
ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು ಸಂವಿಧಾನದ ಎರಡು ಕಣ್ಣುಗಳಿದ್ದಂತೆ – ಸಚಿವ ಶಿವರಾಜ ತಂಗಡಗಿ

77th Republic Day Celebrations: National Flag hoisted by District In-charge Minister


ಕೊಪ್ಪಳ ಜನವರಿ 26 (ಕರ್ನಾಟಕ ವಾರ್ತೆ): ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಸಂವಿಧಾನದ ಎರಡು ಕಣ್ಣುಗಳಿದ್ದಂತೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಹೇಳಿದರು.
ಅವರು ಸೋಮವಾರ ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಅಸಂಖ್ಯಾತ ದೇಶಾಭಿಮಾನಿಗಳ ಹೋರಾಟ, ತ್ಯಾಗ, ಬಲಿದಾನದ ಫಲವಾಗಿ ನಮ್ಮ ದೇಶ 1947 ಆಗಸ್ಟ್ 15 ರಂದು ಬ್ರಿಟೀಷರ ಸಂಕೋಲೆಯಿಂದ ಮುಕ್ತಿ ಹೊಂದಿ, ಸ್ವತಂತ್ರ ರಾಷ್ಟ್ರವಾಯಿತು. ಸ್ವಾತಂತ್ರ್ಯದ ಸಂಭ್ರಮದೊಂದಿಗೆ ದೇಶಕ್ಕೆ ಪ್ರತ್ಯೇಕ ಸಂವಿಧಾನ ರಚಿಸುವ ಅಗತ್ಯತೆ ಮನಗಂಡು, ಸಂವಿಧಾನ ರಚನೆಯ ಪ್ರಕ್ರಿಯೆಗಳು ಪ್ರಾರಂಭವಾದವು. ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿ ಡಾ. ರಾಜೇಂದ್ರ ಪ್ರಸಾದ್, ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಡಾ. ಬಿ.ಆರ್. ಅಂಬೇಡ್ಕರ ಅವರ ನೇತೃತ್ವದಲ್ಲಿ ಸಂವಿಧಾನ ರಚನಾ ಕಾರ್ಯಕ್ಕೆ ಚಾಲನೆ ದೊರೆಯಿತು. ಈ ಮಹಾನ್ ಮೇಧಾವಿಗಳ ಸತತ ಅಧ್ಯಯನ, ಚರ್ಚೆಗಳ ಅವಿರತ ಶ್ರಮದ ಫಲವಾಗಿ ಭಾರತ ಸಂವಿಧಾನ ರಚನೆಗೊಂಡು, 1950ರ ಜನವರಿ 26 ರಂದು ಜಾರಿಗೆ ಬಂದಿತು. ಭಾರತ ಗಣರಾಜ್ಯವಾಗಿ, ದೇಶದೊಳಗಿದ್ದ ಎಲ್ಲ ಸಂಸ್ಥಾನಗಳು ವಿಲೀನಗೊಂಡು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ “ಏಕ ಸಂವಿಧಾನದಡಿ” ಬೃಹತ್ ಗಣತಂತ್ರ ರಾಷ್ಟ್ರವಾಗಿ ನಮ್ಮ ದೇಶ ಉದಯವಾಯಿತು ಎಂದರು.
ಭಾರತೀಯ ಸಂವಿಧಾನದ ಪ್ರಸ್ತಾವನೆ, ಪ್ರತಿಯೊಬ್ಬ ನಾಗರಿಕನಿಗೂ ಮಾರ್ಗದರ್ಶಕವಾಗಿದೆ. ಪ್ರಸ್ತಾವನೆಯು `ಭಾರತೀಯರಾದ ನಾವು’ ಎಂಬ ಪದದಿಂದ ಆರಂಭವಾಗುತ್ತದೆ. ದೇಶದ ಪರಮಾಧಿಕಾರ ಜನರಲ್ಲೇ ನೆಲಸಿದೆ ಎಂಬುವುದನ್ನು ಸ್ಪಷ್ಟಪಡಿಸುತ್ತದೆ ಹಾಗೂ ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳು ಸಂವಿಧಾನದ ಎರಡು ಕಣ್ಣುಗಳಿದ್ದಂತೆ. ಹಕ್ಕುಗಳ ಬಗ್ಗೆ ಅರಿವು ಇರುವಷ್ಟು, ಕರ್ತವ್ಯಗಳ ಬಗ್ಗೆ ನಮ್ಮಲ್ಲಿ ಜಾಗೃತಿ ಇರಬೇಕು. ಇವೆಲ್ಲವೂ ಸಂವಿಧಾನದ ಆತ್ಮಕ್ಕೆ ತಕ್ಕ ಕಾರ್ಯಗಳಾಗಿವೆ ಎಂದು ತಿಳಿಸಿದರು.
ಭಾರತ ಸಂವಿಧಾನದ ಕರಡು ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಡಾ. ಬಾಬಾಸಾಹೇಬ ಅಂಬೇಡ್ಕರ ರವರು ಪ್ರಪಂಚದ ಹಲವಾರು ದೇಶಗಳ ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಿ, ಜಗತ್ತಿನಲ್ಲಿಯೇ ಅತ್ಯುತ್ತಮ ಸಂವಿಧಾನ ರೂಪಗೊಳ್ಳಲು ಕಾರಣರಾದರು. ಅವರಲ್ಲಿನ ಕಾನೂನಿನ ಪಾಂಡಿತ್ಯ ಹಾಗೂ ಅನುಭವ ಸಂವಿಧಾನ ರಚನೆಯಲ್ಲಿನ ಕೊಡುಗೆಯ ಸ್ಮರಣಾರ್ಥ ಅವರನ್ನು “ಭಾರತದ ಸಂವಿಧಾನ ಶಿಲ್ಪಿ” ಎಂದು ಗೌರವಿಸಲಾಗುತ್ತಿದೆ. ಡಾ.ರಾಜೇಂದ್ರ ಪ್ರಸಾದ ಅವರ ಅಧ್ಯಕ್ಷತೆಯಲ್ಲಿ ಹಾಗೂ ಸಂವಿಧಾನ ರಚನಾ ಸಭೆಯ ಕಾನೂನು ಸಲಹೆಗಾರರಾಗಿ ಬಿ.ಎನ್.ರಾವ್, ಸಂವಿಧಾನ ರಚನಾ ಸಭೆಯ ಉಪಾಧ್ಯಕ್ಷರಾಗಿ ದುಡಿದ ಎಚ್.ಸಿ. ಮುಖರ್ಜಿಯವರ ಸೇವೆಯೂ ಕೂಡಾ ಸ್ಮರಣೀಯವಾದದ್ದು ಎಂದು ಹೇಳಿದರು.
ಕೊಪ್ಪಳ ಜಿಲ್ಲೆ ಕೃಷಿ, ಕಲೆ ಸಾಹಿತ್ಯ, ಪಾರಂಪರಿಕ ಕಲೆಗಳ ಆಗರವಾಗಿದ್ದು, ಇಂತಹ ಜಿಲ್ಲೆಯಲ್ಲಿ ಜನಿಸಿದ ಅಸಂಖ್ಯಾತ ಪ್ರತಿಭಾವಂತರು ಜಿಲ್ಲೆಯ ಹೆಸರನ್ನು ನಾಡಿಗೆ ಪರಿಚಯಿಸಿದ್ದಾರೆ. ಈ ಜಿಲ್ಲೆಯ ಉಸ್ತುವಾರಿ ಸಚಿವನಾಗಿರುವುದು ನನಗೆ ಹೆಮ್ಮೆಯ ವಿಷಯ ಎಂದರು.
ನಮ್ಮ ರಾಜ್ಯ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದವರಿಗೆ ಪಂಚ ಗ್ಯಾರಂಟಿ ಯೋಜನೆಯಡಿ ಸೌಲಭ್ಯಗಳನ್ನು ಒದಗಿಸಿದ್ದು, ಮಹಿಳೆಯರು, ಯುವಕರು ಸೇರಿದಂತೆ ರಾಜ್ಯದ ಜನತೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. 2023ರ ಜೂನ್ 11 ರಿಂದ ಆರಂಭಗೊಂಡ ಶಕ್ತಿ ಯೋಜನೆಯಡಿ 2025ರ ಡಿಸೆಂಬರ್ ಮಾಹೆಯ ಅಂತ್ಯದವರೆಗೆ ಜಿಲ್ಲೆಯಲ್ಲಿ ಒಟ್ಟು 10.14 ಕೋಟಿಗೂ ಅಧಿಕ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇದಕ್ಕಾಗಿ 372.91 ಕೋಟಿ ರೂ.ಗಳು ವೆಚ್ಚ ಮಾಡಲಾಗಿರುತ್ತದೆ. ಆಗಸ್ಟ್-2023 ರಿಂದ ನವೆಂಬರ್-2025ರ ವರೆಗೆ ಜಿಲ್ಲೆಯಲ್ಲಿ “ಗೃಹ ಜ್ಯೋತಿ” ಯೋಜನೆಗೆ ಒಟ್ಟು 2 ಲಕ್ಷ 80 ಸಾವಿರದ 123 ಫಲಾನುಭವಿಗಳು ನೋಂದಾಯಿಸಿದ್ದು, ಇದಕ್ಕಾಗಿ ಒಟ್ಟು 326.02 ಕೋಟಿ ರೂ.ಗಳ ಧನ ಸಹಾಯವನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ 2026ರ ಜನವರಿ 14 ರವರೆಗೆ 12,574 ಫಲಾನುಭವಿಗಳು ಯುವನಿಧಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದು, ಇಲ್ಲಿಯವರೆಗೆ ಒಟ್ಟು 26 ಕೋಟಿ 97 ಲಕ್ಷ 15 ಸಾವಿರ ರೂ. ನಿರುದ್ಯೋಗ ಭತ್ಯೆಯನ್ನು ನೀಡಲಾಗಿದೆ ಎಂದು ಹೇಳಿದರು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 13 ಲಕ್ಷ 36 ಸಾವಿರದ 184 ಸದಸ್ಯರಿಗೆ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಂತೆ ಪ್ರತಿ ಸದಸ್ಯರಿಗೆ 5 ಕೆ.ಜಿ. ಆಹಾರಧಾನ್ಯವನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಫೆಬ್ರುವರಿ-2025 ರಿಂದ ಅನ್ನಭಾಗ್ಯ ಯೋಜನೆ ಅಡಿ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ನೀಡಲಾಗುತ್ತಿದೆ. ಇದರ ಬದಲಾಗಿ “ಇಂದಿರಾ ಕಿಟ್” ನೀಡುವ ಸಿದ್ಧತೆ ನಡೆದಿದ್ದು, ಬಡವರಿಗಾಗಿ ಈ ಕಿಟ್ನಲ್ಲಿ ಪೌಷ್ಠಿಕಾಂಶ ಹೊಂದಿರುವ ಆಹಾರ ಪದಾರ್ಥಗಳಾದ ತೊಗರಿ ಬೆಳೆ, ಸೂರ್ಯಕಾಂತಿ ಎಣ್ಣೆ, ಸಕ್ಕರೆ, ಉಪ್ಪು ನೀಡುವ ಉದ್ದೇಶವಿದೆ. ಶೀಘ್ರವಾಗಿ ಈ ನೂತನ ಯೋಜನೆ ಜಾರಿಗೊಳಿಸಲಾಗುವುದು. ಜಿಲ್ಲೆಯಲ್ಲಿ ಸೆಪ್ಟೆಂಬರ್-2025ರ ಅಂತ್ಯಕ್ಕೆ ಒಟ್ಟು 3 ಲಕ್ಷ 27 ಸಾವಿರದ 589 ಮಹಿಳಾ ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿಯಾಗಿದ್ದು, ಆಗಸ್ಟ್-2023 ರಿಂದ ಸೆಪ್ಟೆಂಬರ್-2025ರ ವರೆಗೆ ಒಟ್ಟು ಮೊತ್ತ ರೂ. 1467.84 ಕೋಟಿ ರೂಪಾಯಿ ಸಹಾಯ ಧನ ಫಲಾನುಭವಿಗಳ ಖಾತೆಗೆ ಸಂದಾಯವಾಗಿರುತ್ತದೆ ಎಂದು ತಿಳಿಸಿದರು.
ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯಾದ ಕಂದಾಯ ಗ್ರಾಮ ರಚನೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯಲ್ಲಿ ದಾಖಲೆ ರಹಿತವಾಗಿ ವಾಸಿಸುತ್ತಿದ್ದ ಸರ್ಕಾರಿ ಭೂಮಿಯಲ್ಲಿ 22 ಖಾಸಗಿ ಜಮೀನಿನಲ್ಲಿ 65 ಒಟ್ಟು 87 ಕಂದಾಯ ಗ್ರಾಮಗಳನ್ನು ರಚಿಸಿದ್ದು, ಅವುಗಳಲ್ಲಿ ಒಟ್ಟು 6200 ಹಕ್ಕುಪತ್ರಗಳನ್ನು ನೀಡಬಹುದಾಗಿದ್ದು, ದಿನಾಂಕ: 13.02.2026 ರಂದು ಹಾವೇರಿಯಲ್ಲಿ ನಡೆಯುವ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ 6200 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿರುತ್ತದೆ. ಆ ಮೂಲಕ ದಶಕಗಳಿಂದ ದಾಖಲೆರಹಿತವಾಗಿ ವಾಸಿಸುತ್ತಿದ್ದ ಕುಟುಂಬಗಳಿಗೆ ಶಾಶ್ವತ ಪರಿಹಾರ ನೀಡಲಾಗುತ್ತಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರಾಜ್ಯದ ಮಹಿಳೆಯರು ಮತ್ತು ಮಕ್ಕಳಲ್ಲಿ ಕಾನೂನು ಅರಿವು, ಜಾಗೃತಿ ಶಿಕ್ಷಣ ನೀಡುವುದರ ಜೊತೆಗೆ ಸಂಕಷ್ಟದಲ್ಲಿರುವವರಿಗೆ ತಕ್ಷಣದ ರಕ್ಷಣೆ/ನೆರವು ನೀಡುವ ಉದ್ದೇಶದಿಂದ `ಅಕ್ಕ ಪಡೆ’ ಯೋಜನೆಯನ್ನು ಜಿಲ್ಲೆಯಲ್ಲಿ ಜನವರಿ-2026 ರಿಂದ ಅನುಷ್ಠಾನಗೊಳಿಸಲಾಗಿದೆ. ಮಾನ್ಯ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರದಿಂದ ಕೊಪ್ಪಳ ಜಿಲ್ಲೆಗೆ 200 ಕೋಟಿ ರೂಗಳಿಗೆ ಕಾಮಗಾರಿ ಅನುಮೋದನೆ ನೀಡಿದ್ದು, ಅದರಲ್ಲಿ ಈಗಾಗಲೇ ರೂ.164.1 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ. ಇನ್ನುಳಿದ ರೂ.35.9 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಹಂತದಲ್ಲಿರುತ್ತದೆ ಎಂದು ಹೇಳಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2025-26ನೇ ಸಾಲಿಗೆ 61 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ಹೊಂದಿದ್ದು, ದಿನಾಂಕ: 20-01-2026 ಕ್ಕೆ 54.32 ಲಕ್ಷ ಮಾನವ ದಿನಗಳು ಸೃಜಿಸಿ ಶೇ.89 ರಷ್ಟು ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1.73 ಲಕ್ಷ ಕುಟುಂಬಗಳಿಗೆ ಹಾಗೂ 3.58 ಲಕ್ಷ ಕೂಲಿಕಾರರಿಗೆ ಉದ್ಯೋಗವನ್ನು ನೀಡಲಾಗಿದೆ. 2025-26ನೇ ಸಾಲಿನಲ್ಲಿ ಒಟ್ಟು 193.08 ಕೋಟಿ ರೂ.ಗಳ ಅನುದಾನವನ್ನು ಖರ್ಚು ಭರಿಸಲಾಗಿದೆ. MGNREGA ಅಡಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳ ಅತ್ಯುತ್ತಮ ಅನುಷ್ಠಾನಕ್ಕಾಗಿ ಕೇಂದ್ರ ಮಟ್ಟದ ಪ್ರಶಸ್ತಿ ಹಾಗೂ ತೋಟಗಾರಿಕೆ ಅಭಿವೃದ್ಧಿ ಬೆಳೆಗಳ ಅತ್ಯುತ್ತಮ ಅನುಷ್ಠಾನಕ್ಕಾಗಿ ರಾಜ್ಯ ಪ್ರಶಸ್ತಿ ಮತ್ತು ಅತಿ ಹೆಚ್ಚು ಮಹಿಳೆಯರ ಭಾಗವಹಿಸಿಕೆಯಲ್ಲಿ ರಾಜ್ಯ ಮಟ್ಟದ ಮಹಿಳಾ ಕಾಯಕೊತ್ಸವ ಪ್ರಶಸ್ತಿಗೆ ಜಿಲ್ಲೆ ಭಾಜನವಾಗಿರುತ್ತದೆ ಎಂದರು.
ಕೃಷಿ ಇಲಾಖೆಯಿಂದ ಕೃಷಿಭಾಗ್ಯ ಯೋಜನೆ ಅಡಿ ಒಟ್ಟು 162 ಕೃಷಿಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ. ರಾಷ್ಟ್ರೀಯ ಆಹಾರ ಭದ್ರತೆ ಮತ್ತು ಪೌಷ್ಟಿಕ ಅಭಿಯಾನ (ಎನ್.ಎಫ್.ಎಸ್.ಎಂ) ಪ್ರಮುಖ ಆದ್ಯತೆಯಡಿ ಜಿಲ್ಲೆಯಲ್ಲಿ ಪೌಷ್ಟಿಕಾಂಶಯುಕ್ತ ಬೆಳೆಗಳ ಉತ್ಪಾದನೆಗೆ ವಿಶೇಷ ಒತ್ತು ನೀಡಲಾಗಿದೆ. 2025-26ನೇ ಸಾಲಿನಲ್ಲಿ ಈ ಅಭಿಯಾನದಡಿ ಜಿಲ್ಲೆಯಲ್ಲಿ ಒಟ್ಟು 9200 ಹೆಕ್ಟೇರ್ ಪ್ರದೇಶವನ್ನು ಗುರಿ ಸಾಧಿಸಲಾಗಿದೆ. ಸಿರಿಧಾನ್ಯ ನಡಿಗೆ, ಅಡುಗೆ ಸ್ಪರ್ಧೆ, ಸಿರಿಧಾನ್ಯ ಮೇಳ ಮುಂತಾದ ಕಾರ್ಯಕ್ರಮಗಳ ಮೂಲಕ ಸಿರಿಧಾನ್ಯಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.
ನಮ್ಮ ಸರ್ಕಾರದಿಂದ ಅನುಮೋದನೆ ಗೊಂಡಿರುವ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಸಿರಿವಾರ ಗ್ರಾಮದಲ್ಲಿ 194.33 ಎಕರೆ ಪ್ರದೇಶದಲ್ಲಿ ನೂತನವಾಗಿ ಅನುಷ್ಟಾನಗೊಳಿಸಲಾಗುತ್ತಿರುವ “ತೋಟಗಾರಿಕೆ ತಂತ್ರಜ್ಞಾನ ಪಾರ್ಕ್”ಗೆ ಸಂಬಂಧಿಸಿದ ಯೋಜನೆಯನ್ನು ಖಾಸಗಿ ಮತ್ತು ಸರ್ಕಾರಿ ಪ್ರಾಯೋಜಕತ್ವದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಜಾರಿಗೊಳಿಸಲು ಈಗಾಗಲೇ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತಿದ್ದು, ಈ ಯೋಜನೆಗೆ ದಿನಾಂಕ: 06.10.2025 ರಂದು ಮಾನ್ಯ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದಲು ಸಹ ಮೂಲಭೂತ ಸೌಕರ್ಯಕ್ಕಾಗಿ ರೂ. 10 ಕೋಟಿಗಳ ಅನುದಾನ ನೀಡಲು ಅನುಮೋದನೆಯನ್ನು ನೀಡಲಾಗಿದೆ. ಈ 194 ಎಕರೆ ಭೂಮಿಯನ್ನು ಸರ್ವೇ ಮಾಡಿಸಿ ಸ್ವಚ್ಛಗೊಳಿಸಿ, ಮೂಲಭೂತ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಕೇಸರ್ ಮಾವು ಬೆಳೆಯು ಅತ್ಯಂತ ಉತ್ಕೃಷ್ಟವಾಗಿ ಬರುತ್ತಿದ್ದು, ಈ ಹಣ್ಣು ರುಚಿ ಮತ್ತು ಸ್ವಾದಿಷ್ಟದಿಂದ ಕೂಡಿದ್ದು, ಬೆಳೆಯ ವಿಸ್ತೀರ್ಣವು ವರ್ಷದಿಂದ ವರ್ಷಕ್ಕೆ ವಿಸ್ತಾರವಾಗುತ್ತಿದೆ. ಕೊಪ್ಪಳ ಕೇಸರ್ ಮಾವನ್ನು ಭೌಗೋಳಿಕ ಮಾನ್ಯತೆಗಾಗಿ (ಜಿಐ ಟ್ಯಾಗ್) ಪ್ರಯತ್ನಿಸಲಾಗುತ್ತಿದೆ. ಇದರಿಂದ ರೈತರಿಗೆ ಮುಂದಿನದಿನಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಹಾಗೂ ರಫ್ತುಮಾಡಲು ಸಹಕಾರಿಯಾಗಲಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಾಡಿನ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಜಿಲ್ಲಾ ಮಟ್ಟದಲ್ಲಿ ಯುವಸೌರಭ, ಚಿಗುರು, `ಹಾಡಿರೇ ರಾಗಗಳ ತುಗಿರೇ ದೀಪಗಳ’ ಹಾಗೂ `ಸಾಂಸ್ಕೃತಿ ಸೌರಭ’ ದಂತಹ ಕಾರ್ಯಕ್ರಮಗಳ ಜೊತೆಗೆ ವಿವಿಧ ಅಕಾಡೆಮಿಗಳಿಂದ ವಿನೂತನ ಕಾರ್ಯಕ್ರಮಗಳನ್ನು ನಮ್ಮ ಇಲಾಖೆಯಿಂದ ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆ. ಈಗಾಗಲೇ ಆಯವ್ಯಯ ಘೋಷಣೆಯಲ್ಲಿ ಘೋಷಿಸಿರುವಂತೆ ರಾಮನಗರ ಜಿಲ್ಲೆಯ “ಜಾನಪದ ಲೋಕ” ದ ಮಾದರಿಯಂತೆ ಕೊಪ್ಪಳ ಜಿಲ್ಲೆಯಲ್ಲಿ ಜಾನಪದ ಲೋಕದ ನಿರ್ಮಾಣದ ಕಾರ್ಯವು ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪನೆಯಿಂದ ನಮ್ಮ ಭಾಗದ ಸರ್ವೋತೋಮುಖ ಅಭಿವೃದ್ಧಿಗೆ ತುಂಬಾ ಅನುಕೂಲವಾಗಿದ್ದು, ಈ ಮಂಡಳಿಗೆ ರಾಜ್ಯ ಸರ್ಕಾರ ಪ್ರತಿ ವರ್ಷ ಸರಿಸುಮಾರು 5 ಸಾವಿರ ಕೋಟಿ ರೂ. ಅನುದಾನವನ್ನು ನೀಡುವ ಮೂಲಕ ನಮ್ಮ ಭಾಗದ ಏಳು ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತಿದೆ. 2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ, ರಾಜ್ಯ ವಲಯ ಮತ್ತು ಇತರೆ ವಲಯದ ಅನುದಾನದಲ್ಲಿ ಪೊಲೀಸ್ ಇಲಾಖೆಯ ಕಾಮಗಾರಿಗಳಿಗೆ 7 ಕೋಟಿ ರೂ.ಗಳು, ಕಿಮ್ಸ್ ಅಧೀನದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 100 ಕೋಟಿ ರೂ., ಯಲಬುರ್ಗಾ ತಾಲ್ಲೂಕಿನಲ್ಲಿ ಹೊಸದಾಗಿ ನರ್ಸಿಂಗ್ ಕಾಲೇಜಿಗೆ 3 ಕೋಟಿ ರೂ., ಜಿಲ್ಲೆಯ ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ರೂ.50 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಕುಕನೂರು ಮತ್ತು ಕಾರಟಗಿ ತಾಲೂಕಿನಲ್ಲಿ ಜೆ.ಎಂ.ಎಫ್.ಸಿ. ನ್ಯಾಯಾಲಯವನ್ನು ಸ್ಥಾಪಿಸಲು ತಲಾ 9 ಕೋಟಿ ರೂ.ಗಳನ್ನು ಹಾಗೂ ಕೊಪ್ಪಳ ತಾಲೂಕಿನಲ್ಲಿ “ಪ್ರಜಾ ಸೌಧ’’ ಕಟ್ಟಡ ನಿರ್ಮಾಣ ಮಾಡಲು 10 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿರುತ್ತದೆ ಎಂದರು. ‘ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಗಳಡಿ ಕೊಪ್ಪಳ ಮತ್ತು ಭಾಗ್ಯನಗರ ಪಟ್ಟಣಗಳಿಗೆ ಸಂಯುಕ್ತ ಕುಡಿಯುವ ನೀರು ಸರಬರಾಜು ಕಲ್ಪಿಸುವ ಯೋಜನೆಯ ಮೊತ್ತ ರೂ. 138.47 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಪ್ರಸ್ತುತ ಸದರಿ ಯೋಜನೆಯ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ತುಂಗಭದ್ರಾ ಜಲಾಶಯ ಮೂಲದಿಂದ ಕುಕನೂರು ಮತ್ತು ಯಲಬುರ್ಗಾ ಪಟ್ಟಣಗಳಿಗೆ ಹಾಗೂ ಮಾರ್ಗ ಮಧ್ಯದ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ, ತಳಕಲ್, ತಳಬಾಳ, ಭಾಣಾಪುರ ಗ್ರಾಮಗಳು ಮತ್ತು ಟಾಯ್ ಕ್ರಸ್ಟರ್ ಇಂಡಸ್ಟಿçಗಳಿಗೆ ಸಂಯುಕ್ತ ಕುಡಿಯುವ ನೀರು ಸರಬರಾಜು ಕಲ್ಪಿಸುವ ಯೋಜನೆಯ ಮೊತ್ತ ರೂ. 269.12 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಸದರಿ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ತುಂಗಭದ್ರಾ ಜಲಾಶಯ ಮೂಲದಿಂದ ಕನಕಗಿರಿ ಮತ್ತು ಕಾರಟಗಿ ಪಟ್ಟಣಗಳಿಗೆ ಸಂಯುಕ್ತ ಕುಡಿಯುವ ನೀರು ಸರಬರಾಜು ಯೋಜನೆಯ ಮೊತ್ತ ರೂ. 204.57 ಕೋಟಿಗಳಿಗೆ ಕರ್ನಾಟಕ ಘನ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಈ ಕಾಮಗಾರಿಗಳು ಪುಗತಿಯಲ್ಲಿರುತ್ತವೆ ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಕಾರಟಗಿ ತಾಲೂಕಿನ ಕಾರಟಗಿ ಪಟ್ಟಣದಲ್ಲಿ 100 ಹಾಸಿಗೆಗಳ ಆಸ್ಪತ್ರೆಗೆ ಕಲ್ಯಾಣ-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಯೋಜನೆಯಡಿಯಲ್ಲಿ ಅಂದಾಜು ಮೊತ್ತ 42 ಕೋಟಿ ರೂ.ಗಳಲ್ಲಿ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೇರವೇರಿಸಲಾಗಿದೆ. ಕುಷ್ಟಗಿ ತಾಲೂಕಿನ ಹಿರೇಬನ್ನಿಗೊಳ ಮತ್ತು ಲಿಂಗದಹಳ್ಳಿ ಗ್ರಾಮಗಳಲ್ಲಿ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಕ್ಕೆ ಕಲ್ಯಾಣ-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಯೋಜನೆಯಡಿಯಲ್ಲಿ ಅಂದಾಜು ಮೊತ್ತ 8 ಕೋಟಿ ರೂ.ಗಳಲ್ಲಿ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ತಾಯಿ ಆರೋಗ್ಯ ಕಾರ್ಯಕ್ರಮದಡಿ ಎಪ್ರಿಲ್-2025 ರಿಂದ ಡಿಸೆಂಬರ್-2025 ರವರೆಗೆ ನಾಲ್ಕು ಬಾರಿ ಒಟ್ಟು 15,298 ಗರ್ಭಿಣಿಯರಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಇದಲ್ಲದೇ ಕುಕನೂರು ತಾಲೂಕಿನ ಕುದರಿಮೋತಿ ಹಾಗೂ ಮಸಬಹಂಚಿನಾಳ ಗ್ರಾಮಗಳಲ್ಲಿ ತಲಾ ರೂ.2.50 ಕೋಟಿ ವೆಚ್ಚದಲ್ಲಿ ನೂತನ ಸರಕಾರಿ ಪದವಿ ಪೂರ್ವ ಕಾಲೇಜುಗಳ ಕಟ್ಟಡಗಳು ಕೆ.ಕೆ.ಆರ್.ಡಿ.ಬಿ ಅನುದಾನದಲ್ಲಿ ನಿರ್ಮಾಣಮಾಡಲಾಗಿದೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯಿಂದ 2025-26ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮದಾರರನ್ನು ಉತ್ತೇಜಿಸಲು ಒಂದು ತಿಂಗಳ ಉದ್ಯಮಶೀಲತಾ ತರಬೇತಿ ಹಾಗೂ ಮೊಬೈಲ್ ಕ್ಯಾಂಟೀನ್ ಖರೀದಿಸಲು ರೂ. 5 ಲಕ್ಷಗಳ ಸಹಾಯಧನ ನೀಡಲಾಗಿದೆ. 2025-26ನೇ ಸಾಲಿನ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮದಡಿ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 291 ಅಭ್ಯರ್ಥಿಗಳು, ಪರಿಶಿಷ್ಟ ಪಂಗಡಕ್ಕೆ ಸೇರಿದ 247 ಅಭ್ಯರ್ಥಿಗಳು, ಸರ್ಕಾರಿ ಪ್ರೌಡ ಶಾಲೆಗಳಲ್ಲಿ ಮೊರಾರ್ಜಿ ದೇಸಾಯಿ ಹಾಗೂ ಕ್ರೈಸ್ ವಸತಿ ಶಾಲೆಗಳಲ್ಲಿ 8ನೇ 9ನೇ ಹಾಗೂ 10ನೇ ತರಗತಿಯಲ್ಲಿ ತರಗತಿಯಲ್ಲಿ ಕಲಿಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿಧ್ಯಾರ್ಥಿಗಳಿಗೆ “ಕರ್ನಾಟಕ ದರ್ಶನ” ಪ್ರವಾಸ ಕಾರ್ಯಕ್ರಮವನ್ನು ಆಯೋಜಿಸಲು ಎಸ್.ಸಿ.ಎಸ್.ಪಿ ಯೋಜನೆಯಡಿಯಲ್ಲಿ 291 ಗುರಿಗಳಿಗೆ ರೂ. 17.46 ಲಕ್ಷಗಳು ಹಾಗೂ ಟಿ.ಎಸ್.ಪಿ ಯೋಜನೆಯಡಿ 247 ಗುರಿಗಳಿಗೆ ರೂ. 14.82 ಲಕ್ಷಗಳು ನಿಗದಿಪಡಿಸಿ ಬಿಡುಗಡೆ ಮಾಡಲಾಗಿರುತ್ತದೆ. ಈ ಎಲ್ಲಾ ಯೋಜನೆಗಳನ್ನು ಜಿಲ್ಲೆಯ ಜನತೆಗೆ ತಲುಪಿಸಲು ನಮ್ಮ ಸರ್ಕಾರವು ಯಶಸ್ವಿಯಾಗಿದೆ ಎಂದು ಹೇಳಲು ನನಗೆ ಹರ್ಷವೆನಿಸುತ್ತದೆ ಎಂದರು.
ಈ ದಿನ ನಮ್ಮ ದೇಶಕ್ಕಾಗಿ ಶ್ರಮಿಸಿದ ಅಸಂಖ್ಯಾತ ಮಹನೀಯರ ತ್ಯಾಗ, ಬಲಿದಾನಗಳನ್ನು ಮತ್ತು ಅವರ ಕೊಡುಗೆಗಳನ್ನು ಸ್ಮರಿಸುತ್ತಾ, ನಾವು ಅವರ ಹೆಜ್ಜೆ ಗುರುತಿನಲ್ಲಿ ಮತ್ತು ಸಂವಿಧಾನದ ಆಶಯದಂತೆ ಸಾಗೋಣವೆಂದು, ಈ ದಿನ ಪ್ರತಿಜ್ಞೆ ಮಾಡೋಣ ಹಾಗೂ ಸ್ವಾವಲಂಬಿ ರಾಜ್ಯ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳೊಣ ಎಂದು ಹೇಳುತ್ತಾ, ತಮ್ಮೆಲ್ಲರಿಗೂ ಮತ್ತೊಮ್ಮೆ ಗಣರಾಜ್ಯೋತ್ಸವ ದಿನದ ಶುಭಾಶಯಗಳನ್ನು ತಿಳಿಸುತ್ತಾ ನನ್ನ ಮಾತಿಗೆ ವಿರಾಮ ಹೇಳುತ್ತೇನೆ ಎಂದು ಹೇಳಿದರು.
*ಆಕರ್ಷಕ ಪಥಸಂಚಲನ:* 77ನೇ ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ಪೊಲೀಸ್ ಇಲಾಖೆ, ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕದಳ, ಅರಣ್ಯ ಇಲಾಖೆ, ಭಾರತ ಸೇವಾದಳ, ಎನ್.ಸಿ.ಸಿ, ಭಾರತ್ ಸ್ಕೌಟ್ಸ್ & ಗೈಡ್ಸ್ ತಂಡಗಳು ಜಿಲ್ಲಾ ಕ್ರೀಡಾಂಗಣದಲ್ಲಿ ಆಕರ್ಷಕ ಪಥಸಂಚಲನ ನಡೆಸಿ, ಸಚಿವರಿಗೆ ಗೌರವ ವಂದನೆ ಸಲ್ಲಿಸಿದವು.
*ಸನ್ಮಾನ:* ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ವಿವಿಧ ವಿಭಾಗಗಳಲ್ಲಿ ಭಾಗವಹಿಸಿ, ವಿಜೇತರಾಗಿ ಕೊಪ್ಪಳ ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತಂದ ಕ್ರೀಡಾಪಟುಗಳಿಗೆ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಇತರೆ ಸಾಧಕರಿಗೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
*ಸೌಲಭ್ಯ ವಿತರಣೆ:* ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಿಗೆ ಉಚಿತ ಬಸ್ ಪಾಸ್ಗಳನ್ನು ಹಾಗೂ ಸಾಹಿತಿ, ಕವಿ ಮತ್ತು ಕಲಾವಿದರಿಗೆ ಮಾಸಾಶನ ಮಂಜೂರಾತಿ ಆದೇಶ ಪ್ರತಿಗಳನ್ನು ಸಚಿವರು ವಿತರಣೆ ಮಾಡಿದರು.
*ಸಾಂಸ್ಕೃತಿಕ ಕಾರ್ಯಕ್ರಮ, ಬಹುಮಾನ ವಿತರಣೆ:* ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಭಾಗ್ಯನಗರದ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಮತ್ತು ಕಿಡದಾಳನಲ್ಲಿರುವ ಶಾರದ ಇಂಟರ್ ನ್ಯಾಷ್ನಲ್ ಸ್ಕೂಲ್ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡಿ, ಎಲ್ಲರ ಗಮನ ಸೆಳೆದಿದ್ದು, ಈ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಪಥಸಂಚಲನದಲ್ಲಿ ಭಾಗವಹಿಸಿದ ಇತರೆ ತಂಡಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ, ಸನ್ಮಾನಿಸಲಾಯಿತು.
*ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ:* ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಸಚಿವರು, ಶಾಸಕರು ಮತ್ತು ಸಂಸದರು ಸೇರಿದಂತೆ ಇತರೆ ಜನಪ್ರತಿನಿಧಿಗಳು ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ವೀರಣ್ಣ ಗಡಾದ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ಧಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ್, ಕೊಪ್ಪಳ ತಹಶಿಲ್ದಾರ ವಿಠ್ಠಲ ಚೌಗಲಾ ಮತ್ತು ಇತರೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿಗಳು ಮತ್ತು ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.
****




