
Arrange more buses and reserve fire engines during the Tiger Festival: Dr. Suresh B. Itnal


ಹುಲಿಗಿ ಜಾತ್ರಾ ಅವಧಿಯಲ್ಲಿ ಹೆಚ್ಚು ಬಸ್‌ಗಳ ವ್ಯವಸ್ಥೆ ಮಾಡಿ,ಅಗ್ನಿಶಾಮಕ ವಾಹನ ಕಾಯ್ದಿರಿಸಿ: ಡಾ. ಸುರೇಶ ಬಿ. ಇಟ್ನಾಳ

ಕೊಪ್ಪಳ ಮೇ 05 (ಕರ್ನಾಟಕ ವಾರ್ತೆ): ಶ್ರೀ ಕ್ಷೇತ್ರ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ 2026ರ ವಾರ್ಷಿಕ ಜಾತ್ರಾ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳ ವ್ಯವಸ್ಥೆ ಮಾಡಬೇಕು ಮತ್ತು ಜಾತ್ರಾ ಸಮಯದಲ್ಲಿ ಅಗ್ನಿಶಾಮಕ ವಾಹನವನ್ನು ಕ್ಷೇತ್ರದಲ್ಲಿ ಕಾಯ್ದಿರಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹುಲಿಗಿ ಜಾತ್ರೆಯ ಪ್ರಯುಕ್ತ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ರಾಜ್ಯದ ವಿವಿಧ ಭಾಗಗಳಿಂದ ಕ್ಷೇತ್ರಕ್ಕೆ ಬರುತ್ತಿದ್ದು, ಭಕ್ತರ ಅನುಕೂಲಕ್ಕಾಗಿ ಬಂದು ಹೋಗಲು ಹೆಚ್ಚುವರಿ ಬಸ್ಸುಗಳನ್ನು ಸಂಚಾರಕ್ಕೆ ಒದಗಿಸಲು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕೊಪ್ಪಳ, ಹೊಸಪೇಟೆ, ಕುಷ್ಟಗಿ ಗಂಗಾವತಿ, ಡಿಪೋಗಳ ವ್ಯವಸ್ಥಾಪಕರು ಅಗತ್ಯ ಕ್ರಮ ಕೈಗೊಳ್ಳಬೇಕು. ಭಕ್ತರ ಪ್ರಮಾಣಕ್ಕೆ ಯಾವುದೇ ರೀತಿಯ ಅನಾನುಕೂಲತೆ ಆಗದಂತೆ ಹೆಚ್ಚಿನ ಸಂಖ್ಯೆಯ ಬಸ್ಸುಗಳನ್ನು ಬಿಡುವ ಬಗ್ಗೆ ಇತ್ತೀಚೆಗೆ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿದೆ. ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಬಸ್‌ಗಳ ನಿಲುಗಡೆ ಸ್ಥಳ ಗುರುತಿಸಲು ಸಹ ಕ್ರಮ ವಹಿಸುವಂತೆ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಕರು ಮತ್ತು ಇತರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
*ಜಾತ್ರಾ ಅವಧಿಯಲ್ಲಿ ಅಗ್ನಿಶಾಮಕ ವಾಹನ ಕಾಯ್ದಿರಿಸಿ:* ಜಾತ್ರಾ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ವಾಹನಗಳು ಬರುವುದರಿಂದ ಹಾಗೂ ವಿವಿಧ ರೀತಿಯ ಅಂಗಡಿಗಳು ಜಾತ್ರಾ ಅವಧಿಯಲ್ಲಿ ಹಾಕುವುದರಿಂದ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮೇ 10 ರಿಂದ 14ರ ವರೆಗೆ ನದಿತೀರದಲ್ಲಿ ಬೋಟ್, ರೋಪ್ ಹಾಗೂ ಒಂದು ಅಗ್ನಿಶಾಮಕ ವಾಹನವನ್ನು ಜಾತ್ರಾ ಅವಧಿಯಲ್ಲಿ ಕಾಯ್ದಿರಿಸಲು ಅಗ್ನಿಶಾಮಕ ಅಧಿಕಾರಿಗಳಿಗೆ ಕ್ರಮ ವಹಿಸಬೇಕು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
