ಫ್ರೀಡಂ ಪಾರ್ಕ್ ನಲ್ಲಿ ಹೋರಾಟಕ್ಕೆ ಒಂದು ಲಕ್ಷ ರೂ ಬಾಡಿಗೆ ನಿಗದಿ ಕೂಡಲೇ ಕೈಬಿಡಿ: ಸ್ವಾತಂತ್ರ್ಯ ಉದ್ಯಾನವನ ಉಳಿಸಿ ಹೋರಾಟ ಸಮಿತಿ ಆಗ್ರಹ

H.Mallikarjun
H.Mallikarjun - Kalyanasiri
2 Min Read
Immediately drop the move to fix a rent of ₹1 lakh for protests at Freedom Park: 'Save Freedom Park' Struggle Committee demands.

ಫ್ರೀಡಂ ಪಾರ್ಕ್ ನಲ್ಲಿ ಹೋರಾಟಕ್ಕೆ ಒಂದು ಲಕ್ಷ ರೂ ಬಾಡಿಗೆ ನಿಗದಿ ಕೂಡಲೇ ಕೈಬಿಡಿ: ಸ್ವಾತಂತ್ರ್ಯ ಉದ್ಯಾನವನ ಉಳಿಸಿ ಹೋರಾಟ ಸಮಿತಿ ಆಗ್ರಹ

ಜಾಹೀರಾತು

ಬೆಂಗಳೂರು,ಆ.25: ಪ್ರತಿಭಟನಾಕಾರರ ಹೋರಾಟಕ್ಕೆ ಅನುಕೂಲವಾಗಲೆಂದು ನಿರ್ಮಿಸಿರುವ ಫ್ರೀಡಂ ಪಾರ್ಕ್‌ನ ಕಟ್ಟಡಕ್ಕೆ ದುಬಾರಿ ಬಾಡಿಗೆ ನಿಗದಿಪಡಿಸಿದ್ದು, ಕೂಡಲೇ ಇದನ್ನು ಸ್ಥಗಿತಗೊಳಿಸಬೇಕು ಎಂದು ಸ್ವಾತಂತ್ರ್ಯ ಉದ್ಯಾನವನ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ  ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿದ ಸಮಿತಿ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ, “ಫ್ರೀಡಂ ಪಾರ್ಕ್ ಹೋರಾಟಗಾರರ ಕರ್ಮಭೂಮಿ. ಕಳೆದ ಹಲವು ವರ್ಷಗಳಿಂದ ಕಾರ್ಮಿಕ, ಚಾಲಕ, ಕನ್ನಡಪರ, ಶಿಕ್ಷಕರ, ಮಾಜಿ ಸೈನಿಕರ, ವೈದ್ಯರ, ಆಶಾ ಕಾರ್ಯಕರ್ತರ, ವಿಕಲಚೇತನರು, ಹಿರಿಯ ನಾಗರಿಕರು ಸೇರಿದಂತೆ ಸಾವಿರಾರು ಸಂಘಟನೆಗಳು ಇಲ್ಲಿ ತಮ್ಮ ಬೇಡಿಕೆಗಳಿಗಾಗಿ ಪ್ರಜಾಪ್ರಭುತ್ವದ ರೀತಿಯಲ್ಲಿ ಹೋರಾಟ ನಡೆಸುತ್ತಿವೆ. ಇಂತಹ ಸ್ಥಳದಲ್ಲೇ ಪ್ರತಿಭಟನೆಗೆ ನಿರ್ಮಿಸಿರುವ ಕಟ್ಟಡಕ್ಕೆ ಹೆಚ್ಚಿನ ಬಾಡಿಗೆ ವಿಧಿಸುವುದು ಹೋರಾಟಗಳನ್ನು ಹತ್ತಿಕ್ಕುವ ಕ್ರಮದಂತಿದೆ” ಎಂದು ಆರೋಪಿಸಿದರು.
2009ರಲ್ಲಿ ಹಳೆಯ ಕೇಂದ್ರ ಕಾರಾಗೃಹವನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಿದ ಬಳಿಕ ಫ್ರೀಡಂ ಪಾರ್ಕ್ ಅಭಿವೃದ್ಧಿಪಡಿಸಲಾಯಿತು. ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಪ್ರತಿಭಟನೆಗಳಿಗೆ ಅನುಕೂಲವಾಗುವಂತೆ ವಿವಿಧ ಮೂಲಸೌಕರ್ಯಗಳನ್ನು ಕಲ್ಪಿಸಲಾಯಿತು. 2018ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಭಟನೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲೆಂದು ನಿರ್ಮಿಸಲಾಗಿದ್ದ ಬೃಹತ್ ಕಟ್ಟಡವನ್ನು ಉದ್ಘಾಟಿಸಿದ್ದರು.
ಈ ಕಟ್ಟಡದಲ್ಲಿ ದೊಡ್ಡ ಪ್ರಮಾಣದ ಪಾರ್ಕಿಂಗ್ ವ್ಯವಸ್ಥೆ ಹಾಗೂ ಸಾವಿರಾರು ಜನರು ಕುಳಿತುಕೊಳ್ಳಬಹುದಾದ ಸಭಾಂಗಣವಿದೆ. ಆದರೆ ಇದೀಗ ಜಿಬಿಎ ಅಧಿಕಾರಿಗಳು ಕಟ್ಟಡ ಬಳಕೆಗೆ ಸುಮಾರು ₹1 ಲಕ್ಷ ಬಾಡಿಗೆ ಹಾಗೂ ₹10 ಸಾವಿರ ಠೇವಣಿ ನಿಗದಿಪಡಿಸಿರುವುದು ಸಣ್ಣ ಹಾಗೂ ಆರ್ಥಿಕವಾಗಿ ದುರ್ಬಲ ಸಂಘಟನೆಗಳಿಗೆ ಹೊರೆಯಾಗುತ್ತಿದೆ ಎಂದರು.
“ಪ್ರತಿಭಟನೆಗಳಿಗೆ ನೆರವು ನೀಡಬೇಕಾದ ಸರ್ಕಾರವೇ ಬಾಡಿಗೆ ವಿಧಿಸಿದರೆ, ಆರ್ಥಿಕವಾಗಿ ದುರ್ಬಲ ಸಂಘಟನೆಗಳು ಮಳೆ, ಬಿಸಿಲಿನಲ್ಲೇ ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇದು ಪ್ರಜಾಪ್ರಭುತ್ವದ ಹಕ್ಕಿಗೆ ಧಕ್ಕೆ ತರುವಂತಾಗಿದೆ” ಎಂದು ಸದಾನಂದಸ್ವಾಮಿ ಹೇಳಿದರು.
ಫ್ರೀಡಂ ಪಾರ್ಕ್‌ನಲ್ಲಿ ಪ್ರತಿನಿತ್ಯ ಸಾವಿರಾರು ಹೋರಾಟಗಾರರು ಆಗಮಿಸುತ್ತಿದ್ದರೂ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಹಲವು ಮೂಲಸೌಕರ್ಯಗಳ ಕೊರತೆ ಇದೆ. ಪ್ರತಿಭಟನಾಕಾರರಿಗೆ ಸೂಕ್ತ ನೆರಳು, ಕುಡಿಯುವ ನೀರು, ಶೌಚಾಲಯ ಹಾಗೂ ಉಚಿತವಾಗಿ ಬಳಸಿಕೊಳ್ಳಬಹುದಾದ ಸಭಾಂಗಣದ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಹೋರಾಟಗಾರರಿಗಾಗಿ ನಿರ್ಮಿಸಿರುವ ಕಟ್ಟಡವನ್ನು ಉಚಿತವಾಗಿ ಸಂಘ-ಸಂಸ್ಥೆಗಳಿಗೆ ನೀಡಬೇಕು. ಜಿಬಿಎ ಕೈಗೊಂಡಿರುವ ಬಾಡಿಗೆ ನಿಗದಿ ಕ್ರಮವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲವಾದರೆ ಸ್ವಾತಂತ್ರ್ಯ ಉದ್ಯಾನವನ ಉಳಿಸಿ ಹೋರಾಟ ಸಮಿತಿ ನ್ಯಾಯಾಲಯದ ಮೆಟ್ಟಿಲೇರಲಿದೆ” ಎಂದು ಗಂಡಸಿ ಸದಾನಂದಸ್ವಾಮಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು
ಪ್ರಜಾಪ್ರಭುತ್ವದಲ್ಲಿ ಜನರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಪ್ರತಿಭಟನೆಗಳಿಗೆ ಸೂಕ್ತ ಸ್ಥಳ ಮತ್ತು ಮೂಲಸೌಕರ್ಯ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದ್ದರಿಂದ ಫ್ರೀಡಂ ಪಾರ್ಕ್‌ನ ಸೌಲಭ್ಯಗಳನ್ನು ಹೋರಾಟಗಾರರ ಹಿತದೃಷ್ಟಿಯಿಂದ ಬಳಸಲು ಅವಕಾಶ ಕಲ್ಪಿಸಬೇಕು ಎಂದು ಸಮಿತಿ ಆಗ್ರಹಿಸಿದೆ.

Total Views: 0
ಜಾಹೀರಾತು
Share This Article