Server issues cited as excuse: Elderly and differently-abled forced to make repeated rounds for pensions at Gangavathi Taluk Office; staff display a dismissive attitude

ಸರ್ವರ್ ಸಮಸ್ಯೆಯ ನೆಪ: ಗಂಗಾವತಿ ತಾಲೂಕು ಕಚೇರಿಯಲ್ಲಿ ವೃದ್ಧರು, ವಿಕಲಚೇತನರ ಪೆನ್ಷನ್‌ಗೆ ಅಲೆದಾಟ; ಸಿಬ್ಬಂದಿ ಉಡಾಫೆ ವರ್ತನೆ!
ಗಂಗಾವತಿ: ಇಲ್ಲಿನ ತಾಲೂಕು ಕಚೇರಿಯಲ್ಲಿ ಕಳೆದ ಹದಿನೈದು ದಿನಗಳಿಂದ ಸರ್ವರ್ ಕೈಕೊಟ್ಟ ಹಿನ್ನೆಲೆಯಲ್ಲಿ, ವೃದ್ಧಾಪ್ಯ ಹಾಗೂ ಅಂಗವಿಕಲ ವೇತನ (ಪೆನ್ಷನ್) ನಂಬಿ ಬದುಕುತ್ತಿರುವ ನೂರಾರು ಫಲಾನುಭವಿಗಳು ಕಚೇರಿಗೆ ಅಲೆಯುವಂತಾಗಿದೆ. ನಗರದ ಹೊರವಲಯದಲ್ಲಿರುವ ಕಚೇರಿಗೆ ಹಣ ಖರ್ಚು ಮಾಡಿಕೊಂಡು ಬರುವ ವೃದ್ಧರು ಮತ್ತು ವಿಕಲಚೇತನರಿಗೆ ಸೂಕ್ತ ಮಾಹಿತಿ ನೀಡಬೇಕಾದ ಸಿಬ್ಬಂದಿ ಉಡಾಫೆಯಾಗಿ ವರ್ತಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ದೂರದ ಕಚೇರಿ, ನಿರಂತರ ಅಲೆದಾಟ:
ಹೊಸ ತಾಲೂಕು ಕಚೇರಿಯು ನಗರದಿಂದ ಸಾಕಷ್ಟು ದೂರದಲ್ಲಿದೆ. ಅಂಗವಿಕಲರು ಮತ್ತು ವಯಸ್ಸಾದ ವೃದ್ಧರು ಆಟೋ ಅಥವಾ ಇತರೆ ವಾಹನಗಳಿಗೆ ಹಣ ನೀಡಿ ಕಷ್ಟಪಟ್ಟು ಕಚೇರಿಗೆ ಬರುತ್ತಿದ್ದಾರೆ. ಆದರೆ ಕಳೆದ ೧೫ ದಿನಗಳಿಂದ “ಸರ್ವರ್ ಇಲ್ಲ” ಎನ್ನುವ ಒಂದೇ ಉತ್ತರವನ್ನೇ ಅಧಿಕಾರಿಗಳು ನೀಡುತ್ತಿದ್ದಾರೆ. ಪೆನ್ಷನ್ ಹಣವನ್ನೇ ನಂಬಿ ಜೀವನ ಸಾಗಿಸುವ ಬಡ ಜನರಿಗೆ ಇದರಿಂದ ತೀವ್ರ ತೊಂದರೆಯಾಗಿದೆ.
ಕ್ಲಾರ್ಕ್ ಉಡಾಫೆ ಮಾತು – ಸೀಟಿನಲ್ಲಿ ಸಿಗದ ಸಿಬ್ಬಂದಿ:
ಪೆನ್ಷನ್ ವಿಭಾಗದ ಜವಾಬ್ದಾರಿ ಹೊತ್ತಿರುವ ಸಂಬಂಧಪಟ್ಟ ಕ್ಲಾರ್ಕ್ (ಗುಮಾಸ್ತ) ತನ್ನ ಸೀಟಿನಲ್ಲಿ ಸರಿಯಾಗಿ ಕುಳಿತುಕೊಳ್ಳುತ್ತಿಲ್ಲ. ವೃದ್ಧರು ಮತ್ತು ವಿಕಲಚೇತನರು ತಮ್ಮ ಪೆನ್ಷನ್ ಬಗ್ಗೆ ಮಾಹಿತಿ ಕೇಳಲು ಹೋದರೆ, ಸೌಜನ್ಯದಿಂದ ಉತ್ತರಿಸುವ ಬದಲಿಗೆ “ಇಡೀ ಕರ್ನಾಟಕದಲ್ಲೇ ಸರ್ವರ್ ಇಲ್ಲ, ಇಲ್ಲಿ ಬಂದು ನಿಲ್ಲಬೇಡಿ, ಹೋಗಿ” ಎಂದು ಏಕವಚನದಲ್ಲಿ, ಉಡಾಫೆಯಿಂದ ಮಾತನಾಡಿಸಿ ಕಳುಹಿಸುತ್ತಿದ್ದಾನೆ ಎಂದು ಸಾರ್ವಜನಿಕರು ದೂರಿದ್ದಾರೆ.
ಮೇಲಧಿಕಾರಿಗಳ ಗಮನಕ್ಕೆ:
ಸರ್ಕಾರಿ ಕಚೇರಿಗಳಿಗೆ ಬರುವ ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಮೊದಲ ಆದ್ಯತೆ ನೀಡಬೇಕು ಎಂಬ ಸರ್ಕಾರದ ಕಟ್ಟುನಿಟ್ಟಿನ ನಿಯಮವಿದೆ. ಆದರೆ ಗಂಗಾವತಿ ತಾಲೂಕು ಕಚೇರಿಯಲ್ಲಿ ನಿಯಮಗಳು ಗಾಳಿಗೆ ತೂರಲ್ಪಟ್ಟಿವೆ. ಸಂಬಂಧಪಟ್ಟ ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ, ಸರ್ವರ್ ಸಮಸ್ಯೆಯನ್ನು ಬಗೆಹರಿಸಿ ಪೆನ್ಷನ್ ವಿತರಿಸಬೇಕು. ಕಚೇರಿಯಲ್ಲಿ ಹೊರಗಡೆ ಹೆಚ್ಚು ಇರುತ್ತಾರೆ, ಸಾರ್ವಜನಿಕರೊಂದಿಗೆ ದುರ್ವರ್ತನೆ ತೋರುತ್ತಿರುವ ಕ್ಲಾರ್ಕ್ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
