ಬಸವಣ್ಣನವರು ಗುರುವಿಲ್ಲದ ಗುಡ್ಡ

H.Mallikarjun
H.Mallikarjun - Kalyanasiri
5 Min Read
ಜಾಹೀರಾತು

Basavanna is a hill without a guru.

ಬಸವಣ್ಣನವರು ಗುರುವಿಲ್ಲದ ಗುಡ್ಡ

ಬಸವಣ್ಣನವರನ್ನು “ಗುರುವಿಲ್ಲದ ಗುಡ್ಡ” ಎಂದು ಕರೆಯಲಾಗುತ್ತದೆ, ಏಕೆಂದರೆ ಅವರ ಸ್ವಂತ ಅರಿವೇ ಅವರಿಗೆ ಗುರುವಾಗಿತ್ತು ಅವರಲ್ಲಿರುವ ಚಿಂತನೆ ವಿಚಾರ ಕ್ರಮಗಳು ಅನುಪಮವಾದವುಗಳು.ಪುರಾಣ ಪುಣ್ಯ ಕಥೆಗಳಲ್ಲಿ ಬರುವ ಜಾತವೇದ ಮುನಿ ಈಶಾನ್ಯ ಗುರುಎನ್ನುವವರು ಬಸವಣ್ಣನವರ ಗುರು ಎನ್ನುವುದು ಕಪೋಲ ಕಲ್ಪಿತವಾದ ಸಂಗತಿಗಳಾಗಿವೆ. ಗುಡ್ಡ ಎಂದರೆ ಗ್ರಾಮೀಣ ಭಾಷೆಯಲ್ಲಿ ಶಿಷ್ಯ ಎಂದರ್ಥ. ಬಸವಣ್ಣನವರು ಎಲ್ಲಿಯೂ ತಮ್ಮ ವಚನಗಳಲ್ಲಿ ಬಾಹ್ಯ ಗುರುವಿನ ಹೆಸರನ್ನು ಉಲ್ಲೇಖಿಸಿಲ್ಲ.

ಜಾಹೀರಾತು

ಬಸವಣ್ಣನವರು ಬಾಹ್ಯ ಗುರುವನ್ನು ಅವಲಂಬಿಸದೆ, ತಮ್ಮ ಅಂತರಂಗದ ಅರಿವನ್ನೇ ಗುರುವನ್ನಾಗಿ ಸ್ವೀಕರಿಸಿದರು.ತಮ್ಮ ಜ್ಞಾನಾರ್ಜನೆಯ ಮೂಲಕ ಸ್ವಯಂ ಅರಿವು ಇಟ್ಟುಕೊಂಡು ಸತ್ಯ ಸಮತೆ ಅಹಿಂಸೆ ಶಾಂತಿ ಪ್ರೀತಿಗಳೆಂಬ ಮಂತ್ರಗಳ ಜಪಿಸುತ್ತಾ ಸಾರ್ವಕಾಲಿಕ ಸಮಾನತೆಯನ್ನು ಸಾಧಿಸಿದ ಶ್ರೇಷ್ಠ ದಾರ್ಶನಿಕ ಬಸವಣ್ಣ.

ಯಾರೂ ದೀಕ್ಷೆ ನೀಡದೆ, ತಮ್ಮ ಸ್ವಂತ ಸಾಧನೆ ಮತ್ತು ಶಿವಭಕ್ತಿಯಿಂದ ಜ್ಞಾನಿಯಾಗಿದ್ದರು.ತಮ್ಮ ಆಧ್ಯಾತ್ಮಿಕ ಹಸಿವಿಗಾಗಿ ಇಷ್ಟ ಲಿಂಗವನ್ನು ಕಂಡು ಹಿಡಿದು ಸ್ವಯಂಪ್ರಕಾಶವನ್ನು ಕಂಡುಕೊಂಡರು.

ತಮ್ಮ ತತ್ವ ಹಾಗೂ ವಚನಗಳ ಮೂಲಕ ಇಡೀ ಜಗತ್ತಿಗೆ ಮಾರ್ಗದರ್ಶನ ನೀಡಿದ ಕಾರಣ ಅವರನ್ನು ಜಗದ್ಗುರು ಎಂದೂ ಕರೆಯಲಾಗುತ್ತದೆ.
ಎನ್ನ ಗುರು ಪರಮಗುರು ನೀವೆ ಕಂಡಯ್ಯ,

ಎನ್ನ ಗತಿಮತಿ ನೀವೆ ಕಂಡಯ್ಯ,
ಎನ್ನ ಅರಿವಿನ ಜ್ಯೋತಿ ನೀವೆ ಕಂಡಯ್ಯ,
ಎನ್ನಂತರಂಗ ಬಹಿರಂಗದ ಮಹವು ನೀವೆ ಕಂಡಯ್ಯ.
ಕೂಡಲಸಂಗಮದೇವಾ,
ನೀವೆನಗೆ ಗುರು, ನಾ ನಿಮಗೆ ಶಿಷ್ಯನೆಂಬುದನು
ನಿಮ್ಮ ಶರಣ ಸಿದ್ಧರಾಮಯ್ಯದೇವರೆ ಬಲ್ಲರು.
ಬಸವಣ್ಣನವರು.

ಲಿಂಗಾಯತ ಧರ್ಮದಲ್ಲಿ ಅಷ್ಟಾವರಣ ಎಂಟು ಆವರಣಗಳು ಪ್ರಮುಖವಾಗಿವೆ, ಇದರಲ್ಲಿ ಮೊದಲನೆಯದು ‘ಗುರು’

ಪರಮ ಜ್ಞಾನಿಗೆ ತನ್ನ ಅರಿವೇ ಗುರು, ಸಾಧಕನಿಗೆ ತನ್ನ ನಿಜದ ನಿಲುವನ್ನು ತೋರಬಲ್ಲವನೇ ಗುರು,
ಇನ್ನು ಬಸವಣ್ಣನವರಿಗೆ ಯಾರು ಗುರು..? ಎಂದರೆ ತನ್ನರಿವೇ ಗುರು, ಗುರುವಿಲ್ಲದ ಗುಡ್ಡ ಬಸವಣ್ಣ, ತನ್ನ ಅಂತರಂಗದ ಅರಿವಿನ ಬೆರಗಿನ ಶೋಧವೇ ಗುರು ಎಂದು ಹೇಳಿದ್ದಾರೆ ಬಸವಣ್ಣ.
ಬಸವಣ್ಣನವರಿಗೆ ಯಾರು ಗುರು ಎಂಬುದನ್ನು ತಮ್ಮ ಮೇಲಿನ ವಚನದಲ್ಲಿ ಹೇಳಿದ್ದಾರೆ,.

‘ಎನ್ನ ಗುರು ಪರಮಗುರು ನೀವೆ ಕಂಡಯ್ಯಾ’

ಇಲ್ಲಿ ಬಸವಣ್ಣನವರು ತಮ್ಮ ಗುರು ಪರಮಗುರು ಯಾರೆಂದರೆ ಕೂಡಲಸಂಗಮದೇವ ಸ್ವರೂಪವಾದ ಜಂಗಮ ಸಮಾಜಕ್ಕೆ ಗುರುವೆಂದು ಕರೆಯುತ್ತಾರೆ,

ಬಾಲ್ಯದಲ್ಲೇ ಮನೆ ಬಿಟ್ಟ ಅಪ್ಪ ಬಸವರು ಕೂಡಲಸಂಗಮದಲ್ಲಿ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಿದರೂ ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸಕಲ ಭಾಷ ವಿದ್ಯಾ ಪಾರಂಗತರಾಗಿದ್ದರು, ಅವರ ಪ್ರಕಾರ ಕೂಡಲಸಂಗಮದೇವ ಎಂಬುದು ತನ್ನ ತಾನರಿದವನ ಸ್ವಯಂ ಅರಿವು ಮತ್ತು ಜ್ಞಾನವಾಗಿದೆ, ಕೂಡಲಸಂಗಮದೇವ ಎಂಬುದು ನಾಗರೀಕ ಶರಣ ಸಮಾಜವೆಂದರ್ಥ.

ತನ್ನ ಅರಿವಿನ ಮೂಲ ವಸ್ತು ‘ಅರಿವಿನ ಬೀಜ’ವೇ ತನ್ಮ ದೈವವಾದ ಸಂಗಯ್ಯನೇ ಬಸವಣ್ಣನಿಗೆ ‘ಗುರು’ ಈ ಅರಿವೆಂಬ ಗುರುವೇ ಬಸವಣ್ಣನವರಿಗೆ ಗತಿಯು, ಮತಿಯು, ತನ್ನ ಅರಿವಿನ ಜ್ಯೋತಿಯೆಂದು ಹೇಳುತ್ತಾರೆ,

ಮತ್ತೆ ಮುಂದುವರೆದು ಎನ್ನ ಅಂತರಂಗದ ಮಹವು ನೀನೇ ಕಂಡಯ್ಯ ಎನ್ನುತ್ತಾರೆ ಎನ್ನ ಅಂತರಂಗದಲ್ಲಿ ಮತ್ತು ಈ ಇಡೀ ಸೃಷ್ಠಿಯಲ್ಲಿ ಓತಪ್ರೋತವಾಗಿ ತುಂಬಿದ ಅಸಾಧ್ಯವಾದ ಅಧ್ವಿತೀಯ ಅಮೋಘ ಶಕ್ತಿಯು ನೀವೆ ಕೂಡಲಸಂಗಮದೇವ ಎನ್ನುತ್ತಾ,.

ನೀವೆನಗೆ ಗುರು, ನಾ ನಿಮಗೆ ಶಿಷ್ಯನೆಂಬುದನು
ನಿಮ್ಮ ಶರಣ ಸಿದ್ಧರಾಮಯ್ಯದೇವರೆ ಬಲ್ಲರು.

ಸೃಷ್ಠಿಕರ್ತನಾದ ನಿರಾಕಾರ ದೇವನೇ ನಿನ್ನ ನಿಜ ಸ್ಥತಿಯ ಅರಿವು ಎನಗೆ ಗುರುವಾಗಿ ಮಾರ್ಗದರ್ಶನ ಮಾಡಿ, ನೀವೆನಗೆ ಗುರುವಾಗಿ ಅರಿವಾಗಿ, ವಿದ್ಯೆ, ಬುದ್ಧಿ, ಜ್ಞಾನ ಸಿದ್ಧಿಯಾಗಿ ಬಂದೆನ್ನ ಸಲಹಿದಿರಿ ನಾನು ನಿಮ್ಮ ಶಿಷ್ಯನೆಂಬುದ ನಿಮ್ಮ ಶರಣ ಸಿದ್ಧರಾಮಯ್ಯರೇ ಬಲ್ಲರು, ಎಂದು ತನಗೆ ತನ್ನಾತ್ಮದ ಅರಿವೇ ತನ್ನ ನಿಜವಾದ ಗುರುವೆಂಬುದನ್ನು ತಿಳಿಸುತ್ತಾರೆ,. ಅರಿವೇ ಗುರು ಆಚಾರವೇ ಶಿಷ್ಯ ಅನುಭಾವವೇ ಜಂಗಮ.

ಶಿವ ಗುರುವೆಂದು ಬಲ್ಲಾತನೇ ಗುರು

ಶಿವ ಗುರುವೆಂದು ಬಲ್ಲಾತನೇ ಗುರು
ಶಿವ ಲಿಂಗವೆಂದು ಬಲ್ಲಾತನೇ ಗುರು
ಶಿವ ಜಂಗಮವೆಂದು ಬಲ್ಲಾತನೇ ಗುರು
ಶಿವ ಪ್ರಸಾದವೆಂದು ಬಲ್ಲಾತನೇ ಗುರು
ಶಿವ ಆಚಾರವೆಂದು ಬಲ್ಲಾತನೇ ಗುರು
ಇಂತಿ ಪಂಚವಿಧ ಪಂಚ ಬ್ರಹ್ಮವೆಂದು
ತಿಳಿದ ಮಹಾ ಮಣಿಹ ಸಂಗನ ಬಸವಣ್ಣ
ಎನಗೆಯೂ ಗುರು ನಿನಗೂ ಗುರು
ಜಗಕೆಲ್ಲಾ ಗುರು ಕಾಣಾ ಗುಹೇಶ್ವರಾ

ಅಲ್ಲಮ ಪ್ರಭುದೇವರು

ಅಲ್ಲಮರು ಬಸವಣ್ಣನವರ ವ್ಯಕ್ತಿತ್ವವನ್ನ ಮತ್ತು ಅವರೊಳಗಿನ ಅಸಾಧಾರಣ ದಾರ್ಶನಿಕತ್ವವನ್ನು ಜಗತ್ತಿಗೆ ಪರಿಚಯಿಸುವ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
ಬಸವಣ್ಣ ಮತ್ತು ಅವರ ಸಮಕಾಲೀನ ಶರಣರು ವೈಚಾರಿಕತೆ ವೈಜ್ಞಾನಿಕತೆ ನೈಜ ಬದುಕಿನ ಪ್ರತಿ ಪಾದನೆ ಮಾಡಿ ಸೃಷ್ಟಿ ಸಮಷ್ಟಿ ವ್ಯಕ್ತಿಯ ಜವಾಬ್ದಾರಿಗಳನ್ನು ಗೊತ್ತು ಮಾಡಿಕೊಟ್ಟಿದ್ದಾರೆ.ಶಿವನೆಂಬುದು ಶರಣ ದೃಷ್ಟಿಯಲ್ಲಿ ಮಂಗಲ ಕಲ್ಯಾಣ ಜ್ಞಾನ ಎಂಬ ಪಾರಿಭಾಷಿಕ ಅರ್ಥಗಳು . ಶಿವ ಶಂಕರನಲ್ಲ ಶರಣರ ಶಿವ ಭಕ್ತನ ಹೃದಯದಲ್ಲಿ ಇರುವ ಅಗಾಧ ಜಂಗಮ ಚೈತನ್ಯವಾಗಿದೆ.
ಅಂತ ಪ್ರಜ್ಞೆಯೆ ಗುರು ಎಂದು ನಂಬಿರುವವನೇ ನಿಜವಾದ ಗುರು ಎಂದಿದ್ದಾರೆ. ಅರಿವಿನ ಆರಂಭವೇ ಗುರು .

ಶಿವ ಲಿಂಗವೆಂದು ಬಲ್ಲಾತನೇ ಗುರು

ಲಿಂಗ ಇದು ಸಮಷ್ಟಿ ಭಾವವು . ಸಮಷ್ಟಿಯಲ್ಲಿ ಶಿವನಿದ್ದಾನೆ ಅದುವೇ ಕರಸ್ಥಲ ಲಿಂಗ . ಶಿವನೆನ್ನುವ ಭಾವವು ಕರಸ್ಥಲದ ಲಿಂಗದ ಕುರುಹಿನಲ್ಲಿ ಮೂಹುರ್ತಗೊಂಡಿದ್ದಾನೆ .
ಶಿವನೇ ಲಿಂಗವೆಂದು ತಿಳಿದವ ಗುರು ಎಂದಿದ್ದಾರೆ ಅಲ್ಲಮರು.

ಶಿವ ಜಂಗಮವೆಂದು ಬಲ್ಲಾತನೇ ಗುರು

ಜಂಗಮ ಇದು ಸಮಾಜ ,ಜ್ಞಾನ ,ಚಲಶೀಲತೆ ಚೈತನ್ಯ ಎಂಬ ಅನೇಕ ಅರ್ಥಗಳನೊಳದೊಂಡ ಶರಣರ ವ್ಯವಸ್ಥೆ .ಶಿವನು ಮಹಾಜ್ಞಾನ ಜಂಗಮದಲ್ಲಿ ಅಡಗಿದೆ. ಸಮಾಜ ಸೇವೆಯೇ ಶಿವನ ಆರಾಧನೆ .ಶಿವನೆನ್ನುವುದು ಜಂಗಮದ ಮೂಲ . ಶಿವ ಜಂಗಮ ಒಂದೇ ಎಂದು ತಿಳಿದವನೇ ಗುರುವು.

ಶಿವ ಪ್ರಸಾದವೆಂದು ಬಲ್ಲಾತನೇ ಗುರು

ಪ್ರಸನ್ನತೆಯೇ ಪ್ರಸಾದವು ಇಂತಹ ಪ್ರಸನ್ನತೆಯಲ್ಲಿ.ಶಿವನನ್ನು ಕಂಡು ಇವೆರಡು ಒಂದೇ ಎಂದು ತಿಳಿದವನೇ ಗುರು . ಪ್ರತಿಯೊಂದು ಜೀವ ಜಾಲದಲ್ಲಿ ಪ್ರಸನ್ನತೆಯ ಭಾವವನ್ನು ಗುರುತಿಸಿ ಸಂತಸ ನೆಮ್ಮದಿ ಪ್ರೀತಿ ಭಾವವನ್ನು ಭಕ್ತನಲ್ಲಿ ಕಂಡಾಗ ಅದುವೇ ಶಿವಮಯ .

ಶಿವ ಆಚಾರವೆಂದು ಬಲ್ಲಾತನೇ ಗುರು

ಆಚಾರ ಇದು ಸತ್ಯ ಶುದ್ಧಕಾಯಕದ ಅಭಿಯಾನ . ಇಂತಹ ಆಚಾರದಲ್ಲಿ ಶಿವನನ್ನು ಕಾಣುವವನೇ ಮತ್ತು ಶಿವ ಮತ್ತು ಇಂತಹ ಆಚಾರ ಒಂದೇ ಎಂದು ತಿಳಿದವನೇ ನಿಜವಾದ ಗುರು ಅರಿವಿನ ಪರಾಕಾಷ್ಠತೆ ,ಸತ್ಯ ಶುದ್ಧವಾದ ಕಾಯಕದಲ್ಲಿ ಶಿವನಿದ್ದಾನೆ . ಇಂತಿ ಪಂಚವಿಧ ಪಂಚ ಬ್ರಹ್ಮವೆಂದು ತಿಳಿದ ಮಹಾ ಮಣಿಹ ಸಂಗನ ಬಸವಣ್ಣ ಎನಗೆಯೂ ಗುರು ನಿನಗೂ ಗುರು ಜಗಕೆಲ್ಲಾ ಗುರು ಕಾಣಾ ಗುಹೇಶ್ವರಾ

ಹೀಗೆ ಬದುಕಿನಲ್ಲಿ ಪಾರಮಾರ್ಥಿಕ ಅರ್ಥವನ್ನು ಪ್ರಾಪಂಚಿಕ ನೈಜ ನೆಲೆ ಸೆಲೆಯಲ್ಲಿಗುರುತಿಸಿದ ಇಂತಹ ಪಂಚ ವಿಧಾನಗಳನ್ನೇ ಪಂಚ ಬ್ರಹ್ಮವೆಂದು ಅರಿತ ಮಹಾ ಮಣಿಹ ಸಂಗನ ಬಸವಣ್ಣ ಎನಗೆಯೂ ಗುರು ನಿನಗೂ ಗುರು ಜಗಕೆಲ್ಲಾ ಗುರು ಕಾಣಾ ಎಂದಿದ್ದಾರೆ ಅಲ್ಲಮರು .

ಸಾಧಕ ಭಕ್ತನ ಅರಿವೇ ಗುರು ಭಕ್ತನ ಆಚಾರವೇ ಲಿಂಗ ಭಕ್ತನ ಅನುಭಾವವೇ ಜಂಗಮ.ಭಕ್ತನೇ ಗುರುವಾಗಬಲ್ಲ ಲಿಂಗವಾಗಬಲ್ಲ ಜಂಗಮವಾಗಬಲ್ಲ, ಹೀಗೆ ಜಗತ್ತಿನ ಅತ್ಯಂತ ವಿಭಿನ್ನವಾದ ಆಧ್ಯಾತ್ಮಿಕ ಹಾದಿ ಶರಣ ಪಥ ಬಸವ ಪಥ ವಿಶ್ವ ಪಥ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

Total Views: 0
ಜಾಹೀರಾತು
Share This Article