
Artistic talent
'J.D.Rajkumar' as N.R.Raibagi

ಪ್ರತಿಭೆ ಪರಿಚಯ :
ಕಲಾ ಪ್ರತಿಭೆ
‘ಜೂ.ಡಾ.ರಾಜಕುಮಾರ’ ಎನ್.ಆರ್.ರಾಯಬಾಗಿ

ಇತರರ ಧ್ವನಿ, ಹಾವ ಭಾವ, ನಡುವಳಿಕೆ, ನಟನೆ, ಮಾತಿನ ಶೈಲಿ, ಗಾಯನ ಅನುಕರಣೆ ಮಾಡುವುದು ಸುಲಭವಲ್ಲ.
ಜೀವನ ನಿರ್ವಹಣೆಗೆ ರಸ್ತೆ ಬದಿ ತಳ್ಳು ಗಾಡಿಯಲ್ಲಿ ಆಮ್ಲೇಟ್ ಮಾರುತ್ತಾ ಕಲೆಯ ಗೀಳು ಹಚ್ಚಿಕೊಂಡು ಕಿರು ನಾಟಕಗಳಲ್ಲಿ ಅಭಿನಯಿಸಿ ಹಾಡು ಹಾಡುತ್ತಾ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದ ವ್ಯಕ್ತಿಯೊಬ್ಬರು ಮುಂದೊಂದು ದಿನ ಜೂನಿಯರ್ ರಾಜಕುಮಾರ ಆಗುತ್ತಾರೆ ಎಂದು ಊಹಿಸಲು ಸಾಧ್ಯವಿಲ್ಲ. ಜೂನಿಯರ್ ರಾಜಕುಮಾರರಂತೆ ಅನುಕರಣೆ ಮಾಡುವವರು ರಾಜ್ಯದಲ್ಲಿ ಅನೇಕರಿದ್ದು ಅವರೆಲ್ಲ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅನುಕರಣೆ ಮಾಡಿ ರಕ್ಷಿಸುತ್ತಿದ್ದಾರೆ. ಗಂಗಾವತಿಯಲ್ಲೂ ಒಬ್ಬ ಜೂನಿಯರ್ ರಾಜಕುಮಾರ ಇದ್ದಾರೆ.

ನಾರಾಯಣ ಸಾ ರಾಯಬಾಗಿ ಜೂನಿಯರ್ ರಾಜಕುಮಾರರಾಗಿ ಬೆಳೆದಿರುವುದು ಹೆಮ್ಮೆ ಎನಿಸುತ್ತದೆ.
ಕಿರು ನಾಟಕ, ಗಾಯನದಲ್ಲಿ ಗುರುತಿಸಿಕೊಂಡಿದ್ದ ನಾರಾಯಣ ರಾಯಬಾಗಿ ಮೇರುನಟ ಡಾ.ರಾಜಕುಮಾರ ಅವರನ್ನು ಅವರನ್ನು ಅನುಕರಿಸಲು ಆರಂಭಿಸಿದರು. ಆರಂಭದಲ್ಲಿ ಇವರ ಅನುಕರಣೆ ಕಂಡು ಜನರು ನಕ್ಕರು. ನೀನು ಜೂನಿಯರ್ ರಾಜಕುಮಾರನೇ ? ನಿನಗೆ ಇದೆಲ್ಲ ನಿನಗೆ ಸರಿ ಆಗುವುದಿಲ್ಲ ಬಿಟ್ಟು ಬಿಡು ಎಂದು ಅನೇಕರು ಹೇಳಿದರು. ಆದರೆ ಇವರು ಮಾತುಗಳನ್ನು ಸವಾಲಾಗಿ ತೆಗೆದುಕೊಂಡು ದೊರಕಿದ ಅವಕಾಶಗಳನ್ನು ಉಪಯೋಗಿಸಿಕೊಂಡು ಡಾ.ರಾಜ್ ಅವರಂತೆ ಅಭಿನಯ, ಹಾವ ಭಾವ, ಮಾತಿನ ಶೈಲಿ, ನಿಲುವು ಗಾಯನ ಮತ್ತಿತರ ಅಂಶಗಳನ್ನು ಕರಗತ ಮಾಡಿಕೊಂಡು ಜೂನಿಯರ್ ರಾಜಕುಮಾರ ಆಗಿ ಬೆಳೆದರು. ಸದ್ಯ ರಾಜ್ಯದಲ್ಲಿರುವ ಜೂನಿಯರ್ ರಾಜಕುಮಾರಗಳ ಪೈಕಿ ಇವರು ಒಬ್ಬರು.
ರಾಯಬಾಗಿ ರಂಗಭೂಮಿ ಕಲಾವಿದ. ಇವರು ಬೆಂಗಳೂರಿನ ಮೂವಿ ಟೆಕ್ನಿಕ್ ಇನ್ ಸ್ಟೂಟ್ಯೂಟ್ ನಲ್ಲಿ ತರಬೇತಿ ಪಡೆದು 1992ರಲ್ಲಿ ‘ದೈವ ಭಾಗ್ಯ’ ರಂಗ ಪ್ರವೇಶ ಮಾಡಿದರು. ನಂತರ ತಾಯಿಯ ತಕರಾರು, ಮುದುಕನ ಮದುವೆ, ಗೌಡ್ರ ಗದ್ಲ, ವೀರ ಸಿಂಧೂರ ಲಕ್ಷ್ಮಣ, ಮೂರು ದಿನದ ಸಂತೆ, ಬಸ್ ಕಂಡಕ್ಟರ್, ನರು ನಾಗರು, ಬೆಳಕಿನೆಡೆಗೆ, ಗಿರಿಜಾ ಕಲ್ಯಾಣ, ಕನಕಗಿರಿ ವೈಭವ, ಶ್ರೀ ಕೃಷ್ಣದೇವರಾಯ ವೈಭವ ಮತ್ತಿತರ ನಾಟಕಗಳಲ್ಲಿ ಸಹ ನಾಯಕ, ಹಾಸ್ಯ ಸೇರಿದಂತೆ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದರು.
ವಿಶ್ವ ಪ್ರಸಿದ್ಧಿ ಪಡೆದ ಹಂಪಿ ಉತ್ಸವದಲ್ಲಿ ಧ್ವನಿ ಬೆಳಕು ಕಾರ್ಯಕ್ರಮದಲ್ಲಿ 1996ರಿಂದ ಈವರೆಗೆ ಕಲಾವಿದನಾಗಿ ಅಶೋಕ ಚಕ್ರವರ್ತಿ, ಭಾರತ ಚಕ್ರವರ್ತಿ, ಶಂಕರಾಚಾರ್ಯ, ಬ್ರಿಟಿಷ್ ಅಧಿಕಾರಿ, ಸಗಣಚಾರ್ಯ, ಅಪ್ಪಾಜಿ, ರಾಜ, ಮಂತ್ರಿ, ಪೂಜಾರಿ, ಸೈನಿಕ ಮತ್ತಿತರ ಪಾತ್ರಗಳಲ್ಲಿ ಕಾಣಿಸಿಕೊಂಡು ರಂಜಿಸಿದ್ದಾರೆ.
ಸದ್ಯ ಕುಟುಂಬ ನಿರ್ವಹಣೆಗಾಗಿ ಚಿಕ್ಕ ಪೋಟೋ ಸ್ಟುಡಿಯೋ ನಡೆಸುತ್ತಿದ್ದಾರೆ.
ಬೆಂಗಳೂರು, ಮೈಸೂರು, ಹಿರಿಯೂರು, ಗಂಗಾವತಿ, ವಿಜಯಪುರ, ತುಮಕೂರು, ರಾಯಚೂರು, ಬೀದರ್, ಹೊಸಪೇಟೆ, ಕನಕಗಿರಿ, ಕೊಪ್ಪಳ ಸೇರಿದಂತೆ ಅನೇಕ ಊರುಗಳ ಹುಟ್ಟುಹಬ್ಬ, ರಾಜ್ಯೊತ್ಸವ, ಗಣೇಶ ಚತುರ್ಥಿ, ವಿವಾಹ ಮಹೋತ್ಸವ, ರಸಮಂಜರಿಯಲ್ಲಿ 300ಕ್ಕೂ ಹೆಚ್ಚು ಜೂನಿಯರ್ ರಾಜಕುಮಾರ ಕಾರ್ಯಕ್ರಮ ನೀಡಿ ಜನರನ್ನು ರಂಜಿಸಿ ಮೆಚ್ಚುಗೆ ಗಳಿಸಿದ್ದಾರೆ.
ಇವರು ಕಲಾವಿದ ಮತ್ತು ಜೂ.ರಾಜ್ ಅಷ್ಟೇ ಅಲ್ಲದೇ ಕನ್ನಡ, ಮರಾಠಿ ಭಾಷೆಗಳಲ್ಲಿ ಅನೇಕ ನಾಟಕಗಳನ್ನು ರಚಿಸಿ ತಾವು ಅಭಿನಯಿಸಿ ಯಶಸ್ವಿ ಪ್ರದರ್ಶನ ನೀಡಿದ್ದಾರೆ. ಸಾಹಿತ್ಯದ ಅಭಿರುಚಿ ಇವರಿಗಿದ್ದು ಅನೇಕ ಕವನ ರಚಿಸಿ ಗೋಷ್ಠಿಗಳಲ್ಲಿ ವಾಚಿಸಿದ್ದಾರೆ.
2010ರಲ್ಲಿ ಚಂದನ ದೂರದರ್ಶನದ ಬೆಳಗು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಸಂದರ್ಶನ ನೀಡಿದ್ದಾರೆ.
2011ರಲ್ಲಿ ಗಂಗಾವತಿ ಮತ್ತು 2012ರಲ್ಲಿ ವಿಜಯಪುರದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಜೂ.ರಾಜ್ ಕಾರ್ಯಕ್ರಮ ನೀಡಿ ನೆರೆದಿದ್ದ ಸಾವಿರಾರು ಜನರನ್ನು ರಂಜಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸೋಮವಂಶ ಕ್ಷತ್ರೀಯ ಸಮಾಜದಲ್ಲಿ ರೇವಣ ಸಾ ರಾಯಬಾಗಿ, ಲಕ್ಷ್ಮೀಬಾಯಿ ದಂಪತಿಗಳ ಮಗನಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಆಕಾಶವಾಣಿಯಲ್ಲಿ ಕಾರ್ಯಕ್ರಮ ನೀಡಿರುವ ಇವರು ಮಲ್ಲಾಪುರ ಗ್ರಾಮದ ಬಳಿಯ ಶ್ರೀ ವಾಣಿಭದ್ರೇಶ್ವರ ದೇವಸ್ಥಾನ ಕುರಿತು ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಿದ್ದಾರೆ.
ರಾಜ್ಯ ಮಟ್ಟದ ಶ್ರೀ ಚನ್ನಬಸವ ಸ್ವಾಮಿ, ಶ್ರೀ ಕೃಷ್ಣ ದೇವರಾಯ, ಸುವರ್ಣ ರಾಜ್ಯೋತ್ಸವ, ಚುಟುಕು ಶ್ರೀ, ರಾಜ್ ಸೇವಾ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೇ ಸಂಘ ಸಂಸ್ಥೆಗಳು, ಮಠದ ಸ್ವಾಮೀಜಿಗಳು, ಗಣ್ಯರು ಸನ್ಮಾನಿಸಿ ಗೌರವಿಸಿದ್ದಾರೆ.
ಕಲೆಯ ವ್ಯಾಮೋಹವೇ ಹಾಗೆ….ಯಾರನ್ನೂ ಬಿಟ್ಟಿಲ್ಲ. ರಾಜಕಾರಣಿ, ಅಧಿಕಾರಿ, ಪೊಲೀಸ್, ಶಿಕ್ಷಕ, ವ್ಯಾಪಾರಸ್ಥ …. ಹೀಗೆ ಅನೇಕರು ಕಲೆಯ ಗೀಳು ಹಚ್ಚಿಕೊಂಡಿದ್ದಾರೆ. ರಾಯಬಾಗಿ ಕಲೆಯಲ್ಲಿ ಬೆಳೆದು ಜೀವಿಸಿದ್ದಾರೆ.
ಕಲಾವಿದನಾಗಿ ಗುರುತಿಸಿಕೊಂಡಿರುವ ಇವರು ಜೂನಿಯರ್ ರಾಜಕುಮಾರರಾಗಿ ರಂಜಿಸುತ್ತ ಯಶಸ್ವಿಯಾಗಿ ಸಾಗಿದ್ದಾರೆ. ಇವರು ಸ್ವಸಾಮರ್ಥ್ಯ ಹಾಗೂ ಛಲದಿಂದ ಬೆಳೆದಿದ್ದಾರೆ. ಮೊದಲೆಲ್ಲ ಇವರು ಕಲೆಯನ್ನು ಪ್ರೋತ್ಸಾಹಿಸದವರು ಈಗ ಬೆಳೆದಿರುವ ಪರಿ ಕಂಡು ಆತ್ಮೀಯತೆಯಿಂದ ಮಾತನಾಡಿ ಇನ್ನಷ್ಟು ಎತ್ತರಕ್ಕೆ ಬೆಳೆಯುವಂತೆ ಹರಿಸುತ್ತಿದ್ದಾರೆ. ಇವರು ಪೋಟೋಗ್ರಾಫರ್ ವೃತ್ತಿಯ ಜೊತೆ ಸಮಯ ಹೊಂದಿಸಿಕೊಂಡು ಜೂ.ರಾಜ್ ಕಾರ್ಯಕ್ರಮ ನೀಡುತ್ತಾ ಹೆಸರಾಗಿದ್ದಾರೆ. ಹೀಗೆ ರಾಯಬಾಗಿ ಅವರ ಕಲಾ ಸೇವೆ ಮುಂದುವರೆಯಲಿ ಎಂಬುದು ಎಲ್ಲರ ಆಶಯ
-ಎಂ.ಪರಶುರಾಮ ಪ್ರಿಯ ಪತ್ರಕರ್ತರು
