We need to see more industrial growth: Dr. Suresh Itnal

ಕೊಪ್ಪಳ ಅಕ್ಟೋಬರ್ 16 (ಕರ್ನಾಟಕ ವಾರ್ತೆ): ನಮ್ಮಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಉದ್ಯಮ ಬೆಳವಣಿಗೆಯಾಗಬೇಕಾದ ಅವಶ್ಯಕತೆಯಿದ್ದು, ಅದಕ್ಕಾಗಿ ಉದ್ಯಮ ಪ್ರಾರಂಭಿಸುವವರಿಗೆ ವಿವಿಧ ಇಲಾಖೆಗಳಿಂದ ಅಗತ್ಯ ಸಹಕಾರ ಸಿಗುತ್ತಿವೆ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
ಅವರು ಗುರುವಾರ ಕೊಪ್ಪಳ ನಗರದ ಬಸವೇಶ್ವರ ವೃತ್ತದ ಹತ್ತಿರವಿರುವ ಫಾರ್ಚೂನ್ ಹೋಟೇಲ್‌ನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿ.ಟಿ.ಪಿ.ಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎಂ.ಎಸ್.ಎಮ್.ಇ.ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವ ಉದ್ದೇಶದಿಂದ ರ‍್ಯಾಂಪ್ ಯೋಜನೆಯಡಿ ಝಡ್.ಇ.ಡಿ-ಲೀನ್ ಯೋಜನೆ ಕುರಿತು ಒಂದು ದಿನದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 13.89ಲಕ್ಷ ಜನ ಇದ್ದು, ಪ್ರಸ್ತುತ ಅಂದಾಜು 17 ಲಕ್ಷ 15 ಸಾವಿರ ಜನ ಇದ್ದಾರೆ. ಅದರಲ್ಲಿ ಉದ್ಯಮ ಸರ್ಟಿಫಿಕೇಟ್‌ಗೆ ನೋಂದಣಿ ಮಾಡಿಕೊಂಡವರು ಕೇವಲ 4000 ಜನ ಮಾತ್ರ. ಎಂ.ಎಸ್. ಎಮ್.ಇ ಯಲ್ಲಿ ಸಹಾಯ ಧನ ತೆಗೆದುಕೊಂಡವರ ಸಂಖ್ಯೆ ಬಹಳ ಕಡಿಮೆಯಿದೆ. ಕಾಯಕವೇ ಕೈಲಾಸ ಎನ್ನುವುದನ್ನು ನಂಬಿರುವ ಶ್ರಮ ಸಂಸ್ಕಾರವನ್ನು ಹೊಂದಿರುವ ಈ ಭಾಗದ ಜನರು ಸರ್ಕಾರದ ಎಲ್ಲಾ ಸೌಲಭ್ಯಗಳ ಬಗ್ಗೆ ತಿಳಿದುಕೊಂಡು ಅವುಗಳ ಸದುಪಯೋಗವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳ್ಳಬೇಕು. ಮೈಕ್ರೋ ಸ್ಮಾಲ್ & ಮೀಡಿಯಂ ಎಂಟರ್ ಪ್ರೈಸಸ್ (ಎಮ್.ಎಸ್.ಎಮ್.ಇ.) ಯಿಂದ ಸಮಾನ್ಯ ವರ್ಗದವರಿಗೆ ಶೇ.25 ರಷ್ಟು ಹಾಗೂ ಅಲ್ಪಸಂಖ್ಯಾತರು, ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಮಹಿಳೆಯರಿಗೆ ಶೇ. 35 ರಷ್ಟು ಸಬ್ಸಿಡಿ ಸಾಲ ಸಿಗುತ್ತದೆ. ಇದರ ಕುರಿತು ಬಹಳಷ್ಟು ಜನರಿಗೆ ತಿಳಿದಿಲ್ಲಾ. ಈ ಕುರಿತು ಹೆಚ್ಚಿನ ಪ್ರಚಾರ ನೀಡಬೇಕು. ಇಂತಹ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು ಎಲ್ಲರೂ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಕೃಷಿ ಮತ್ತು ಉದ್ಯಮ ಎರಡಕ್ಕೂ ಕೂಡ ಹೆಚ್ಚು ಸ್ಕೋಪ್ ಇದೆ. ಸೇವಾ ವಲಯ ಸ್ವಲ್ಪ ಕಡಿಮೆ. ಯಾಕೆಂದರೆ ನಮ್ಮ ಭಾಗದಲ್ಲಿ ಐಟಿ, ಬಿಟಿ ಕಡೆ ವಲವು ಕಡಿಮೆ ಇದೆ. ನಮ್ಮ ಜಿಲ್ಲೆಯಲ್ಲಿ ಸುಮಾರು 4.70 ಲಕ್ಷ ಹೆಕ್ಟೇರ್ ಫಲವತ್ತಾದ ಭೂಮಿ ಇದೆ. ಅದರಲ್ಲಿ ಕೇವಲ ಶೇ.9 ರಷ್ಟು ಮಾತ್ರ ತೋಟಗಾರಿಕೆಗೆ ಬಳಸಲಾಗುತ್ತದೆ. ಉಳಿದ ಎಲ್ಲಾ ಭೂಮಿ ಕೃಷಿಗೆ ಸೀಮಿತವಾಗಿದೆ. ಹಾಗಾಗಿ ನಾವು ಕೃಷಿಗೆ ಸಂಬಂಧಪಟ್ಟ ಉದ್ಯಮಗಳಿಗೆ ಹೆಚ್ಚಿನ ಆಸಕ್ತಿ ತೋರಿಸಬೇಕಿದೆ ಎಂದು ಹೇಳಿದರು.
ಮೇಕ್ ಇನ್ ಇಂಡಿಯಾ ಯೋಜನೆಯಡಿ ನಾವೆಲ್ಲರೂ ಒಟ್ಟುಗೂಡಿ ಒಳ್ಳೆ ಉಪಯುಕ್ತ ಉತ್ಪನ್ನಗಳನ್ನು ಸ್ಥಳೀಯವಾಗಿ ಉತ್ಪಾದಿಸಿ ಹೆಚ್ಚಿನ ಲಾಭ ಪಡೆದು, ದೇಶದ ಜಿಡಿಪಿ ಬೆಳವಣಿಗೆಗೆ ಕೊಡುಗೆ ನೀಡಿದಾಗ ಮೇಕ್ ಇನ್ ಇಂಡಿಯಾ ಯೋಜನೆಗೆ ಅರ್ಥ ಸಿಗುತ್ತದೆ. ಹಾಗಾಗಿ ಎಂ.ಎಸ್.ಎಮ್.ಇ.ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವ ಉದ್ದೇಶದಿಂದ ರ‍್ಯಾಂಪ್ ಯೋಜನೆಯಡಿಯಲ್ಲಿ ಝಡ್.ಇ.ಡಿ-ಲೀನ್ ಯೋಜನೆ ಕುರಿತು ಒಂದು ದಿನದ ಅರಿವು ಕಾರ್ಯಗಾರವನ್ನು ಹಮ್ಮಿಕೊಂಡಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು.
ಬ್ಯಾಂಕ್ ಗಳಿಂದ ಮುದ್ರಾ ಯೋಜನೆಯಡಿಯಲ್ಲಿ ಹೆಣ್ಣುಮಕ್ಕಳಿಗೆ ಪ್ರಾಶಸ್ತ್ಯ ನೀಡಿ ಸಾಲ ಸೌಲಭ್ಯ ಕೊಡಲಾಗುತ್ತಿದೆ. ಅದರಲ್ಲಿ ಶಿಶು, ಕಿಶೋರ್, ತರುಣ್ ಅಂತಾ ಮೂರು ಪ್ರಕಾರಗಳಲ್ಲಿ ಸಾಲ ನೀಡಲಾಗುತ್ತದೆ. ಹೆಚ್ಚಾಗಿ ಶಿಶು ಯೋಜನೆಯಲ್ಲಿ ಸಾಲ ನೀಡಲಾಗುತ್ತದೆ. ಕಿಶೋರ್, ತರುಣ್ ಯೋಜನೆಗಳಲ್ಲಿಯೂ ಸಹ ಹೆಚ್ಚಿನ ಸಾಲ ಸೌಲಭ್ಯ ನೀಡಬೇಕು. ಅಂದಾಗ ಮಾತ್ರ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉದ್ಯಮಗಳು ಹುಟ್ಟಿಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಿದರು.
ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಜಿ ನಿರ್ದೇಶಕ ಮನ್ಸೂರ್ ಅವರು ಮಾತನಾಡಿ, ಎಂ.ಎಸ್.ಎಮ್.ಇ ಎನ್ನುವುದು ಕೇಂದ್ರ ಸರ್ಕಾರದ ಒಂದು ಯೋಜನೆಯಾಗಿದೆ. ಎಸ್.ಎಂ.ಇ.ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದಕ್ಕಾಗಿ ಇದರಲ್ಲಿ ಬೇರೆ ಬೇರೆ ಯೋಜನೆಗಳಿವೆ. ಈ ಎಂ.ಎಸ್.ಎಮ್.ಇ.ಗೆ ಇಷ್ಟೊಂದು ಮಹತ್ವ ಕೊಡುವ ಉದ್ದೇಶವೆಂದರೆ, ದೇಶದ ಜಿಡಿಪಿ ಯಲ್ಲಿ ಎಂ.ಎಸ್.ಎಮ್.ಇ. ವಲಯದಿಂದ ಶೇ. 30 ರಿಂ 35 ರಷ್ಟು ಮತ್ತು ದೇಶದ ಒಟ್ಟು ರಫ್ತಿನಲ್ಲಿ ಎಂ.ಎಸ್.ಎಮ್.ಇ. ವಲಯದಿಂದ ಶೇ. 45 ರಷ್ಟು ಪಾಲಿದೆ ಎಂದರು.
ಕೃಷಿ ಕ್ಷೇತ್ರದ ನಂತರ ಅತೀ ಹೆಚ್ಚು ಉದ್ಯೋಗ ಸೃಷ್ಟಿ ಮಾಡಿರುವ ಕ್ಷೇತ್ರ ಎಂದರೆ ಅದು ಎಂ.ಎಸ್.ಎಮ್.ಇ ಕ್ಷೇತ್ರ. ದೊಡ್ಡ ಉದ್ಯಮಕ್ಕೆ ಬಂಡವಾಳ ಹೂಡಿಕೆ ಮಾಡಿದಾಗ ಸೃಷ್ಟಿ ಯಾಗುವ ಉದ್ಯೋಗಕ್ಕಿಂತ ಅದೆ ಬಂಡವಾಳವನ್ನು ಎಂ.ಎಸ್.ಎಮ್.ಇ ವಲಯದಲ್ಲಿ ಹೂಡಿಕೆ ಮಾಡಿದಾಗ ಶೇ.8 ರಿಂದ 10 ಪಟ್ಟು ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತವೆ. ಅದಕ್ಕಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಎಂ.ಎಸ್.ಎಮ್.ಇ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಟಿ.ಎಸ್. ರುದ್ರೇಶಪ್ಪ, ಕರ್ನಾಟಕ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಸೋಶಿಯನ್ ಕಾಸಿಯಾ ಉಪಾಧ್ಯಕ್ಷರಾದ ಲಿಂಗಣ್ಣ ಎಸ್. ಬಿರಾದಾರ, ಕಾಸಿಯಾ ಜಂಟಿ ಕಾರ್ಯದರ್ಶಿ (ನಗರ) ಕೇಶವ ಮೂರ್ತಿ ಆರ್., ಕಾಸಿಯಾ ಜಂಟಿ ಕಾರ್ಯದರ್ಶಿ (ಗ್ರಾಮೀಣ) ದಿನೇಶ್ ಕುಮಾರ, ಕೊಪ್ಪಳ ಜಿಲ್ಲಾ ಕಾಸಿಯಾ ಅಭಿವೃದ್ಧಿ ಸಮಿತಿ, ಪ್ಯಾನಲ್ ಅಧ್ಯಕ್ಷರಾದ ಪುಷ್ಪಲತಾ, ಅಸೋಸಿಯೇಟ್ ಶಿವಕುಮಾರ್ ಸೇರಿದಂತೆ ಕಾಸಿಯಾ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.