
Gangavathi: Kurubara Venkatesh murder case: 6 accused found guilty, 6 acquitted
Sentence to be announced on 27th April

ಗಂಗಾವತಿ : ಕುರುಬರ ವೆಂಕಟೇಶ ಕೊಲೆ ಕೇಸ್: 6 ಆರೋಪಿಗಳಿಗೆ ಅಪರಾಧ ಸಾಬೀತು, 6 ಮಂದಿ ಖುಲಾಸೆ
ಶಿಕ್ಷೆಯ ಪ್ರಮಾಣ ಏ.27ಕ್ಕೆ ಪ್ರಕಟ

ಗಂಗಾವತಿ, ಏ.23: ಬಿಜೆಪಿ ಯುವ ಮೋರ್ಚಾದ ಮಾಜಿ ಅಧ್ಯಕ್ಷ ಕುರುಬರ ವೆಂಕಟೇಶ ಅಲಿಯಾಸ್ ಜೆಎನ್‌ಎನ್ ವೆಂಕಿ ಅವರ ಕೊಲೆ ಪ್ರಕರಣದಲ್ಲಿ ಗಂಗಾವತಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಗುರುವಾರ ಮಹತ್ವದ ತೀರ್ಪು ಪ್ರಕಟಿಸಿದೆ.
2025ರ ಡಿಸೆಂಬರ್‌ನಲ್ಲಿ ನಗರವನ್ನು ಬೆಚ್ಚಿಬೀಳಿಸಿದ್ದ ಈ ಕೊಲೆ ಪ್ರಕರಣದ ತೀರ್ಪು ಹೊರಬೀಳುತ್ತಿದ್ದಂತೆ ನ್ಯಾಯಾಲಯದ ಆವರಣ ಜನರಿಂದ ಕಿಕ್ಕಿರಿದು ತುಂಬಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಅವರು ತೀರ್ಪು ಓದಿದರು.
ತೀರ್ಪಿನ ವಿವರ: ಪ್ರಕರಣದಲ್ಲಿದ್ದ ಒಟ್ಟು 12 ಆರೋಪಿಗಳ ಪೈಕಿ 6 ಜನರ ಮೇಲಿನ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಉಳಿದ 6 ಆರೋಪಿಗಳನ್ನು ನಿರ್ದೋಷಿಗಳು ಎಂದು ತೀರ್ಪು ನೀಡಿ ಖುಲಾಸೆಗೊಳಿಸಲಾಗಿದೆ.
ಖುಲಾಸೆಯಾದವರಲ್ಲಿ ಪ್ರಕರಣದ ಎ-1 ಆರೋಪಿ ರವಿ ಅವರ ಪತ್ನಿ ಚೈತ್ರಾ ಕೂಡ ಸೇರಿದ್ದಾರೆ.
ಶಿಕ್ಷೆ ಯಾವಾಗ? ಅಪರಾಧ ಸಾಬೀತಾಗಿರುವ 6 ಆರೋಪಿಗಳಿಗೆ ವಿಧಿಸುವ ಶಿಕ್ಷೆಯ ಪ್ರಮಾಣವನ್ನು ಏಪ್ರಿಲ್ 27ರಂದು ಪ್ರಕಟಿಸುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.
ಒಂದೂವರೆ ವರ್ಷಗಳ ಕಾಲ ಗಂಗಾವತಿ ಭಾಗದಲ್ಲಿ ಸಂಚಲನ ಮೂಡಿಸಿದ್ದ ಈ ಪ್ರಕರಣದ ತೀರ್ಪಿನಿಂದ ಸಂತ್ರಸ್ತ ವೆಂಕಿ ಕುಟುಂಬಕ್ಕೆ ಭಾಗಶಃ ನ್ಯಾಯ ದೊರೆತಂತಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
