
ಸಮಾನತೆ, ಧಾರ್ಮಿಕ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಮಹನೀಯ ಮಡಿವಾಳ ಮಾಚಿದೇವರು: ಜೆ.ಸಿ.ರಾಜಶೇಖರ
The great Madiwala Machideva who preached equality and religious values to the world: J.C. Rajashekar

ಕೊಪ್ಪಳ ಫೆಬ್ರವರಿ 16, (ಕರ್ನಾಟಕ ವಾರ್ತೆ): ಸಮಾಜದಲ್ಲಿ ಸಮಾನತೆ ಮತ್ತು ಧಾರ್ಮಿಕ ಮೌಲ್ಯಗಳ ಮಹತ್ವವನ್ನು ಸಾರುವಲ್ಲಿ ಮಡಿವಾಳ ಮಾಚಿದೇವ ಅವರ ಪಾತ್ರ ಬಹಳ ದೊಡ್ಡದು. ಮಡಿವಾಳ ಮಾಚಿದೇವರು 12ನೇ ಶತಮಾನದ ಮಹಾನ್ ಶರಣರಲ್ಲಿ ಒಬ್ಬರು. ಬಸವಣ್ಣ ಅವರ ಅನುಭವ ಮಂಟಪದ ಶರಣರಲ್ಲಿ ಒಬ್ಬರಾಗಿದ್ದು, ಜಾತಿ ಭೇದ ನಿರ್ಮೂಲನೆಗಾಗಿ ಶ್ರಮಿಸಿದವರು ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಸದಸ್ಯರು ಹಾಗೂ ಜೀವನ ಕೌಶಲ್ಯ ತರಬೇತುದಾರರು, ಪ್ರೇರಣೆ ಮಾತುಗಾರರಾದ ಜೆ.ಸಿ.ರಾಜಶೇಖರ ಬಳ್ಳಾರಿ ಅವರು ಹೇಳಿದರು.
ಅವರು ಸೋಮವಾರದಂದು ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮಾಚಿದೇವರು “ಭಕ್ತಿಗಿಂತ ಕಾಯಕ ಶ್ರೇಷ್ಠ” ಎಂದು ಬಾಳಿದವರು. ಅವರು ಕಲ್ಯಾಣದಲ್ಲಿ ಶಿವನ ಭಕ್ತರ ಬಟ್ಟೆಗಳನ್ನು ಮಾತ್ರ ತೊಳೆಯುತ್ತಿದ್ದರು. ಜಾತಿ ಭೇದವಿಲ್ಲದೆ ಎಲ್ಲರೂ ದೇವರ ಮುಂದೆ ಸಮಾನರು ಎಂಬ ತತ್ವವನ್ನು ಬೋಧಿಸಿದರು. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶ ಸಾರಿದರು. ತಮ್ಮ ವಚನಗಳ ಮೂಲಕ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಜನರಿಗೆ ತಿಳಿಸಿದರು. ಮಡಿವಾಳ ಮಾಚಿದೇವರು ಬಸವಣ್ಣನವರ ಬೆನ್ನೆಲುಬಾಗಿ ಇದ್ದರು. ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವವಿದೆ. ಹಾಗಾಗಿ ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯವನ್ನು ಉಜ್ವಲವಾಗಿ ರೂಪಿಸಬೇಕು ಎಂದು ಹೇಳಿದರು.
ಚಿತ್ರದುರ್ಗ ಸಂಸ್ಥಾನಮಠದ ಡಾ. ಬಸವಮಾಚಿದೇವ ಮಹಾಸ್ವಾಮಿ ಮಾತನಾಡಿ, 12ನೇ ಶತಮಾನದ ಮಹಾನ್ ಶರಣರಲ್ಲಿ ನಮ್ಮ ಮಡಿವಾಳ ಮಾಚಿದೇವ ಒಬ್ಬರು. 3 ಕೋಟಿಗೂ ಹೆಚ್ಚು ವಚನಗಳನ್ನು ರಚಿಸಿದವರು. ಎಲ್ಲರಿಗೂ ಸ್ಪೂರ್ತಿಯಾಗುವ ಮಹಾನ್ ವ್ಯಕ್ತಿ. ಮಡಿವಾಳ ಮಾಚಿದೇವರು ತಮ್ಮ ಜೀವನದ ಮೂಲಕ ಸಮಾನತೆ, ಪರಿಶ್ರಮ ಮತ್ತು ಭಕ್ತಿಯ ಮಹತ್ವವನ್ನು ಸಾರಿದರು. ಜಾತಿ-ಮತ ಭೇದವಿಲ್ಲದೆ ಎಲ್ಲರೂ ದೇವರ ಮುಂದೆ ಸಮಾನರು ಎಂಬ ಸಂದೇಶವನ್ನು ನೀಡಿದರು. ಅವರು ಬಸವಣ್ಣ ಅವರ ಅನುಭವ ಮಂಟಪದ ಶರಣರಲ್ಲಿ ಪ್ರಮುಖರಾಗಿದ್ದರು. ಅವರ ವಚನಗಳು ನಮ್ಮ ಜೀವನಕ್ಕೆ ಮಾರ್ಗದರ್ಶಕವಾಗಿವೆ. ಶ್ರಮವೇ ಶ್ರೇಷ್ಠ ಎಂಬ ತತ್ವವನ್ನು ಅವರು ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಸಮಾಜದಲ್ಲಿ ಹಿಂದುಳಿದವರ ಪರವಾಗಿ ನಿಂತು ಸಮಾನ ಹಕ್ಕುಗಳಿಗಾಗಿ ಹೋರಾಡಿದರು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ, ಜಿಲ್ಲಾಧಿಕಾರಿಗಳ ಆಪ್ತ ಸಹಾಯಕಿ ವಿಜಯಲಕ್ಷಿö್ಮÃ, ತಹಶೀಲ್ದಾರ ಕಚೇರಿಯ ಶಿರಸ್ತೇದಾರ ಮಹಾವೀರ, ನಗರಸಭೆಯ ಮಾಜಿ ಅಧ್ಯಕ್ಷ ಅಜ್ಮದ್ ಪಟೇಲ್, ಮಡಿವಾಳರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಎಸ್. ಮಡಿವಾಳರ, ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಶರಣಪ್ಪ ಕುಣಿಕೇರಿ, ತಾಲೂಕು ಮಡಿವಾಳ ಯುವಕ ಸಂಘದ ಉಪಾಧ್ಯಕ್ಷ ಈರಣ್ಣ ಮಡಿವಾಳ, ತಾಲೂಕು ಪ್ರಧಾನ ಕಾರ್ಯದರ್ಶಿ ಅಮರೇಶ ತಿಪ್ಪಣ್ಣ ಮಡಿವಾಳರ, ಸಮಾಜದ ಮುಖಂಡರಾದ ಎಮ್.ಕೆ.ಹನುಮಂತಪ್ಪ, ರಾಮಣ್ಣ, ಬಸವರಾಜ, ದುರಗೇಶ ಜಿ., ಹುಲಗಪ್ಪ ಜಿ., ಮಂಜುಳಾ, ಸಂಗಮೇಶ, ಬಾಬಣ್ಣ, ಫಕೀರಪ್ಪ, ಶಿವಪ್ಪ, ದ್ಯಾಮಣ್ಣ ಸೇರಿದಂತೆ ಸಮಾಜದ ಇತರೆ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.
ಮೆರವಣಿಗೆ: ಜಯಂತಿ ಅಂಗವಾಗಿ ನಗರದ ಶ್ರೀ ಗವಿಮಠದಿಂದ ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ಸರ್ಕಲ್ ಮೂಲಕ ಸಾಹಿತ್ಯ ಭವನದವರೆಗೆ ಶ್ರೀ ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ಕುಂಭ ಹೊತ್ತ ಮಹಿಳೆಯರು, ಸಮುದಾಯದ ಮುಖಂಡರು ಭಾಗವಹಿಸಿದ್ದರು.



