
ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಿ- ಸಚಿವ ಶಿವರಾಜ ಎಸ್. ತಂಗಡಗಿ
Work hard to increase SSLC results in the district - Minister Shivaraj S. Thangadgi

ಕೊಪ್ಪಳ ಫೆಬ್ರುವರಿ 17 (ಕರ್ನಾಟಕ ವಾರ್ತೆ): ಮಕ್ಕಳ ಭವಿಷ್ಯವನ್ನು ರೂಪಿಸುವ ಶಕ್ತಿ ಶಿಕ್ಷಕರಲ್ಲಿ ಅಡಗಿದ್ದು, ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ಕನಿಷ್ಠ ಅಂಕಗಳ ಸಮೀಪಕ್ಕೆ ಬಂದು ಅನುತ್ತೀರ್ಣರಾಗಿರುವ ಮಕ್ಕಳ ಮೇಲೆ ವಿಶೇಷ ಕಾಳಜಿವಹಿಸುವ ಮೂಲಕ ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಳಕ್ಕೆ ಎಲ್ಲಾ ಶಿಕ್ಷಕರು ಶ್ರಮವಹಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಹೇಳಿದರು.
ಅವರು ಮಂಗಳವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಕೊಪ್ಪಳ ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲೆಯ ಮುಖ್ಯೋಪಾಧ್ಯರುಗಳಿಗೆ ಕರೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳಿಗೆ ಇನ್ನೂ ಒಂದು ತಿಂಗಳು ಮಾತ್ರ ಬಾಕಿಯಿದ್ದು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಕೆಗೆ ವಿಶೇಷ ಗಮನವನ್ನು ಹರಿಸಬೇಕು. ಈ ಅವಧಿಯನ್ನು ಮಕ್ಕಳಿಗಾಗಿಯೇ ಮೀಸಲಿಡಬೇಕು. ಮಕ್ಕಳಿಗೆ ಪರೀಕ್ಷೆಗೆ ತೇರ್ಗಡೆಗೆ ಅನುಕೂಲವಾಗುವಂತಹ ಸಾಮಾನ್ಯ ಜ್ಞಾನವನ್ನು ಹೇಳಿಕೊಡಬೇಕು. ವಿಶೇಷ ತರಗತಿಗಳ ಮೂಲಕ ಅವರ ಕಲಿಕಾ ಗುಣಮಟ್ಟದ ಹೆಚ್ಚಳಕ್ಕೆ ಕ್ರಮವಹಿಸಬೇಕು. ಶಿಕ್ಷಕರು ಪ್ರಾಮಾಣಿಕ ಪ್ರಯತ್ನ, ಚಿಂತನೆಗಳಿಂದ ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯವಾಗುತ್ತದೆ. ಮಕ್ಕಳು ತಮ್ಮ ತಂದೆ-ತಾಯಿಗೆ ನೀಡುವ ಗೌರವಕ್ಕಿಂತಲೂ ಹೆಚ್ಚಾಗಿ ಗುರುಗಳಿಗೆ ಗೌರವನ್ನು ನೀಡುತ್ತಾರೆ. ಜೀವ ಉಳಿಸುವ ಶಕ್ತಿ ವೈದ್ಯರ ಕೈಯಲ್ಲಿದ್ದರೆ, ಮಕ್ಕಳ ಭವಿಷ್ಯವನ್ನು ರೂಪಿಸುವ ಶಕ್ತಿ ಗುರುಗಳಲ್ಲಿದೆ. ಈ ನಿಟ್ಟಿನಲ್ಲಿ ತಾವುಗಳು ವಿದ್ಯಾರ್ಥಿಗಳಿಗೆ ತಮ್ಮ ಮಕ್ಕಳಂತೆ ವಿಶೇಷ ಕಾಳಜಿವಹಿಸಬೇಕು. ಭವಿಷ್ಯದಲ್ಲಿ ಮಕ್ಕಳು ಉನ್ನತ ಮಟ್ಟದಲ್ಲಿ ಬೆಳೆದಾಗ, ಆ ಕೀರ್ತಿ ನಿಮಗೆ ಸಲ್ಲುತ್ತದೆ. ಶೇ.100 ರಷ್ಟು ಫಲಿತಾಂಶ ಬರುವ ಶಾಲೆಗೆ ಬಹುಮಾನವನ್ನು ನೀಡಿ ಆ ಶಾಲೆಯ ಮುಖ್ಯೋಪಾಧ್ಯಯರಿಗೆ ಮತ್ತು ಉತ್ತಮ ಸ್ಥಾನ ಪಡೆದ ಮಕ್ಕಳಿಗೆ ಸನ್ಮಾನಿಸಲಾಗುವುದು ಎಂದರು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳು ಪ್ರತಿಯೊಬ್ಬ ವಿದ್ಯಾರ್ಥಿಗೂ ಶೈಕ್ಷಣಿಕ ಜೀವನದ ಮಹತ್ವದ ಮೈಲಿಗಲ್ಲಾಗಿದೆ. ಇಲ್ಲಿಂದಲೇ ವಿದ್ಯಾರ್ಥಿಗಳ ಜೀವನದಲ್ಲಿ ತಿರುವು ಪಡೆದುಕೊಳ್ಳುತ್ತದೆ. ಹಾಗಾಗಿ ಈ ಎರಡು ಹಂತದಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಬೇಕು. ಈ ಬಗ್ಗೆ ಆಯಾ ಶಾಲಾ, ಕಾಲೇಜುಗಳ ಮುಖ್ಯಸ್ಥರ ಮೇಲೆ ಜವಾಬ್ದಾರಿ ಹೆಚ್ಚಿರುತ್ತದೆ. ಜಿಲ್ಲೆಯ ದ್ವಿತಿಯ ಪಿಯುಸಿಯ ಫಲಿತಾಂಶವು ಉತ್ತಮ ಸ್ಥಾನದಲ್ಲಿದೆ. ಇದು ಇನ್ನೂ ಉನ್ನತ ಮಟ್ಟಕ್ಕೆ ಹೋಗಬೇಕು. ಮುಖ್ಯಮಂತ್ರಿಗಳು ಪ್ರತಿ ವರ್ಷದಲ್ಲಿ ಎರಡು ಬಾರಿ ಜಿಲ್ಲಾ ಉಸ್ತುವಾರಿ ಸಚಿವರು, ಡಿಸಿ, ಸಿಇಒ ಮತ್ತು ಎಸ್.ಪಿ ಅವರೊಂದಿಗೆ ಸಭೆ ತೆಗೆದುಕೊಳ್ಳುತ್ತಾರೆ. ಆ ಸಭೆಯಲ್ಲಿ ಶಿಕ್ಷಣದ ಬಗ್ಗೆಯೇ ಪ್ರಮುಖ ಚರ್ಚೆಗಳಾಗುತ್ತವೆ. ಹಾಗಾಗಿ ನಮ್ಮ ಜಿಲ್ಲೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದುವರೆಯುವಂತೆ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ್ ಅವರು ಮಾತನಾಡಿ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಫಲಿತಾಂಶ ಬಹಳ ಮುಖ್ಯ, ವಿದ್ಯಾರ್ಥಿಗಳು ಜೀವನದ ತಿರುವು ಇದಾಗಿದೆ. ಒಂದನೇ ಮತ್ತು ಎರಡನೇ ಪೂರ್ವ ಸಿದ್ದತಾ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರನ್ನು ಉತ್ತೀರ್ಣ ಮಾಡಲು ಹೆಚ್ಚಿನ ಕ್ರಮ ವಹಿಸಬೇಕು. ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಇನ್ನು ಒಂದು ತಿಂಗಳು ಮಾತ್ರ ಬಾಕಿ ಇದೆ. ಆದಷ್ಟ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಧ್ಯಯನ ಮತ್ತು ಭೋದನೆ ಮಾಡಿ, ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ, ಫಲಿತಾಂಶ ಹೆಚ್ಚಳಕ್ಕೆ ಕ್ರಮ ವಹಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ಮಾತಾನಾಡಿ, ವಿದ್ಯಾರ್ಥಿಗಳು ಯಾವ ವಿಷಯ ಕಷ್ಟ ಅಂತ ಹೇಳತಾರೆ, ಅಂತಹ ವಿಷಯಗಳನ್ನು ಮತ್ತೆ ಮತ್ತೆ ಅವರಿಗೆ ಹೇಳಿ ಕೊಡಿ. ಜಿಲ್ಲೆಯ ಪ್ರತಿಯೊಬ್ಬ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಕ್ರಮವಹಿಸಿ. ಪೂರ್ವ ಸಿದ್ದತಾ ಪರೀಕ್ಷೆಗೆ ಯಾವೊಬ್ಬ ವಿದ್ಯಾರ್ಥಿ ಕೂಡ ಗೈರುಹಾಜರಿಯಲ್ಲಿ ಇರದಂತೆ ಸಹ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಷಯ ಪರಿವೀಕ್ಷಕರು, ವಿವಿಧ ಪ್ರೌಢ ಶಾಲೆಯ ಮುಖ್ಯ ಗುರುಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



