
ಆಚಾರ್ಯ ಪಾಠಶಾಲಾ ಎಜುಕೇಶನಲ್ ಟ್ರಸ್ಟ್
ನಲ್ಲಿ ಸದಸ್ಯರ ದಿನಾಚರಣೆ : 21 ಸಾಧಕರಿಗೆ ಸನ್ಮಾನ
Members' Day celebration at Acharya Pathashala Educational Trust: 21 achievers honored

ಬೆಂಗಳೂರು: ಆಚಾರ್ಯ ಪಾಠಶಾಲಾ ಎಜುಕೇಶನಲ್ ಟ್ರಸ್ಟ್ ನಿಂದ 75 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ 21 ಅಜೀವ ಸದಸ್ಯರನ್ನು ಸನ್ಮಾನಿಸಲಾಯಿತು.
ಪ್ರೊ. ಎನ್. ಅನಂತಾಚಾರ್ ಸಭಾಂಗಣದಲ್ಲಿ ಸದಸ್ಯರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಳೆದ 1935ರಲ್ಲಿ ಪ್ರೊ. ಎನ್. ಅನಂತಾಚಾರ್ ಅವರಿಂದ ಸ್ಥಾಪಿತವಾದ ಆಚಾರ್ಯ ಪಾಠಶಾಲಾ ಎಜುಕೇಶನಲ್ ಟ್ರಸ್ಟ್, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ, ವಿಶೇಷವಾಗಿ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಮಹೋನ್ನತ ಧ್ಯೇಯದೊಂದಿಗೆ ಆರಂಭವಾಯಿತು. 9 ದಶಕಗಳಿಗಿಂತ ಹೆಚ್ಚು ಕಾಲದಿಂದ ಟ್ರಸ್ಟ್ ಸಮಾನ ಶಿಕ್ಷಣದ ದೀಪಸ್ತಂಭವಾಗಿ ಅನೇಕ ತಲೆಮಾರುಗಳ ಭವಿಷ್ಯವನ್ನು ರೂಪಿಸುತ್ತಾ ಬಂದಿದೆ.
ಇದೇ ಮೊದಲ ಬಾರಿಗೆ ಎಪಿಎಸ್ ಸದಸ್ಯರ ದಿನವನ್ನು ವಿಶೇಷವಾಗಿ ಆಚರಿಸಿತು. ಸಂಸ್ಥೆಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅವರು ಸಲ್ಲಿಸಿದ ಅಮೂಲ್ಯ ಸೇವೆ, ನಿಷ್ಠೆ ಮತ್ತು ಜೀವನಪರ್ಯಂತದ ಬದ್ಧತೆಯನ್ನು ಗೌರವಿಸಲಾಯಿತು. ಕೃತಜ್ಞತೆಯ ಸಂಕೇತವಾಗಿ ಹಿರಿಯ ಸದಸ್ಯರಿಗೆ ಅವರ ಆರೋಗ್ಯ ಮತ್ತು ಆರಾಮಕ್ಕಾಗಿ ಉಪಯುಕ್ತವಾದ ವಸ್ತುಗಳ ಜೊತೆಗೆ ಸ್ಮರಣಿಕೆಗಳನ್ನು ಶಾಸಕ ಹಾಗೂ ಹಳೆಯ ವಿದ್ಯಾರ್ಥಿ ಎಲ್. ಎ. ರವಿ ಸುಬ್ರಹ್ಮಣ್ಯ ನೀಡಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಒಂಬತ್ತು ದಶಕಗಳಿಗಿಂತ ಹೆಚ್ಚು ಕಾಲ ಎಪಿಎಸ್ ಶಿಕ್ಷಣ ಸಂಸ್ಥೆಯ ಮಹತ್ವದ ಪಯಣವನ್ನು ಶ್ಲಾಘಿಸಿದರು. ಜವಾಬ್ದಾರಿಯುತ ನಾಗರಿಕರು ಹಾಗೂ ನಾಯಕತ್ವವನ್ನು ರೂಪಿಸುವಲ್ಲಿ ಸಂಸ್ಥೆಯು ಮಹತ್ತರ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ಡಾ. ಸಿ.ಎ ವಿಷ್ಣು ಭರತ್ ಅಲಪಲ್ಲಿ ಅವರು “ನಡೆದು ಬಂದ ಹಾದಿ” ಎಂಬ ವಿಶೇಷ ವೀಡಿಯೊವನ್ನು ಪ್ರದರ್ಶಿಸಿದರು. ಈ ಪ್ರಸ್ತುತಿಯಲ್ಲಿ ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಆಚಾರ್ಯ ಪಾಠಶಾಲಾ ಎಜುಕೇಶನಲ್ ಟ್ರಸ್ಟ್ ಸಾಧಿಸಿದ ಮೈಲುಗಲ್ಲುಗಳು ಮತ್ತು ಅಭಿವೃದ್ಧಿ ಚಟುವಟಿಕೆಗಳ ಪ್ರತಿಬಿಂಬವನ್ನು ಮನಮೋಹಕವಾಗಿ ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಎ.ಪಿ.ಆಚಾರ್ಯ, ಎ.ಆರ್.ಆಚಾರ್ಯ, ಪಿ. ಕೃಷ್ಣ ಸ್ವಾಮಿ, ಪ್ರೊ.ಕೆ.ಪಿ.ನರಸಿಂಹಮೂರ್ತಿ, ವಿ.ಕೆ.ಪ್ರಹ್ಲಾದ ರಾವ್. ವತ್ಸಲ ಡಾ.ಎಸ್.ಸಿ.ಚಂದ್ರ, ಎಲ್.ಸಿದ್ಧರಾಜು, ಎಸ್.ಪಿ.ಶಂಕರ್, ಎನ್.ಭಾಸ್ಕರ್ ಮಾನೆ, ಡಾ.ಶೈಲಜ ಆಳ್ವ, ಪಿ.ಎಸ್.ನಂದಕುಮಾರ್, ಎಸ್.ಎಂ.ಸತ್ಯನಾರಾಯಣ, ಹೆಚ್.ವಿ.ಗೌತಮ್ ಡಾ.ಜೈಪ್ರಕಾಶ್ ಆಳ್ವ, ಟಿ.ವಿ. ಪ್ರಭು, ಸಿ.ನಾಗರಾಜ್, ಎಲ್. ಬಿಂದುಮಾಧವ ಅವರನ್ನು ಸನ್ಮಾನಿಸಲಾಯಿತು.



