
Child Rights, Laws and Child Safety: Awareness Program in Malagitti Village

ಮಕ್ಕಳ ಹಕ್ಕುಗಳು, ಕಾನೂನುಗಳು ಮತ್ತು ಮಕ್ಕಳ ಸುರಕ್ಷತೆ: ಮಾಲಗಿತ್ತಿ ಗ್ರಾಮದಲ್ಲಿ ಜಾಗೃತಿ ಕಾರ್ಯಕ್ರಮ

ಕೊಪ್ಪಳ ಜೂನ್ 15 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಶಾಲಾ ಮತ್ತು ಸಾಕ್ಷರತಾ ಇಲಾಖೆ,ಆರೋಗ್ಯ ಮತ್ತು ಕುಂಟುಬ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಾಲಗಿತ್ತಿ ಗ್ರಾಮ ಪಂಚಾಯತ್ ಇವರುಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ (ಜೂ. 11ರಂದು) ಮಾಲಗಿತ್ತಿ ಗ್ರಾಮದ ಶ್ರೀಶರಣಬಸವೇಶ್ವರ ದೇವಸ್ಥಾನದಲ್ಲಿ ಮಕ್ಕಳ ಹಕ್ಕುಗಳು, ಕಾನೂನುಗಳು ಮತ್ತು ಮಕ್ಕಳ ಸುರಕ್ಷತೆ ಕುರಿತಾದ ಜಾಗೃತಿ (ಮಕ್ಕಳ ಮೇಲಿನ ದೌರ್ಜನ್ಯ ತಡೆಗಾಗಿ ಜನಸಂಪರ್ಕ ಸಂವಾದ) ಕಾರ್ಯಕ್ರಮ ನಡೆಯಿತು.
ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ(ಅಸಾಂಸ್ಥಿಕ) ಪ್ರಶಾಂತ ರಡ್ಡಿ ಅವರು ಮಾತನಾಡಿ, ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಯಾರೇ ಮಕ್ಕಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ-1098 ಗೆ ಕರೆ ಮಾಡಿ, ಮಾಹಿತಿಯನ್ನು ನೀಡಿದಲ್ಲಿ ಮಗು ಇರುವಲ್ಲಿಯೇ ತಂಡವು ಆಗಮಿಸಿ, ಮಗುವನ್ನು ರಕ್ಷಿಸಿ ಮುಂದಿನ ಪೋಷಣೆ ಮತ್ತು ರಕ್ಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಪಡಿಸಲಾಗುವುದು ಅಥವಾ ನೀವುಗಳೇ ಖುದ್ದು ಮಗುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರಪಡಿಸಬಹುದಾಗಿದೆ. ಬೇಡವಾದ ಮಗುವನ್ನು ಕಸದ ತೊಟ್ಟಿ ಮೋರಿ, ದೇವಸ್ಥಾನ, ರಸ್ತೆಬದಿಗಳಲ್ಲಿ ಬಿಸಾಡುವುದು ಕಾನೂನು ಬಾಹಿರ, ಅಮಾನವೀಯ ಮತ್ತು ಅಪಾಯಕಾರಿ ಕೃತ್ಯವಾಗಿದೆ. ಈ ರೀತಿಯಲ್ಲಿ ತೊರೆದು ಹೋದ ಮಗುವು ಇರುವೆ, ನಾಯಿಗಳ ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳಬಹುದಾಗಿರುತ್ತದೆ. ಆದ್ದರಿಂದ ಬೇಡದ ಮಗುವನ್ನು ಎಲ್ಲೆಂದರಲ್ಲಿ ಬಿಸಾಡದೇ, ಮಗುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಬಹುದು. ಸಮಿತಿಯು ಮುಂದಿನ ಪುನರವಸತಿಗಾಗಿ ಮಗುವನ್ನು ಕಾನೂನುಬದ್ದವಾಗಿ ದತ್ತು ನೀಡುವ ಮೂಲಕ ಮಗುವಿಗೆ ಸುಭದ್ರ ಬದುಕನ್ನು ಕಟ್ಟಿಕೊಡುತ್ತದೆ. ಸರ್ಕಾರ, ಸಮಿತಿಯ ವಶಕ್ಕೆ ಮಗುವನ್ನು ಒಪ್ಪಿಸಿದ ಪೋಷಕರ ವಿವರಗಳನ್ನು ಬಹಿರಂಗಪಡಿಸಿಸುವುದಿಲ್ಲ. ಗೌಪ್ಯತೆಯನ್ನು ಕಾಪಾಡಲಾಗುವುದು ಎಂದು ಮಾಹಿತಿ ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರತಿಭಾ ಕಾಶಿಮಠ ಅವರು ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಗಟ್ಟಲು ಸರಕಾರವು ವಿವಿಧ ಕಾನೂನುಗಳನ್ನು ಜಾರಿಯಲ್ಲಿ ತಂದಿರುತ್ತದೆ. ಅವುಗಳಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ತಿದ್ದುಪಡಿ-2019 ಪ್ರಮುಖವಾದದ್ದು, ಈ ಕಾಯ್ದೆಯನ್ವಯ 18 ವರ್ಷದೊಳಗಿನ ಮಕ್ಕಳ ಮೇಲಿನ ಬೇಧಕ ಲೈಂಗಿಕ ಹಲ್ಲೆಗೆ ಕನಿಷ್ಠ 20 ವರ್ಷಗಳಿಂದ ಅಜೀವ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. ಲೈಂಗಿಕ ಕಿರುಕುಳ ಅಂದರೆಮಕ್ಕಳಿಗೆ ಶಾಬ್ಧಿಕ, ಅಂಗಿಕ, ಭಾಷಿಕ ಹಾಗೂ ಲಿಖಿತವಾಗಿ ಅವರ ಘನತೆಗೆ ಧಕ್ಕೆ ಉಂಟುಮಾಡಬಹುದಾದ ಯಾವುದೇ ಈ ರೀತಿಯ ಕೃತ್ಯಗಳಿಗೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. ಈ ರೀತಿಯ ಕೃತ್ಯಗಳಿಗೆ ಸಹಾಯ, ಪ್ರೋತ್ಸಾಹ ಮತ್ತು ಪ್ರಯತ್ನಪಟ್ಟವರಿಗೂ ಅಷ್ಟೇ ಪ್ರಮಾಣದ ಶಿಕ್ಷೆಯನ್ನು ವಿಧಿಸಬಹುದಾಗಿದೆ ಎಂದರು.
ಸಾಮಾಜಿಕ ಜಾಲಾತಾಣಗಳಂತಗ ಪ್ರಭಾವದಿಂದ ಪ್ರೀತಿ, ಪ್ರೇಮದ ಹೆಸರಿನಲ್ಲಿ ಮಕ್ಕಳು ತಿಳಿದೊ, ತಿಳಿಯದೆಯೋ ಈ ಕಾಯ್ದೆಯಲ್ಲಿ ಸಿಲುಕುತ್ತಿದ್ದಾರೆ ಅಲ್ಲದೇ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದುವೆಯನ್ನು ಮಾಡಿದಂತವರು, ಭಾಗಿಯಾದವರು, ಪ್ರೋತ್ಸಾಹಿಸಿದವರು ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಈ ಕಾಯ್ದೆಯಲ್ಲಿ ಸಿಲುಕಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಗ್ರಾಮ ಮಟ್ಟದಲ್ಲಿ ವಿವಿಧ ರೀತಿಯಲ್ಲಿ ಜಾಗೃತಿಯನ್ನು ಮೂಡಿಸಲು ಗ್ರಾಮ ಮಟ್ಟದ “ಮಕ್ಕಳ ರಕ್ಷಣಾ ಸಮಿತಿ”ಯಲ್ಲಿ ಚರ್ಚಿಸಿ, “ಮಕ್ಕಳ ಹಕ್ಕುಗಳು, ಕಾನೂನುಗಳ ಮತ್ತು ಮಕ್ಕಳ ಸುರಕ್ಷತೆ ಕುರಿತು” ಸಮುದಾಯಗಳಲ್ಲಿ ಜಾಗೃತಿಯನ್ನು ಮೂಡಿಸಿ, ತನ್ಮೂಲಕ ಮಕ್ಕಳ ಮೇಲಿನ ಲೈಂಗಿಕ ಹಲ್ಲೆ, ಬಾಲ್ಯವಿವಾಹಗಳನ್ನು ತಡೆದು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸುವುದು ಹಾಗೂ ತಾಯಿ ಮರಣ, ಶಿಶು ಮರಣ, ಅಪೌಷ್ಠಿಕ ಮಕ್ಕಳ ಜನನ ನಿರ್ಮೂಲನೆಗಾಗಿ ಸರಕಾರವು ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದೆ. ಅದರನ್ವಯ 18 ವರ್ಷದೊಳಗಿನ ಹೆಣ್ಣು ಮಗುವಿಗೆ ಮತ್ತು 21 ವರ್ಷದೊಳಗಿನ ಗಂಡು ಮಗುವಿಗೆ ವಿವಾಹವನ್ನು ಮಾಡುವುದನ್ನು ನಿಷೇಧಿಸಿದೆ. ರಾಜ್ಯವನ್ನು ಬಾಲ್ಯವಿವಾಹ ಮುಕ್ತ ರಾಜ್ಯವನ್ನಾಗಿಸಲು ಕರ್ನಾಟಕ ರಾಜ್ಯ ಸರಕಾರವು ಕರ್ನಾಟಕ ತಿದ್ದುಪಡಿಯನ್ನು ತಂದಿದ್ದು ಅದರನ್ವಯ ರಾಜ್ಯದಲ್ಲಿ ಬಾಲ್ಯವಿವಾಹಗಳು ಅಸಿಂಧು ವಿವಾಹಗಳಾಗಿವೆ. ಬಾಲ್ಯವಿವಾಹವನ್ನು ಮಾಡುವವರು, ಭಾಗವಹಿಸುವವರು, ಆಯೋಜಿಸುವವರು ಎಲ್ಲರಿಗೂ ಕನಿಷ್ಠ 1 ವರ್ಷದಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಆದ್ದರಿಂದ ಬಾಲ್ಯವಿವಾಹಗಳನ್ನು ಮಾಡಬೇಡಿ, ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಲಗಿತ್ತಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಪ್ರಶಾಂತ್ ಡಿ. ಹಿರೇಮಠ್ ಅವರು ವಹಿಸಿದ್ದರು. ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕರಾದ ದೊಡ್ಡನಗೌಡ, ಹನುಮಂತ್ ಲಮಾಣಿ, ಹನುಮಸಾಗರ ಪೊಲೀಸ್ ಠಾಣೆಯ ಎಎಸ್‌ಐ ಶಂಕರ್ ಮೇಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮುತ್ತಣ್ಣನವರು ನಿರೂಪಿಸಿದರು, ದೇವರಾಜ್ ತಿಲಗಾರ್ ಅವರು ವಂದಿಸಿದರು.
