ತುಂಗಭದ್ರಾ ಎಡದಂಡೆ ಕಾಲುವೆ ಒಡೆದು ದುರಂತ: ನೂರಾರು ಎಕರೆ ಭತ್ತ ನಾಶ, ರೆಸಾರ್ಟ್‌ಗಳಿಗೆ ಭಾರೀ ಹಾನಿ

Tungabhadra left bank canal bursts, causing disaster: Hundreds of acres of paddy destroyed, resorts suffer heavy damage

ತುಂಗಭದ್ರಾ ಎಡದಂಡೆ ಕಾಲುವೆ ಒಡೆದು ದುರಂತ: ನೂರಾರು ಎಕರೆ ಭತ್ತ ನಾಶ, ರೆಸಾರ್ಟ್‌ಗಳಿಗೆ ಭಾರೀ ಹಾನಿ

ಜಾಹೀರಾತು


ಗಂಗಾವತಿ:ಗಂಗಾವತಿ ಸಮೀಪದ ಬಸಾಪುರ ಗ್ರಾಮದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಒಡೆದು ಭಾರೀ ದುರಂತ ಸಂಭವಿಸಿದ್ದು, ನೂರಾರು ಎಕರೆ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ತುಂಗಭದ್ರಾ ಡ್ಯಾಮ್ ನಿಂದ ರಾಯಚೂರು ಜಿಲ್ಲೆಯ ಕುಡಿಯುವ ನೀರಿನ ಅಗತ್ಯಕ್ಕಾಗಿ ಮಾರ್ಚ್ 11ರಿಂದ ಎಡದಂಡೆ ಕಾಲುವೆಯಲ್ಲಿ ನಿರಂತರವಾಗಿ ನೀರು ಹರಿಸಲಾಗುತ್ತಿತ್ತು. ಮಂಗಳವಾರ ರಾತ್ರಿ ಕಾಲುವೆಯಲ್ಲಿ ಸುಮಾರು 2300 ಕ್ಯೂಸೆಕ್ಸ್ ನೀರು ಹರಿಯುತ್ತಿತ್ತು ಎನ್ನಲಾಗಿದೆ.
ಬಸಾಪುರದ ಸಮೀಪದ ಸಣ್ಣ ಸೇತುವೆ ಬಳಿ ಕಳೆದ ವರ್ಷವೇ ಕಾಲುವೆಯಲ್ಲಿ ಬೋಂಗಾ ಬಿದ್ದಿರುವ ಬಗ್ಗೆ ರೈತರು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡಿದರೂ, ತಕ್ಷಣ ಕ್ರಮ ಕೈಗೊಳ್ಳದ ಪರಿಣಾಮ ಮಂಗಳವಾರ ಮಧ್ಯರಾತ್ರಿ ಕಾಲುವೆ ಸೋರಿಕೆ ಉಂಟಾಗಿ ಸುಮಾರು 60 ಅಡಿ ಭಾಗ ಕೊಚ್ಚಿಕೊಂಡು ಹೋಗಿದೆ.
ಈ ಪರಿಣಾಮವಾಗಿ ನೂರಾರು ಎಕರೆ ಭತ್ತದ ಗದ್ದೆಗಳು ನೀರಿನಿಂದ ಮುಳುಗಿದ್ದು, ಹತ್ತಕ್ಕೂ ಹೆಚ್ಚು ರೆಸಾರ್ಟ್‌ಗಳಲ್ಲಿಗೂ ನೀರು ನುಗ್ಗಿದೆ. ರೆಸಾರ್ಟ್‌ಗಳಲ್ಲಿದ್ದ ಫ್ರಿಡ್ಜ್, ಜನರೇಟರ್, ಬೈಕ್ ಸೇರಿದಂತೆ ಹಲವು ಉಪಕರಣಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಭಾರೀ ಹಾನಿ ಸಂಭವಿಸಿದೆ.
ನೀರಿನ ಹರಿವು ಕಡಿಮೆ ಮಾಡಲು ಅಧಿಕಾರಿಗಳು ಪ್ರಯತ್ನಿಸಿದರೂ, ಸಾಣಾಪುರ ಕೆರೆಯಲ್ಲಿ ಸಂಗ್ರಹವಾಗಿದ್ದ ನೀರು ಮರಳಿ ಬಸಾಪುರದ ಕಡೆ ಹರಿಯುತ್ತಿರುವುದರಿಂದ ಪ್ರವಾಹದ ತೀವ್ರತೆ ಕಡಿಮೆಯಾಗದೆ ಇರುವುದಾಗಿ ತಿಳಿದುಬಂದಿದೆ. ಇದರಿಂದ ಇನ್ನಷ್ಟು ಭತ್ತದ ಗದ್ದೆಗಳಿಗೆ ನೀರು ನುಗ್ಗುವ ಆತಂಕ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ರೈತರು ಆರೋಪಿಸಿದ್ದು, ಕಟಾವಿಗೆ ಬಂದಿದ್ದ ಭತ್ತದ ಬೆಳೆ ಸಂಪೂರ್ಣ ನಾಶವಾಗಿರುವ ಹಿನ್ನೆಲೆಯಲ್ಲಿ ಸರ್ಕಾರವು ಪ್ರತಿ ಎಕರೆಗೆ ₹50,000 ಪರಿಹಾರ ನೀಡಬೇಕೆಂದು ರೈತ ಮುಖಂಡರು ಆಗ್ರಹಿಸಿದ್ದಾರೆ.