
The lifeline of North Karnataka is drying up: Farmers' plight is intensifying as the Krishna River dries up

ಉತ್ತರ ಕರ್ನಾಟಕದ ಜೀವನಾಡಿ ಒಣಗುತ್ತಿದೆ: ಕೃಷ್ಣಾ ನದಿ ಬರಿದಾಗಿ ರೈತರ ಸಂಕಷ್ಟ ತೀವ್ರ

ಸಚೀನ ಆರ್ ಜಾಧವ
ಸಾವಳಗಿ: ಉತ್ತರ ಕರ್ನಾಟಕದ ಜೀವನಾಡಿ ಎಂದೇ ಕರೆಯಲ್ಪಡುವ ಕೃಷ್ಣಾ ನದಿ ಈ ಬಾರಿ ಬೇಸಿಗೆ ಆರಂಭದಲ್ಲೇ ಬರಿದಾಗುತ್ತಿರುವುದು ಆತಂಕಕಾರಿಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಹಾಯ್ದು ಹೋಗುವ ಈ ಪ್ರಮುಖ ನದಿ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಸೇರಿದಂತೆ ಸುಮಾರು 111 ಗ್ರಾಮಗಳಿಗೆ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಈಗ ನೀರಿನ ಕೊರತೆಯಿಂದ ಜನಜೀವನ ಹಾಗೂ ಕೃಷಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಮಹಾರಾಷ್ಟ್ರದಲ್ಲಿ ಉಗಮಗೊಂಡು ಬಾಗಲಕೋಟೆ ಭಾಗದಲ್ಲಿ ಸಂಗಮವಾಗುವ ಕೃಷ್ಣಾ ನದಿ, ಈ ಭಾಗದ ಕೃಷಿ ಚಟುವಟಿಕೆಗಳಿಗೆ ಪ್ರಮುಖ ಆಧಾರವಾಗಿದೆ. ಬೆಳಗಾವಿ ಜಿಲ್ಲೆಯ ಹಿಪ್ಪರಗಿ ಗ್ರಾಮದಲ್ಲಿ ನದಿಗೆ ಅಡ್ಡವಾಗಿ ನಿರ್ಮಿಸಲಾದ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಈ ಬಾರಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ.
ಜಮಖಂಡಿ ತಾಲೂಕಿನ ಕೃಷ್ಣೆ ನದಿ ತೀರದ ಸುತ್ತಮುತ್ತ ಗ್ರಾಮಗಳಾದ ಶಿರುಗುಪ್ಪಿ, ಮೈಗೂರು, ಅಳಬಾಳ, ಮುತ್ತೂರು,ಕಂ ಕನವಾಡಿ,ಕಡಕೋಳ ಶೂರಪಾಲಿ, ಜಂಬಗಿ, ಸನಾಳ ,ಕುಂಬಾರಹಳ್ಳ, ಆಲಗೂರು, ಚಿಕ್ಕಪಡಸಲಗಿ, ಹಿರೇಪಡಸಲಗಿ, ಟಕ್ಕೋಡ, ಟಕ್ಕಳಕಿ, ಕುಂಚನೂರ, ಲಿಂಗನೂರು, ಚಿನಗುಂಡಿ, ಜಕನೂರ, ಬಿದರಿ,ಜನವಾಡ,ಕವಟಗಿ ಇತರ ಹಳ್ಳಿಗಳ ರೈತರು ನೀರಿಲ್ಲದೆ ಪರದಾಡುವಂತಾಗಿದೆ.
6 ಟಿಎಂಸಿ ಸಾಮರ್ಥ್ಯ ಹೊಂದಿರುವ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಸುಮಾರು 2.5 ಟಿಎಂಸಿ ನೀರು ಸಂಗ್ರಹವಾಗಿದ್ದರೆ, ಈ ಬಾರಿ ಅದು ಕೇವಲ 1.5 ಟಿಎಂಸಿಗೆ ಇಳಿದಿದೆ. ಇದರಲ್ಲಿ ಬಹುತೇಕ 1.5 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿರುವುದರಿಂದ ಬಳಕೆಗೆ ಯೋಗ್ಯವಾದ ನೀರು ಇಲ್ಲದಂತಾಗಿದೆ.
ಹಿಪ್ಪರಗಿ ಜಲಾಶಯದಿಂದ 3 ಲಕ್ಷ ಹೆಕ್ಟರ್ ಕೃಷಿ ಭೂಮಿ ಜಲಾಶಯದ ಮೇಲೆ ಅವಲಂಭಿತವಾಗಿದ್ದು,ಈಗ ಕುಡಿಯುವ ಸಲುವಾಗಿ ನೀರನ್ನು ಬಿಟ್ಟರೆ ಬೆಳೆಗಳ ಗತಿ ಏನು ಎಂದು ರೈತರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜಕೀಯ ನಾಯಕರು ಮಹಾರಾಷ್ಟ್ರದ ಸಿಎಂ ಅವರೊಂದಿಗೆ ಮಾತನಾಡಿ ಮೂರು ಟಿಎಂಸಿ ನೀರನ್ನು ತರಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ 15 ದಿನಗಳಿಂದ ಕೃಷ್ಣಾ ನದಿ ನೀರು ಸಂಪೂರ್ಣವಾಗಿ ಕಡಿಮೆಯಾಗಿದ್ದು, ರೈತರು ಬೆಳೆದ ಬೆಳೆಗಳಿಗೆ ನೀರು ಒದಗಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕೃಷಿಭೂಮಿಗಳು ಒಣಗುತ್ತಿದ್ದು, ರೈತರು ಮತ್ತು ಪಶುಪಾಲಕರು ಭಾರೀ ಸಂಕಷ್ಟ ಎದುರಿಸುತ್ತಿದ್ದಾರೆ.
ಸ್ಥಳೀಯ ರೈತರು ಸರ್ಕಾರ ತಕ್ಷಣ ಕ್ರಮ ಕೈಗೊಂಡು ನೀರಿನ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿದ್ದಾರೆ. ಕೃಷ್ಣಾ ನದಿಯ ಈ ಸ್ಥಿತಿ ಮುಂದುವರಿದರೆ ಉತ್ತರ ಕರ್ನಾಟಕದ ಅನೇಕ ಗ್ರಾಮಗಳಲ್ಲಿ ತೀವ್ರ ಜಲ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
1) ಬಾಕ್ಸ್:
ಬಿಸಿಲಿನ ತಾಪಮಾನ ಮೇ 15ರವರೆಗೆ ಮುಂದುವರೆಯುವ ಸಾಧ್ಯತೆಯಿದ್ದು,ನೀರು ಆವಿಯಾಗುವ ಪ್ರಮಾಣ ಕೂಡ ಅತಿಯಾಗಿದ್ದು, ಜಮಖಂಡಿ ಮತ್ತು ರಬಕವಿ ಬನಹಟ್ಟಿ ನಗರ ಸೇರಿ 35 ಎಮ್ ವಿ.ಎಸ್ ಯೋಜನೆ ಜಾರಿಯಲ್ಲಿದ್ದು,ಅದಕ್ಕಾಗಿ ನದಿ ದಡದಲ್ಲಿ ವಾರಕ್ಕೊಮ್ಮೆ ವಿದ್ಯುತ್ ಕಡಿತಗೊಳಿಸಲಾಗುತ್ತಿತ್ತು,ಮುಂದಿನ ವಾರದಿಂದ ವಾರಕ್ಕೆ ಎರಡು ದಿನ ವಿದ್ಯುತ್ ಕಡಿತಗೊಳಿಸಲಾಗುವುದು. ನೀರಿನ ತೀವ್ರ ಕೊರತೆ ಹಿನ್ನೆಲೆಯಲ್ಲಿ ಜನರು ಹಾಗೂ ಜಾನುವಾರುಗಳ ಬದುಕು ಸಂಕಷ್ಟದಲ್ಲಿದೆ. ಆದಕಾರಣ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸುವಂತೆ ಸೂಚಿಸಿದ್ದಾರೆ.
ಶ್ವೇತಾ ಬಿಡೀಕರ.
ಉಪವಿಭಾಗಾಧಿಕಾರಿಗಳು, ಜಮಖಂಡಿ.
2) ಬಾಕ್ಸ್:
ಮಳೆಗಾಲದಲ್ಲಿ ನದಿ ಬಂದು ಹೊಲ, ಮನೆ ಮುಳುಗಡೆಯಾಗುತ್ತವೆ. ಬೇಸಿಗೆಕಾಲದಲ್ಲಿ ನೀರಿಲ್ಲದೆ ಬೆಳೆಗಳು ಒಣಗಿ ಹೋಗುತ್ತವೆ ಹಾಗೂ ದನ ಕರುಗಳಿಗೆ ಮೇವಿಲ್ಲದೆ ಮಾರಾಟ ಮಾಡುವ ಪರಿಸ್ಥಿತಿ ಉಂಟಾಗಿದೆ.ಶಾಶ್ವತ ಮುಳುಗಡೆ ಮಾಡುವ ಸಲುವಾಗಿ ಪ್ರತಿ ವರ್ಷ ರೈತರು ಹೋರಾಟ ಮಾಡುತ್ತಿದ್ದೇವೆ.ಪ್ರತಿ ಎಕರೆಗೆ 40 ಲಕ್ಷ ಘೋಷಣೆ ಮಾಡಿ ಒಂದು ವರ್ಷ ಕಳೆದರೂ ಕೂಡಾ ರೈತರಿಗೆ ಹಣ ಸಿಕ್ಕಿಲ್ಲ. ನಮ್ಮ ಪರಿಸ್ಥಿತಿ ಸರ್ಕಾರಕ್ಕೆ ತಿಳಿಯುತ್ತಿಲ್ಲ.
ಕಂಕಣವಾಡಿ ಗ್ರಾಮದ ರೈತರು.
