
ನರೇಗಾ ರದ್ದುಗೊಳಿಸಿ ವಿಬಿ ಜಿ ರಾಮ್ ಜಿ ಜಾರಿ ಖಂಡನೆ

ಉದ್ಯೋಗ ಖಾತ್ರಿ ಬಲಪಡಿಸಲು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಜಿಲ್ಲಾ ಮಟ್ಟದ ಪ್ರತಿಭಟನೆ.
VBG Ramji condemns NREGA repeal and implementation
ಕೊಪ್ಪಳ:ಕೇಂದ್ರ ಸರ್ಕಾರ ಜಾರಿ ಮಾಡಿರುವ ವಿಬಿ ಜಿ ರಾಮ್ ಜಿ ಮಸೂದೆಯನ್ನು ತಕ್ಷಣವೇ ರದ್ದುಪಡಿಸಿ, ಗ್ರಾಮೀಣ ಜನರ ಬದುಕಿಗೆ ಆಸರೆಯಾಗಿರುವ ಮಹಾತ್ಮ ಗಾಂಧಿ ನರೇಗಾ ಉದ್ಯೋಗ ಖಾತ್ರಿ ಯೋಜನೆಯನ್ನು ಮರು ಸ್ಥಾಪಿಸಬೇಕೆಂದು ಆಗ್ರಹಿಸಿ, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ವತಿಯಿಂದ ಕೊಪ್ಪಳದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಿಲ್ಲಾ ಮಟ್ಟದ ಪ್ರತಿಭಟನೆ ಮಾಡಿ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮುಖಂಡರಾದ ಶರಣು ಗಡ್ಡಿ ಅವರು,
“2005ರಲ್ಲಿ ಜಾರಿಯಾದ ನರೇಗಾ ಯೋಜನೆಯು ಗ್ರಾಮೀಣ ಜನತೆ ಉದ್ಯೋಗಕ್ಕಾಗಿ ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಆದರೆ ಈಗ ಅದೇ ಯೋಜನೆಯನ್ನು ವಿಬಿ ಜಿ ರಾಮ್ ಜಿ ಎಂಬ ಹೆಸರಿನಲ್ಲಿ ಮೂಲ ಸ್ವರೂಪವನ್ನೇ ಬದಲಾಯಿಸಿ ಉದ್ಯೋಗ ಖಾತ್ರಿಯನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದು ಗ್ರಾಮೀಣ ಬದುಕಿನ ಮೇಲೆ ನಡೆಯುತ್ತಿರುವ ಘೋರ ದಾಳಿ” ಎಂದು ಕಿಡಿಕಾರಿದರು.
ಅವರು ಮುಂದುವರೆದು, ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೃಷಿ ಉತ್ಪಾದನಾ ಸಾಮಗ್ರಿಗಳ ದುಬಾರಿ ಬೆಲೆ, ಪ್ರಾಕೃತಿಕ ವಿಕೋಪಗಳಿಂದ ರೈತರು ಮತ್ತು ಕೃಷಿ ಕಾರ್ಮಿಕರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ನರೇಗಾ ಯೋಜನೆಯನ್ನು ದುರ್ಬಲಗೊಳಿಸುವುದು ಜನ ವಿರೋಧಿ ನೀತಿಯಾಗಿದೆ ಎಂದರು. ದೇಶದ 12 ಕೋಟಿಗೂ ಅಧಿಕ ಗ್ರಾಮೀಣ ಜನತೆ ಈ ಯೋಜನೆಯ ಮೇಲೆ ಅವಲಂಬಿತರಾಗಿದ್ದು, ವಿಶೇಷವಾಗಿ ಮಹಿಳೆಯರಿಗೆ ಕನಿಷ್ಠ ಆರ್ಥಿಕ ಭದ್ರತೆ ನೀಡಿದ್ದ ನರೇಗಾ ಯೋಜನೆಯನ್ನು ರದ್ದುಪಡಿಸುವುದರಿಂದ ನಿರುದ್ಯೋಗ ಮತ್ತು ವಲಸೆ ಸಮಸ್ಯೆಗಳು ಮತ್ತಷ್ಟು ತೀವ್ರಗೊಳ್ಳಲಿವೆ ಎಂದು ಎಚ್ಚರಿಸಿದರು.
ಹೊಸ ಯೋಜನೆಯಡಿ ಕೂಲಿ ಹಣದ ಜವಾಬ್ದಾರಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಿಕೆ ಮಾಡಲಾಗಿದ್ದು, ಕೇಂದ್ರ ಸರ್ಕಾರ ಶೇಕಡಾ 60ರಷ್ಟು ಹಾಗೂ ರಾಜ್ಯ ಸರ್ಕಾರ ಶೇಕಡಾ 40ರಷ್ಟು ಕೂಲಿ ಹಣವನ್ನು ನೀಡಬೇಕಾಗಿದೆ. ಆದರೆ ಈ ವ್ಯವಸ್ಥೆಯಿಂದ ಎರಡು ಸರ್ಕಾರಗಳ ನಡುವಿನ ಹೊಣೆಗಾರಿಕೆ ತಳ್ಳಾಟಕ್ಕೆ ಕೂಲಿ ಕಾರ್ಮಿಕರ ದುಡಿಮೆಯ ಹಣವೇ ಅಪಾಯಕ್ಕೆ ಸಿಲುಕಿದೆ. ಕಾರ್ಮಿಕರು ಬೆವರು ಸುರಿಸಿ ದುಡಿದರೂ ಅವರ ಕೈಗೆ ಸಮಯಕ್ಕೆ ಕೂಲಿ ಹಣ ಸಿಗುವ ಬಗ್ಗೆ ಯಾವುದೇ ಖಾತ್ರಿ ಉಳಿದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಇದಕ್ಕಿಂತಲೂ ಗಂಭೀರ ಸಂಗತಿಯೆಂದರೆ, ಈಗಾಗಲೇ ರಾಜ್ಯ ಸರ್ಕಾರ ಹಣಕಾಸಿನ ಕೊರತೆಯನ್ನು ಮುಂದಿಟ್ಟು ಹೆಚ್ಚುವರಿ ಹಣವನ್ನು ವಿನಿಯೋಗಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ–ರಾಜ್ಯ ಸರ್ಕಾರಗಳ ನಡುವೆ ಹಣ ಬಿಡುಗಡೆ ವಿಚಾರದಲ್ಲಿ ವಿಳಂಬವಾದರೆ ಅದರ ಸಂಪೂರ್ಣ ಹೊರೆ ಗ್ರಾಮೀಣ ಕೂಲಿ ಕಾರ್ಮಿಕರ ಮೇಲೇ ಬೀಳಲಿದೆ. ಇದರಿಂದ ಉದ್ಯೋಗ ಖಾತ್ರಿ ಯೋಜನೆಯ ಮೂಲ ಆಶಯವೇ ಹಾಳಾಗಿ, ನಿರುದ್ಯೋಗ, ಬಡತನ ಮತ್ತು ವಲಸೆ ಸಮಸ್ಯೆಗಳು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಶರಣು ಪಾಟೀಲ್, ಶಾರದಾ ಗಡ್ಡಿ, ಮಂಗಳೇಶ್ ರಾಥೋಡ್, ದ್ಯಾಮಣ್ಣ ಡೊಳ್ಳಿನ, ಈರಪ್ಪ, ಲಕ್ಷ್ಮಣ, ಮುದಿಯಪ್ಪ, ಮಂಜುನಾಥ, ಸತ್ಯನಾರಾಯಣ ಸೇರಿದಂತೆ ಅನೇಕ ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮೀಣ ಕೂಲಿ ಕಾರ್ಮಿಕರು ಭಾಗವಹಿಸಿದ್ದರು.
ಪ್ರತಿಭಟನಾಕಾರರು ಕೇಂದ್ರ ಸರ್ಕಾರಕ್ಕೆ ಈ ಕೆಳಗಿನ ಬೇಡಿಕೆಗಳನ್ನು ಮುಂದಿಟ್ಟರು:
• ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ತಕ್ಷಣವೇ ಹಿಂಪಡೆಯಬೇಕು
• ನರೇಗಾ ಉದ್ಯೋಗ ಖಾತ್ರಿ ಯೋಜನೆಯನ್ನು ಮರು ಸ್ಥಾಪಿಸಬೇಕು
• ವಾರ್ಷಿಕ 200 ದಿನಗಳ ಉದ್ಯೋಗ ಮತ್ತು ದಿನಗೂಲಿ 600 ರೂ ನಿಗದಿಪಡಿಸಬೇಕು
ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಗ್ರಾಮೀಣ ಬದುಕಿನ ರಕ್ಷಣೆಗೆ ದೇಶವ್ಯಾಪಿ ಬಲಿಷ್ಠ ಹೋರಾಟವನ್ನು ಫೆಬ್ರವರಿ 12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಬೃಹತ್ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.




