Compensation of ₹15 lakh—₹7.50 lakh each—for the two children of the deceased.

ಮೃತರ ಇಬ್ಬರು ಮಕ್ಕಳಿಗೆ ತಲಾ 7.50 ಲಕ್ಷ ರೂ.ದಂತೆ 15 ಲಕ್ಷ ರೂ ಪರಿಹಾರ

* ಘಟನೆಯಲ್ಲಿ ತೀವ್ರ ಗಾಯಗೊಂಡ ಇಬ್ಬರಿಗೆ ಚಿಕಿತ್ಸಾ ವೆಚ್ಚ ಪಾವತಿಗೆ ಸೂಚನೆ
ತೀರ್ಥಹಳ್ಳಿಯಲ್ಲಿ ಭೂಕುಸಿತದಿಂದ ಮರಣ ಹೊಂದಿದ ಕಕ್ಕರಗೋಳ ಗ್ರಾಮದ ಕುಟುಂಬಸ್ಥರ ಮನೆಗೆ ಸಚಿವರ ಭೇಟಿ; ಸಾಂತ್ವನ
ಕೊಪ್ಪಳ ಆಗಸ್ಟ್ 07:(ಕರ್ನಾಟಕ ವಾರ್ತೆ): ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಗುಡ್ಡ ಕುಸಿತ ದುರಂತ (ಭೂಕುಸಿತದಿಂದ) ಮರಣ ಹೊಂದಿದ ಕೊಪ್ಪಳ ಜಿಲ್ಲೆಯ ಕಕ್ಕರಗೋಳ ಗ್ರಾಮದ ಕುಟುಂಬಸ್ಥರ ಮನೆಗೆ ಸಚಿವರಾದ ಶಿವರಾಜ ತಂಗಡಗಿ ಅವರು ಆಗಸ್ಟ್ 07ರಂದು ಭೇಟಿ ನೀಡಿ, ಸಾಂತ್ವನ ಹೇಳಿದರು.
ತಹಸೀಲ್ದಾರ ಶಿವಮೊಗ್ಗ ಇವರ ವಿಪತ್ತು ನಿರ್ವಹಣಾ ಖಾತೆಯಿಂದ ಪಾವತಿ ಮಾಡಲಾದ 15 ಲಕ್ಷ ರೂ.ಗಳನ್ನು ಮೃತರ ಇಬ್ಬರು ಮಕ್ಕಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗಿದ್ದು, ಮೃತರ ಹೆಣ್ಣು ಮಕ್ಕಳಾದ ದಿವ್ಯ ಹಾಗೂ ಮಹಾಲಕ್ಷ್ಮಿ ಅವರಿಗೆ ತಹಸೀಲ್ದಾರ ಶಿವಮೊಗ್ಗ ಇವರು
ತಲಾ 7,50,000 ರೂ.ಗಳನ್ನು ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿದ ರಸೀದಿಯನ್ನು ಸಚಿವರು ದಿವ್ಯ ಹಾಗೂ ಮಹಾಲಕ್ಷ್ಮಿ ಅವರಿಗೆ ಅವರ ಗಂಡಜ್ಜಿ ಗೌರಮ್ಮ ಸಮ್ಮುಖದಲ್ಲಿ ವಿತರಣೆ ಮಾಡಿದರು.
*ವಿದ್ಯಾಭ್ಯಾಸಕ್ಕೆ ಅನುಕೂಲ:* ದಿವ್ಯ ಏಳು ವರ್ಷದವಳಿದ್ದು 1ನೇ ತರಗತಿಯಲ್ಲಿ ಹಾಗೂ ಮಹಾಲಕ್ಷ್ಮಿ 9 ವರ್ಷದವಳಿದ್ದು ಮೂರನೇ ತರಗತಿಯಲ್ಲಿ ಓದುತ್ತಿದ್ದಾಳೆ. ಇವರ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿ ಎಂದು ಕುಟುಂಬಸ್ಥರು ಸಚಿವರಲ್ಲಿ ಮನವಿ ಮಾಡಿದರು. ಕುಟುಂಬದವರು ಒಪ್ಪಿದಲ್ಲಿ ಬಾಲಕಿಯರ ಬಾಲ ಮಂದಿರದಲ್ಲಿದ್ದು ಓದಲು ಎಲ್ಲ ರೀತಿಯ ಸೌಕರ್ಯ ಒದಗಿಸಿ ಕೊಡುತ್ತೇವೆ. ಕುಟುಂಬದವರು ಒಪ್ಪದಿದ್ದಲ್ಲಿ ದಿವ್ಯ ಮತ್ತು ಮಹಾಲಕ್ಷ್ಮಿ ಇಬ್ಬರಿಗೆ ತಿಂಗಳಿಗೆ ತಲಾ 4000 ರೂ ಗಳಂತೆ 3 ವರ್ಷ ಪ್ರಾಯೋಜಕ್ವತಡಿ ಇಬ್ಬರಿಗೂ ಸಹಾಯಧನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಮೃತ ಕುಟುಂಬದವರು ಬಡವರಾಗಿದ್ದಾರೆ. ಅವರಿಗೆ ವಾಸಿಸಲು ಮನೆ ನೀಡಬೇಕು ಎಂದು ಗ್ರಾಮಸ್ಥರು ಕೋರಿದರು. ಪಂಚಾಯಿತಿ ಅಧಿಕಾರಿಗಳಿಗೆ ಹೇಳಿ ಮನೆ ಕೊಡಿಸುವುದಾಗಿ ಸಚಿವರು ತಿಳಿಸಿದರು.
*ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚ ಪಾವತಿ:* ತೀರ್ಥಹಳ್ಳಿಗೆ ದುಡಿಯಲು ಹೋಗಿದ್ದ ವೇಳೆ ಸಂಭವಿಸಿದ ಅವಘಡದಲ್ಲಿ ಸಿಲುಕಿ ತೀವ್ರ ಗಾಯಗೊಂಡ ಕಕ್ಕರಗೋಳದ ಹನುಮಂತ ತಂದೆ ಫಕೀರಪ್ಪ ಹಾಗೂ ಮುಕ್ಕುಂದದ ಅಮೃತ ಗಂಡ ರಾಮಣ್ಣ ಅವರು ಸಚಿವರಿಗೆ ಭೇಟಿ ಮಾಡಿ ಪರಿಹಾರ ಕೋರಿದರು. ಗಾಯಗೊಂಡವರಿಗೆ ಸಹ ನಿಯಮಾನುಸಾರ ಚಿಕಿತ್ಸಾ ವೆಚ್ಚ ಪಾವತಿಗೆ ಮತ್ತು ಇನ್ನೀತರ ಪರಿಹಾರಕ್ಕೆ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾಗಿ ಸಚಿವರು ತಿಳಿಸಿದರು.
ಈ ವೇಳೆ ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ, ಕಾರಟಗಿ ತಹಸೀಲ್ದಾರರಾದ ಕುಮಾರಸ್ವಾಮಿ, ಇಓ ಲಕ್ಷ್ಮೀದೇವಿ ಯಾದವ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ (ಯಲಿಗಾರ) ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಇತರೆ ಜನಪ್ರತಿನಿಧಿಗಳು, ಮೃತರ ಕುಟುಂಬಸ್ಥರು ಹಾಗೂ ಕಕ್ಕರಗೋಳ ಗ್ರಾಮಸ್ಥರು ಉಪಸ್ಥಿತರಿದ್ದರು.
*ಶಿವಮೊಗ್ಗ ತಹಸೀಲ್ದಾರ ವಿಪತ್ತು ನಿರ್ವಹಣಾ ಖಾತೆಯಿಂದ ಪರಿಹಾರ:* ತೀರ್ಥಹಳ್ಳಿ ತಾಲೂಕಿನ ಇಂದಿರಾ ನಗರದಲ್ಲಿ ಭಾರಿ ಮಳೆಯಿಂದ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ಕಾರಟಗಿ ತಾಲೂಕಿನ ಕಕ್ಕರಗೋಳ ಗ್ರಾಮದ
ಒಂದೇ ಕುಟುಂಬದ 3 ಜನ ಮೃತಪಟ್ಟಿದ್ದರು. ಮೃತರ ವಾರಸುದಾರರಿಗೆ ತಲಾ 5 ಲಕ್ಷ ರೂ.ಗಳಂತೆ ಒಟ್ಟು ಪರಿಹಾರ 15 ಲಕ್ಷ ರೂ.ಗಳನ್ನು ತಹಸೀಲ್ದಾರ ಶಿವಮೊಗ್ಗ ವಿಪತ್ತು ನಿರ್ವಹಣಾ ಖಾತೆಯಿಂದ
ಪರಿಹಾರ ವಿತರಣೆ ಮಾಡಲು ಶಿವಮೋಗ್ಗ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು.
