Journalism hasn’t remained a service sector, there’s no job security for journalists: K. Ningajja
ಪತ್ರಿಕಾರಂಗ ಸೇವಾ ಕ್ಷೇತ್ರವಾಗಿ ಉಳಿದಿಲ್ಲ, ಪತ್ರಕರ್ತರಿಗೆ ಸೇವಾ ಭದ್ರತೆ ಇಲ್ಲ:ಕೆ.ನಿಂಗಜ್ಜ
ಪತ್ರಿಕಾ ಮಾಧ್ಯಮ ಕ್ಷೇತ್ರದ ವ್ಯಾಪಾರೀಕರಣ ಆತಂಕಕಾರಿ.
ಕನಕಗಿರಿ: ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮ ಸೇವಾ ಕ್ಷೇತ್ರವಾಗಿ ಉಳಿದಿಲ್ಲ ಪತ್ರಕರ್ತರು ಮತ್ತು ಪತ್ರಿಕೋದ್ಯಮ ಎರಡು ಬೇರೆ ಬೇರೆಯಾಗಿವೆ ಆದ್ದರಿಂದ ಪತ್ರಕರ್ತರಿಗೆ ಸೇವಾ ಭದ್ರತೆ ಕಾಡುತ್ತಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಹಿರಿಯ ಪತ್ರಕರ್ತ ಕೆ ನಿಂಗಜ್ಜ ಹೇಳಿದರು.
ಅವರು ಪಟ್ಟಣದ ಕೆಪಿಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ, ಡಿವಿಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ಪತ್ರಿಕಾ ಮಾಧ್ಯಮ ವ್ಯಾಪಾರೀಕರಣದತ್ತ ಪರಿವರ್ತನೆಗೊಳ್ಳುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ.
ಪತ್ರಿಕೋದ್ಯಮವು ಅತ್ಯಂತ ಪವಿತ್ರವಾದ ವೃತ್ತಿಯಾಗಿದ್ದು, ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ಸಾರ್ವಜನಿಕರ ಪರ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರದಿಂದ ಸಾರ್ವಜನಿಕರಿಗೆ ದೊರೆಯಬೇಕಾದ ಸೌಲಭ್ಯಗಳು ಹಾಗೂ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಸರ್ಕಾರದ ಗಮನಕ್ಕೆ ತಂದು ಪರಿಹಾರ ದೊರಕಿಸಲು ಪತ್ರಕರ್ತರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಪತ್ರಕರ್ತರು ಜಾತಿ, ಧರ್ಮ, ವ್ಯಕ್ತಿ ಆಧಾರಿತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವ ಅಭಿಪ್ರಾಯ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ. ಇದು ಅತ್ಯಂತ ಕಳವಳಕಾರಿಯಾಗಿದೆ. ಪತ್ರಕರ್ತರು 1980 ದಶಕದಲ್ಲಿ ನಾಡಿನ ಏಳಿಗೆಗಾಗಿ ಕನ್ನಡಪರ, ರೈತಪರ, ದಲಿತ ಪರ ಸಂಘಟನೆಯ ಪ್ರತಿಷ್ಠಾಪನೆಗಾಗಿ ಶ್ರಮಿಸಿದ್ದರು ಅಂತಹ ವಾತಾವರಣ ಪುನಃ ಕರ್ನಾಟಕದಲ್ಲಿ ನಿರ್ಮಾಣ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಜಿಲ್ಲಾ ವರದಿಗಾರ ಶರಣಬಸವ ಹುಲಿಹೈದರ ಮಾತನಾಡಿ, ಪತ್ರಕರ್ತರು ಧರ್ಮ, ಜಾತಿ, ಪಂಗಡ ಸೇರಿದಂತೆ ಯಾವುದೇ ಭೇದಭಾವಕ್ಕೆ ಒಳಗಾಗದೆ ವಸ್ತುನಿಷ್ಠ ಹಾಗೂ ಪ್ರಾಮಾಣಿಕವಾಗಿ ಸುದ್ದಿಗಳನ್ನು ಪ್ರಕಟಿಸಬೇಕು. ಪತ್ರಿಕೋದ್ಯಮದ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಪತ್ರಕರ್ತನ ಜವಾಬ್ದಾರಿಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷ ಸೋಮಶೇಖರಯ್ಯ ಸ್ವಾಮಿ ಮಾತನಾಡಿ, ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ ಕಲ್ಪಿಸುವುದಾಗಿ ಸರ್ಕಾರ ಭರವಸೆ ನೀಡಿದ್ದರೂ ಇದುವರೆಗೆ ಅನುಷ್ಠಾನಗೊಳ್ಳದಿರುವುದು ವಿಷಾದನೀಯ. ಪತ್ರಕರ್ತರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅಮರೇಶ್ ದೇವರಾಳ ಮಾತನಾಡಿ, ಪತ್ರಕರ್ತರು ಯಾವುದೇ ರೀತಿಯ ವೈಯಕ್ತಿಕ ಒತ್ತಡ ಹಾಗೂ ಹಿತಾಸಕ್ತಿಗಳಿಗೆ ಒಳಗಾಗದೆ ತಮ್ಮ ವೃತ್ತಿಯ ಘನತೆಯನ್ನು ಕಾಪಾಡಬೇಕು. ದೇಶ ಕಾಯುವ ಸೈನಿಕರು ಹಾಗೂ ಅನ್ನ ನೀಡುವ ರೈತರಂತೆ ಪತ್ರಕರ್ತರು ಕೂಡ ಸಮಾಜದ ಬಗ್ಗೆ ಪ್ರಾಮಾಣಿಕತೆ ಮತ್ತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಹಾಗೂ ವಿವಿಧ ಪ್ರಶಸ್ತಿ ಪುರಸ್ಕೃತರಾದ ಮಹೆಬೂಬ ಹುಸೇನ ಬಿ.,ಪ್ರವೀಣ ಕೋರಿಶೆಟ್ಟರ್, ಮಧೂಸೂದನ ಮಾದಿನಾಳ,ಮಹಾಂತೇಶ ಅಂಗಡಿ ಇವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮದ ಪ್ರಾಧ್ಯಾಪಕ ವಿಜಯ ಸರೋದೆ, ರೇಖಾ ಚಕ್ರಸಾಲಿ, ಶಿವಪುತ್ರಪ್ಪ ದಳಪೂಜೆ, ಹನುಮೇಶ್ ಗೌಡ, ಶಿವಶರಣ ಸೇರಿದಂತೆ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



