ಪೌಷ್ಟಿಕ ಆಹಾರದಿಂದ ಆರೋಗ್ಯಕರ ಜೀವನ ಸಾಧ್ಯ: ನ್ಯಾ. ಮಹಾಂತೇಶ ದರಗದ

H.Mallikarjun
H.Mallikarjun - Kalyanasiri
1 Min Read

A healthy life is possible with nutritious food: Justice Mahantesh Dargad

ಪೌಷ್ಟಿಕ ಆಹಾರದಿಂದ ಆರೋಗ್ಯಕರ ಜೀವನ ಸಾಧ್ಯ: ನ್ಯಾ. ಮಹಾಂತೇಶ ದರಗದ

ಕೊಪ್ಪಳ ಸೆಪ್ಟೆಂಬರ್ 04 (ಕರ್ನಾಟಕ ವಾರ್ತೆ): ಪೌಷ್ಟಿಕ ಆಹಾರದಿಂದ ಆರೋಗ್ಯಕರ ಜೀವನ ಸಾಧ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್. ದರಗದ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕೊಪ್ಪಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದ ಸಂಯುಕ್ತಾಶ್ರಯದಲ್ಲಿ ಗುರುವಾರ (ಸೆ. 3ರಂದು) ನಗರದ ದೇವರಾಜ ಅರಸು ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪೌಷ್ಟಿಕ ಆಹಾರ ದಿನ ಹಾಗೂ ಪೌಷ್ಟಿಕ ಸಪ್ತಾಹ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಗರ್ಭಿಣಿಯರು ಮತ್ತು ಬಾಣಂತಿಯರು ಪೌಷ್ಟಿಕ ಆಹಾರ ಸೇವಿಸುವುದರ ಜೊತೆಗೆ ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಇದರಿಂದ ಆರೋಗ್ಯಕರ ಮಗುವಿನ ಜನನಕ್ಕೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ. ಮಹೇಶ ಉಮಚಗಿ ಮಾತನಾಡಿ, ಪ್ರತಿಯೊಬ್ಬರೂ ಪೌಷ್ಟಿಕ ಆಹಾರ ಸೇವಿಸುವುದರೊಂದಿಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೂಪಾ ಗಂಧದ ಮಾತನಾಡಿ, ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಿಗೆ ದೊರೆಯುವ ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡುವುದರ ಜೊತೆಗೆ ಪ್ರತಿಯೊಂದು ಮನೆಯಲ್ಲೂ ಕೈತೋಟ ನಿರ್ಮಿಸಿಕೊಂಡು ಪೌಷ್ಟಿಕ ತರಕಾರಿ ಬೆಳೆಯುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮೀ ಬಾಗೇವಾಡಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಕಳಸಾಪೂರ, ಬಾಲವಿಕಾಸ ಸಲಹಾ ಸಮಿತಿ ಅಧ್ಯಕ್ಷೆ ಕರಿಯಮ್ಮ, ಅಂಗನವಾಡಿ ಮಕ್ಕಳು, ತಾಯಂದಿರು, ಗರ್ಭಿಣಿಯರು, ಬಾಣಂತಿಯರು, ಮೇಲ್ವಿಚಾರಕಿಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಉಪಸ್ಥಿತರಿದ್ದರು. ಮೇಲ್ವಿಚಾರಕಿ ಕಮಲಾಕ್ಷಿ ಸ್ವಾಗತಿಸಿ ವಂದಿಸಿದರು. ಮೇಲ್ವಿಚಾರಕಿ ಉಷಾ ಕಾರ್ಯಕ್ರಮ ನಿರೂಪಿಸಿದರು.
Total Views: 0
ಜಾಹೀರಾತು
Share This Article