ವಿಕಲಚೇತನರ ಮಾಸಾಶನ ಬಿಡುಗಡೆಗೆ ಒತ್ತಾಯ: ಸಂಘಟನೆಗಳ ಮನವಿ

Mallikarjun
1 Min Read
Organizations urge release of disabled people's month-long lockdown

ವಿಕಲಚೇತನರ ಮಾಸಾಶನ ಬಿಡುಗಡೆಗೆ ಒತ್ತಾಯ: ಸಂಘಟನೆಗಳ ಮನವಿ

ಗಂಗಾವತಿ: ವಿಕಲಚೇತನರು, ವಿಧವೆಯರು ಹಾಗೂ ಹಿರಿಯ ನಾಗರಿಕರಿಗೆ ಸರ್ಕಾರದಿಂದ ನೀಡಲಾಗುವ ಮಾಸಾಶನವನ್ನು ಕಳೆದ 2-3 ತಿಂಗಳಿನಿಂದ ಬಿಡುಗಡೆ ಮಾಡದಿರುವುದರಿಂದ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆ, ತಕ್ಷಣವೇ ಬಾಕಿ ಇರುವ ಮಾಸಾಶನವನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಮನವಿ ಸಲ್ಲಿಸಿವೆ.

ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಗಂಗಾವತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕ ಸಮಿತಿ ವತಿಯಿಂದ ಮುಖ್ಯಮಂತ್ರಿ ಅವರಿಗೆ ಗಂಗಾವತಿ ತಹಸೀಲ್ದಾರರ ಮುಖಾಂತರ ಮನವಿ ಸಲ್ಲಿಸಲಾಯಿತು.

ಸಂಘಟನೆಗಳ ಪ್ರತಿನಿಧಿಗಳು ಮಾತನಾಡಿ, ಅನೇಕ ವಿಕಲಚೇತನರು ಹಾಗೂ ಅವರ ಕುಟುಂಬಗಳು ಸಂಪೂರ್ಣವಾಗಿ ಮಾಸಾಶನದ ಮೇಲೆಯೇ ಅವಲಂಬಿತರಾಗಿದ್ದು, ಮಾಸಾಶನ ವಿಳಂಬದಿಂದ ಜೀವನ ನಿರ್ವಹಣೆಯಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.

ಆದ್ದರಿಂದ ತಡೆಹಿಡಿದಿರುವ ಮಾಸಾಶನವನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಹಾಗೂ ಮಾಸಾಶನದ ಮೊತ್ತವನ್ನು ಹೆಚ್ಚಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.

ಮುಖ್ಯ ಬೇಡಿಕೆಗಳು:
ಎಲ್ಲಾ ವಿಕಲಚೇತನರಿಗೆ ಪ್ರತಿತಿಂಗಳು ರೂ.5000/- ಮಾಸಾಶನ ನೀಡಬೇಕು.
ಹಿರಿಯ ನಾಗರಿಕರು ಹಾಗೂ ವಿಧವೆಯರಿಗೆ ಕನಿಷ್ಠ ರೂ.3000/- ಮಾಸಾಶನ ನೀಡಬೇಕು.
ಎಲ್ಲಾ ವಿಕಲಚೇತನರಿಗೆ ರಾಜ್ಯಾದ್ಯಂತ ಉಚಿತ ಬಸ್ ಪಾಸ್ ಸೌಲಭ್ಯ ಒದಗಿಸಬೇಕು.
ವಿಕಲಚೇತನರ ಕುಟುಂಬಗಳಿಗೆ ಬಿ.ಪಿ.ಎಲ್ ಕಾರ್ಡ್ ನೀಡಿ, 35 ಕೆ.ಜಿ ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸಬೇಕು.
ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ನೀಡಬೇಕೆಂದು ಮನವಿ ಸಲ್ಲಿಸುವುದರ ಮೂಲಕ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಅಂಗವಿಕಲರ ಮತ್ತು ಪಾಲಕರ ಒಕ್ಕೂಟದ ಗಂಗಾವತಿ ತಾಲೂಕ ಅಧ್ಯಕ್ಷ ಬಸವರಾಜ್ ಗೋನಾಳ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಹೊಸಳ್ಳಿ, ತಾಲೂಕ ಕಾರ್ಯದರ್ಶಿ ಮುತ್ತಣ್ಣ ದಾಸನಾಳ, ಯಲ್ಲಪ್ಪ ವಡ್ರಹಟ್ಟಿ, ಶಬ್ಬೀರ್, ಶಿವಕುಮಾರ್, ನಾಗರಾಜ್, ಕೆ. ಶೇಷಮ್ಮ, ಅಂಬಿಗರಾವ್, ಹನುಮಂತ ದಾಸನಾಳ್, ದುರ್ಗಪ್ಪ, ವಿಜಯಶ್ರೀ, ಯಮನಮ್ಮ, ಮಲ್ಲೇಶ್ ನಾಯ್ಕ್, ಬಿಬಿಜಾನ್, ಖಾದರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Total Views: 0
Share This Article