Breaking News
ರಾಷ್ಟ್ರೀಯ ನೆಟ್‌ಬಾಲ್ ಸಾಹಿತ್ಯ ಗೊಂಡಬಾಳಗೆ ಚಿನ್ನದ ಗರಿ

ರಾಷ್ಟ್ರೀಯ ನೆಟ್‌ಬಾಲ್ ಸಾಹಿತ್ಯ ಗೊಂಡಬಾಳಗೆ ಚಿನ್ನದ ಗರಿ

Golden feather for National Netball Literature Gondaba

ಕೊಪ್ಪಳ: ಇಲ್ಲಿನ ಶ್ರೀ ಚೈತನ್ಯ ಸಮೂಹ ಸಂಸ್ಥೆಯ ಸ್ವಾಮಿ ವಿವೇಕಾನಂದ ಪದವಿಪೂರ್ವ ವಿಜ್ಞಾನ ಕಾಲೇಜಿನ ದ್ವಿತಿಯ ಪಿಯು ವಿದ್ಯಾರ್ಥಿನಿ ಸಾಹಿತ್ಯ ಮಂಜುನಾಥ ಗೊಂಡಬಾಳ ೧೯ ವರ್ಷದೊಳಗಿನ ಕರ್ನಾಟಕ ತಂಡದಲ್ಲಿ ಆಡಿ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಜಿಲ್ಲೆಗೆ, ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.
ಮಂಗಳೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರದಲ್ಲಿ ಸ್ಕೂಲ್ ಗೇಮ್ಸ್ ಆಫ್ ಇಂಡಿಯಾ, ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮತ್ತು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಎಡಪದವು ಇವರ ಆಶ್ರಯದಲ್ಲಿ ಡಿ. ೨೫ ರಿಂದ ಡಿ. ೨೯ ರವರೆಗೆ ಆಯೋಜನೆಗೊಂಡಿದ್ದ ೧೯ ವರ್ಷದೊಳಗಿನ ಬಾಲಕ ಬಾಲಕಿಯರ ರಾಷ್ಟ್ರೀಯ ನೆಟ್‌ಬಾಲ್ ಕ್ರೀಡಾಕೂಟದಲ್ಲಿ ೧೨ ಜನರ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿ, ಕ್ಯಾಂಪನಲ್ಲಿ ತರಬೇತಿ ಹೊಂದಿ ಕರ್ನಾಟಕದ ಐತಿಹಾಸಿಕ ದಾಖಲೆಯ ಮೊದಲ ಬಾರಿ ಚಿನ್ನದ ಪದಕ ಗೆದ್ದ ತಂಡದಲ್ಲಿದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಇಲ್ಲಿನ ಸಮಾಜ ಸೇವಕರಾದ ಮಂಜುನಾಥ ಜಿ. ಗೊಂಡಬಾಳ ಮತ್ತು ಜ್ಯೋತಿ ಎಂ. ಗೊಂಡಬಾಳ ದಂಪತಿಯ ಪುತ್ರಿ ಬಹುಮುಖ ಪ್ರತಿಭೆ ಕು. ಸಾಹಿತ್ಯ ಎಂ. ಗೊಂಡಬಾಳ ೨೦೨೩-೨೪ ನೇ ಸಾಲಿನ ಬಹುಮುಖ ಪ್ರತಿಭೆ ವಿಭಾಗದಲ್ಲಿ ಸಂಗೀತ, ವೆಸ್ಟರ್ನ್ ನೃತ್ಯ, ಭರತನಾಟ್ಯ ಸೇರಿದಂತೆ ಗಿಟಾರ್ ವಾದನ, ಕೀಬೋರ್ಡ, ಹಾರ್ಮೋನಿಯಂ ನುಡಿಸುವದು, ಮತ್ತು ಮೌಥ್ ಪಿಯಾನೋದಲ್ಲಿ ಪರಿಣತಿಯನ್ನು ಹಾಗೂ ಕ್ರೀಡಾ ಕ್ಷೇತ್ರದ ಸಾಧನೆ ಪರಿಗಣಿಸಿ ರಾಜ್ಯಮಟ್ಟದ ಬಾಲಗೌರವ ಪ್ರಶಸ್ತಿ ಪಡೆದಿದ್ದಳು.
ಕೊಪ್ಪಳಕ್ಕೆ ಮೊದಲ ಸಲಾ ರಾಜ್ಯಮಟ್ಟದ ದಸರಾ ಸಿಎಂ ಕಪ್ ನೆಟ್‌ಬಾಲ್ ಕಂಚಿನ ಪದಕ, ಪೆಂಕಾಕ್ ಸಿಲತ್‌ನಲ್ಲಿ ರಾಜ್ಯ ಮತ್ತು ರಾಷ್ಟಮಟ್ಟದ ಪದಕ ಪಡೆದಿದ್ದು, ಜಂಪ್ ರೋಪ್ ಕ್ರೀಡೆ, ಕರಾಟೆ, ಏರ್‌ರೈಫಲ್‌ನಲ್ಲಿ ಸಹ ತರಬೇತಿ ಹೊಂದುತ್ತಿದ್ದಾಳೆ.
ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ, ಡಿಡಿಪಿಯು ರಾಜೇಶ್ವರಿ, ಪ.ಪೂ. ಶಿಕ್ಷಣ ಇಲಾಖೆಯ ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕ ಶಿವಮಾದಯ್ಯ, ಪ.ಪೂ. ಶಿಕ್ಷಣ ಇಲಾಖೆಯ ರಾಜ್ಯ ಕ್ರೀಡಾ ಸಂಯೋಜಕ ಗೋಪಾಲಗೌಡ, ಕಾರ್ಯಕ್ರಮ ಸಂಘಟಕ ಪ್ರೇಮನಾಥ ಶೆಟ್ಟಿ, ತಂಡದ ಮ್ಯಾನೇಜರ್ ಅಪರ್ಣಾ ಸೇರಿ ಅನೇಕರು ಇದ್ದರು.
ಕೊಪ್ಪಳ ಜಿಲ್ಲೆಯ ಡಿಡಿಪಿಯು ಜಗದೀಶ ಅವರ ಪರವಾಗಿ ಜಿಲ್ಲಾ ಪಪೂ ಕ್ರೀಡಾ ಸಂಯೋಜ ತಿರುಪತಿ ನಾಯಕ, ನೆಟ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ರಜಾಕ್, ಕ್ರೀಡಾ ನಿರ್ದೇಶಕ ಗವಿಸಿದ್ದಪ್ಪ, ಸ್ವಾಮಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಸತೀಶ ಅವರು ಅಭಿನಂದಿಸಿದ್ದಾರೆ.
ರಾಷ್ಟ್ರೀಯ ನೆಟ್ ಬಾಲ್ ವಿಜೇತ ಕರ್ನಾಟಕದ ಬಾಲಕಿಯರ ತಂಡ : ನಿಖಿತಾ, , ಸುಪ್ರಿಯಾ ಹೆಚ್. ಎಸ್., ಸಾಹಿತ್ಯ ಎಂ. ಗೊಂಡಬಾಳ, ಹೇಮಾ ಮನ್ನೂರ, ಹರ್ಷಿತಾ ಎಲ್., ತಪಸ್ಯಾ ಎಸ್. ನಾಯಕ್, ರಕ್ಷಾ, ಸಿಂಚನಾಲಾವಣ್ಯ ಎಂ. ಎನ್., ಲಕ್ಷ್ಮೀ ಮಹಾದೇವ, ಇಂದು ಜಿ., ನಿಸರ್ಗ ಹೆಚ್. ಎಸ್., ನಿತ್ಯಾಶ್ರೀ, ದೀಪ್ತಿ ಹೆಚ್. ಎಸ್., ಸಂದ್ಯಾ, ವಿದ್ಯಾ, ಅನ್ವಿತಾ.

ಜನವರಿ 3ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್‌ವ್ಯೂವ್

ಜನವರಿ 3ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್‌ವ್ಯೂವ್

Walk-in interview in Koppal on January 3rd


ಕೊಪ್ಪಳ ಡಿಸೆಂಬರ್ 30 (ಕರ್ನಾಟಕ ವಾರ್ತೆ): ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಇಂಟರ್‌ವ್ಯೂವ್‌ನ್ನು 2026ರ ಜನವರಿ 3 ರಂದು ಬೆಳಿಗ್ಗೆ 10 ರಿಂದ 1.30ರ ವರೆಗೆ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಎಸ್.ಎಸ್.ಎಲ್.ಸಿ (ಪಾಸ್ ಅಥವಾ ಫೇಲ್), ಪಿಯುಸಿ(ಪಾಸ್ ಅಥವಾ ಫೇಲ್), ಬಿ.ಕಾಂ, ಎಂಕಾಂ,  ಡಿ.ಫಾರ್ಮ್, ಬಿ.ಫಾರ್ಮ್, ಎಮ್.ಫಾರ್ಮ್, ಎಮ್.ಎಸ್‌ಸಿ-ಕೆಮಿಸ್ಟ್ರಿ, ಎಮ್.ಎಸ್‌ಸಿ-ಬಯೋಟೆಕ್, ಎಮ್.ಎಸ್‌ಸಿ-ಮೈಕ್ರೊಬಯೋಲಾಜಿ, ಬಿ.ಎಸ್‌ಸಿ-ಕೆಮಿಸ್ಟ್ರಿ, ಬಿ.ಎಸ್‌ಸಿ-ಬಯೋಟೆಕ್, ಬಿ.ಎಸ್‌ಸಿ-ಮೈಕ್ರೊಬಯೋಲಾಜಿ ಮುಗಿಸಿದ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಆಸಕ್ತಿ 18 ರಿಂದ 32 ವರ್ಷದೊಳಗಿನ ನಿರುದ್ಯೋಗಿ ಪುರಷರು ಮತ್ತು ಮಹಿಳೆಯರು ದೃಢೀಕರಿಸಲಾದ ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು 3 ಪ್ರತಿಗಳೊಂದಿಗೆ ಮತ್ತು ಆಧಾರ ಕಾರ್ಡಿನ ಪ್ರತಿ, ಬಯೋಡಾಟಾ (ರೆಜ್ಯುಮ್) ಹಾಗೂ ಪಾಸ್ ಪೋರ್ಟ್ ಅಳತೆಯ 2 ಭಾವಚಿತ್ರಗಳೊಂದಿಗೆ ಈ ವಾಕ್ ಇನ್ ಇಂಟರ್‌ವ್ಯೂವನಲ್ಲಿ ಭಾಗವಹಿಸಿ, ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವಾಸೋದ್ಯಮ ಇಲಾಖೆಯಿಂದ ಕೌಶಲ್ಯಾಭಿವೃದ್ಧಿ ತರಬೇತಿ: ಮರು ಅರ್ಜಿ ಆಹ್ವಾನ

ಪ್ರವಾಸೋದ್ಯಮ ಇಲಾಖೆಯಿಂದ ಕೌಶಲ್ಯಾಭಿವೃದ್ಧಿ ತರಬೇತಿ: ಮರು ಅರ್ಜಿ ಆಹ್ವಾನ

Skill Development Training by Department of Tourism: Re-Application Invitation

ಕೊಪ್ಪಳ ಡಿಸೆಂಬರ್ 30, (ಕರ್ನಾಟಕ ವಾರ್ತೆ): ಪ್ರವಾಸೋದ್ಯಮ ಇಲಾಖೆಯಿಂದ ಎಸ್.ಸಿ.ಎಸ್.ಪಿ., ಟಿ.ಎಸ್.ಪಿ. ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ, ಅತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗೆ ಮರು ಅರ್ಜಿ ಆಹ್ವಾನಿಸಲಾಗಿದೆ.
ಪ್ರವಾಸೋದ್ಯಮ, ಆತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು 2024-25ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ. ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 292 ಅಭ್ಯರ್ಥಿಗಳಿಗೆ ಮತ್ತು ಪರಿಶಿಷ್ಟ ಪಂಗಡದ 162 ಅಭ್ಯರ್ಥಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಮೈಸೂರಿನ ಫುಡ್ ಕ್ರಾಫ್ಟ್ ಇನ್‌ಸ್ಟಿಟ್ಯೂಟ್ ವಿಷಯದ ಬಗ್ಗೆ ಹಾಗೂ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ರವರ ಮೂಲಕ  ವಸತಿ ರಹಿತ ಕಾರ್ಯಕ್ರಮವನ್ನ ಜಾರಿಗೂಳಿಸಲು ಉದ್ದೇಶಿಸಲಾಗಿರುತ್ತದೆ.
ನಾಲ್ಕು ತಿಂಗಳ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲಾಗುವುದು. ತರಬೇತಿಗಾಗಿ ಅಭ್ಯರ್ಥಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು, 20 ರಿಂದ 45 ವರ್ಷ ವಯೋಮಿತಿಯಲ್ಲಿರಬೇಕು. 10ನೇ ತರಗತಿ ಉತ್ತೀರ್ಣರಾದವರಿಗೆ ಫುಡ್ & ಬೆವರೇಜ ಸರ್ವಿಸ್ ಸ್ಟಿವರ್ಡ್ ತರಬೇತಿ, 8ನೇ ತರಗತಿ ಉತ್ತೀರ್ಣರಾದವರಿಗೆ ಮಲ್ಟಿ ಕುಸನ್ ಕುಕ್ ತರಬೇತಿ ಹಾಗೂ 5ನೇ ತರಗತಿ ಉತ್ತೀರ್ಣರಾದವರಿಗೆ ರೂಂ ಅಟೆಂಡೆAಟ್ ತರಬೇತಿ ನೀಡಲಾಗುವುದು.
ಆಸಕ್ತರು ಕಛೇರಿ ವೇಳೆಯಲ್ಲಿ ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, 2ನೇ ಮಹಡಿ, ಜಿಲ್ಲಾಡಳಿತ ಭವನ, ಹೊಸಪೇಟೆ ರಸ್ತೆ, ಕೊಪ್ಪಳ ಇಲ್ಲಿಂದ ಅರ್ಜಿಯನ್ನು ಉಚಿತವಾಗಿ ಪಡೆದು ಜನವರಿ 18 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಛೇರಿಗೆ ಭೇಟಿ ನೀಡಬಹುದು ಹಾಗೂ ದೂರವಾಣಿ ಸಂಖ್ಯೆ: 08539-225566 ಗೆ ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟ

ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟ

Karnataka Legislative Council publishes final voter list for North East Teachers' Constituency

ಕೊಪ್ಪಳ ಡಿಸೆಂಬರ್ 30 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿಗಳು ಹಾಗೂ ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ ಡಾ. ಸುರೇಶ್ ಬಿ ಇಟ್ನಾಳ ಅವರು ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, ಅರ್ಹತಾ ದಿನಾಂಕ: 01.11.2025 ಕ್ಕೆ ಅನ್ವಯಿಸುವಂತೆ ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಸಿದ್ದಪಡಿಸಿಕೊಳ್ಳಲು ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿತ್ತು. ಅದರಂತೆ, ದಿನಾಂಕ: 25.11.2025 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿ ದಿನಾಂಕ: 25.11.2025 ರಿಂದ 10.12.2025 ರವರೆಗೆ ಸ್ವೀಕೃತವಾಗಿರುವ ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇಗೊಳಿಸಲಾಗಿ ಅಂತಿಮ ಮತದಾರರ ಪಟ್ಟಿಯನ್ನು ದಿನಾಂಕ: 30.12.2025 ರಂದು ಪ್ರಚುರಪಡಿಸಲಾಗಿರುತ್ತದೆ. ಈ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯ, ಸಹಾಯಕ ಆಯುಕ್ತರ ಕಾರ್ಯಾಲಯ, ಕೊಪ್ಪಳ ಹಾಗೂ ಜಿಲ್ಲೆಯ ಎಲ್ಲಾ ತಹಶೀಲ್ದಾರರ ಕಾರ್ಯಾಲಯಗಳಲ್ಲಿ ವಿಕ್ಷೀಸಬಹುದಾಗಿರುತ್ತದೆ. ಅಲ್ಲದೇ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲೆಯ ವೆಬ್‌ಸೈಟ್ https://koppal.nic.in/en/election/ ನಲ್ಲಿ ವೀಕ್ಷಿಸಬಹುದಾಗಿರುತ್ತದೆ.  ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿಯಲ್ಲಿಯಲ್ಲಿ ನೋಂದಣಿಯಾಗಿರುವ ಮತದಾರರುಗಳ ವಿವರದಂತೆ ಗಂಗಾವತಿ, ಕನಕಗಿರಿ, ಕಾರಟಗಿ, ಕುಷ್ಟಗಿ, ಕುಕನೂರು, ಯಲಬುರ್ಗಾ ಹಾಗೂ ಕೊಪ್ಪಳ ತಾಲ್ಲೂಕುಗಳು ಸೇರಿ 1805 ಪುರಷ ಮತದಾರರು, 857 ಮಹಿಳಾ ಮತದಾರರು ಒಳಗೊಂಡು ಜಿಲ್ಲೆಯಲ್ಲಿ ಒಟ್ಟು 2662 ಮತದಾರರಿದ್ದಾರೆ.

ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯಲ್ಲಿ ಯಾರದರೂ ಅರ್ಹ ಶಿಕ್ಷಕ ಮತದಾರರ ಹೆಸರು ನೋಂದಣಿಯಾಗದಿದ್ದಲ್ಲಿ, ಇದೊಂದು ನಿರಂತರ ನೋಂದಣಿ ಪ್ರಕ್ರೀಯೆಯಾಗಿರುವ ಹಿನ್ನೆಲೆಯಲ್ಲಿ, ಅರ್ಹ ಶಿಕ್ಷಕ ಮತದಾರರು ನಮೂನೆ-19 ರೊಂದಿಗೆ ಅವಶ್ಯಕ ದಾಖಲೆಗಳನ್ನು ಸಂಬಂಧಪಟ್ಟ ತಹಶೀಲ್ದಾರ್ ರವರ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಕೊಲೆಗಡುಕರಿಗೆ ಉಗ್ರ ಶಿಕ್ಷೆಗೆ ಗುರುಪಡಿಸಲು ಒತ್ತಾಯ

ಕೊಲೆಗಡುಕರಿಗೆ ಉಗ್ರ ಶಿಕ್ಷೆಗೆ ಗುರುಪಡಿಸಲು ಒತ್ತಾಯ

Demand for severe punishment for murderers


ಗಂಗಾವತಿ: ಹುಬ್ಬಳ್ಳಿಯ ಇನಾಮ ವೀರಾಪುರ ಗ್ರಾಮದ ದಲಿತ ಯುವಕನನ್ನು ಪ್ರೀತಿಸಿ
ಮದುವೆಯಾಗಿದ್ದ ಗರ್ಭಿಣಿ ಮಾನ್ಯ ಪಾಟೀಲ್ ಎನ್ನುವ ಯುವತಿಯನ್ನು ಆಕೆಯ
ಕುಟುಂಬಸ್ಥರೆ ಕೊಲೆ ಮಾಡಿದ್ದು ನಾಗರೀಕ ಸಮಾಜ ತಲೆತಗ್ಗಿಸುವ ಸಂಗತಿಯಾಗಿದ್ದು,
ಕೂಡಲೆ ಕೊಲೆಗೆಡುಕರನ್ನು ಉಗ್ರ ಶಿಕ್ಷೆಗೆ ಗುರಿಪಡಿಸಬೇಕೆಂದು ಅಖಿಲ ಭಾರತ
ಮಾದಿಗ ದಂಡೋರಾ ಗಂಗವತಿ ತಾಲೂಕಾ ಸಮಿತಿ ಗಂಗವತಿ ತಹಶೀಲ್ದಾರ್ ಮೂಲಕ
ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ದಲಿತ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು, ಯುವಕ ವಿವೇಕಾನಂದ ಇವರಿಗೆ
ಸರಕಾರಿ ಉದ್ಯೋಗ ನೀಡಬೇಕು, ನ್ಯಾಯಯುತ ಪರಿಹಾರ ಸರಕಾರ ನೀಡಬೇಕು,
ಕೊಲೆಗೆಡುಕು ಪ್ರಕಾಶ್ ಪಾಟೀಲ್ ಇತರರಿಗೆ ಕಠಿಣ ಶಿಕ್ಷೆ ನೀಡಬೇಕು, ರಾಜ್ಯದಾದ್ಯಂತ
ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕೆಂದು ಮನವಿ
ಮಾಡಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಕನಕಪ್ಪ ದೊಡ್ಡಮನಿ, ಕೊಪ್ಪಳ ಜಿಲ್ಲಾ
ಉಪಾಧ್ಯಕ್ಷ ಶಿವಪ್ಪ ಸಿದ್ದಾಪುರ, ಪದಾಧಿಕಾರಿಗಳಾದ ಗುಂಡಪ್ಪ ನೀಲೋಗಲ್,
ಯಮನೂರಪ್ಪ ಗೋನಾಳ, ರಮೇಶ್ ಢಣಾಪುರ ಹಾಗು ಯಮನೂರಪ್ಪ
ಚುಕ್ಕಾಡಿ ಇತರರಿದ್ದರು.

ಕೈಯಲ್ಲಿ ಲಾಠಿ,ಬಾಯಲ್ಲಿ ಬಸವಣ್ಣ:ನಿಂಗಪ್ಪ ಪಿರೋಜಿ

ಕೈಯಲ್ಲಿ ಲಾಠಿ,ಬಾಯಲ್ಲಿ ಬಸವಣ್ಣ:
ನಿಂಗಪ್ಪ ಪಿರೋಜಿ

Baton in hand, Basavanna in mouth: Ningappa Piroji


ಮೂಡಲಗಿ:ಡಿ,೩೦-ಪಂಚಮಸಾಲಿ ಸಮಾಜದ ಮೇಲೆ ಲಾಠಿ ನಡೆಸಿದ, ಕೈಯಿಂದಲೇವಿಜಯಪುರದಲ್ಲಿ ರಾಣಿ ಚೆನ್ನಮ್ಮಳಪುತ್ತಳಿಅನಾವರಣಮಾಡುತ್ತಿರೋದುಗೌರವವಲ್ಲ, ಶುದ್ಧ ದ್ವಂದ್ವ ರಾಜಕಾರಣ.

ಬೆಳಗಾವಿಯಲ್ಲಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಸಮಾಜದ ಮೇಲೆ ಪೊಲೀಸರ ಮೂಲಕ ಮಾರಣಾಂತಿಕ ಹಲ್ಲೆ (ಲಾಠಿಚಾರ್ಜ್ )ನಡೆಸಿದ ಸಿದ್ದರಾಮಯ್ಯ ಸರ್ಕಾರದ ಮುಖ್ಯಮಂತ್ರಿ ಕೈಯಿಂದ,
ವಿಜಯಪುರದಲ್ಲಿ ರಾಣಿ ಚೆನ್ನಮ್ಮಳ ಪುತ್ತಳಿ ಅನಾವರಣ ಮಾಡಿಸುವುದು ದ್ವಂದ್ವ, ನಾಟಕ ಮತ್ತು ಜನವಂಚನೆಯ ಪರಮಾವಧಿಯಾಗಿದೆ.

ಈ ಕಾಂಗ್ರೆಸ್ ಸರ್ಕಾರಕ್ಕೆ
ಕಿತ್ತೂರ ಚನ್ನಮ್ಮಳ, ಸಂಗೊಳ್ಳಿ ರಾಯಣ್ಣ, ಅಂಬಿಗರ ಚೌಡಯ್ಯ ಸಮಾಜಗಳ ಮತಗಳು ಬೇಕು
ಆದರೆ ಅವರ ಹಕ್ಕು, ಗೌರವ ಮತ್ತು ಬದುಕಿನ ಪ್ರಶ್ನೆ ಬಂದಾಗ ಸರ್ಕಾರ ಸಂಪೂರ್ಣ ಮೌನ ವಹಿಸುತ್ತದೆ.

ಇದು ಸ್ಪಷ್ಟವಾಗಿ ವೋಟ್ ಬ್ಯಾಂಕ್ ರಾಜಕಾರಣವಲ್ಲದೇ ಮತ್ತೇನು?
ಬಸವಣ್ಣನವರ ತತ್ವಗಳನ್ನು ವೇದಿಕೆಯಲ್ಲಿ ಉಚ್ಚರಿಸುವ ಕಾಂಗ್ರೆಸ್ ಸರ್ಕಾರ,
ಅದೇ ಬಸವಣ್ಣನವರ ಅನುಯಾಯಿಗಳು ಇಂದಿನ ಕಾಲದ ಅಗತ್ಯಕ್ಕೆ ತಕ್ಕಂತೆ
ಮೀಸಲಾತಿ ಹಕ್ಕು ಕೇಳಿದರೆ,
ಅದನ್ನು ಸಂವಿಧಾನ ವಿರೋಧಿ ಎಂದು ಮುದ್ರೆ ಹೊಡೆದು
ಲಾಠಿ, ದಮನ ಮತ್ತು ದೌರ್ಜನ್ಯದಿಂದ ಉತ್ತರ ನೀಡುತ್ತದೆ.

ಕೇಂದ್ರ ಸರ್ಕಾರ ನೀಡಿರುವ ಅಂಬಿಗರ ಚೌಡಯ್ಯ ಸಮಾಜದ ಎಸ್ ಟಿ (ST) ಮೀಸಲಾತಿಗೆ ರಾಜ್ಯ ಸರ್ಕಾರ ತೊಂದರೆ ನೀಡುತ್ತಿರುವುದೇಕೆ?

ಕುರುಬ ಸಮುದಾಯದ ಎಸ್ ಟಿ ಮೀಸಲಾತಿಗೂ ಇನ್ನೂ ಶಿಫಾರಸು ಮಾಡದಿರುವುದು ಏಕೆ?

ಇದು ಬಸವಣ್ಣನವರ ತತ್ವವೇ?
ಇದು ಸಾಮಾಜಿಕ ನ್ಯಾಯವೇ?
ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾಹೇಬರೇ,
ನೀವು ಹೇಳುವ ಬಸವಣ್ಣನವರ ಅನುಯಾಯಿಗಳೇ
ಕಾಯಕನಿಷ್ಠ ಲಿಂಗಾಯತ ರೈತಾಪಿ ವರ್ಗ.
ಆದರೆ ನಿಮ್ಮ ಸರ್ಕಾರದ ನೀತಿಗಳಿಂದ
ರೈತರ ಹೊಲಗಳು ಹರಾಜಾಗುತ್ತಿವೆ
ಬೆಳೆದ ಬೆಳೆಗೆ ಬೆಲೆ ಇಲ್ಲ
ಕೆಲಸಕ್ಕೆ ಕೂಲಿ ಇಲ್ಲ
ಬದುಕು ದಿನೇ ದಿನೇ ಅಸಹನೀಯವಾಗುತ್ತಿದೆ
ನಮ್ಮ ಸಮಾಜದಲ್ಲಿ ಯಾರೋ ನಾಲ್ಕು ಜನ ರಾಜಕೀಯವಾಗಿ ಬೆಳೆದಿರಬಹುದು.

ಆದರೆ 99% ಬಸವಣ್ಣನವರ ಅನುಯಾಯಿಗಳು ನಿಮ್ಮ ಸರ್ಕಾರದ ತಪ್ಪು ನೀತಿಗಳಿಂದ ದಿಕ್ಕುತೋಚದೆ ನರಳುತ್ತಿದ್ದಾರೆ.
ಬಸವಣ್ಣನವರ ಹೆಸರನ್ನು ಕೇವಲ ರಾಜಕೀಯ ಲಾಭಕ್ಕೆ ಬಳಸುವುದನ್ನು ತಕ್ಷಣ ನಿಲ್ಲಿಸಿ.
ಬಾಯಲ್ಲಿ ಬಸವಣ್ಣ, ಕೈಯಲ್ಲಿ ಲಾಠಿ

ಈ ದ್ವಂದ್ವ ನೀತಿಗೆ ರಾಜ್ಯದ ಜನತೆ ಸಾಕ್ಷಿಯಾಗಿದೆ.

ಈ ಹಿನ್ನೆಲೆಯಲ್ಲೇ ಸ್ಪಷ್ಟವಾಗಿ ಹೇಳುತ್ತೇವೆ: ಸಿದ್ಧರಾಮಯ್ಯ ಸರ್ಕಾರದ ಮುಖ್ಯಮಂತ್ರಿಯವರು ರಾಣಿ ಚೆನ್ನಮ್ಮಳ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಹಾಜರಾಗುವದಾದರೆ,
ಲಿಂಗಾಯತ ಸಮುದಾಯದ ಅನುಯಾಯಿಗಳು ಹಾಗೂ ಸ್ವಾಮೀಜಿಗಳು ಇಂತಹ ದ್ವಂದ್ವ ರಾಜಕಾರಣದ ವೇದಿಕೆಗೆ ಹೋಗಬಾರದು.
ಇದು ಗೌರವದ ಪ್ರಶ್ನೆ ರಾಜಕೀಯ ಪ್ರದರ್ಶನಕ್ಕೆ ಅವಕಾಶ ನೀಡುವ ವಿಚಾರವಲ್ಲ.
ಬಸವಣ್ಣನವರ ತತ್ವಗಳನ್ನು ಆಚರಣೆಯಲ್ಲಿ ತೋರಿಸಲು ಸಾಧ್ಯವಿಲ್ಲದಿದ್ದರೆ,
ಅವರ ಹೆಸರನ್ನು ಉಚ್ಚರಿಸುವ ನೈತಿಕ ಹಕ್ಕನ್ನೇ ಸಿದ್ದರಾಮಯ್ಯ ಸರ್ಕಾರ ಕಳೆದುಕೊಂಡಿದೆ.
ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು
ಬಸವಣ್ಣನವರ ಅನುಯಾಯಿಗಳ
ಹಕ್ಕು, ಗೌರವ ಮತ್ತು ಬದುಕಿನ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಬೇಕು.
ಇಲ್ಲವಾದರೆ ಈ ದಮನಕಾರಿ ಆಡಳಿತಕ್ಕೆ
ಜನತೆ ಹೋರಾಟದ ಮೂಲಕ ತಕ್ಕ ಉತ್ತರ ನೀಡುವುದು ಖಚಿತ.

ಶರಣ ಶ್ರೀ ನಿಂಗಪ್ಪ ತಿ ಪಿರೋಜಿ
ಅಧ್ಯಕ್ಷರು
ಬೆಳಗಾವಿ ಜಿಲ್ಲಾ ಪಂಚಮಸಾಲಿ ಸಮಾಜ

ಉಳೇನೂರು ಗ್ರಾಮದಲ್ಲಿ  ಮಧ್ಯಪಾನ, ಮಟ್ಕಾ ಮತ್ತು ಇಸ್ಪೇಟ್ ನಿಷೇಧಿಸುವ ದಿಟ್ಟ ನಿರ್ಧಾರ ಕೈಗೊಂಡ ಊರಿನ ನಾಗರಿಕರು.
The citizens of Ulenur village took the bold decision to ban alcohol, matka, and ispet.

ಉಳೇನೂರು ಗ್ರಾಮದಲ್ಲಿ  ಮಧ್ಯಪಾನ, ಮಟ್ಕಾ ಮತ್ತು ಇಸ್ಪೇಟ್ ನಿಷೇಧಿಸುವ ದಿಟ್ಟ ನಿರ್ಧಾರ ಕೈಗೊಂಡ ಊರಿನ ನಾಗರಿಕರು.

ವರದಿ:ಗಂಗರಾಜ ಅಳ್ಳಳ್ಳಿ

ಕಾರಟಗಿ: ತಾಲ್ಲೂಕಿನ  ಉಳೇನೂರು ಗ್ರಾಮದಲ್ಲಿ ಗ್ರಾಮದಲ್ಲಿ ಮಧ್ಯಪಾನ, ಮಟ್ಕಾ ಮತ್ತು ಇಸ್ಪೇಟ್ ನಿಷೇಧಿಸುವ ದಿಟ್ಟ ನಿರ್ಧಾರ ಕೈಗೊಂಡ ಊರಿನ ನಾಗರಿಕರು.

ಉಳೇನೂರಿನಲ್ಲಿ ಕಳೆದ ಭಾನುವಾರ ಗ್ರಾಮ ಸಭೆಯನ್ನು ನಡೆಸಿದ ಗ್ರಾಮಸ್ಥರು ಸಭೆಯಲ್ಲಿ ಮಧ್ಯಪಾನವನ್ನು ಯಾರು ಕೂಡ ಊರಲ್ಲಿ ಮಾರ ಕೂಡದು ಮತ್ತು ಮಟ್ಕಾ ಹಾಗೂ ಇಸ್ಪೇಟ್ ಗಳನ್ನು ಆಡಕೂಡದು. ಹಾಗೇ ಗ್ರಾಮಸ್ಥರು ಯಾರು ಸಹ ಇಂತಹ ದುಶ್ಚಟ ಗಳನ್ನು ಬೆಂಬಲಿಸುವ ಕಾರ್ಯವನ್ನು ಮಾಡಬಾರದು ಎಂದು ಉಳೇನೂರು ಗ್ರಾಮದ ಹಿರಿಯರು ಮತ್ತು ಬಹುತೇಕ ಜನರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಟ್ಕಾ ಹಾಗೂ ಇಸ್ಪೇಟ್ ಆಟದಿಂದ ಅನೇಕ ಕುಟುಂಬಗಳು ಬೀದಿ ಪಾಲಾಗಿವೆ ಇನ್ನೂ ಮಧ್ಯಪಾನ ದುಶ್ಚಟಕ್ಕೆ ಹಲವರು ದಾಸರಾಗುತ್ತಿದ್ದು ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ
ಸಿಲುಕಿವೆ. ಹೀಗಾಗಿ ಗ್ರಾಮದ ಲ್ಲಿ ಮುಂದಿನ ದಿನಗಳಲ್ಲಿ ಇಂತಹ ದುಶ್ಚಟಕ್ಕೆ ಯಾರೊಬ್ಬರೂ ಸಹ ಬಲಿಯಾಗಬಾರದು ಗ್ರಾಮಸ್ಥರೆಲ್ಲರು ನೆಮ್ಮದಿಯ ಜೀವನ ನಡೆಸಬೇಕು. ಇದಕ್ಕಾಗಿ ನಾವೆಲ್ಲರೂ ಈ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಭಗತ್ ಸಿಂಗ್ ನೇತಾಜಿ ಮುಂತಾದ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡ ಅನೇಕ ಯುವಕರು ಈ ಕಾರ್ಯಕ್ಕೆ ಮುಂದೆ ಬಂದು ಊರಿನ ಹಿರಿಯರ ಸಮ್ಮುಖದಲ್ಲಿ ಎಲ್ಲಾ ಊರಿನ ಜನರ ಸಭೆಯನ್ನು ಸೇರಿಸಿ ಈ ನಿರ್ಧಾರವನ್ನು ಕೈಗೊಂಡರು.


ಗಂಗರಾಜ ಅಳ್ಳಳ್ಳಿ
ಉಳೆನೂರು ಗ್ರಾಮಸ್ಥರು.

ಕೊಪ್ಪಳ:ಮರ್ಯಾದೆ ಹತ್ಯೆ ಸಮಾಜದ ಕಳಂಕ; ಯುವಜನತೆ ಕ್ರಾಂತಿಕಾರಿ ಮೌಲ್ಯಗಳನ್ನು ಅಳವಡಿಸಿಕೊಳ್ಳಲು : ಎಸ್‌ಯುಸಿಐ(ಸಿ) ಮುಖಂಡ ರಾಮಾಂಜನಪ್ಪ ಆಲ್ದಳ್ಳಿ ಕರೆ”

ಕೊಪ್ಪಳ:ಮರ್ಯಾದೆ ಹತ್ಯೆ ಸಮಾಜದ ಕಳಂಕ; ಯುವಜನತೆ ಕ್ರಾಂತಿಕಾರಿ ಮೌಲ್ಯಗಳನ್ನು ಅಳವಡಿಸಿಕೊಳ್ಳಲು : ಎಸ್‌ಯುಸಿಐ(ಸಿ) ಮುಖಂಡ ರಾಮಾಂಜನಪ್ಪ ಆಲ್ದಳ್ಳಿ ಕರೆ”

Koppal: Honor killings are a stigma on society; Youth should adopt revolutionary values: SUCI(C) leader Ramanjanappa Aldalli calls

ಕೊಪ್ಪಳ:  ಕೊಪ್ಪಳ ಹಾಗೂ ವಿಜಯನಗರ ಜಿಲ್ಲಾಮಟ್ಟದ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (AIDYO) ವತಿಯಿಂದ ಡಿ.27- 28ರಂದು ಇಲ್ಲಿನ ಮಳೆ–ಮಲ್ಲೇಶ್ವರ ಬೆಟ್ಟದಲ್ಲಿ ಆಯೋಜಿಸಿದ ಎರಡು ದಿನಗಳ ಯುವಜನ  ಶಿಬಿರದ ಸಮಾರೋಪ ಕಾರ್ಯಕ್ರಮ ನಡೆಯಿತು.

ಶಿಬಿರಾರ್ಥಿಗಳನ್ನು ಉದ್ದೇಶಿಸಿ  “ಯುವಜನರ ಮುಂದಿರುವ ಕರ್ತವ್ಯಗಳು” ಎಂಬ ವಿಷಯದ ಕುರಿತು ಮಾತನಾಡಿದ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಸೆಕ್ರೆಟೇರಿಯಟ್ ಸದಸ್ಯ ರಾಮಾಂಜನಪ್ಪ ಅಲ್ದಳ್ಳಿ ಅವರು, 21ನೇ ಶತಮಾನದಲ್ಲಿಯೂ ಮರ್ಯಾದೆ ಹತ್ಯೆಗಳಂತಹ ಅಮಾನುಷ ಘಟನೆಗಳು ನಡೆಯುತ್ತಿರುವುದು ಅತ್ಯಂತ ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು. ಇಂತಹ ಘಟನೆಗಳು ಸಮಾಜದ ಆರೋಗ್ಯಕರ ಬೆಳವಣಿಗೆಯ ಸೂಚಕವಲ್ಲ. ಇತ್ತೀಚಿನ ದಿನಗಳಲ್ಲಿ ದ್ವೇಷ ಭಾಷಣಗಳು ಹೆಚ್ಚುತ್ತಿರುವುದು ಕೂಡ ಆತಂಕಕಾರಿ ಪರಿಸ್ಥಿತಿಯಾಗಿದೆ.  ಕೆಪಿಎಸ್ ಮ್ಯಾಗ್ನೆಟ್ ಸ್ಕೂಲ್ ತೆರೆಯುವ ಹೆಸರಿನಲ್ಲಿ ಈಗಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಯುತ್ತಿರುವುದರ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. 

ಅನ್ಯಾಯ ಮತ್ತು ಅಸತ್ಯಗಳ ವಿರುದ್ಧ ಧ್ವನಿ ಎತ್ತಿ ಸಾಮಾಜಿಕ ಬದಲಾವಣೆಯನ್ನು ಬಯಸುವವರೇ ನಿಜವಾದ ಯುವಕರು. ಯೌವನವನ್ನು ಕೇವಲ ವಯಸ್ಸಿನ ಆಧಾರದ ಮೇಲೆ ಮಾತ್ರ ಪರಿಗಣಿಸದೆ, ಮಾನಸಿಕ, ದೈಹಿಕ, ರಾಜಕೀಯ, ಸಾಮಾಜಿಕ ಹಾಗೂ ವೈಚಾರಿಕವಾಗಿ ಜಾಗೃತರಾಗಬೇಕು. ವೈಚಾರಿಕತೆ ಮತ್ತು ಜ್ಞಾನವನ್ನು ಬೆಳೆಸಿಕೊಂಡಾಗ ಮಾತ್ರ ಯುವಕರು ಪ್ರಜ್ಞೆವುಳ್ಳವರಾಗಿ ರೂಪುಗೊಳ್ಳಲು ಸಾಧ್ಯ ಎಂದು ಅವರು ಕರೆ ನೀಡಿದರು.

ನಾವು ಬದುಕುತ್ತಿರುವ ಸಮಾಜಕ್ಕೆ ಏನು ಕೊಡುಗೆ ನೀಡುತ್ತಿದ್ದೇವೆ ಮತ್ತು ಸಮಾಜದಿಂದ ಏನು ಪಡೆದುಕೊಳ್ಳುತ್ತಿದ್ದೇವೆ ಎಂಬ ಅರಿವು ಪ್ರತಿಯೊಬ್ಬರಲ್ಲೂ ಇರಬೇಕು. ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಮತ್ತು ಸೌಲಭ್ಯಗಳು ಅನೇಕ ಮಹಾನ್ ವ್ಯಕ್ತಿಗಳ ತ್ಯಾಗ, ಹೋರಾಟ ಮತ್ತು ಬಲಿದಾನಗಳ ಫಲವಾಗಿವೆ. ಆ ತ್ಯಾಗಗಳಿಂದ ದೊರೆತ ಹಕ್ಕುಗಳನ್ನು ಕೇವಲ ಅನುಭವಿಸುವುದಕ್ಕೆ ಸೀಮಿತಗೊಳಿಸದೇ, ಸಮಾಜಕ್ಕೆ ಮರಳಿ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ಹೇಳಿದರು.

ಭಗತ್ ಸಿಂಗ್ ಅವರ ಮದುವೆ ಕುರಿತ ಪ್ರಸಂಗವನ್ನು ಉಲ್ಲೇಖಿಸಿದ ಅವರು, ವೈಯಕ್ತಿಕ ಜೀವನಕ್ಕಿಂತ ದೇಶ ಮತ್ತು ಸಮಾಜದ ಮುಕ್ತಿಯನ್ನೇ ಮೊದಲ ಆದ್ಯತೆಯಾಗಿ ಕಂಡ ಕ್ರಾಂತಿಕಾರಿಗಳ ಜೀವನ ಯುವಕರಿಗೆ ಆದರ್ಶವಾಗಬೇಕು ಎಂದರು. ನಿಜವಾದ ಪ್ರೀತಿ ಮನುಷ್ಯನನ್ನು ಕುಗ್ಗಿಸುವುದಲ್ಲ, ಅವನನ್ನು ಮೇಲಕ್ಕೆತ್ತಿ ಉನ್ನತ ಮಾನವೀಯತೆಯತ್ತ ಕರೆದೊಯ್ಯುತ್ತದೆ ಎಂದು ಹೇಳಿದರು.

ಭಗತ್ ಸಿಂಗ್, ಸುಖದೇವ, ಖುದಿರಾಮ್ ಬೋಸ್, ಸೂರ್ಯಸೇನ್, ಮದನ್ ಲಾಲ್ ಧಿಂಗ್ರಾ ಸೇರಿದಂತೆ ಕ್ರಾಂತಿಕಾರಿಗಳ ತ್ಯಾಗ ಮತ್ತು ಹೋರಾಟಗಳು ಇಂದಿನ ಯುವಜನತೆಗೆ ದಾರಿ ತೋರಿಸುವ ದೀಪವಾಗಬೇಕು. ಭಗತ್ ಸಿಂಗ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ವಿಚಾರಧಾರೆಯ ಉತ್ತರಾಧಿಕಾರಿಯಾಗಿ ಎಐಡಿವೈಒ (AIDYO) ಸಂಘಟನೆ ಕಾರ್ಯನಿರ್ವಹಿಸುತ್ತಿದ್ದು, ಸಂಘಟನೆಯನ್ನು ಬಲಿಷ್ಠಗೊಳಿಸಿ ಅದರ ವಿಚಾರಧಾರೆಯನ್ನು ಆಳವಾಗಿ ಅರ್ಥಮಾಡಿಕೊಳ್ಳಬೇಕಿದೆ ಎಂದು ಹೇಳಿದರು. ಸಮಾಜ ಪರಿವರ್ತನೆಯಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.

ಶಿಬಿರದ ಮೊದಲ ಗೋಷ್ಠಿಯಲ್ಲಿ “ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳಿಗೆ ಜನಸಂಖ್ಯಾ ಸ್ಫೋಟವೇ ಕಾರಣವೇ?” ಎಂಬ ವಿಷಯದ ಕುರಿತು ಎಐಡಿವೈಒ  ಸಂಘಟನೆಯ ರಾಜ್ಯ ಸೆಕ್ರೆಟೇರಿಯಟ್ ಸದಸ್ಯ ಕಾ. ಭವಾನಿ ಶಂಕರ್ ಎಸ್. ಗೌಡ ಅವರು ಚರ್ಚೆ ನಡೆಸಿದರು.

 “ಯುವಜನರಿಗೆ ಭಗತ್ ಸಿಂಗ್ ಅವರ ಕೊನೆಯ ಕರೆ” ಎಂಬ ವಿಷಯದ  ಎರಡನೇಯ ಚರ್ಚಾಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಚನ್ನಬಸವ ಜಾನೇಕಲ್ ಅವರು ಮಾತನಾಡಿದರು.

ಶಿಬಿರದಲ್ಲಿ ಅಶೋಕನ ಶಿಲಾಶಾಸನದತ್ತ ಚಾರಣ, ಜೈಭೀಮ್ ಸಿನಿಮಾ ಪ್ರದರ್ಶನ ಮತ್ತು ಸಂವಾದ, ಪ್ರಚಲಿತ ವಿಷಯಗಳ ಕುರಿತು ಚರ್ಚಾಗೋಷ್ಠಿಗಳು ಯಶಸ್ವಿಯಾಗಿ ನಡೆದವು.

ಶಿಬಿರದಲ್ಲಿ ಹೊಸಪೇಟೆಯ ಭರತ ಮತ್ತು ಸಂಗಡಿಗರಿಂದ ರಾಗ–ತಾಳ–ತಂತಿ ಮ್ಯೂಸಿಕ್ ಬ್ಯಾಂಡ್  ತಂಡದಿಂದ ಹೋರಾಟದ ಹಾಡುಗಳನ್ನು ಪ್ರಸ್ತುತಪಡಿಸಿ, ಶಿಬಿರಾರ್ಥಿಗಳಲ್ಲಿ ಅಪಾರ ಉತ್ಸಾಹ ಮತ್ತು ಚೈತನ್ಯ ಮೂಡಿಸಿದರು.

ಶಿಬಿರದಲ್ಲಿ  ಮುಖಂಡರಾದ ಪಂಪಾಪತಿ ಹೋಸಪೇಟೆ , ಶರಣು ಗಡ್ಡಿ, ಶರಣು ಪಾಟೀಲ್,  ಕೆ. ಪಾಲಾಕ್ಷ, ದೇವರಾಜ ಹೋಸಮನಿ, ಶ್ರೀನಿವಾಸ, ಭೀಮಾಶಂಕರ ಪಾಣೇಗಾಂವ , ಮಲ್ಲಪ್ಪ ಮಾದಿನೂರ ಮತ್ತು ಧರ್ಮರಾಜ ಗೋನಾಳ, ಕಾಸಿಂ ಕೆ.ಎನ್‌ . ಶಿವಮೂರ್ತಿ  ಸೇರಿದಂತೆ ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ ಯುವ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ವಿಶ್ವ ಮಾನವ ದಿನಾಚರಣೆ: ರಾಷ್ಟ್ರಕವಿ ಕುವೆಂಪುರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಕೆ

ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ವಿಶ್ವ ಮಾನವ ದಿನಾಚರಣೆ: ರಾಷ್ಟ್ರಕವಿ ಕುವೆಂಪುರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಕೆ

World Humanity Day celebrated at Koppal District Administration Building: Floral tributes paid to the portrait of National Poet Kuvempu

ಕೊಪ್ಪಳ ಡಿಸೆಂಬರ್ 29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಜಿಲ್ಲಾಡಳಿತ ಕಛೇರಿ ಸಭಾಂಗಣದಲ್ಲಿ ವಿಶ್ವ ಮಾನವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
 ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ರಾಷ್ಟ್ರಕವಿ ಕುವೆಂಪು ರವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ನಂತರ ಮಾತನಾಡಿ, ಕುವೆಂಪುರವರ ಕವನಗಳು ಅರ್ಥಗರ್ಭಿತವಾಗಿದ್ದು, ಅವರ ದಿವ್ಯ ಸಂದೇಶಗಳು ನಮಗೆ ದಾರಿದೀಪವಾಗಿವೆ. ಅವರ ವಿಶ್ವಮಾನವ ಸಂದೇಶವನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
 ಕಾರ್ಯಕ್ರಮದ ಅಂಗವಾಗಿ ಕೊಪ್ಪಳದ ಸಾಹಿತಿ, ಹಿರಿಯ ಲೇಖಕರು ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾದ ಸಾವಿತ್ರಿ ಮುಜುಮ್‌ದಾರ್ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕುವೆಂಪುರವರು ‘ಮನುಜ ಮತ ವಿಶ್ವಪಥ’ ಸಂದೇಶ ಸಾರಿದ ಶ್ರೇಷ್ಠ ವಿಶ್ವಮಾನವರಾಗಿದ್ದಾರೆ. ಕಥೆ, ಕವನ, ಕಾದಂಬರಿ, ವಿಮರ್ಶೆ ಮುಂತಾದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿಯೂ ಕುವೆಂಪುರವರು ಸಾಹಿತ್ಯ ರಚಿಸಿ, ಕನ್ನಡ ಅಗ್ರಮಾನ್ಯ, ರಾಷ್ಟ್ರಕವಿ ಎಂದೆನಿಸಿಕೊಂಡಿದ್ದಾರೆ. ಅವರ ಸಾಹಿತ್ಯವನ್ನು ಅಧ್ಯಯನ ಮಾಡುವುದರ ಮೂಲಕ ಇಂದಿನ ಯುವ ಕವಿ, ಸಾಹಿತಿಗಳು ಕುವೆಂಪು ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು. ಕುವೆಂಪು ರವರ ‘ಭಾರತ ಜನನಿಯ ತನುಜಾತೆ’ ಎಂಬ ಹಾಡನ್ನು ನಮ್ಮ ರಾಜ್ಯದ ನಾಡಗೀತೆಯಾಗಿ ಅಳವಡಿಸಿಕೊಳ್ಳಲಾಗಿದ್ದು, ಈ ಹಾಡು ಇಡೀ ಭಾರತದ ಪರಿಕಲ್ಪನೆಯನ್ನು ಮುಂದಿಡುತ್ತದೆ. ಕುವೆಂಪು ಅವರನ್ನು ಬರೀ ಗದ್ಯ, ಸಾಹಿತ್ಯಕ್ಕಷ್ಟೇ ಲೇಖಕರೆಂದು ಅವರನ್ನು ಗುರುತಿಸಲು ಸಾಧ್ಯವಿಲ್ಲ. ಏಕೆಂದರೆ, ಅವರು ರಚಿಸಿದ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯ, ಆಧುನಿಕ ಕಾಲದ ಶ್ರೇಷ್ಠ ಕಾವ್ಯಗಳಲ್ಲೊಂದಾಗಿದೆ ಎಂದರು.

 ಕುವೆಂಪು ರವರು ಶಿಶು ಸಾಹಿತ್ಯವನ್ನು ಬರೆದಿದ್ದು, ಮನುಷ್ಯನಿಗೆ ಅಲ್ಲಿಂದನೆ ಮಾನವೀಯ ಸಂದೇಶಗಳನ್ನು ತಿಳಿಸಿದ್ದಾರೆ. ಮಗು ಹುಟ್ಟಿನಿಂದಲೇ ವಿಶ್ವಮಾನವಾಗಿರುತ್ತದೆ. ಆದರೆ, ಅದು ಬೆಳೆದಂತೆಲ್ಲ ಅಲ್ಪ ಮಾನವನಾಗುತ್ತದೆ. ಏಕೆಂದರೆ, ಹಲವಾರು ಕಟ್ಟುಪಾಡುಗಳು ಆ ಮಗುವಿನ ತೆಲೆಯಲ್ಲಿ ಬರುವಂತೆ ಸುತ್ತಮುತ್ತಲಿನ ವಾತಾವರಣ ಕಾರಣವಾಗುತ್ತದೆ. ಇದು ಆಗಬಾರದು ಮತ್ತು ಪ್ರತಿಯೊಂದು ಮಗು ಬೆಳೆಯುತ್ತಾ ಹೋದಂತೆ ಜಾತಿಗೆ ಸೀಮಿತವಾಗಬಾರದು. ವಿಶಾಲವಾದ ಹೃದಯದಿಂದ ಬೆಳೆಯಬೇಕು. ಮನುಷ್ಯನು ಮಾನವೀಯ ಮೌಲ್ಯಗಳನ್ನು ಹೊಂದಬೇಕೆಂಬ ದಿವ್ಯ ಸಂದೇಶಗಳನ್ನು ನೀಡಿದ ಕುವೆಂಪುರವರು ವಿಶ್ವಮಾನವ ಅನಿಸಿಕೊಂಡಿದ್ದಾರೆ ಎಂದು ಹೇಳಿದರು.
 ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಮಾತನಾಡಿ, ಮಾನವ ಕುಲಕ್ಕೆ ಕುವೆಂಪುರವರು ನೀಡಿರುವ ಸಂದೇಶಗಳು ಸಾರ್ವಕಾಲಿಕವಾಗಿವೆ. ನಾವೆಲ್ಲರೂ ಮತ್ತೆ ಮತ್ತೆ ಜ್ಞಾಪಿಸಿಕೊಳ್ಳಬಹುದಾದ ಶ್ರೇಷ್ಠ ಸಾಹಿತಿಗಳಲ್ಲಿ ಕುವೆಂಪು ರವರು ಪ್ರಮುಖರಾಗಿದ್ದಾರೆ. ಕುವೆಂಪು ರವರು ವಿಶ್ವ ಮಾನವ ಮತ್ತು ಪ್ರಕೃತಿ ಸೌಂದರ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ‘ಮನುಜ ಮತ ವಿಶ್ವಪಥ’ ಹೀಗೆ ಹಲವಾರು ಮಾನವೀಯ ಸಂದೇಶ ಸಾರಿದ ಮಹಾನ್ ಚೇತನ ಕುವೆಂಪುರವರ ವಿಶ್ವಮಾನವ ಸಂದೇಶ ನಾವು ಅರಿತುಕೊಳ್ಳಬೇಕು ಎಂದರು.
 ನಿವೃತ್ತ ಪ್ರಾಚಾರ್ಯರು ಹಾಗೂ ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ್ ಅವರು ಮಾತನಾಡಿ, ಕುವೆಂಪುರವರು ಜಾತಿ, ಮತ, ಪಂಥ, ದೇಶ, ಭಾಷೆ ಎಲ್ಲವನ್ನೂ ಮೀರಿ ಮೊದಲು ನಾವು ಮಾನವರಾಗಬೇಕು, ವಿಶ್ವ ಮಾನವರಾಗಬೇಕೆಂಬ ಸಂದಶೇವನ್ನು ನೀಡಿದ್ದಾರೆ. ಅವರ ವಿಚಾರಗಳನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು. ಕುವೆಂಪು ರವರು ಹೇಳಿರುವ ಹಾಗೆ ನಾವೆಲ್ಲರೂ ವಿಶ್ವ ಮಾನವರಾಗಿ ಬಾಳಲು ಪ್ರಯತ್ನಿಸೋಣ ಎಂದು ಹೇಳಿದರು.
 ಶ್ರೀ ಗುರುಕೃಪ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು ಕುವೆಂಪು ರವರು ಗೀತೆಗಳನ್ನು ಹಾಡಿದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಮತ್ತು ಸಾಹಿತಿಗಳು, ಲೇಖಕರು ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ವಿವಿಧ ಇತರೆ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಭಾಗ್ಯನಗರ ಪ.ಪಂ: ಆಸ್ತಿ ಕಣಜದಲ್ಲಿ ಕರಡು ಇ-ಖಾತಾ ಪ್ರಕಟ

ಭಾಗ್ಯನಗರ ಪ.ಪಂ: ಆಸ್ತಿ ಕಣಜದಲ್ಲಿ ಕರಡು ಇ-ಖಾತಾ ಪ್ರಕಟ

Bhagyanagar P.P.: Draft e-Khata published in the Asset Kanaja


ಕೊಪ್ಪಳ ಡಿಸೆಂಬರ್ 29 (ಕರ್ನಾಟಕ ವಾರ್ತೆ): ಸರಕಾರವು ಮನೆಯಲ್ಲಿಯೇ ಅತಿ ಸರಳವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ನಿಗದಿತ ಕಾಲಾವಧಿಯಲ್ಲಿ ಇ-ಖಾತಾ ಸೇವೆಯನ್ನು ಪಡೆಯಲು ತಂತ್ರಾಂಶ ರೂಪಿಸಿದ್ದು, ಅದರಂತೆ ಆಸ್ತಿ ಕಣಜದಲ್ಲಿನ ಮಾಹಿತಿ ಆಧಾರದ ಮೇಲೆ ಕರಡು ಇ-ಖಾತಾವನ್ನು ಪ್ರಕಟಿಸಲಾಗಿರುತ್ತದೆ. ಸಾರ್ವಜನಿಕರು ಈ ಮಾಹಿತಿಯನ್ನು ನೇರವಾಗಿ ವೀಕ್ಷಿಸಬಹುದಾಗಿದೆ.
ಮಾಹಿತಿಗಳ ಬಗ್ಗೆ ತಕರಾರು ಇದ್ದಲ್ಲಿ ಸಾರ್ವಜನಿಕರು ಇ-ಆಸ್ತಿ ತಂತ್ರಾಂಶದಲ್ಲಿನ ಹೆಚ್ಚಿನ ಮಾಹಿತಿಯನ್ನು ನೇರವಾಗಿ ನಮೂದಿಸಬಹುದಾಗಿದೆ. ನಮೂದಿಸಿದ ಮಾಹಿತಿಯ ನಿಖರತೆಯನ್ನು ನಗರಸಭೆಯು ಪರಿಶೀಲಿಸಿ ಅನುಮೋದಿಸಲಾಗುವುದು. ಅಂತಿಮ ಇ-ಖಾತಾವನ್ನು ಸಾರ್ವಜನಿಕರು ತಮ್ಮ ಮನೆಗಳಲ್ಲಿ ಕುಳಿತು ಪಡೆಯಬಹುದಾಗಿದೆ.  ಈ-ಖಾತಾ ಪಡೆಯಲು ಸ್ವತ್ತಿನ ಕ್ರಯ ಅಥವಾ ನೋಂದಾಯಿತ ಪತ್ರಸಂಖ್ಯೆ, ಆಸ್ತಿ ತೆರಿಗೆ ಹಾಗೂ ಎಸ್.ಎ.ಎಸ್. ಚಲನ್ ಸಂಖ್ಯೆ, ಮಾಲೀಕರ ಭಾವಚಿತ್ರ, ವಿದ್ಯುತ್ ಆರ್.ಆರ್. ನಂಬರ್(ಖಾಲಿ ನಿವೇಶನಗಳಿಗೆ ಅಗತ್ಯವಿಲ್ಲ), ಸ್ವತ್ತಿನ ಛಾಯಾಚಿತ್ರ, ಋಣಭಾರ ನಮೂನೆ-15/16 (ಇಆ), ಆಧಾರ್ ಕಾರ್ಡ ಪ್ರತಿ, ಪಹಣಿ ಪತ್ರಿಕೆ, ಮ್ಯುಟೇಶನ ಪ್ರತಿ, ಸರ್ವೆ ನಕ್ಷೆ ಹಾಗೂ ಸ್ವತ್ತಿಗೆ ಸಂಬಂಧಿಸಿದ ಇತರೆ ಪೂರಕ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ಕರ್ನಾಟಕ-1 ಕೇಂದ್ರಗಳಲ್ಲಿ ಸಹ ನಾಗರಿಕರು ತಂತ್ರಾಂಶವನ್ನು ಬಳಸಿ ಸೇವೆಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 7259585959, 08539-230243 ಅಥವಾ ವೆಬ್‌ಸೈಟ್ ವಿಳಾಸ www.eaasti.karnataka.gov.in ಅಥವಾ ಭಾಗ್ಯನಗರ ಪಟ್ಟಣ ಪಂಚಾಯತಿಯ ಕಂದಾಯ ಶಾಖೆಯನ್ನು ಸಂಪರ್ಕಿಸಬಹುದು ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸುರೇಶ ಬಬಲಾದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

****