ಬ್ಯಾಂಕಿಂಗ್ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸಲು ವಿಶೇಷ ಅಭಿಯಾನ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
ಜಾಹೀರಾತು
A special campaign to extend banking facilities to the general public

ಬ್ಯಾಂಕಿಂಗ್ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸಲು ವಿಶೇಷ ಅಭಿಯಾನ

ಜಾಹೀರಾತು

ಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನದ ಜಾಗೃತಿ ಪೋಸ್ಟರ್ ಬಿಡುಗಡೆ

ಕೊಪ್ಪಳ, ಅ. 29: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿಂಗ್ ಹಾಗೂ ಹಣಕಾಸು ಸೇವೆಗಳನ್ನು ತಲುಪಿಸುವ ಉದ್ದೇಶದಿಂದ ಭಾರತ ಸರ್ಕಾರದ ಹಣಕಾಸು ಸೇವೆಗಳ ಇಲಾಖೆ ಹಮ್ಮಿಕೊಂಡಿರುವ **‘ಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ’**ದ ವಿಶೇಷ ಜಾಗೃತಿ ಪೋಸ್ಟರ್ ಅನ್ನು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಬಿಡುಗಡೆಗೊಳಿಸಿದರು.
ಮಂಗಳವಾರ (ಅ. 27) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಕೆ. ಮಾರುತಿ ಅವರು ಅಭಿಯಾನದ ಉದ್ದೇಶ ಹಾಗೂ ಸಾರ್ವಜನಿಕರಿಗೆ ಲಭ್ಯವಾಗುವ ವಿವಿಧ ಬ್ಯಾಂಕಿಂಗ್ ಸೇವೆಗಳ ಕುರಿತು ಮಾಹಿತಿ ನೀಡಿದರು.
ಅಕ್ಟೋಬರ್ 21ರಿಂದ ಡಿಸೆಂಬರ್ 31ರವರೆಗೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಬ್ಯಾಂಕ್ ಶಾಖೆಗಳು, ಗ್ರಾಮ ಪಂಚಾಯಿತಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಹಯೋಗದಲ್ಲಿ ಸಾರ್ವಜನಿಕರಿಗೆ ಸ್ಥಳದಲ್ಲೇ ವಿವಿಧ ಆರ್ಥಿಕ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಶಿಬಿರಗಳಲ್ಲಿ ದೊರೆಯುವ ಪ್ರಮುಖ ಸೇವೆಗಳು
ವಿಮಾ ಮತ್ತು ಪಿಂಚಣಿ ಯೋಜನೆಗಳು: ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY), ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಹಾಗೂ ಅಟಲ್ ಪಿಂಚಣಿ ಯೋಜನೆ (APY) ಅಡಿಯಲ್ಲಿ ನೋಂದಣಿ.
ಆಧಾರ್ ಜೋಡಣೆ: ಪಿಎಂಜೆಜೆಬಿವೈ ಮತ್ತು ಪಿಎಂಎಸ್‌ಬಿವೈ ಯೋಜನೆಗಳಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವ ಸೌಲಭ್ಯ.
ರೈತರಿಗೆ ನೆರವು: ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಹಾಗೂ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅರ್ಜಿಗಳ ಸ್ವೀಕಾರ.
ಬ್ಯಾಂಕ್ ಖಾತೆಗಳ ನಿರ್ವಹಣೆ: ಪ್ರಧಾನಮಂತ್ರಿ ಜನ್ ಧನ್ ಯೋಜನೆ ಹಾಗೂ ಇತರೆ ಉಳಿತಾಯ ಖಾತೆಗಳಿಗೆ ಮರು-ಕೆವೈಸಿ (Re-KYC) ಮತ್ತು ಹೊಸ ಸಿ-ಕೆವೈಸಿ (C-KYC) ನೋಂದಣಿ.
ಸ್ಥಗಿತ ಖಾತೆಗಳ ಪುನರಾರಂಭ: ದೀರ್ಘಕಾಲದಿಂದ ವಹಿವಾಟು ನಡೆಯದೆ ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗಳನ್ನು ಮರುಚಾಲನೆಗೊಳಿಸುವುದು.
ನಾಮಿನಿ ವಿವರಗಳ ನವೀಕರಣ: ಬ್ಯಾಂಕ್ ಖಾತೆಗಳಿಗೆ ನಾಮಿನಿ ವಿವರಗಳನ್ನು ಸೇರಿಸುವುದು ಅಥವಾ ನವೀಕರಿಸುವುದು.
ಹಕ್ಕು ಪಡೆಯದ ಠೇವಣಿಗಳು: ಹಕ್ಕು ಪಡೆಯದ ಬ್ಯಾಂಕ್ ಠೇವಣಿಗಳ ಇತ್ಯರ್ಥಕ್ಕೆ ಅರ್ಜಿ ಸಲ್ಲಿಸುವುದು.
ಇದರ ಜೊತೆಗೆ ಬ್ಯಾಂಕಿಂಗ್ ಸೌಲಭ್ಯಗಳ ಬಳಕೆ, ಹಣಕಾಸಿನ ಅರಿವು ಹಾಗೂ ಸೈಬರ್ ಭದ್ರತೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುವುದು.
ಗ್ರಾಮೀಣ ಮತ್ತು ನಗರ ಪ್ರದೇಶಗಳ ಸಾರ್ವಜನಿಕರು ತಮ್ಮ ಹತ್ತಿರದ ಗ್ರಾಮ ಪಂಚಾಯಿತಿ ಅಥವಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಡೆಯುವ ಶಿಬಿರಗಳಿಗೆ ಭೇಟಿ ನೀಡಿ ಲಭ್ಯವಿರುವ ಸೇವೆಗಳನ್ನು ಪಡೆದುಕೊಳ್ಳಬೇಕು. ಈ ಮೂಲಕ ಬ್ಯಾಂಕಿಂಗ್ ಸೌಲಭ್ಯಗಳ ವ್ಯಾಪ್ತಿ ವಿಸ್ತರಿಸುವುದರೊಂದಿಗೆ ಜನರ ಆರ್ಥಿಕ ಸಬಲೀಕರಣಕ್ಕೆ ನೆರವಾಗಲಿದೆ ಎಂದು ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಕೆ. ಮಾರುತಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಜಿಲ್ಲಾಧಿಕಾರಿಗಳ ಕಚೇರಿಯ ನಾಗರಾಜ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article
Leave a Comment