
ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ: ಸಮಾಜಮುಖಿ ಕಾರ್ಯಗಳ ಮೂಲಕ ಕಾಯಕ ಯೋಗಿ ಎನಿಸಿಕೊಂಡವರು ಸಿದ್ಧರಾಮೇಶ್ವರರು- ಅರವಿಂದ ವಡ್ಡರ್

Shri Shivayogi Siddarameshwar Jayanti: Siddarameshwar became a Kayaka Yogi through his social work - Arvind Vadder

ಕೊಪ್ಪಳ ಜನವರಿ 27 (ಕರ್ನಾಟಕ ವಾರ್ತೆ): ಸಮಾಜ ಸುಧಾರಣೆಯ ಜೊತೆಗೆ ಸಮಾಜ ಮುಖಿ ಕಾರ್ಯಗಳನ್ನು ಮಾಡುವುದರ ಮೂಲಕ ಕಾಯಕ ಯೋಗಿ ಎನಿಸಿಕೊಂಡವರು ಶಿವಯೋಗಿ ಸಿದ್ಧರಾಮೇಶ್ವರರು ಎಂದು ಗಜೇಂದ್ರಗಡದ ಎಸ್.ಎಸ್.ಭೂಮರೆಡ್ಡಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಅರವಿಂದ ಎಸ್.ವಡ್ಡರ್ ಹೇಳಿದರು.
ಅವರು ಮಂಗಳವಾರ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಮಾತನಾಡಿದರು.
12ನೇ ಶತಮಾನಕ್ಕೂ ಪೂರ್ವದಲ್ಲಿ ಈ ನಾಡಿನಲ್ಲಿ ಮೌಢ್ಯತೆ, ರಾಜ್ಯ ಪ್ರಭುತ್ವದೊಳಗೆ ಗುಲಾಮಗಿರಿಯ ಅಟ್ಟಹಾಸ ನಡೆದಿತ್ತು. ಜಾತಿ ವ್ಯವಸ್ಥೆಯು ತುಂಬಿ ತುಳುಕಿ ಜನರು ಶೋಷಣೆಗೆ ಒಳಗಾಗಿದ್ದರು. ಇಂತಹ ಸಂದರ್ಭದಲ್ಲಿ 12ನೇ ಶತಮಾನದ ಬಸವಾದಿ ಶರಣರ ಹೋರಾಟದಿಂದ ಕಲ್ಯಾಣ ಕ್ರಾಂತಿ ಉಘಮವಾಯಿತು. ಈ ಹೋರಾಟವು ಪ್ರಪಂಚದ ಅತೀದೊಡ್ಡ ಕಲ್ಯಾಣ ಕ್ರಾಂತಿಯಾಗಿದೆ. ಸಮಾಜದ ಸುಧಾರಣೆಯ ಪ್ರತಿಫಲವಾಗಿ ವಚನ ಸಾಹಿತ್ಯ ಹುಟ್ಟಿಕೊಂಡು, ಅನೇಕ ಶರಣರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಬೆಳಕನ್ನು ನೀಡಿದ್ದಾರೆ. ಅಂತಹ ಮಹನೀಯರುಗಳಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ವಿಶಿಷ್ಟ ವಚನಕಾರರಾಗಿ ರೂಪುಗೊಂಡವರು ಮಹಾನ್ ಶರಣ ಶಿವಯೋಗಿ ಸಿದ್ಧರಾಮೇಶ್ವರರು ಎಂದರು.
ಶಿವಯೋಗಿ ಸಿದ್ಧರಾಮೇಶ್ವರರು ಪ್ರಸಿದ್ದ ಸಮಾಜ ಸೇವಕರಾಗಿದ್ದರು. ಅವರು ತಮ್ಮ ಕುಲಕಸುಬನ್ನು ನಿರ್ವಹಿಸುವ ಮೂಲಕ ಕೆರೆಕಟ್ಟೆಗಳನ್ನು ನಿರ್ಮಿಸಿದ್ದರು. ಮಾಡುವ ಕೆಲಸಗಳಲ್ಲಿ ಕೀಳರಿಮೆ ಬಿಟ್ಟು ಸ್ವಾಭಿಮಾನಿಯಾಗಿರಬೇಕು ಎಂಬುದನ್ನು ಅವರು ತಿಳಿಸಿ ಕೊಟ್ಟಿದ್ದಾರೆ. ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವವಿದೆ. ಹಾಗಾಗಿ ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯವನ್ನು ಉಜ್ವಲವಾಗಿ ರೂಪಿಸಬೇಕು. ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಹಾಗೂ ಇತರೆ ಮಹನೀಯರನ್ನು ಆದರ್ಶವಾಗಿಟ್ಟುಕೊಂಡು ಶಿಕ್ಷಣವಂತರಾಗಿ, ನಮ್ಮ ಸಮುದಾಯದ ಅಬಿವೃದ್ಧಿಗೆ ಶ್ರಮಿಸಬೇಕು. ಸಮಾಜದ ಪ್ರಮುಖ ವ್ಯಕ್ತಿಗಳಾಗಿ ಉತ್ತಮ ಕೊಡುಗೆಯನ್ನು ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದ ಬಾಗಲಕೋಟೆ ಮತ್ತು ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಮಾತನಾಡಿ, ಕಾಯಕ ಎಂದರೆ ದೇವರು ಅದನ್ನ ಸ್ಮರಿಸಿಕೂಂಡು ಬಂದಿರುವುದೆ ಭೊವಿ ಸಮಾಜ. ಮನೆ, ಮಠ, ಮಂದಿರ, ಮಹಲ್ಗಳನ್ನು ಕಟ್ಟುವ ಭೋವಿ ಸಮಾಜವು ಎಲ್ಲರ ಮನಸ್ಸನ್ನು ಕಟ್ಟಿದೆ. ಶ್ರೀ ಶಿವಯೋಗಿ ಸಿದ್ದರಾಮೇಶ್ವರರು 64 ವಿದ್ಯೆಗಳನ್ನು ಕಲಿತು ಕರಗತ ಮಾಡಿಕೊಂಡವರು. ಶಿಕ್ಷಣವು ಸರ್ವ ಸಮಸ್ಯೆಗಳಿಗೆ ಅಸ್ತ್ರವಾಗಿದ್ದು, ಪ್ರತಿಯೊಬ್ಬರೂ ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಅತ್ಯವಶ್ಯವಾಗಿದೆ. ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಬಗ್ಗೆ ಅರಿತುಕೊಂಡು ಮತ್ತು ಅವರು ತೋರಿದ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದರು.
ಭೋವಿ ಸಮಾಜದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಸುಂಕಪ್ಪ ಮಾಲಗಿತ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಕರ್ಣಕುಮಾರ್, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಪುಷ್ಪಲತಾ, ಭೋವಿ ಸಮಾಜದ ಮುಖಂಡರಾದ ಮಾಸ್ತೆಪ್ಪ ಕಟ್ಟಿಮನಿ, ರಾಮಣ್ಣ ಹೆಚ್. ಅಳವಂಡಿ, ರಾಮಣ್ಣ ಪೂಜಾರ, ರಮೇಶ ಬಸಾಪಟ್ಟಣ, ರಾಮಣ್ಣ ಅಳವಂಡಿ, ಲಕ್ಷ್ಮಣ ಪೂಜಾರ, ಎಕಪ್ಪ ರ್ಯಾವಣಕಿ, ಪರಶುರಾಮ ಹಾಗೂ ಹಲವು ಮುಖಂಡರು ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
*ಮೆರವಣಿಗೆ:* ಜಯಂತಿ ಕಾರ್ಯಕ್ರಮದ ಪ್ರಯುಕ್ತ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭಾವಚಿತ್ರದ ಮೆರವಣಿಗೆಯು ಶ್ರೀ ಗವಿಸಿದ್ದೇಶ್ವರ ಮಠದಿಂದ ಪ್ರಾರಂಭಗೊಂಡು, ಗಡಿಯಾರ ಕಂಬ, ಜವಾಹರ ರಸ್ತೆ ಮೂಲಕ ಅಶೋಕ ಸರ್ಕಲ್ ಬಳಿಯ ಸಾಹಿತ್ಯ ಭವನದವರೆಗೆ ಅದ್ದೂರಿಯಾಗಿ ನಡೆಯಿತು. ಈ ಮೆರವಣಿಗೆಯಲ್ಲಿ ಕುಂಭ ಹೊತ್ತು ಮಹಿಳೆಯರು, ಭೋವಿ ಸಮಾಜದವರು ಸೇರಿದಂತೆ ಹಲವಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.




