ಸಿರವಾರಗ್ರಾಮದಲ್ಲಿ ರಾಷ್ಟ್ರೀಯ ರೇಬೀಸ್ ನಿಯಂತ್ರಣಕಾರ್ಯಕ್ರಮ

National Rabies Control Program in Sirwara Village

ಸಿರವಾರ ಗ್ರಾಮದಲ್ಲಿ ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮ

ಜಾಹೀರಾತು

ಕೊಪ್ಪಳ ಮಾರ್ಚ್ 18, (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ, ಕೊಪ್ಪಳ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕನಕಗಿರಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿರವಾರ ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ್ 16 ರಂದು ಶಾಲಾ ಸಭಾ ಭವನದಲ್ಲಿ ರಾಷ್ಟ್ರೀಯ ರೇಬೀಸ್ ನಿಯಂತ್ರಣ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಅವರು ಮಾತನಾಡಿ, ನಾಯಿ ಕಡಿತದಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ರೇಬೀಸ್ ಒಂದು ವೈರಸ್ ಆಗಿದ್ದು, ಸೋಂಕಿತ ಪ್ರಾಣಿಗಳು ಮನುಷ್ಯರಿಗೆ ಕಚ್ಚುವುದರಿಂದ ಹರಡುತ್ತದೆ. ಹೆಚ್ಚು ಪ್ರಮಾಣದಲ್ಲಿ ಬೀದಿನಾಯಿಗಳ ಕಡಿತದಿಂದ ಬರುವ ಸಾಧ್ಯತೆ ಇರುತ್ತದೆ. ಒಂದುವೇಳೆ ನಾಯಿ ಕಚ್ಚಿದರೆ ತಕ್ಷಣ ಕಚ್ಚಿದ ಜಾಗವನ್ನು ಸೋಪು ಮತ್ತು ಶುದ್ಧ ಹರಿಯುವ ನಲ್ಲಿ(ನಳ) ನೀರಿನಲ್ಲಿ 15 ನಿಮಿಷ ತೊಳೆಯಬೇಕು. ಕಚ್ಚಿದ ಜಾಗಕ್ಕೆ ಸ್ಥಳೀಯವಾಗಿ ಲಭ್ಯವಿರುವ ನಂಜು ನಿರೋಧಕ ಔಷಧಿ ಲಭ್ಯವಿದ್ದರೆ ಹಚ್ಚಿರಿ. ಕಚ್ಚಿದ ಜಾಗವನ್ನು ಬ್ಯಾಂಡೇಜ್ ಅಥವಾ ಯಾವುದೇ ರೀತಿಯ ಬಟ್ಟೆಯಿಂದ ಮುಚ್ಚಬೇಡಿ, ಕಚ್ಚಿದ ಜಾಗಕ್ಕೆ ಕೆಸರು, ಹಸುವಿನ ಸಗಣಿ, ಕಾಫಿಪುಡಿ, ಮೆಣಸಿನಪುಡಿ, ಸುಣ್ಣ ಇಂತಹ ಪದಾರ್ಥ ಹಚ್ಚಬೇಡಿ. ಎಲ್ಲಾ ನಾಯಿಗಳಿಗೆ ಪಶು ಸಂಗೋಪನಾ ಇಲಾಖೆಯಿಂದ ನೀಡುವ ಚುಚ್ಚುಮದ್ದನ್ನು ತಪ್ಪದೇ ನಿರಂತರವಾಗಿ ಹಾಕಿಸಬೇಕು. ನಾಯಿ ಅಥವಾ ಯಾವುದೇ ಪ್ರಾಣಿ ಕಡಿತವಾದಲ್ಲಿ ತಕ್ಷಣ ನಿಮ್ಮ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ, ಚಿಕಿತ್ಸೆ ಪಡೆದುಕೊಳ್ಳಬೇಕು. ನಾಯಿ ಕಡಿತದ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಹಾಗೂ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ರೇಬೀಸ್ ತಡೆಗಟ್ಟುವ ಲಸಿಕೆ(ಎ.ಆರ್.ವಿ) ಮತ್ತು ರೇಬಿಸ್ ಇಮ್ಯುನೊ ಗ್ಲೋಬ್ಯುಲಿನ್ (ಆರ್.ಐ.ಜಿ ) ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.
ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾದ ಡಾ.ಮಾಧವಿ ಅವರು ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಹಾಗೂ  ಬೇಸಿಗೆ ಸಮಯದಲ್ಲಿ ಅನುಸರಿಸಬೇಕಾದ ಮುಂಜಾಗ್ರತ ಕ್ರಮಗಳು, ಎಚ್.ಪಿ.ವಿ ಲಸಿಕೆ, ವೈಯಕ್ತಿಕ ಸ್ವಚ್ಛತೆ ಕುರಿತು ವಿವರವಾಗಿ ಮಾತನಾಡಿದರು. ಆರೋಗ್ಯ ನಿರೀಕ್ಷಣಾಧಿಕಾರಿ ರಮೇಶ ಕ್ಷಯರೋಗ ನಿರ್ಮೂಲನೆ, ಕುಷ್ಠರೋಗ ನಿರ್ಮೂಲನೆ ಹಾಗೂ ಸೋಂಕಿತ ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ನೂರಜಾನ ಬೇಗಂ, ಸಹಾಯಕ ಆರೋಗ್ಯ ಅಧಿಕಾರಿ ನಾಗರಾಜರೆಡ್ಡಿ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಗ್ರಾಮ ಪಂಚಾಯತಿಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *