕೆ ಬಾರದಿದ್ದಲ್ಲಿ, ಗ್ರಾಮ ಪಂಚಾಯಿತಿ ಮಟ್ಟದ ಮುಖ್ಯ ಬೆಳೆಗಳಿಗೆ (ಜೋಳ ಮಳೆಯಾಶ್ರೀತ, ಕಡಲೆ ಮಳೆಯಾಶ್ರಿತ ಮತ್ತು ಬೇಸಿಗೆ ಶೇಂಗಾ ನೀರಾವರಿ) ಬಿತ್ತನೆ ವಿಫಲ ವಿಕೋಪದಡಿ ವಿಮಾ ಮೊತ್ತದ ಗರಿಷ್ಠ ಶೇ. 25ರಷ್ಟು ಪರಿಹಾರಕ್ಕೆ ಅವಕಾಶವಿದೆ. ಬಿತ್ತನೆಯಾದ ಒಂದು ತಿಂಗಳ ನಂತರ ನಿರೀಕ್ಷಿತ ಇಳುವರಿಯು ಸಾಮಾನ್ಯ ಇಳುವರಿಯ ಶೇ. 50ಕ್ಕಿಂತ ಕಡಿಮೆಯಾಗುವ ಪರಿಸ್ಥಿತಿ ಇದ್ದಲ್ಲಿ, ಮಧ್ಯ ಹಂಗಾಮಿನ ಪ್ರತಿಕೂಲತೆಯಡಿ ಅಂದಾಜು ಪರಿಹಾರದ ಶೇ. 25ರಷ್ಟನ್ನು ಮುಂಗಡವಾಗಿ ಪಾವತಿಸಲು ಅವಕಾಶವಿದ್ದು, ಅದನ್ನು ಅಂತಿಮ ಪರಿಹಾರದಲ್ಲಿ ಹೊಂದಾಣಿಕೆ ಮಾಡಲಾಗುತ್ತದೆ. ಬೆಳೆ ವಿಮೆಗೆ ನೋಂದಾಯಿಸಿಕೊAಡ ರೈತರಿಗೆ ಮಾತ್ರ ಈ ಪರಿಹಾರ ಅನ್ವಯಿಸುತ್ತದೆ ಎಂದು ಸಭೆಗೆ ತಿಳಿಸಿದರು.
2026-27ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿಗೆ ಜಿಲ್ಲೆಯಲ್ಲಿ ಇಫ್ಕೋ ಟೋಕಿಯೊ ಜನರಲ್ ಇನ್ಶೂರೆನ್ಸ್ ಕಂಪನಿಯ ಮೂಲಕ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಜಿಲ್ಲೆಯ ಎಲ್ಲಾ ಅಧಿಸೂಚಿತ ಬೆಳೆಗಳಿಗೆ ರೈತರು ವಿಮಾ ಕಂತು ಪಾವತಿಸಬೇಕು. ಹಿಂಗಾರು ಹಂಗಾಮಿನ ಜೋಳ, ಮುಸುಕಿನ ಜೋಳ, ಸೂರ್ಯಕಾಂತಿ (ಮಳೆಯಾಶ್ರಿತ ಮತ್ತು ನೀರಾವರಿ); ಕುಸುಮೆ (ಮಳೆಯಾಶ್ರಿತ) ಬೆಳೆಗಳ ನೋಂದಣಿಗೆ ನವೆಂಬರ್ 30 ಕೊನೆಯ ದಿನವಾಗಿದೆ.
ಗೋಧಿ (ನೀರಾವರಿ ಮತ್ತು ಮಳೆಯಾಶ್ರಿತ) ಬೆಳೆಗೆ ನೋಂದಾಯಿಸಲು ಡಿಸೆಂಬರ್ 15 ಕೊನೆಯ ದಿನ. ಕಡಲೆ (ಮಳೆಯಾಶ್ರಿತ ಮತ್ತು ನೀರಾವರಿ) ಬೆಳೆಗೆ ಡಿಸೆಂಬರ್ 31 ಕೊನೆಯ ದಿನವಾಗಿದೆ. ಶೇಂಗಾ ಮತ್ತು ಭತ್ತ (ನೀರಾವರಿ) ಬೆಳೆ ನೋಂದಾಯಿಸಲು 2027 ರ ಫೆಬ್ರವರಿ 26 ಕೊನೆಯ ದಿನವಾಗಿದೆ.
ರೈತರು ಹತ್ತಿರದ ಬ್ಯಾಂಕ್ ಅಥವಾ ಆರ್ಥಿಕ ಸಂಸ್ಥೆ, ಗ್ರಾಮ ಒನ್ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (ಸಿ.ಎಸ್.ಸಿ) ಬೆಳೆ ವಿಮೆಗೆ ನೋಂದಾಯಿಸಬಹುದು. ನೋಂದಣಿಗೆ ಫ್ರೂಟ್ಸ್ ಐಡಿ (ಎಫ್‌ಐಡಿ) ಕಡ್ಡಾಯವಾಗಿದ್ದು, ಪಹಣಿ, ಆಧಾರ್ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ವಿವರ ನೀಡಬೇಕು.
ಜಮೀನಿನಲ್ಲಿ ಬಿತ್ತನೆ ಮಾಡಿದ ಬೆಳೆಯನ್ನೇ ವಿಮೆಗೆ ನೋಂದಾಯಿಸಬೇಕು. ಕಳೆದ ಸಾಲಿನ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 33,217 ಅರ್ಜಿಗಳು
ನೋಂದಣಿಯಾಗಿದ್ದವು. ಈ ಸಾಲಿನಲ್ಲಿ ನ. 16ರವರೆಗೆ 613 ಅರ್ಜಿಗಳು ನೋಂದಣಿಯಾಗಿದ್ದು, ಪ್ರಮುಖ ಬೆಳೆಗಳ ನೋಂದಣಿಗೆ ಇನ್ನೂ ಕಾಲಾವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ವಿಮಾ ಸಂಸ್ಥೆಯ ಉಚಿತ ಸಹಾಯವಾಣಿ 1800 103 5490 ಸಂಪರ್ಕಿಸಬಹುದು ಎಂದು ಹೇಳಿದರು.
ಮೊಬೈಲ್ ಆ್ಯಪ್ ಮೂಲಕ ರಸಗೊಬ್ಬರ ಮುಂಗಡ ಕಾಯ್ದಿರಿಸುವ ವ್ಯವಸ್ಥೆ ಇದ್ದು, ರೈತರಿಗೆ ಯೂರಿಯಾ ಮತ್ತು ಡಿಎಪಿ ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಲು ಹಾಗೂ ಕಾಳಸಂತೆ ಮಾರಾಟಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರದ ನೂತನ ‘ಮೊಬೈಲ್ ಆ್ಯಪ್ ಮೂಲಕ ಮುಂಗಡ ರಸಗೊಬ್ಬರ ಕಾಯ್ದಿರಿಸುವ’ (ಇ-ಬುಕ್ಕಿಂಗ್) ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಿದೆ. ಡಿಸೆಂಬರ್ ಮಧ್ಯಭಾಗದಿಂದ ಈ ವ್ಯವಸ್ಥೆ ಜಾರಿಗೆ ಬರಲಿದ್ದು, ರೈತರು ತಮ್ಮ ಸೆಂಟ್ರಲ್ ಐಡಿ ಆಧಾರದ ಮೇಲೆ ಮೂರು ದಿನಗಳವರೆಗೆ ರಸಗೊಬ್ಬರ ಕಾಯ್ದಿರಿಸಲು ಅವಕಾಶ ಇರುತ್ತದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಹಾಗೂ ವಿತರಕರಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಟಿ. ಕೃಷ್ಣಮೂರ್ತಿ, ಕೊಪ್ಪಳದ ಸಹಾಯಕ ಆಯುಕ್ತರಾದ ಮಹೆಬೂಬ್ ಜೀಲಾನ್ ಖುರೇಶಿ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಮಾರುತಿ, ಪಶು ಇಲಾಖೆ ಉಪನಿರ್ದೇಶಕರಾದ ಡಾ. ಪಿ.ಎಂ. ಮಲ್ಲಯ್ಯ ಸೇರಿದಂತೆ ವಿವಿಧ ತಾಲ್ಲೂಕುಗಳ ತಹಶೀಲ್ದಾರರು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಕೃಷಿ ಅಧಿಕಾರಿಗಳು ಹಾಗೂ ಬೆಳೆ ವಿಮಾ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.


