
AIDYO demands withdrawal of order making it mandatory to complete Second PUC in Science for admission to Paramedical courses

ಪ್ಯಾರಾ ಮೆಡಿಕಲ್ ಕೋರ್ಸ್ಗಳಿಗೆ ದಾಖಲಾಗಲು ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಪೂರೈಸುವುದನ್ನು ಕಡ್ಡಾಯಗೊಳಿಸಿರುವ ಆದೇಶವನ್ನು ಹಿಂಪಡೆಯಲು ಎಐಡಿವೈಒ ಆಗ್ರಹ.

ಕೊಪ್ಪಳ :ಅರೆ ವೈದ್ಯಕೀಯ ಕೋರ್ಸು ಗಳಿಗೆ ದಾಖಲಾಗಲು ವಿಜ್ಞಾನ ವಿಷಯದಲ್ಲಿ ಪಿಯುಸಿ ಪೂರ್ಣಗೊಳಿಸುವುದು ಕಡ್ಡಾಯ ಎಂದು ಆದೇಶ ಹೊರಡಿಸಿರುವ ಆಲೈಡ್ ಮತ್ತು ಹೆಲ್ತ್ ಕೇರ್ ರಾಷ್ಟ್ರೀಯ ಆಯೋಗದ ನಿರ್ಧಾರವನ್ನು ಆಲ್ ಇಂಡಿಯಾ ಡೆಮೊಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ವಿರೋಧಿಸುತ್ತದೆ.
ಇದುವರೆಗೂ ಎಸ್ಎಸ್ಎಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಆರೆ ವೈದ್ಯಕೀಯ (ಡಿಪ್ಲೊಮಾ) ಕೋರ್ಸ್ಗಳಿಗೆ ಪ್ರವೇಶ ಪಡೆಯುತ್ತಿದ್ದರು. ಎಸ್ಎಸ್ಎಲ್ಸಿ ತೇರ್ಗಡೆಯಾದ ನಂತರ ಪ್ರಯೋಗಾಲಯ ತಂತ್ರಜ್ಞಾನ, ವೈದ್ಯಕೀಯ ಪ್ರತಿಫಲನ, ಶಸ್ತ್ರಚಿಕಿತ್ಸಾ ತಂತ್ರಜ್ಞಾನ, ಡಯಾಲಿಸಿಸ್, ಆರೋಗ್ಯ ಸಹಾಯಕರು, ಫಿಸಿಯೋಥೆರಪಿ, ಕಣ್ಣಿನ ತಂತ್ರಜ್ಞಾನ, ಶರೀರಶಾಸ್ತ್ರ, ಅಂಗರಚನಾ ಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ, ಸಮುದಾಯ ಔಷಧ, ರೋಗಶಾಸ್ತ್ರ, ವಿಧಿವಿಜ್ಞಾನ ಔಷಧ, ಜೀವರಸಾಯನ ಶಾಸ್ತ್ರ ಸೇರಿದಂತೆ ವಿವಿಧ ಕೋರ್ಸ್ಗಳನ್ನು ಪೂರೈಸಿ, ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಉದ್ಯೋಗದ ಅವಕಾಶಗಳನ್ನು ಪಡೆಯುತ್ತಿದ್ದರು.
ಎರಡು ಅಥವಾ ಮೂರು ವರ್ಷಗಳ ಉದ್ಯೋಗಾಧಾರಿತ ಆರೆ ವೈದ್ಯಕೀಯ ಕೋರ್ಸ್ಗಳನ್ನು ಪೂರೈಸಿದ ನಂತರ ಕೆಲವರು ಎರಡನೇ ವರ್ಷದ ಪದವಿ ಕೋರ್ಸ್ಗಳಿಗೆ ನೇರ ಪ್ರವೇಶ ಪಡೆಯುತ್ತಿದ್ದರು. ಆದರೆ ಈಗಿನ ಆದೇಶದಿಂದ ಗ್ರಾಮೀಣ ಪ್ರದೇಶದ ಯುವಜನರಿಗೆ ಇಂತಹ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಲು ಆರ್ಥಿಕ ಹೊರೆ ಹೆಚ್ಚುತ್ತದೆ. ಅನೇಕ ಬಡ ವಿದ್ಯಾರ್ಥಿಗಳಿಗೆ ಇಂತಹ ಕೋರ್ಸುಗಳನನ್ನು ಓದುವುದೇ ಅಸಾಧ್ಯವಾಗುತ್ತದೆ. ಇಂತಹ ಕೋರ್ಸುಗಳನ್ನು ಮುಗಿಸಿ ಉದ್ಯೋಗ ಪಡೆಯುವ ನಿರೀಕ್ಷೆಯಲ್ಲಿದ್ದ ಗ್ರಾಮೀಣ ಪ್ರದೇಶದ ಹಿಂದುಳಿದ ಅರ್ಥಿಕತೆಯ ಹಿನ್ನೆಲೆಯಿಂದ ಬರುವವರಿಗೆ ಇದ್ದ ಒಂದು ಅವಕಾಶವನ್ನು ಕಿತ್ತುಕೊಂಡಂತಾಗುತ್ತದೆ. ಅಲ್ಲದೆ ಪ್ಯಾರಾ ಮೆಡಿಕಲ್ ಕಾಲೇಜುಗಳಲ್ಲಿ ದಾಖಲಾತಿ ಕಡಿಮೆಯಾಗಿ ಈಗ ಅಲ್ಲಿ ಕೆಲಸ ಮಾಡುತ್ತಿರುವ ಉಪನ್ಯಾಸಕರ ಕೆಲಸಗಳಿಗೂ ಕುತ್ತು ಬರಲಿದೆ.
ಆದ್ದರಿಂದ, ಅಲೈಡ್ ಮತ್ತು ಹೆಲ್ತ್ ಕೇರ್ ರಾಷ್ಟ್ರೀಯ ಆಯೋಗವು ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಎಐಡಿವೈಒ ಆಗ್ರಹಿಸುತ್ತದೆ.
