
ಶರಣರ ದೃಷ್ಟಿಯಲ್ಲಿ ಪಾದ ಪೂಜೆ ?
Foot worship in the eyes of the devotees?
-ಶರಣಪ್ಪ ಗೊಲ್ಲರ ಅವರ ಲೇಖನ.ಮೊನ್ನೆ ಒಬ್ಬರೊಂದಿಗೆ ಮಾತಿನಲ್ಲಿದ್ದಾಗ ನಾನು ಪಾದವೆಂದರೆ ಶರಣರ ದೃಷ್ಟಿಯಲ್ಲಿ ಜ್ಞಾನ ಅಂದಾಗುವುದು ಎಂದೆ. ಆತ ಇಲ್ಲ ಪಾದವೆಂದರೆ ಪಾದವೆ ಅರ್ಥಾತ್ ಮಹನೀಯರ ಕಾಲು ಎಂದರು. ಆಗ ನಾನೇ ಅರ್ಧಂಬರ್ಧ ಓದಿರಬಹುದೆನೊ ಅಂದುಕೊಂಡು ವಚನಗಳ, ಅದರ ಭಾವಾರ್ಥಗಳ ಹುಡುಕಲು ಪ್ರಯತ್ನಿಸಿದಾಗ ಶರಣರು ತಮ್ಮ ವಚನಗಳಲ್ಲಿ ನಿಮ್ಮ ಶ್ರೀಪಾದವ ಕಂಡು ಬದುಕೆದೆನು ಎಂಬ ಸಾಲು ಹಾದುಹೋಗುತ್ತದೆ.
ತಮ್ಮ ವಚನಗಳಲ್ಲಿ ಶರಣರೆ ಪಾದ ಎಂಬ ಪದವನ್ನು ಬಳಸಿದ್ದಾರಲ್ಲ?! ಮತ್ತೆಯೂ ಮಹಾ ಪಂಡಿತರಾಗಲು ಹೊರಟ ನಿಮಗೆ ಏನು ಹೇಳುವುದು ಎಂದು ಜರಿದನಾತ.
ಪಾದದ ಜಾಡು ಹಿಡಿದು ಹೊರಟ ನನಗೆ ಶರಣರ ದೃಷ್ಟಿಯಲ್ಲಿ ಪಾದಕ್ಕೆ ಯಾವ ಅರ್ಥವಿದೆ ಅನ್ನುವುದನ್ನು ತಿಳಿಯಲೆಬೇಕೆಂದು ಅನಿಸಿ, ಶಬ್ಧಕೋಶವನ್ನು ತಿರುವಿ ಪಾದವ ಹುಡುಕಲು ಶುರುಮಾಡಿದಾಗ; ಪಾದ ಅನ್ನುವ ಒಂದೇ ಪದಕ್ಕೆ ವಿವಿಧ ಸಮಾನಾರ್ಥ ಪದಗಳು ಕಾಣಸಿಗುತ್ತವೆ. ಕಾಲು, ಚರಣ, ಪಂಕ್ತಿ, ಸಾಲು. ಆದರೆ ಈ ಪದಕ್ಕೆ ವಿಶಿಷ್ಠವಾದ ಅರ್ಥವನ್ನು ನೀಡಿದವರು ಬಸವಾದಿ ಶರಣರು.’ಶರಣೆಂದು ಪಾದವ ಹಿಡಿದಿಹೆನೆಂದಡೆ
ಚರಣದ ನಿಲವು ಕಾಣಬಾರದು, ಕುರುಹುವಿಡಿದೆಹೆನೆಂದಡೆ
ಕೈಗೆ ಸಿಲುಕದು, ಬೆರಸಿ ಹೊಕ್ಕೆಹೆನೆಂದಡೆ ಮುನ್ನವೆ ಅಸಾಧ್ಯ’ಬಸವಣ್ಣನವರ ವಚನದ ಮೊದಲ ಈ ಮೂರು ಸಾಲುಗಳನ್ನು ಗಮನಿಸಿದಾಗ ಪಾದದ ಅರ್ಥ ಸಿಗಬಹುದು. ಶರಣೆಂದು ಪಾದವನ್ನು ಹಿಡಿಯುತ್ತೇನೆ ಎಂದು ಹೊರಟರೆ ಚರಣದ ಅರ್ಥಾತ್ ಅಡಿ/ತುತ್ತ ತುದಿಯ ನಿಲುವನ್ನು ಕಾಣಲು ಸಾಧ್ಯವಾಗದು.
ಗೋಚರಿಸುವ ಕಾಲುಗಳನ್ನು ಕೈಗಳಿಂದ ಮುಟ್ಟಬಹುದು, ನೋಡಬಹುದು ಆದರೆ ಅಗೋಚರವಾದ ಚರಣ ಅಂದರೆ ಅಡಿ. ಜ್ಞಾನಕ್ಕೆ ಇದೆ ಕೊನೆ ಎಂಬುದು ಸಿಗುವುದಿಲ್ಲ. ಜ್ಞಾನದ ಮೂಲವೂ ನಮಗೆ ಸಿಗುವುದಿಲ್ಲ. ಅಂತಹ ಜ್ಞಾನವನ್ನು ಹಿಡಿಯುವೆ ಎಂಬುದು ಹುಚ್ಚುತನ. ಅದರೊಂದಿಗೆ ಒಂದಾಗೋಣ ಎಂದರೆ ಅದೂ ಅಸಾಧ್ಯ ಅನ್ನುತ್ತಾರೆ ಶರಣರು.
ನಾವು ತಿಳಿದ ಪಾದದ ಅರ್ಥಕ್ಕೂ ಶರಣರು ತಿಳಿದ ಪಾದದ ಅರ್ಥಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಹೀಗಾಗಿ ಮನೆಗೆ ಕರೆದ ಸ್ವಾಮಿಗಳ ಕಾಲುಗಳಿಗೆ ನೀರು ಹಾಕಿ ತೊಳೆದು, ವಿಭೂತಿಯ ಲೇಪಿಸಿ, ಹೂವು ಏರಿಸಿ ಪೂಜಿಸುವುದನ್ನೇ ಪೂಜೆಯೆಂದು ನಾವು ತಿಳಿದಿದ್ದೇವೆ.
ಆದರೆ ಶರಣರು ಅದನ್ನು ಒಪ್ಪುವುದಿಲ್ಲ.ಜಂಗಮ (ಸಮಾಜ) ಸೇವೆಗೈಯುವ ಅಭಿಲಾಷೆ ಉಳ್ಳವರು ದೊಡ್ಡಮಠದ ಸ್ವಾಮಿಗಳನ್ನು ಕರೆಯಿಸಿ, ಎತ್ತರದ ಆಸನವನ್ನು ಹಾಕಿ ಕೂಡ್ರಿಸಿ, ಅವರ ಕಾಲುಗಳನ್ನು ತೊಳೆದು ಪೂಜಿಸುವ ಬದಲು; ಅದೇ ಸ್ವಾಮಿಗಳು ಮನೆಗೆ ಬಂದಾಗ ಹೊರಗಿನಿಂದ ಬಂದರೆಂದು ಒಂದು ಚರಿಗೆ ನೀರು ಕೊಟ್ಟು, ಮನೆಯಲ್ಲಿ ಕರೆದು ಕೂಡ್ರಿಸಿ ಅವರಿಂದ ತತ್ವಜ್ಞಾನದ ವಿಚಾರಗಳನ್ನು ತಿಳಿದುಕೊಂಡು, ವಚನಗಳ ಅರ್ಥಗಳನ್ನು ಕೇಳಿ, ಬಸವಾದಿ ಶರಣರ ಇತಿಹಾಸವನ್ನು ಹೇಳಿಸಿಕೊಂಡು, ಭಾರತ ಸಂವಿಧಾನದ ಆಶಯಗಳನ್ನು ಅವರಿಂದ ತಿಳಿದು ನಮ್ಮ ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸಿಕೊಂಡು, ವಿಚಾರವಂತರಾಗಿ, ಜ್ಞಾನದ ವೃದ್ಧಿಗೊಳಿಸಿಕೊಳ್ಳುವುದೇ ನಿಜವಾದ ಪಾದಪೂಜೆ ಅರ್ಥಾತ್ ಜ್ಞಾನ ಪೂಜೆ ಎನಿಸಿಕೊಳ್ಳುತ್ತದೆ.
ಬಂದವರು ಹೀಗೆ ಮಾಡಬಾರದೇಕೆ?!ನಾವೂ ನಿಮ್ಮಂತೆ ಮನುಷ್ಯರು, ಎಲ್ಲರೊಳಗೂ ಶಿವನಿರುವ ಕಾರಣ ಮನುಷ್ಯರು ಮನುಷ್ಯರ ಕಾಲಿಗೆ ಬೀಳುವುದೇಕೆ?, ಸಹಜವಾಗಿ ಇರುವಿದನ್ನು ಕಲಿಯೋಣ, ಸಂಸ್ಕಾರವಂತರಾಗೋಣ, ಶರಣರ ತತ್ವಗಳನ್ನು ಅರಿತು ಬದುಕು ಸಾಗಿಸುವುದೇ ಲೇಸು, ನಮ್ಮಿಂದ ಜ್ಞಾನವನ್ನು ಮಾತ್ರ ಬಯಸಬೇಕು ನೀವು, ನಮ್ಮ ಕಾಲುಗಳ ತೊಳೆದು ಪೂಜೆ ಮಾಡುವುದಲ್ಲ ಎಂದೆಲ್ಲ ಹೇಳಬಹುದಲ್ಲ.
ಅವರು ಹೇಳುವುದಿಲ್ಲ ಕಾರಣ ಅವರಿಗೆ ದೇವರಾಗುವ ಹುಚ್ಚು. ಅವರ ದೇಹವಳಿದಮೆಲೆ ಅವರಿಗೊಂದು ಗದ್ದುಗೆ, ಗುಡಿ, ಮೂರ್ತಿಮಾಡಿ ಅಭಿಷೇಕ ಮಾಡಿಸಿಕೊಳ್ಳುವ ಕನಸು ಇರುತ್ತದೆ. ಹೀಗಾಗಿ ಜನರಿಗೂ ಸಹಿತ ‘ಕಾವಿಯ ಧರಿಸಿ ತಿರುಗುವ ಜೀವಗಳ್ಳರು’ ಎಂಬ ಶರಣರ ವಿಚಾರಗಳುಳ್ಳ ವಚನಗಳನ್ನು ಪರಿಚಯ ಮಾಡಿಕೊಡುವುದಿಲ್ಲ.
ಅದ್ದರಿಂದ ಜನರೇ ಎಚ್ಚರಗೊಂಡು ಡೊಂಗಿಗಳ ಬೆನ್ನು ಹತ್ತುವುದನ್ನು ಬಿಟ್ಟು, ವಚನಗಳನ್ನು ಓದಿ ಸತ್ಯ ತಿಳಿದು ಸರಳವಾಗಿ ಜೀವಿಸಬೇಕು. ಅಂದಾಗಲೆ ಶರಣ ಸಂಸ್ಕೃತಿ ಉಳಿಯುತ್ತದೆ.
-ಶರಣಪ್ಪ ಗೊಲ್ಲರ ಅವರ ಲೇಖನ.



