
ಶ್ರೀ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ
ಶಿವಾಜಿ ಮಹಾರಾಜರು ಯುವ ಪೀಳಿಗೆಗೆ ಸ್ಫೂರ್ತಿ : ಕೆ.ರಾಘವೇಂದ್ರ ಹಿಟ್ನಾಳ
Shree Chhatrapati Shivaji Jayanti Programme

ಕೊಪ್ಪಳ ಫೆಬ್ರವರಿ 23, (ಕರ್ನಾಟಕ ವಾರ್ತೆ): ಶಿವಾಜಿ ಮಹಾರಾಜರು ದೇಶ ಕಂಡ ಅಪ್ರತಿಮ ರಾಷ್ಟçಪ್ರೇಮಿ ಹಾಗೂ ಶೂರ ಯೋಧರಾಗಿದ್ದು, ಅವರ ಜಯಂತಿಯನ್ನು ಆಚರಿಸುವುದರಿಂದ ಅವರು ನೀಡಿದ ಸೇನಾ ಹಾಗೂ ಆಡಳಿತಾತ್ಮಕ ಮೌಲ್ಯಗಳನ್ನು ಯುವ ಪೀಳಿಗೆಗೆ ತಲುಪಿಸಲು ಸಾಧ್ಯವಾಗುತ್ತದೆ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.
ಅವರು ಸೋಮವಾರದಂದು ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದ ನಿಮಿತ್ತ ಶಿವಾಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿವಾಜಿ ಮಹಾರಾಜರು ಸಣ್ಣ ವಯಸ್ಸಿನಲ್ಲಿ ಅಗಾಧ ಸಾಧನೆ ಮಾಡಿದವರು. ಅವರ ಆಡಳಿತಾತ್ಮಕ ಸುಧಾರಣೆಗಳು ಇಂದಿಗೂ ಪ್ರೇರಣಾದಾಯಕವಾಗಿವೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಹಾಗೆ ಸಮಾಜದ ಪ್ರತಿಯೊಬ್ಬರು ಶಿಕ್ಷಣ, ಹೋರಾಟ, ಸಂಘಟನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರು ಮಾತನಾಡಿ, ಛತ್ರಪತಿ ಶಿವಾಜಿಯವರು ಅಪ್ಪಟ ದೇಶಪ್ರೇಮಿ, ತಾಯಿ ಜೀಜಾಬಾಯಿಯ ಪ್ರೇರಣೆಯಿಂದ ಶಿವಾಜಿ ಮಹಾರಾಜರು ಸಂಸ್ಕಾರವAತರಾಗಿ ಆದರ್ಶ ಜೀವನ ನಡೆಸಿದರು. ಜೀಜಾಬಾಯಿ ಅವರ ಸ್ವರಾಜ್ಯದ ಕನಸು ನನಸು ಮಾಡಿದ ಅಪ್ರತಿಮ ವೀರ ಶಿವಾಜಿ ಮಹಾರಾಜರು. ಶಿವಾಜಿ ಮಹಾರಾಜರ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಮಾತನಾಡಿ, ಛತ್ರಪತಿ ಶಿವಾಜಿ ಕೇವಲ ಒಬ್ಬ ಯೋಧನಲ್ಲ. ರಾಜಕೀಯವಾಗಿ ಅವರ ಕೊಡುಗೆ ಅತ್ಯಂತ ಪ್ರಸ್ತುತವಾಗಿವೆ. ಶಿವಾಜಿ ಅವರ ಜೀವನ ಕೇವಲ ಹಿಂದೂ ಧರ್ಮಕ್ಕೆ ಸಂಬAಧಿಸಿದಲ್ಲ, ಅವರು ಎಲ್ಲ ಧರ್ಮವನ್ನು ಗೌರವದಿಂದ ಕಾಣುತ್ತಿದ್ದರು. ಅವರು ನೀಡಿದ ಕೊಡುಗೆಗಳನ್ನು ನಾವು ಗಮನದಲ್ಲಿಟ್ಟುಕೊಂಡು ಭಾರತದ ಸಂಸ್ಕೃತಿಯನ್ನ ಎತ್ತಿಹಿಡಿಯಬೇಕು. ಶಿವಾಜಿಯವರು ಮಾನವ ಕುಲಕ್ಕೆ ಸಂಬAಧಪಟ್ಟವರು. ಅವರ ಕೊಡುಗೆ ಮತ್ತು ಅವರು ನಡೆದು ಬಂದ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು ಎಂದರು.
ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ವಕೀಲರು ಹಾಗೂ ನಿವೃತ್ತ ಉಪನ್ಯಾಸಕ ಉದಯಸಿಂಗ್ ಠಾಕೂರ ಅವರು, ತಾಯಿ ಜೀಜಾಬಾಯಿ ಅವರು ಛತ್ರಪತಿ ಶಿವಾಜಿ ಅವರನ್ನು ತುಂಬಾ ಧೈರ್ಯ, ಸಹನೆಯಿಂದ ಬೆಳಸಿದ್ದಾರೆ. ಭಾರತೀಯ ಸ್ತಿçÃಯರ ಬಗ್ಗೆ ಶಿವಾಜಿ ಅವರಿಗೆ ಅಪಾರವಾದ ಗೌರವ ಅವರಲ್ಲಿ ಇತ್ತು. ಇಂದಿನ ಯುವ ಪೀಳಿಗೆಯು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ವೀರಣ್ಣ ಗಡಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಹಾಗೂ ಸಮಾಜದ ಮುಖಂಡರಾದ ಮಾರುತಿ, ವಿಶ್ವನಾಥ, ಗವಿಸಿದ್ದಪ್ಪ, ಉಮೇಶ್ ಬಾಬು, ಪ್ರಭು ಕಿಡದಾಳ, ರಮೇಶ, ಸರೋಜಾ ಬಾಕಳೆ, ಮೈಲಾರಪ್ಪ, ಕೃಷ್ಣ, ಮಹಾಂತೇಶ ಸೇರಿದಂತೆ ಇತರರು ಇದ್ದರು.




