ವಸತಿ ನಿಲಯದ ಬಾಲಕರಿಗೆ ಸ್ವಚ್ಛತೆ, ಆರೋಗ್ಯದ ಅರಿವು

H.Mallikarjun
H.Mallikarjun - Kalyanasiri
2 Min Read

Awareness of cleanliness and health for the boys in the hostel

ವಸತಿ ನಿಲಯದ ಬಾಲಕರಿಗೆ ಸ್ವಚ್ಛತೆ, ಆರೋಗ್ಯದ ಅರಿವು

ಕೊಪ್ಪಳ ಸೆಪ್ಟೆಂಬರ್ 04 (ಕರ್ನಾಟಕ ವಾರ್ತೆ): ವೈಯಕ್ತಿಕ ಸ್ವಚ್ಛತೆ ಹಾಗೂ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಕೆ. ಹೇಳಿದರು.
ಕೊಪ್ಪಳ ನಗರ ಪ್ರದೇಶದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ, ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸ್ವಚ್ಛತೆ ಮತ್ತು ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೈಯಕ್ತಿಕ ಸ್ವಚ್ಛತೆಯು ದೇಹ ಹಾಗೂ ಮನಸ್ಸನ್ನು ಆರೋಗ್ಯಕರವಾಗಿಡಲು ಅತ್ಯಗತ್ಯ. ಪ್ರತಿದಿನ ಸ್ನಾನ ಮಾಡುವುದು, ಹಲ್ಲುಜ್ಜುವುದು, ಉಗುರುಗಳನ್ನು ಕತ್ತರಿಸುವುದು, ಸ್ವಚ್ಛ ಬಟ್ಟೆ ಧರಿಸುವುದು ಹಾಗೂ ಮನೆ, ಶಾಲೆ, ವಸತಿ ನಿಲಯ ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಕಸವನ್ನು ಕಸದ ಬುಟ್ಟಿಗೆ ಹಾಕಬೇಕು. ಶುದ್ಧ ನೀರನ್ನು ಕುಡಿಯುವುದರ ಜೊತೆಗೆ ತಾಜಾ ಹಾಗೂ ಪೌಷ್ಟಿಕ ಆಹಾರ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ ಎಂದು ತಿಳಿಸಿದರು.
ಅಪರಿಶುದ್ಧ ವಾತಾವರಣವು ರೋಗಾಣುಗಳ ಬೆಳವಣಿಗೆಗೆ ಕಾರಣವಾಗುತ್ತದೆ. ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳದಿದ್ದರೆ ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳಿಂದ ಭೇದಿ, ಟೈಫಾಯಿಡ್ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಆದ್ದರಿಂದ ಪರಿಸರ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಊಟ ಮಾಡುವ ಮುನ್ನ ಹಾಗೂ ಶೌಚಾಲಯ ಬಳಕೆಯ ನಂತರ ಸಾಬೂನು ಮತ್ತು ಸ್ವಚ್ಛ ನೀರಿನಿಂದ ಕನಿಷ್ಠ 20ರಿಂದ 40 ಸೆಕೆಂಡುಗಳ ಕಾಲ ಕೈಗಳನ್ನು ಸರಿಯಾಗಿ ತೊಳೆಯುವ ಮೂಲಕ ಸೋಂಕುಗಳ ಹರಡುವಿಕೆಯನ್ನು ತಡೆಯಬಹುದು ಎಂದು ಗಂಗಮ್ಮ ಕೆ. ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಸತಿ ನಿಲಯದ ಪಾಲಕರಾದ ಮಂಜುಳಾ ವಾಲಿ ಮಾತನಾಡಿ, ಆರೋಗ್ಯ ಇಲಾಖೆಯ ಇಂತಹ ಅರಿವು ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದ್ದು, ಇದರ ಪ್ರಯೋಜನ ಪಡೆದು ತಮ್ಮ ಗ್ರಾಮ ಹಾಗೂ ವಾರ್ಡ್ಗಳಲ್ಲಿ ಸಾರ್ವಜನಿಕರಿಗೂ ಸ್ವಚ್ಛತೆ ಮತ್ತು ಆರೋಗ್ಯದ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆರ್‌ಬಿಎಸ್‌ಕೆ ಕಾರ್ಯಕ್ರಮದ ನೇತ್ರಾಧಿಕಾರಿ ವಿನೋದ್, ವಸತಿ ನಿಲಯದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
Total Views: 0
ಜಾಹೀರಾತು
Share This Article