
Demand for a fixed honorarium of ₹15,000 for ASHA workers

ಆಶಾ ಕಾರ್ಯಕರ್ತೆಯರಿಗೆ ₹15 ಸಾವಿರ ನಿಶ್ಚಿತ ಗೌರವಧನಕ್ಕೆ ಆಗ್ರಹ

ನ.17ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಹೋರಾಟ
ಗಂಗಾವತಿ, ನ.11: ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹15 ಸಾವಿರ ನಿಶ್ಚಿತ ಗೌರವಧನ ನೀಡುವುದು ಸೇರಿದಂತೆ ಬಹುದಿನಗಳ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನವೆಂಬರ್ 17ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದೆ.
ಆಶಾ ಕಾರ್ಯಕರ್ತೆಯರು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಹಗಲಿರುಳು ಜನರ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದರೆ, ಅವರ ಶ್ರಮಕ್ಕೆ ತಕ್ಕ ಗೌರವಧನ ದೊರೆಯುತ್ತಿಲ್ಲ ಎಂಬುದು ಕಾರ್ಯಕರ್ತೆಯರ ಅಳಲಾಗಿದೆ.
ಕಳೆದ ಹತ್ತು ವರ್ಷಗಳಿಂದ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆರೋಗ್ಯ ಇಲಾಖೆ ಹಾಗೂ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿ, ಹೋರಾಟ ನಡೆಸಿದರೂ ಸೂಕ್ತ ಸ್ಪಂದನೆ ದೊರೆತಿಲ್ಲ. ಈ ಹಿಂದೆ ಅಂದಿನ ಮುಖ್ಯಮಂತ್ರಿಗಳು ಮಾಸಿಕ ₹10 ಸಾವಿರ ಗೌರವಧನ ನೀಡುವುದಾಗಿ ಭರವಸೆ ನೀಡಿದ್ದರೂ ಅದು ಸಮರ್ಪಕವಾಗಿ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಕಾರ್ಯಕರ್ತೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಒಂಬತ್ತು ವರ್ಷಗಳಲ್ಲಿ ರಾಜ್ಯ ಸರ್ಕಾರದಿಂದ ಗೌರವಧನದಲ್ಲಿ ಕೇವಲ ₹1,500 ಹೆಚ್ಚಳವಾಗಿದ್ದು, ಇಂದಿನ ಬೆಲೆ ಏರಿಕೆ ಹಾಗೂ ಕುಟುಂಬ ನಿರ್ವಹಣೆಯ ವೆಚ್ಚಕ್ಕೆ ಈ ಮೊತ್ತ ಸಾಲುತ್ತಿಲ್ಲ. ಹೋರಾಟದ ಸಂದರ್ಭದಲ್ಲಿ ಭರವಸೆ ನೀಡಿ ನಂತರ ಬೇಡಿಕೆಗಳನ್ನು ನಿರ್ಲಕ್ಷಿಸುವ ಧೋರಣೆ ಮುಂದುವರಿದಿದೆ ಎಂದು ದೂರಿದ್ದಾರೆ.
ಆದ್ದರಿಂದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹15 ಸಾವಿರ ನಿಶ್ಚಿತ ಗೌರವಧನ ನೀಡಬೇಕು ಹಾಗೂ ಬಾಕಿ ಇರುವ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ನ.17ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಗಂಗಾವತಿ ತಾಲೂಕಿನ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕು ವೈದ್ಯಾಧಿಕಾರಿ ಡಾ. ಗೌರಿಶಂಕರ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸರ್ಕಾರ ಕೂಡಲೇ ಸ್ಪಂದಿಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ನಗರ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಆಚಾರ್ಯ, ಗೌಸೀಯಾ, ದೀಪಾ, ಆಪ್ರೀನ್, ರೇಖಾ, ಸಂಗೀತಾ, ಸುಮಾ, ಮೀನಾಕ್ಷಿಬಾಯಿ, ಸರೋಜಾಬಾಯಿ, ಜ್ಯೋತಿ, ಮಮ್ಮತಾಜ್ ಬೇಗಂ, ಸಮೀರಾ, ಸವಿತಾ, ಕವಿತಾ ಹಾಗೂ ಈರಮ್ಮ ಸೇರಿದಂತೆ ಹಲವು ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಕಲ್ಯಾಣಸಿರಿ ಕನ್ನಡ ದಿನಪತ್ರಿಕೆ ಹಾಗೂ ವೆಬ್ ನ್ಯೂಸ್, ಗಂಗಾವತಿ



