ಮಕ್ಕಳ ಹಕ್ಕುಗಳ ವ್ಯವಸ್ಥೆಗಳನ್ನು ಬಲಪಡಿಸುವಿಕೆ ಕುರಿತ ಸಭೆ
Meeting on strengthening children’s rights systems
ಪ್ರತಿ ಮಗುವಿನ ಹಕ್ಕುಗಳಾದ ಸುಂದರ ಬಾಲ್ಯ, ಆರೋಗ್ಯ ಮತ್ತು ಶಿಕ್ಷಣವನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿ: ಡಾ.ಸುರೇಶ ಬಿ.ಇಟ್ನಾಳ
ಕೊಪ್ಪಳ ಜುಲೈ ೩೧, (ಕರ್ನಾಟಕ ವಾರ್ತೆ): ಪ್ರತಿ ಮಗುವಿನ ಹಕ್ಕುಗಳಾದ ಸುಂದರ ಬಾಲ್ಯ, ಆರೋಗ್ಯ ಮತ್ತು ಶಿಕ್ಷಣವನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಅದಕ್ಕೆ ಕಾನೂನಿನ ಅಡಿಯಲ್ಲಿ ಸಾಧ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಅಧಿಕಾರಿಗಳು, ಸಾಂಸ್ಥಿಕ ಹಾಗೂ ಅಸಾಂಸ್ಥಿಕ ಪ್ರತಿನಿಧಿಗಳು ಮಗುವಿಗೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ಹೇಳಿದರು.
ಶುಕ್ರವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಹಾಗೂ ಯುನಿಸೆಫ್ ಸಹಯೋಗದಲ್ಲಿ ಅನುಷ್ಠಾನಗೊಳಿಸುತ್ತಿರುವ ಮಕ್ಕಳ ಹಕ್ಕುಗಳ ವ್ಯವಸ್ಥೆಗಳನ್ನು ಬಲಪಡಿಸುವಿಕೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುಟುಂಬದ ವಾತಾವರಣದಲ್ಲಿ ಬೆಳೆಯುವ ಮಗು ಸಮಾಜಕ್ಕೆ ಉತ್ತಮ ಪ್ರಜೆಯಾಗಬಲ್ಲದು ಹಾಗೂ ಗುಣಮಟ್ಟದ ಜೀವನ ಹೊಂದಬಹುದು. ಆದರೆ ಕೆಲವು ಅನಿರೀಕ್ಷಿತ ಘಟನೆಗಳಿಂದ ಸಂತ್ರಸ್ತರಾದ ಮಕ್ಕಳಿಗೆ ಮತ್ತೆ ಅಂತಹ ಗುಣಮಟ್ಟದ ಬದುಕನ್ನು ನಿಡುವುದು ನಮ್ಮೆಲ್ಲರ ಕರ್ತವ್ಯವೂ ಹೌದು. ಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿದ್ದು, ಅವುಗಳನ್ನು ವೈಯಕ್ತಿಕ ಹಿತಾಸಕ್ತಿ ಹಾಗೂ ಜವಾಬ್ದಾರಿಯಿಂದ ಸಂತ್ರಸ್ತ ಮಕ್ಕಳಿಗೆ ನೀಡುವ ಕೆಲಸ ಮಾಡಬೇಕು. ಇಂತಹ ಪ್ರಕರಣಗಳಲ್ಲಿ ಮಗುವಿನ ಗುರುತು ಬಹಿರಂಗಪಡಿಸದೆ, ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಸೌಲಭ್ಯಗಳನ್ನು ಮಗುವಿಗೆ ಒದಗಿಸಬೇಕು ಎಂದು ಅವರು ಹೇಳಿದರು.
ಅಧಿಕಾರಿಗಳು ಸದಾ ತಮ್ಮ ಕೇಂದ್ರಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕು ಹಾಗೂ ಇಲಾಖೆಗಳ ನಡುವೆ ಸೂಕ್ತ ಸಮನ್ವಯ ಸಾಧಿಸಿ ಸರ್ಕಾರದ ಸುತ್ತೋಲೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಪಿಡಿಒ ಹಾಗೂ ವಿಎ ಸೇರಿದಂತೆ ತಾಲೂಕು ಮತ್ತು ಗ್ರಾಮ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ಕೇಂದ್ರಸ್ಥಾನದಲ್ಲೇ ಇದ್ದು, ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಕೇಂದ್ರಸ್ಥಾನ ತೊರೆಯುವಂತಿಲ್ಲ. ಮಕ್ಕಳ ಸುರಕ್ಷತೆ ಮತ್ತು ಹಕ್ಕುಗಳ ರಕ್ಷಣೆಗೆ ಸಂಬAಧಿಸಿದAತೆ ಶಿಕ್ಷಣ, ಸಮಾಜ ಕಲ್ಯಾಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಕಾರ್ಯದರ್ಶಿಗಳು ಜಂಟಿಯಾಗಿ ಹೊರಡಿಸಿರುವ ಸುತ್ತೋಲೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಶಾಲೆಗಳಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ತರುವುದು ಮತ್ತು ಬಾಲ್ಯವಿವಾಹ ತಡೆಯುವುದು ಮುಖ್ಯವಾಗಿದೆ. ಅಧಿಕಾರಿಗಳು ವಾರಕ್ಕೆ ಕನಿಷ್ಠ ೧೦ ರಿಂದ ೧೨ ಹಾಗೂ ಪ್ರತಿದಿನ ಯಾವುದಾದರೂ ಒಂದು ಹಾಸ್ಟೆಲ್‌ಗೆ ಕಡ್ಡಾಯವಾಗಿ ಭೇಟಿ ನೀಡಬೇಕು. ಅಲ್ಲಿಯ ನೈರ್ಮಲ್ಯ, ಆಹಾರ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿಗತಿಯನ್ನು ಪರಿಶೀಲಿಸಬೇಕು. ವೈದ್ಯಾಧಿಕಾರಿಗಳು ಪೋಕ್ಸೊ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ವೈದ್ಯಕೀಯ ತಪಾಸಣೆಗೆ ಸಂಬAಧಿಸಿದAತೆ ಎದುರಾಗುತ್ತಿರುವ ಗೊಂದಲಗಳನ್ನು ನಿವಾರಿಸಿ, ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನವರ ವಯಸ್ಸು ದೃಢೀಕರಣಕ್ಕೆ ಅಗತ್ಯವಿರುವ `ಒಪಿಜಿ ಮಿಷನ್’ ಸೌಲಭ್ಯ ಜಿಲ್ಲೆಯಲ್ಲಿ ಲಭ್ಯವಿಲ್ಲದೇ ಇರುವುದರಿಂದ ಎದುರಾಗುತ್ತಿರುವ ತೊಡಕುಗಳು ಹಾಗೂ ಸಂತ್ರಸ್ತರ ಸಮ್ಮತಿ ಪಡೆಯುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಸಂಬAಧಿಸಿದ ಪೊಲೀಸ್ ಮತ್ತು ನ್ಯಾಯಾಂಗ ಇಲಾಖೆಯೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸರ್ಕಾರಿ, ಸರ್ಕಾರೇತರ, ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜುಗಳ ವಸತಿ ನಿಲಯಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಪ್ರತಿ ವಸತಿ ನಿಲಯದಲ್ಲೂ ಕಡ್ಡಾಯವಾಗಿ ಮಕ್ಕಳ ಸುರಕ್ಷಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಸಿಸಿ ಕ್ಯಾಮೆರಾ, ಮಕ್ಕಳ ಸಲಹಾ ಪೆಟ್ಟಿಗೆ, ದೂರು ಪೆಟ್ಟಿಗೆ ಅಲವಡಿಸಬೇಕು. ಮಕ್ಕಳು ಸಲ್ಲಿಸುವ ದೂರು, ಸಲಹೆಗಳಿಗೆ ಸ್ಪಂದಿಸಬೇಕು. ಈ ಬಗ್ಗೆ ಸಂಬAಧಿಸಿದ ಇಲಾಖಾ ಅಧಿಕಾರಿಗಳು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಶಾಸನಬದ್ಧವಾಗಿ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲ ನ್ಯಾಯ ಮಂಡಳಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ೫ ಮಕ್ಕಳ ಪಾಲನಾ ಸಂಸ್ಥೆಗಳಿದ್ದು, ಇವುಗಳಲ್ಲಿ ಒಟ್ಟು ೮೭ ಮಕ್ಕಳು ಇದ್ದಾರೆ. ಇಲ್ಲಿನ ಮಕ್ಕಳಿಗೆ ಆರೋಗ್ಯ, ಪೋಷಣೆ, ರಕ್ಷಣೆ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಕುಟುಂಬಗಳನ್ನು ಬಲಪಡಿಸುವ ಮೂಲಕ ಮಕ್ಕಳನ್ನು ಕುಟುಂಬದ ವಾತಾವರಣದಲ್ಲೇ ಬೆಳೆಸಲು ವಿಶೇಷ ಮಾದರಿ ರೂಪಿಸಲಾಗಿದೆ. ೧೮ ವರ್ಷ ಒಳಗಿನ ೨೦ ಮಕ್ಕಳಿಗೆ ಹಾಗೂ ೧೮ ವರ್ಷ ಪೂರೈಸಿದ ೨೧ ಯುವಕ, ಯುವತಿಯರಿಗೆ ಉಪಕಾರ ಯೋಜನೆ ಹಾಗೂ ವಿವಿಧ ತರಬೇತಿ ಕೋರ್ಸ್ಗಳಿಗೆ ನೆರವು ನೀಡಲಾಗುತ್ತಿದೆ. ನೇರ ನಗದು ವರ್ಗಾವಣೆ ಮೂಲಕ ಹಣಕಾಸಿನ ನೆರವು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ದತ್ತು ಕಾರ್ಯಕ್ರಮ, ವಿಶೇಷ ಪಾಲನಾ ಯೋಜನೆ, ಮುಖ್ಯಮಂತ್ರಿ ಬಾಲ ಸೇವಾ ಯೋಜನೆ ಸೇರಿದಂತೆ ಇಲಾಖೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ, ಫಲಾನುಭವಿಗಳ ಬಗ್ಗೆ ಚರ್ಚಿಸಲಾಯಿತು.
ಯುನಿಸೆಫ್‌ನ ಮಕ್ಕಳ ರಕ್ಷಣಾ ಯೋಜನೆಯ ವ್ಯವಸ್ಥಾಪಕರಾದ ಹರೀಶ್ ಜೋಗಿ ಅವರು ಮಾತನಾಡಿ, ಮಕ್ಕಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಎಲ್ಲ ಶಾಲಾ ಕಾಲೇಜುಗಳಲ್ಲಿ, ವಸತಿ ನಿಲಯಗಳಲ್ಲಿ ಮಕ್ಕಳ ಸುರಕ್ಷತೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಸಂಬAಧಿಸಿದ ಅಧಿಕಾರಿಗಳು ಅನುಸರಿಸಬೇಕು. ಬಾಲ್ಯವ ವಿವಾಹದಿಂದ ಮಗುವನ್ನು ರಕ್ಷಿಸುವುದು, ಆ ಮಗುವಿಗೆ ಉತ್ತಮ ಶಿಕ್ಷಣ, ರಕ್ಷಣೆ ಹಾಗೂ ಪೋಷಣೆ ನೀಡುವುದು ಸೇರಿದಂತೆ ಅನಿರೀಕ್ಷಿತ ಘಟನೆಗಳಿಂದ ಸತ್ರಸ್ತರಾದ ಎಲ್ಲ ಮಕ್ಕಳ ರಕ್ಷಣೆ, ಮಕ್ಕಳ ಹಕ್ಕುಗಳನ್ನು ಅವರಿಗೆ ದೊರಕಿಸಿಕೊಡುವುದು ನಮ್ಮ ಕರ್ತವ್ಯ ಎಂದು ಅವರು ಹೇಳಿದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ದರಗದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಅಂಬರೀಶ್ ಹಾವಿನ್, ಕೊಪ್ಪಳ ಬಾಲನ್ಯಾಯ ಮಂಡಳಿಯ ಸದಸ್ಯರಾದ ನೇತ್ರಾವತಿ ಪಾಟೀಲ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಪ್ರಕಾಶ್ ಕಡಗದ್, ಯುನಿಸೆಫ್‌ನ ಮಕ್ಕಳ ರಕ್ಷಣಾ ಯೋಜನೆಯ ವಿಭಾಗೀಯ ಸಂಯೋಜಕರಾದ ರಾಘವೇಂದ್ರ ಭಟ್, ಹೈದರಾಬಾದ್ ಯುನಿಸೆಫ್‌ನ ಮಕ್ಕಳ ತಜ್ಞರಾದ ಸೋನಿ ಕುಟ್ಟಿ ಜಾರ್ಜ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಂಜುನಾಥ ಗುಂಡೂರ, ಸೇರಿದಂತೆ ಡಿಡಿಪಿಯು, ಡಿಡಿಪಿಐ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಮಕ್ಕಳ ವಿಶೇಷ ಪೊಲೀಸ್ ಘಟಕದ ಕಲ್ಯಾಣಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.
ಸುತ್ತೋಲೆಗಳ ಕೈಪಿಡಿ ಬಿಡುಗಡೆ:
ಯುನಿಸೆಫ್‌ನಿಂದ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಗುರಿ ತಲುಪಲು ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಅನುಷ್ಠಾನ ಕ್ರಮ ಹಾಗೂ ವಿವಿಧ ಇಲಾಖೆಗಳ ಪ್ರಮುಖ ಸುತ್ತೋಲೆಗಳ ಕೈಪಿಡಿಯನ್ನು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ದರಗದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ ಅವರು ಬಿಡುಗಡೆಗೊಳಿಸಿದರು.
Total Views:
0

