ಅಡುಗೆ ಅನಿಲ ಕೊರತೆಗೆ ಕೇಂದ್ರ ಸರ್ಕಾರದ ದೂರದೃಷ್ಟಿಯ ಕೊರತೆ ಕಾರಣ: ಡಾ. ಆನಂದ ಕುಮಾರ್
Shortage of cooking gas due to lack of vision of central government: Dr. Anand Kumar

ಅಡುಗೆ ಅನಿಲ ಕೊರತೆಗೆ ಕೇಂದ್ರ ಸರ್ಕಾರದ ದೂರದೃಷ್ಟಿಯ ಕೊರತೆ ಕಾರಣ: ಡಾ. ಆನಂದ ಕುಮಾರ್

ಬೆಂಗಳೂರು,: ದೇಶದ ಅನೇಕ ಭಾಗಗಳಲ್ಲಿ ಅಡುಗೆ ಅನಿಲದ ಕೊರತೆ ತೀವ್ರವಾಗಿ ಬಾಧಿಸುತ್ತಿದ್ದರೂ ಸಿಲಿಂಡರ್‌ಗಾಗಿ ವಾರಗಳ ಕಾಲ ಕಾಯುವ ಪರಿಸ್ಥಿತಿ ತಲೆ ದೋರಿದೆ. ಹೊಣೆಗಾರಿಕೆಯುಳ್ಳ ಸರ್ಕಾರ ಅಂತಾರಾಷ್ಟ್ರೀಯ ಪರಿಸ್ಥಿತಿಗಳನ್ನು ಮುಂಚಿತವಾಗಿ ಅಂದಾಜಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಆದರೆ ಕೇಂದ್ರ ಸರ್ಕಾರ ಅದನ್ನು ಮಾಡಲು ವಿಫಲವಾಗಿದೆ ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ ಕುಮಾರ್ ಆರೋಪಿಸಿದ್ಧಾರೆ.
ಜಾಗತಿಕ ಸಂಘರ್ಷ ತಲೆ ದೋರುವ ಎರಡು ದಿನಗಳ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಗೆ ಭೇಟಿ ನೀಡಿ, ಅಲ್ಲಿನ ಪ್ರಧಾನಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ನಂತರವಷ್ಟೇ ಜಾಗತಿಕ ಸಂಘರ್ಷ ಆರಂಭವಾಯಿತು. ಹಾಗಿದ್ದರೆ ಈ ಭೇಟಿಯ ಉದ್ದೇಶವೇನು? ಪ್ರಧಾನಿ ಅವರಿಗೆ ಭವಿಷ್ಯದ ಬೆಳವಣಿಗೆಗಳು ಮೊದಲೇ ಗೊತ್ತಿತ್ತು? ಆದರೆ ಅವರು ದೇಶದ ಜನತೆ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಪ್ರಧಾನ ಆದ್ಯತೆ ನೀಡಲಿಲ್ಲ. ಹೀಗಾಗಿ ನಿಜವಾಗಿಯೂ ಅಡುಗೆ ಅನಿಲ ಕೊರತೆಗೆ ಕೇವಲ ಜಾಗತಿಕ ಸಂಘರ್ಷಗಳೇ ಕಾರಣವೇ ಅಥವಾ ಇದು ಕೇಂದ್ರ ಸರ್ಕಾರದ ದೌರ್ಬಲ್ಯ ಮತ್ತು ನಿರ್ಲಕ್ಷ್ಯದ ಫಲವೇ? ಎಂಬ ಪ್ರಶ್ನೆ ಎದ್ದಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ತಕ್ಷಣವೇ ನೈತಿಕ ಹೊಣೆ ಹೊತ್ತು ಸಮಸ್ಯೆಯನ್ನು ಪರಿಹರಿಸುವ ದಿಕ್ಕಿನಲ್ಲಿ ಸ್ಪಷ್ಟ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ ಈ ಕೊರತೆ ಕೇವಲ ಅಡುಗೆ ಮನೆಯ ಸಮಸ್ಯೆಯಾಗಿ ಉಳಿಯದೆ, ಜನರ ಆಕ್ರೋಶದ ರಾಜಕೀಯ ವಿಚಾರವಾಗುವ ದಿನಗಳು ದೂರವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜಾಗತಿಕ ಮಟ್ಟದಲ್ಲಿ ಉಂಟಾಗುವ ಯುದ್ಧಗಳು ಅಥವಾ ರಾಜಕೀಯ ಸಂಘರ್ಷಗಳು ಇಂಧನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವುದು ಸತ್ಯ. ಆದರೆ ಅದನ್ನು ನೆಪವನ್ನಾಗಿ ಮಾಡಿಕೊಂಡು ದೇಶದ ಆಂತರಿಕ ಸಮಸ್ಯೆಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ.
ದೇಶ ಅಡುಗೆ ಅನಿಲ ಸೇರಿದಂತೆ ಬಹುತೇಕ ಇಂಧನಗಳಿಗಾಗಿ ವಿದೇಶಗಳ ಮೇಲೆ ಹೆಚ್ಚಿನ ಅವಲಂಬನೆ ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ಪೂರೈಕೆ ಸರಪಳಿಯನ್ನು ಬಲಪಡಿಸುವುದು, ಪರ್ಯಾಯ ಮೂಲಗಳನ್ನು ಹುಡುಕುವುದು ಹಾಗೂ ಸಂಗ್ರಹ ವ್ಯವಸ್ಥೆಯನ್ನು ಸುಧಾರಿಸುವುದು ಸರ್ಕಾರದ ತುರ್ತು ಕರ್ತವ್ಯವಾಗಿತ್ತು.
ಆದರೆ ಈ ವಿಷಯದಲ್ಲಿ ಸಮರ್ಪಕ ಯೋಜನೆ ಮತ್ತು ದೂರದೃಷ್ಟಿ ಕಾಣಿಸುತ್ತಿಲ್ಲ ಎಂದು ವಿಷಾದಿಸಿದ್ದಾರೆ.
ಬೆಲೆ ನಿಯಂತ್ರಣ ಮತ್ತು ಸಬ್ಸಿಡಿ ನೀತಿಗಳಲ್ಲಿ ಸರ್ಕಾರ ಒತ್ತಡಗಳಿಗೆ ಮಣಿದಂತೆ ಕಾಣುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಅಡುಗೆ ಅನಿಲದ ಬೆಲೆ ನಿರಂತರವಾಗಿ ಏರಿಕೆಯಾಗಿದ್ದರೂ ಸಾಮಾನ್ಯ ಜನರಿಗೆ ಸುಲಭ ದರದಲ್ಲಿ ದೊರಕಿಸಿಕೊಡುವಲ್ಲಿ ಸುಧಾರಣೆ ಕಂಡು ಬಂದಿಲ್ಲ. ವಿತರಣಾ ವ್ಯವಸ್ಥೆಯಲ್ಲಿನ ಅವ್ಯವಸ್ಥೆ ಕೂಡ ಸಮಸ್ಯೆಯನ್ನು ಗಂಭೀರಗೊಳಿಸಿದೆ.
ಅನೇಕ ಕಡೆಗಳಲ್ಲಿ ಅನಿಲ ಏಜೆನ್ಸಿಗಳ ಬಳಿ ಸಿಲಿಂಡರ್‌ಗಳ ಕೊರತೆ ಕಂಡುಬರುತ್ತಿದ್ದು, ಗ್ರಾಹಕರು ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ.
ಕಾಳಸಂತೆ ಕೋರರು ಹೆಚ್ಚಾಗದ್ದು, ಸರ್ಕಾರದ ಮೇಲ್ವಿಚಾರಣೆ ಮತ್ತು ನಿಯಂತ್ರಣ ವ್ಯವಸ್ಥೆ ದುರ್ಬಲವಾಗಿರುವುದರಿಂದ ಈ ಸಮಸ್ಯೆ ತೀವ್ರಗೊಂಡಿದೆ ಎಂದು ಡಾ. ಆನಂದ ಕುಮಾರ್ ಟೀಕಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಜಾಗತಿಕ ಸಂಘರ್ಷಗಳನ್ನು ಕಾರಣವನ್ನಾಗಿ ಹೇಳುವುದು ಸುಲಭ. ಆದರೆ ಆಡಳಿತದ ವೈಫಲ್ಯವನ್ನು ಮುಚ್ಚಿಹಾಕಲು ಅದು ಸಾಕಾಗುವುದಿಲ್ಲ. ದೂರದೃಷ್ಟಿಯ ಯೋಜನೆ, ಬಲವಾದ ಸಂಗ್ರಹ ವ್ಯವಸ್ಥೆ ಮತ್ತು ಪರಿಣಾಮಕಾರಿ ವಿತರಣಾ ವ್ಯವಸ್ಥೆ ಹೊಂದಿದ್ದರೆ ಜನ ಇಂತಹ ಸಂಕಷ್ಟ ಎದುರಿಸಬೇಕಾಗಿರಲಿಲ್ಲ.
ಅಡುಗೆ ಅನಿಲ ಕೊರತೆ ಎಂಬುದು ಕೇವಲ ಜಾಗತಿಕ ಪರಿಸ್ಥಿತಿಯ ಪರಿಣಾಮವಲ್ಲ; ಅದು ಕೇಂದ್ರದ ನೀತಿ ವೈಫಲ್ಯ, ಯೋಜನಾ ಕೊರತೆ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯದ ಸ್ಪಷ್ಟ ಉದಾಹರಣೆಯಾಗಿದೆ. ಜನರ ದಿನನಿತ್ಯದ ಬದುಕಿಗೆ ನೇರವಾಗಿ ಸಂಬಂಧಿಸಿದಂತಹ ಮೂಲಭೂತ ಅಗತ್ಯವನ್ನು ಸಮರ್ಪಕವಾಗಿ ನಿರ್ವಹಿಸಲು ಸರ್ಕಾರ ವಿಫಲವಾಗಿದೆ.
ಅಡುಗೆ ಅನಿಲಕ್ಕೂ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ಯಾವುದೇ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಕ್ಕೆ ಶೋಭೆಯ ವಿಷಯವಲ್ಲ. ಮೂಲಭೂತ ಅಗತ್ಯಗಳಾದ ಆಹಾರ ಮತ್ತು ಅಡುಗೆ ವ್ಯವಸ್ಥೆಯನ್ನು ಭದ್ರಗೊಳಿಸುವುದು ಯಾವುದೇ ಸರ್ಕಾರದ ಮೊದಲ ಕರ್ತವ್ಯ.
ಅಡುಗೆ ಅನಿಲದ ಕೊರತೆಯಂತಹ ಸಮಸ್ಯೆಗಳು ಮುಂದುವರಿದರೆ ಅದು ಕೇವಲ ಆಡಳಿತ ವೈಫಲ್ಯವಷ್ಟೇ ಅಲ್ಲ, ಜನರ ಜೀವನಮಟ್ಟದ ಮೇಲೆ ನೇರ ಪರಿಣಾಮ ಬೀರುವ ಗಂಭೀರ ಸಾಮಾಜಿಕ ಸಮಸ್ಯೆಯಾಗುತ್ತದೆ ಎಂದು ಡಾ. ಆನಂದ ಕುಮಾರ್ ಹೇಳಿದ್ದಾರೆ.
