ಆನೆಗುಂದಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಆನೆಗುಂದಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Free health check-up camp in Anegundi village

ಗಂಗಾವತಿ : ನಗರದ  ಶ್ರೀಮಲ್ಲಿಕಾರ್ಜುನ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಮೂತ್ರರೋಗ ತಜ್ಞರಾದ ಡಾ:ನಾಗರಾಜ್ ಎಚ್ ಹಾಗೂ ಆನೆಗುಂದಿ ರಸ್ತೆಯ ಶ್ರೀಸಾಯಿ ಪಾದುಕ ಆಸ್ಪತ್ರೆಯ ಸಾಮಾನ್ಯ ಶಸ್ತ್ರಚಿಕಿತ್ಸೆ ಹಿರಿಯ ತಜ್ಞರಾದ ವಿ ಎಸ್ ಎನ್ ಡಿ ರಾಯಲು ಮತ್ತು ಆನೆಗುಂದಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಹಯೋಗದೊಂದಿಗೆ ಇಂದು ಮೂತ್ರಕೋಶ ಸಂಬಂಧಿಸಿದ ‌ಖಾಯಿಲೆಗಳು ಹಾಗೂ ಸಾಮನ್ಯ ಶಸ್ತ್ರಚಿಕಿತ್ಸೆ ಸಂಬಂಧಿಸಿದ ಖಾಯಿಲೆಗಳನ್ನು ಹೊಂದಿದ ಗ್ರಾಮೀಣ ಭಾಗದಿಂದ ಆಗಮಿಸಿದ 100 ಕ್ಕೂ ಹೆಚ್ಚು ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.

ಜನರಲ್ ಸರ್ಜನ್ ತಜ್ಞರಾದ ರಾಯಲು ಹರ್ನಿಯಾ, ಫೈಲ್ಸ್, ಫಿಸ್ತೂಲಾ ಹಾಗೂ ಅಲರ್ಜಿ ಸಂಬಂಧಿಸಿದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಹಾಗು ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಎಲ್ಲಾ ರೋಗಿಗಳನ್ನು ಚಿಕಿತ್ಸೆಗೆ ಒಳಪಡಿಸಿ ಅವಶ್ಯಕತೆ ಇರುವ ಮೂತ್ರಕೋಶದ ರೋಗಿಗಳಿಗೆ ಆರೋಗ್ಯ ಪರಿಸ್ಥಿತಿ ಅನುಗುಣವಾಗಿ ಪರಿಶೀಲಿಸಿ ಯುರೋಪ್ಲೋಮೀಟರ್ (ಅಂದಾಜು ಬೆಲೆ 350-400 ರೂ) ಪರೀಕ್ಷೆ ಉಚಿತವಾಗಿ ನೀಡಲಾಯಿತು

ಇದೆ ಸಮಯದಲ್ಲಿ ಚಿಕಿತ್ಸೆ ಒಳಪಟ್ಟ ಎಲ್ಲಾ ರೋಗಿಗಳಿಗೆ ಪ್ರಾಥಮಿಕ ಔಷಧಿಗಳನ್ನು ಉಚಿತವಾಗಿ ನೀಡಲಾಯಿತು. ನಂತರ ಬಿಪಿಎಲ್ ಕಾರ್ಡ್ ಹೊಂದಿದ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ಹಾಗೂ ನಿರಂತರ ತಪಾಸಣೆ ಗೆ ಗಂಗಾವತಿಯ ಕಂಪ್ಲಿ ರಸ್ತೆಯ ಶ್ರೀಮಲ್ಲಿಕಾರ್ಜುನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕಳುಹಿಸಿ‌ ಕೊಡಲಾಯಿತು.

ಈ ಸಂದರ್ಭದಲ್ಲಿ ಆಸ್ಪತ್ರೆ ಪಿ ಆರ್ ಒ ನಾಗರಾಜ್ ಸಿಬ್ಬಂದಿ ಮಹೇಶ್ ಹೂಗಾರ್, ಬಸವರಾಜ್ ಹಾಗೂ ವೀರಭದ್ರೇಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ ಅಧ್ಯಕ್ಷರ ಶಂಕ್ರಯ್ಯ ಹೀರೆಮಠ್, ಬಸಪ್ಪ ಕುಣಿಕೇರಿ, ಸಂಜಯ್ ಹೀರೆಮಠ್, ತಿಮ್ಮಪ್ಪ ನಾಯಕ, ಚಂದ್ರಶೇಖರ್ ಹಾಗೂ ಇನ್ನಿತರ ಸದಸ್ಯರು ಭಾಗವಹಿಸಿದ್ದರು.

ನರೇಗಾ ರದ್ದುಗೊಳಿಸಿ ವಿಬಿ ಜಿ ರಾಮ್ ಜಿ ಜಾರಿ ಖಂಡನೆ

ನರೇಗಾ ರದ್ದುಗೊಳಿಸಿ ವಿಬಿ ಜಿ ರಾಮ್ ಜಿ ಜಾರಿ ಖಂಡನೆ

ಉದ್ಯೋಗ ಖಾತ್ರಿ ಬಲಪಡಿಸಲು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಜಿಲ್ಲಾ ಮಟ್ಟದ ಪ್ರತಿಭಟನೆ.

VBG Ramji condemns NREGA repeal and implementation

ಕೊಪ್ಪಳ:ಕೇಂದ್ರ ಸರ್ಕಾರ ಜಾರಿ ಮಾಡಿರುವ ವಿಬಿ ಜಿ ರಾಮ್ ಜಿ ಮಸೂದೆಯನ್ನು ತಕ್ಷಣವೇ ರದ್ದುಪಡಿಸಿ, ಗ್ರಾಮೀಣ ಜನರ ಬದುಕಿಗೆ ಆಸರೆಯಾಗಿರುವ ಮಹಾತ್ಮ ಗಾಂಧಿ ನರೇಗಾ ಉದ್ಯೋಗ ಖಾತ್ರಿ ಯೋಜನೆಯನ್ನು ಮರು ಸ್ಥಾಪಿಸಬೇಕೆಂದು ಆಗ್ರಹಿಸಿ, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ವತಿಯಿಂದ ಕೊಪ್ಪಳದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಿಲ್ಲಾ ಮಟ್ಟದ ಪ್ರತಿಭಟನೆ ಮಾಡಿ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮುಖಂಡರಾದ ಶರಣು ಗಡ್ಡಿ ಅವರು,

“2005ರಲ್ಲಿ ಜಾರಿಯಾದ ನರೇಗಾ ಯೋಜನೆಯು ಗ್ರಾಮೀಣ ಜನತೆ ಉದ್ಯೋಗಕ್ಕಾಗಿ ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಆದರೆ ಈಗ ಅದೇ ಯೋಜನೆಯನ್ನು ವಿಬಿ ಜಿ ರಾಮ್ ಜಿ ಎಂಬ ಹೆಸರಿನಲ್ಲಿ ಮೂಲ ಸ್ವರೂಪವನ್ನೇ ಬದಲಾಯಿಸಿ ಉದ್ಯೋಗ ಖಾತ್ರಿಯನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದು ಗ್ರಾಮೀಣ ಬದುಕಿನ ಮೇಲೆ ನಡೆಯುತ್ತಿರುವ ಘೋರ ದಾಳಿ” ಎಂದು ಕಿಡಿಕಾರಿದರು.

ಅವರು ಮುಂದುವರೆದು, ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೃಷಿ ಉತ್ಪಾದನಾ ಸಾಮಗ್ರಿಗಳ ದುಬಾರಿ ಬೆಲೆ, ಪ್ರಾಕೃತಿಕ ವಿಕೋಪಗಳಿಂದ ರೈತರು ಮತ್ತು ಕೃಷಿ ಕಾರ್ಮಿಕರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ನರೇಗಾ ಯೋಜನೆಯನ್ನು ದುರ್ಬಲಗೊಳಿಸುವುದು ಜನ ವಿರೋಧಿ ನೀತಿಯಾಗಿದೆ ಎಂದರು. ದೇಶದ 12 ಕೋಟಿಗೂ ಅಧಿಕ ಗ್ರಾಮೀಣ ಜನತೆ ಈ ಯೋಜನೆಯ ಮೇಲೆ ಅವಲಂಬಿತರಾಗಿದ್ದು, ವಿಶೇಷವಾಗಿ ಮಹಿಳೆಯರಿಗೆ ಕನಿಷ್ಠ ಆರ್ಥಿಕ ಭದ್ರತೆ ನೀಡಿದ್ದ ನರೇಗಾ ಯೋಜನೆಯನ್ನು ರದ್ದುಪಡಿಸುವುದರಿಂದ ನಿರುದ್ಯೋಗ ಮತ್ತು ವಲಸೆ ಸಮಸ್ಯೆಗಳು ಮತ್ತಷ್ಟು ತೀವ್ರಗೊಳ್ಳಲಿವೆ ಎಂದು ಎಚ್ಚರಿಸಿದರು.

ಹೊಸ ಯೋಜನೆಯಡಿ ಕೂಲಿ ಹಣದ ಜವಾಬ್ದಾರಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಿಕೆ ಮಾಡಲಾಗಿದ್ದು, ಕೇಂದ್ರ ಸರ್ಕಾರ ಶೇಕಡಾ 60ರಷ್ಟು ಹಾಗೂ ರಾಜ್ಯ ಸರ್ಕಾರ ಶೇಕಡಾ 40ರಷ್ಟು ಕೂಲಿ ಹಣವನ್ನು ನೀಡಬೇಕಾಗಿದೆ. ಆದರೆ ಈ ವ್ಯವಸ್ಥೆಯಿಂದ ಎರಡು ಸರ್ಕಾರಗಳ ನಡುವಿನ ಹೊಣೆಗಾರಿಕೆ ತಳ್ಳಾಟಕ್ಕೆ ಕೂಲಿ ಕಾರ್ಮಿಕರ ದುಡಿಮೆಯ ಹಣವೇ ಅಪಾಯಕ್ಕೆ ಸಿಲುಕಿದೆ. ಕಾರ್ಮಿಕರು ಬೆವರು ಸುರಿಸಿ ದುಡಿದರೂ ಅವರ ಕೈಗೆ ಸಮಯಕ್ಕೆ ಕೂಲಿ ಹಣ ಸಿಗುವ ಬಗ್ಗೆ ಯಾವುದೇ ಖಾತ್ರಿ ಉಳಿದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಇದಕ್ಕಿಂತಲೂ ಗಂಭೀರ ಸಂಗತಿಯೆಂದರೆ, ಈಗಾಗಲೇ ರಾಜ್ಯ ಸರ್ಕಾರ ಹಣಕಾಸಿನ ಕೊರತೆಯನ್ನು ಮುಂದಿಟ್ಟು ಹೆಚ್ಚುವರಿ ಹಣವನ್ನು ವಿನಿಯೋಗಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ–ರಾಜ್ಯ ಸರ್ಕಾರಗಳ ನಡುವೆ ಹಣ ಬಿಡುಗಡೆ ವಿಚಾರದಲ್ಲಿ ವಿಳಂಬವಾದರೆ ಅದರ ಸಂಪೂರ್ಣ ಹೊರೆ ಗ್ರಾಮೀಣ ಕೂಲಿ ಕಾರ್ಮಿಕರ ಮೇಲೇ ಬೀಳಲಿದೆ. ಇದರಿಂದ ಉದ್ಯೋಗ ಖಾತ್ರಿ ಯೋಜನೆಯ ಮೂಲ ಆಶಯವೇ ಹಾಳಾಗಿ, ನಿರುದ್ಯೋಗ, ಬಡತನ ಮತ್ತು ವಲಸೆ ಸಮಸ್ಯೆಗಳು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಶರಣು ಪಾಟೀಲ್, ಶಾರದಾ ಗಡ್ಡಿ, ಮಂಗಳೇಶ್ ರಾಥೋಡ್, ದ್ಯಾಮಣ್ಣ ಡೊಳ್ಳಿನ, ಈರಪ್ಪ, ಲಕ್ಷ್ಮಣ, ಮುದಿಯಪ್ಪ, ಮಂಜುನಾಥ, ಸತ್ಯನಾರಾಯಣ ಸೇರಿದಂತೆ ಅನೇಕ ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮೀಣ ಕೂಲಿ ಕಾರ್ಮಿಕರು ಭಾಗವಹಿಸಿದ್ದರು.

ಪ್ರತಿಭಟನಾಕಾರರು ಕೇಂದ್ರ ಸರ್ಕಾರಕ್ಕೆ ಈ ಕೆಳಗಿನ ಬೇಡಿಕೆಗಳನ್ನು ಮುಂದಿಟ್ಟರು:

• ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ತಕ್ಷಣವೇ ಹಿಂಪಡೆಯಬೇಕು

• ನರೇಗಾ ಉದ್ಯೋಗ ಖಾತ್ರಿ ಯೋಜನೆಯನ್ನು ಮರು ಸ್ಥಾಪಿಸಬೇಕು

• ವಾರ್ಷಿಕ 200 ದಿನಗಳ ಉದ್ಯೋಗ ಮತ್ತು ದಿನಗೂಲಿ 600 ರೂ ನಿಗದಿಪಡಿಸಬೇಕು

ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಗ್ರಾಮೀಣ ಬದುಕಿನ ರಕ್ಷಣೆಗೆ ದೇಶವ್ಯಾಪಿ ಬಲಿಷ್ಠ ಹೋರಾಟವನ್ನು ಫೆಬ್ರವರಿ 12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಬೃಹತ್ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ:ಫೆಬ್ರವರಿ ಮಾಹೆಯಲ್ಲಿ ಗ್ಯಾರಂಟಿ ಉತ್ಸವ- ರೆಡ್ಡಿ ಶ್ರೀನಿವಾಸ

ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ:ಫೆಬ್ರವರಿ ಮಾಹೆಯಲ್ಲಿ ಗ್ಯಾರಂಟಿ ಉತ್ಸವ- ರೆಡ್ಡಿ ಶ್ರೀನಿವಾಸ

Progress review meeting of five guarantee schemes: Guarantee festival in February - Reddy Srinivas


ಕೊಪ್ಪಳ ಜನವರಿ 29 (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಉತ್ಸವವನ್ನು ಫೆಬ್ರವರಿ ಮಾಹೆಯಲ್ಲಿ ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕೊಪ್ಪಳ ಜಿಲ್ಲಾ ಗ್ರಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಹೇಳಿದರು.
ಅವರು ಗುರುವಾರ ಕೊಪ್ಪಳ ಜಿಲ್ಲಾ ಪಂಚಾಯತ್‌ನ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬAಧ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಉತ್ಸವವನ್ನು ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ಮಧುಶ್ರೀ ಗಾರ್ಡನ್‌ನಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸನ್ಮಾನಿಸಲಾಗುವುದು. ಗೃಹಲಕ್ಷ್ಮೀ, ಗೃಹಜೋತಿ, ಶಕ್ತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳಡಿ ಲಾಭ ಪಡೆದುಕೊಂಡ ಕೊಪ್ಪಳ ಜಿಲ್ಲೆಯ ಫಲಾನುಭವಿಗಳನ್ನು ಈ ಗ್ಯಾರಂಟಿ ಉತ್ಸವದಲ್ಲಿ ಕರೆ ತರಬೇಕು. ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಹಮ್ಮಿಕೊಳ್ಳಲು ಐದು ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ವಿಶೇಷ ಕ್ರಮ ವಹಿಸಬೇಕು ಎಂದರು.
ಗ್ಯಾರAಟಿ ಉತ್ಸವಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಕಾರ್ಯಕ್ರಮವನ್ನು ಯಾಶಸ್ವಿಗೊಳಿಸಬೇಕು. ಪಂಚ ಗ್ಯಾರಂಟಿ ಯೋಜನೆಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸ್ಥಿರತೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಹಾಗಾಗಿ ಪಂಚ ಗ್ಯಾರಂಟಿ ಯೋಜನೆಗಳ ಲಾಭ ಎಲ್ಲಾ ಫಲಾನುಭವಿಗಳಿಗೆ ಸಿಗಬೇಕು ಎನ್ನುವುದು ನಮ್ಮ ಸರ್ಕಾರದ ಮುಖ್ಯ ಉದ್ದೇಶವಾಗಿದ್ದು, ಈ ಐದು ಯೋಜನೆಗಳ ಲಾಭಗಳು, ಅರ್ಹತೆ, ಅರ್ಜಿ ಪ್ರಕ್ರಿಯೆ ಮತ್ತು ಅನುಷ್ಠಾನ ಸ್ಥಿತಿಯ ಕುರಿತು ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ವಿವರವಾದ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.
ಜನಪರವಾದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಇವುಗಳ ಲಾಭವನ್ನು ಜಿಲ್ಲೆಯ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ಸಿಗಬೇಕು. ಯಾವುದೇ ಅರ್ಹ ಫಲಾನುಭವಿಗಳು ಈ ಯೋಜನೆಗಳಿಂದ ಹೊರಗುಳಿಯದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ಮಾತನಾಡಿ, ಯುವನಿಧಿ ಯೋಜನೆ ಫಲಾನುಭವಿಗಳಿಗೆ ಯುವನಿಧಿ ಪ್ಲಸ್ ಕಾರ್ಯಕ್ರಮದಡಿ ವಿವಿಧ ಕೌಶಲ್ಯ ತರಬೇತಿಗಳನ್ನು ನೀಡಬೇಕು. ಇದರಿಂದ ಅವರಿಗೆ ಮುಂದಿನ ದಿನಗಳಲ್ಲಿ ಉದ್ಯೋಗಕ್ಕಾಗಿ ಅನುಕೂಲವಾಗಲಿದೆ. ಯುವನಿಧಿ ಪ್ಲಸ್ ಕಾರ್ಯಕ್ರಮದಡಿ ತರಬೇತಿಯಲ್ಲಿ ಪಾಲ್ಗೊಳ್ಳುವ ಫಲಾನುಭವಿಗಳಿಗೆ ಯಾವುದೇ ರೀತಿಯ ಯುವನಿಧಿ ಯೋಜನೆಯ ನಿರುದ್ಯೋಗ ಭತ್ಯೆ ಕಡಿತವಾಗುವುದಿಲ್ಲ. ಈ ಬಗ್ಗೆ ಎಲ್ಲರಿಗೂ ಸೂಕ್ತ ಮಾಹಿತಿ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.  
ಕೊಪ್ಪಳ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಗ್ಯಾರಂಟಿ ಉತ್ಸವದಲ್ಲಿ ಹಾಕುವ ಐದು ಸ್ಟಾಲುಗಳಲ್ಲಿ ಫಲಾನುಭವಿಗಳಿಗೆ ಬೇಕಿರುವ ಅಗತ್ಯ ಮಾಹಿತಿ ಮತ್ತು ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ಲ್ಯಾಪ್ಟಾಪ್ ಇಟ್ಟು ಹಾಗೂ ಕಂಪ್ಯೂಟರ್ ಆಪರೇಟರ್ ಮತ್ತು ಮಾಹಿತಿ ನೀಡುವವರು ಇರಬೇಕು ಹಾಗೂ ಜಿಲ್ಲೆಗೆ ಇದುವರೆಗೂ ಕೊಟ್ಟಿರುವ ಯೋಜನೆಯ ಮಾಹಿತಿಯನ್ನು ಪ್ಲೆಕ್ಸ್ ಮೂಲಕ ಅಳವಡಿಸಬೇಕು. ವಯಸ್ಸಾದ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯ ಸುವಿಧ ಕುರಿತು ಹೆಚ್ಚಿನ ಪ್ರಚಾರ ಮತ್ತು ನಾಯಬೆಲೆ ಅಂಗಡಿ ಮಾಲೀಕರಿಗೆ ಸೂಚನೆ ಕೊಡುವಂತೆ ಆಹಾರ ಇಲಾಖೆಯ ಅಧಿಕಾರಿಗಳು ಅಗತ್ಯಕ್ರಮ ಕೈಗೊಳ್ಳಬೇಕು. ಯುವ ನಿಧಿ ಫಲಾನುಭವಿಗಳು ಕಡ್ಡಾಯವಾಗಿ ಯುವ ನಿಧಿ ಪ್ಲಸ್ ನಲ್ಲಿ ನೋಂದಾಯಿಸಿಕೊಳ್ಳುವಂತೆ ಹಾಗೂ ಅವರಿಗೆ ಅಗತ್ಯವಿರುವ ತರಬೇತಿಗಳನ್ನು ಆಯೋಜಿಸಲು ಕ್ರಮಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳಡಿ ಕೊಪ್ಪಳ ಜಿಲ್ಲೆಯ ಪ್ರಗತಿ ವಿವರ ಕುರಿತು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಕಾಸಿಮ್ ಸಾಬ್ ಹಾಗೂ ಅಮರೇಶಪ್ಪ ಎಸ್.ಜಿ. ಸೇರಿದಂತೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರು, ಜಿಲ್ಲೆಯ ವಿವಿಧ ತಾಲ್ಲೂಕುಗಳ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರು ಹಾಗೂ ಗ್ಯಾರಂಟಿ ಯೋಜನೆ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕೂಲಿ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕಾರ್ಮಿಕರ ಸಂಘದಿಂದ ಮನವಿ: ಅಧ್ಯಕ್ಷ ದೇವರಾಜ ನಾಯಕ

ಕೂಲಿ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕಾರ್ಮಿಕರ ಸಂಘದಿಂದ ಮನವಿ: ಅಧ್ಯಕ್ಷ ದೇವರಾಜ ನಾಯಕ

Appeal from Mahatma Gandhi Employment Guarantee Workers' Association demanding fulfillment of various demands of wage laborers: President Devaraj Nayak

ಗಂಗಾವತಿ: ತಾಲ್ಲೂಕಿನ ಮರಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಮರಳಿ. ಆಚಾರ ನರಸಾಪುರ. ಪ್ರಗತಿ ನಗರ. ಬಸವಣ್ಣ ಕ್ಯಾಂಪ್ ಗದ್ವಾಲ ಕ್ಯಾಂಪ್ ನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ, ‘ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕಾರ್ಮಿಕರ ಸಂಘ’ದ ವತಿಯಿಂದ ಮರಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸವರಾಜಗೌಡ ನಾಯಕ ಅವರ ಮುಖಾಂತರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಕಾರ್ಮಿಕರ ಸಂಘದ ಪದಾಧಿಕಾರಿಗಳು ಮತ್ತು ನೂರಾರು ಕಾರ್ಮಿಕರು ಮರಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಉದ್ಯೋಗ ಖಾತ್ರಿಯ ಫಲಾನುಭವಿಗಳು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ನಂತರ ಕಚೇರಿಯ ಮುಂದೆ ಪ್ರತಿಭಟಿಸಿ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು.ಉದ್ಯೋಗ ಖಾತ್ರಿ ಕಾರ್ಮಿಕರ ಸಂಘದ ಅಧ್ಯಕ್ಷ ದೇವರಾಜ ನಾಯಕ ಅವರು ಮಾತನಾಡಿ ಉದ್ಯೋಗ ಖಾತ್ರಿಗೆ ಸಂಬಂಧಿಸಿದಂತೆ 11 ಬೇಡಿಕೆಗಳಿಗಾದ ಕಳೆದ ಹಲವು ವಾರಗಳಿಂದ ಕಾರ್ಮಿಕರಿಗೆ ಪಾವತಿಯಾಗಬೇಕಿರುವ 100 ದಿನಗಳ ಬಾಕಿ ಕೂಲಿಯನ್ನು ತಕ್ಷಣವೇ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಬೇಕು.ಮೇಟಿಗಳಿಗೆ 2022 ರಿಂದ ಇಲ್ಲಿವರೆಗೆ ಪ್ರೋತ್ಸಾಹ ಧನ ಬರಿಸಬೇಕು. ಅಪಘಾತ ವಿಮೆ. ಮಾರ್ಚ್ 15ರ ಒಳಗೆ 14 ದಿನ ಕೆಲಸವನ್ನು ಕೊಡುವುದು ಸೇರಿದಂತೆ 11 ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಸಲ್ಲಿಸಿದ್ದೇವೆ.ಗ್ರಾಮೀಣ ಭಾಗದ ಬಡ ಜನರ ಜೀವನಾಡಿಯಾಗಿರುವ ಉದ್ಯೋಗ ಖಾತ್ರಿ ಯೋಜನೆಯು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಕೂಲಿ ಪಾವತಿಯಲ್ಲಿನ ವಿಳಂಬದಿಂದ ಕಾರ್ಮಿಕರ ಕುಟುಂಬಗಳು ಸಂಕಷ್ಟದಲ್ಲಿವೆ. ಒಂದು ವೇಳೆ ನಮ್ಮ ಬೇಡಿಕೆಗಳನ್ನು ಒಂದು ವಾರದೊಳಗೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಬಸವರಾಜ ಗೌಡ ನಾಯಕ ಅವರು ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಶೀಘ್ರವೇ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ
ಗೌರವ ಅಧ್ಯಕ್ಷರಾದ ದೊಡ್ಡಬಸಪ್ಪ ಕಲ್ಮಟ್ಟಿ.ಉಪಾಧ್ಯಕ್ಷ ಯಂಕಣ್ಣ. ಪ್ರಧಾನ ಕಾರ್ಯದರ್ಶಿ ಯಮನೂರಪ್ಪ ಚುಕ್ಕಾಡಿ , ಖಜಾಂಚಿ ಹನುಮಂತಪ್ಪ ಜಂಗ್ಲಿ ಸೇರಿದಂತೆ ಉದ್ಯೋಗ ಖಾತ್ರಿಯ ಮೇಟಿಗಳು.ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯ ಮಹಿಳಾ ಕಾರ್ಮಿಕರು ಉಪಸ್ಥಿತರಿದ್ದರು.

ಸ್ಕೂಲ್ ಶಿಕ್ಷಣ ಸಂಸ್ಥೆ ಮಾನ್ಯತೆ ರದ್ದು ಮಾಡಿದ ಶಾಲಾ ಶಿಕ್ಷಣ ಇಲಾಖೆ – ಸ್ಕೂಲ್ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಸರ್ಕಾರದಿಂದ ಕ್ರಿಮಿನಲ್ (FIR) ಮೊಕದ್ದಮೆ ದಾಖಲು  

ಸ್ಕೂಲ್ ಶಿಕ್ಷಣ ಸಂಸ್ಥೆ ಮಾನ್ಯತೆ ರದ್ದು ಮಾಡಿದ ಶಾಲಾ ಶಿಕ್ಷಣ ಇಲಾಖೆ – ಸ್ಕೂಲ್ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಸರ್ಕಾರದಿಂದ ಕ್ರಿಮಿನಲ್ (FIR) ಮೊಕದ್ದಮೆ ದಾಖಲು  

ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಸರ್ಕಾರದಿಂದ ಕ್ರಿಮಿನಲ್ (FIR) ಮೊಕದ್ದಮೆ ದಾಖಲು
ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಶಿಕ್ಷಣ ಸಂಸ್ಥೆ ಮಾನ್ಯತೆ ರದ್ದು ಮಾಡಿದ ಶಾಲಾ ಶಿಕ್ಷಣ ಇಲಾಖೆ
1130 ವಿದ್ಯಾರ್ಥಿಗಳಿಗೆ ಏಳು ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ
ಶಿಕ್ಷಣ ಸಂಸ್ಥೆ ಮುಚ್ಚಿಸಲು ಶಾಲಾ ಶಿಕ್ಷಣ ಕ್ಷೇತ್ರ ಸಮನ್ವಯಾಧಿಕಾರಿ ನೇತೃತ್ವದಲ್ಲಿ ನಾಲ್ವರ ಸಮಿತಿ ರಚನೆ

The School Education Department has cancelled the recognition of the school educational institution - a criminal (FIR) case has been registered by the government at the Kothanur police station against the school.

ಬೆಂಗಳೂರು: ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಶಿಕ್ಷಣ ಸಂಸ್ಥೆ ಮಾನ್ಯತೆಯನ್ನು ಶಾಲಾ ಶಿಕ್ಷಣ ಇಲಾಖೆ ರದ್ದುಪಡಿಸಿದ್ದು, ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ 1130 ವಿದ್ಯಾರ್ಥಿಗಳಿಗೆ ಏಳು ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ. ಶಾಲೆ ಮುಚ್ಚಲು ಕ್ಷೇತ್ರ ಸಮನ್ವಯಾಧಿಕಾರಿ ನೇತೃತ್ವದಲ್ಲಿ ನಾಲ್ವರ ಸಮಿತಿ ರಚಿಸಿದ್ದು, ಈ ಮೂಲಕ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಹೊರಡಿಸಿರುವ ಆದೇಶವನ್ನು ಜಾರಿಗೊಳಿಸಲು ಬೆಂಗಳೂರು ದಕ್ಷಿಣ ವಲಯ[4]ದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.


ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಆಡಳಿತಾಧಿಕಾರಿ ಆದ ಖಾಲಿದ್ ಮುಷರಫ್ ಬಿನ್ ಅಬ್ದುಲ್ ಜಲೀಲ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದೂರಿನಡಿ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ನಿನ್ನೆ ಎಫ್.ಐ.ಆರ್ ದಾಖಲಾಗಿದೆ. ಶಾಲೆಯ ಮಾನ್ಯತೆ ಹಿಂಪಡೆದು ನೋಂದಣಿ ರದ್ದು ಪಡಿಸಿರುವುದರಿಂದ ಶಾಲೆಯನ್ನು ಮುಚ್ಚಿಸಿ ವಿದ್ಯಾರ್ಥಿಗಳಿಗೆ ಇತರೆ ಶಾಲೆಗಳಿಗೆ ದಾಖಲಿಸಬೇಕಾದ ಪ್ರಕ್ರಿಯೆ ಕೈಗೊಳ್ಳಬೇಕಾಗಿದ್ದು, ಈ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸುವಂತೆ ಕೋರಿ ಬೆಂಗಳೂರು ದಕ್ಷಿಣ ವಲಯ[4]ದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೊಟ್ಟ ದೂರಿನ ಆಧಾರದ ಮೇಲೆ 318 (4), 336, 340 2.2.2 ರ ಅಡಿ ದೂರು ದಾಖಲಾಗಿದೆ. ಯಾವುದೇ ರೀತಿಯ ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ.
ಥಣಿ ಸಂದ್ರದ ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಥಣಿಸಂದ್ರ ಶಾಲೆಯ ಆಡಳಿತ ಮಂಡಳಿಯು ಶಾಲಾ ಮಾನ್ಯತೆ ರದ್ದು ಮಾಡಿರುವ ವಿರುದ್ಧ ಸಲ್ಲಿಸಿದ್ದ ಮೇಲ್ಮನೆಯನ್ನು ಜ. 19 ರಂದು ಆಯುಕ್ತರು ತಿರಸ್ಕರಿಸಿದ್ದರು. ದಿ ಆಲ್ ಜಾಮೀಯ ಮಹಮ್ಮದೀಯ ಎಜುಕೇಷನ್ ಸೊಸೈಟಿ(ರಿ) ಮುಂಬೈ ಈ ಹೆಸರಿನಲ್ಲಿ ಸಂಸ್ಥೆಯು ನೋದಣಿಯಾಗಿದ್ದು, ಶಾಲೆಗೆ ಅನುಮತಿ ಪಡೆಯುವ ಸಂದರ್ಭದಲ್ಲಿ ಹಾಗೂ ಮಾನ್ಯತೆ ನವೀಕರಣ ಮತ್ತು ಶಾಲೆಯ ಹೆಸರು ಬದಲಾವಣೆಯ ಸಂದರ್ಭಗಳಲ್ಲಿ ಭಿನ್ನ ವಿಭಿನ್ನ ಹೆಸರುಗಳಲ್ಲಿ ಮೇಲ್ಮನವಿದಾರರು ದಾಖಲೆಗಳನ್ನು ಸಲ್ಲಿಸಿ ನೋಂದಣಿ ಮತ್ತು ಮಾನ್ಯತೆ ನವೀಕರಣ ಮಾಡಿಕೊಂಡಿದೆ ಎಂದು ಪ್ರಾಧಿಕಾರ ಸ್ಪಷ್ಟವಾಗಿ ಹೇಳಿದೆ.
ಶಾಲೆಯ ಆಡಳಿತ ಮಂಡಳಿಯು ಶಾಲಾ ಶುಲ್ಕವನ್ನು ಸ್ವೀಕರಿಸಿ ವಿವಿಧ ಹೆಸರುಗಳಲ್ಲಿ ರಸೀದಿ ನೀಡಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ. ಅನುಮತಿ ಪಡೆದಿರುವ ಹೆಸರಿನಲ್ಲಿ ಶುಲ್ಕವನ್ನು ಪಡೆದು ರಸೀದಿ ನೀಡದೇ ಇರುವುದು ಆಡಳಿತ ಮಂಡಳಿಯ ಪ್ರಮುಖ ಲೋಪವಾಗಿದೆ.
ಶಾಲೆಯ ಆಡಳಿತ ಮಂಡಳಿಯು ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದರೂ ಸಹ ಅದಕ್ಕೆ ತಕ್ಕಂತೆ ನಾಮಫಲಕ ಅಳವಡಿಸಿಕೊಂಡಿಲ್ಲ. ಬದಲಿಗೆ ಸಾಮರ್ ಇಂಟರ್ ನ್ಯಾಷನಲ್ ಸ್ಕೂಲ್ ಎಂದು ನಾಮಫಲಕ ಅಳವಡಿಸಿ ಪೋಷಕರನ್ನು ಮತ್ತು ಸಾರ್ವಜನಿಕರನ್ನು ಗೊಂದಲಕ್ಕೆ ದೂಡಿದೆ. ಶಾಲೆಯ 2013 ರಿಂದ 2024 ರವರೆಗಿನ ಎಲ್ಲಾ ದಾಖಲೆಗಳನ್ನು ಒಟ್ಟಾರೆಯಾಗಿ ಪರಿಶೀಲಿಸಿದಾಗ, ಶಾಲೆಯ ಆಡಳಿತ ಮಂಡಳಿಯು ಕರ್ನಾಟಕ ಶಿಕ್ಷಣ ಕಾಯ್ದೆ-1983 ರ ಸೆಕ್ಷನ್ 30, 31 ಮತ್ತು 36 ರಲ್ಲಿನ ಅಂಶಗಳನ್ನು ಉಲ್ಲಂಘಿಸಿ ಆಡಳಿತ ಮಂಡಳಿಯ ಹೆಸರು ಮತ್ತು ಶಾಲೆಗಳ ಹೆಸರನ್ನು ನಿರಂತರವಾಗಿ ಹಾಗೂ ನಿಯಮಬಾಹಿರವಾಗಿ ಬದಲಾಯಿಸಿರುವುದು ಸಾಬೀತಾಗಿದೆ.

ಹಲವಾರು ಅಕ್ರಮಗಳನ್ನು ಕ್ರಮಬದ್ಧಗೊಳಿಸಲು ಮೇಲ್ಮನವಿದಾರರು ಪ್ರಯತ್ನಿಸುತ್ತಿರುವುದನ್ನು ಪ್ರಾಧಿಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಶಿಕ್ಷಣ ಕಾಯ್ದೆ ನಿಯಮ 8(1) ರಲ್ಲಿ ತಿಳಿಸಿರುವಂತೆ ಶಾಲೆಯ ಆಡಳಿತ ಮಂಡಳಿಯು ಸುಳ್ಳು ದಾಖಲೆಗಳನ್ನು ಸಲ್ಲಿಸಿರುವ ಕಾರಣ ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದರು. ಅದರಂತೆ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ದಿ ಆಲ್ ಜಾಮೀಯ ಮಹಮ್ಮದೀಯ ಎಜುಕೇಷನ್ ಸೊಸೈಟಿ(ರಿ) ಮುಂಬೈ ಈ ಹೆಸರಿನಲ್ಲಿ ಸಂಸ್ಥೆಯು ನೋದಣಿಯಾಗಿದ್ದು, ಶಾಲೆಗೆ ಅನುಮತಿ ಪಡೆಯುವ ಸಂದರ್ಭದಲ್ಲಿ ಹಾಗೂ ಮಾನ್ಯತೆ ನವೀಕರಣ ಮತ್ತು ಶಾಲೆಯ ಹೆಸರು ಬದಲಾವಣೆಯ ಸಂದರ್ಭಗಳಲ್ಲಿ ಭಿನ್ನ ವಿಭಿನ್ನ ಹೆಸರುಗಳಲ್ಲಿ ದಾಖಲೆಗಳನ್ನು ಸಲ್ಲಿಸಿ ನೋಂದಣಿ ಮತ್ತು ಮಾನ್ಯತೆ ನವೀಕರಣ ಪಡೆದಿರುವುದು ಕ್ರಿಮಿನಲ್ ಸಂಚು ಆಗಿರುತ್ತದೆ ಎಂದು ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದರು.
ಶಾಲಾ ಶುಲ್ಕವನ್ನು ಸ್ವೀಕರಿಸಿ ವಿವಿಧ ಹೆಸರುಗಳಲ್ಲಿ ರಸೀದಿಯನ್ನು ನೀಡಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ. ಅನುಮತಿ ಪಡೆದಿರುವ ಹೆಸರಿನಲ್ಲಿ ಶುಲ್ಕವನ್ನು ಪಡೆದು ರಸೀದಿ ನೀಡದೇ ಇರುವುದು ಪೋಷಕರಿಗೆ ಮಾಡಿದ ಮೋಸವಾಗಿದೆ. ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದರೂ ಸಹ ಇದರ ನಾಮಫಲಕ ಅಳವಡಿಸಿಲ್ಲ, ಬದಲಿಗೆ ಸಾಮರ್ ಇಂಟರ್ ನ್ಯಾಷನಲ್ ಸ್ಕೂಲ್ ಎಂದು ನಾಮಫಲಕ ಅಳವಡಿಸಿ ಪೋಷಕರನ್ನು ಮತ್ತು ಸಾರ್ವಜನಿಕರನ್ನು ಗೊಂದಲಕ್ಕೆ ದೂಡಿರುವ ಕಾರಣದಿಂದ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಆಡಳಿತಾಧಿಕಾರಿ ಆದ ಖಾಲಿದ್ ಮುಷರಫ್ ಬಿನ್ ಅಬ್ದುಲ್ ಜಲೀಲ್ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ ಆಗತ್ಯ ಕ್ರಮ ಜರುಗಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಸದರಿ ಶಾಲೆಯ ಮಾನ್ಯತೆ ಹಿಂಪಡೆದು ನೋಂದಣಿಯನ್ನು ರದ್ದು ಪಡಿಸಿರುವುದರಿಂದ ಶಾಲೆಯನ್ನು ಮುಚ್ಚಿಸಿ ವಿದ್ಯಾರ್ಥಿಗಳಿಗೆ ಇತರೆ ಶಾಲೆಗಳಿಗೆ ದಾಖಲಿಸಬೇಕಾದ ಪ್ರಕ್ರಿಯೆ ಕೈಗೊಳ್ಳಬೇಕಾಗಿದೆ. ಈ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸುವಂತೆ ಅವರು ಕೋರಿದ್ದಾರೆ.
ಬಾಕ್ಸ್

  • ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆ 1 ರಿಂದ 10 ನೇ ತರಗತಿ ವರೆಗೆ ನಡೆಯುತ್ತಿರುವ ಶಾಲೆಯ ಮಾನ್ಯತೆಯನ್ನು ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ಸೆಕ್ಷನ್ 39 ರಂತೆ ರದ್ದು.
  • ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜಾಮೀಯಾ ಎಜುಕೇಷನ್ ಸೊಸೈಟಿ ಹೆಸರಿನಲ್ಲಿ ಐದು ಲಕ್ಷ ರೂಪಾಯಿ ಅನುದಾನ ಪಡೆದು ಮದರಸಾಗೆ ಬಳಕೆ ಮಾಡಿಕೊಂಡಿರುವ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಅಲ್ಪ ಸಂಖ್ಯಾತ ಇಲಾಖೆಗೆ ಸೂಚನೆ.
  • ಏಳು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.
  • ಈ ಶಾಲೆಯ ಶೈಕ್ಷಣಿಕ ದಾಖಲಾತಿಯನ್ನು ಹತ್ತಿರದ ಸರ್ಕಾರಿ ಪ್ರೌಢ ಶಾಲೆಗೆ ಹಸ್ತಾಂತರಿಸಿ ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರತ್ಯೇಕವಾಗಿ ದಾಖಲೆ ವಹಿ ನಿರ್ವಹಿಸಬೇಕು.
  • ಶಾಲೆಯನ್ನು ಮುಚ್ಚುವ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. ಇದಕ್ಕಾಗಿ ಕ್ಷೇತ್ರ ಸಮನ್ವಯಾಧಿಕಾರಿ ಟಿ.ಎಸ್. ರಾಧಾಮಣಿ ನೇತೃತ್ವದಲ್ಲಿ ನಾಲ್ವರ ಸಮಿತಿ ರಚನೆ.
  • ವಿದ್ಯಾರ್ಥಿಗಳನ್ನು ಹತ್ತಿರದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಹಸ್ತಾಂತರಿಸಿ ವರದಿ ಸಲ್ಲಿಸಬೇಕು.