Karnataka Minorities Development Corporation: Application submission period extended under various schemes
ಕೊಪ್ಪಳ ಅಕ್ಟೋಬರ್ 16 (ಕರ್ನಾಟಕ ವಾರ್ತೆ): ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2025-26 ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನ್, ಬೌದ್ಧರು, ಸಿಖ್ಖರು ಮತ್ತು ಪಾರ್ಸಿ ಸಮುದಾಯದವರಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಒದಗಿಸುತ್ತಿದ್ದು, ಅರ್ಹ ಫಲಾನುಭವಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿದೆ.
ನಿಗಮದಿಂದ ಶ್ರಮಶಕ್ತಿ ಸಾಲ ಯೋಜನೆ, ವೃತ್ತಿ ಪ್ರೋತ್ಸಾಹ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ (ಟ್ಯಾಕ್ಸಿ, ಗೂಡ್ಸ್ ವಾಹನ ಖರೀದಿಗೆ ಸಹಾಯಧನ), ವ್ಯಾಪಾರ, ಉದ್ಯಮಗಳಿಗೆ ನೇರ ಸಾಲ ಯೋಜನೆ, ವಿದೇಶಿ ವ್ಯಾಸಂಗಕ್ಕಾಗಿ ಸಾಲ ಯೋಜನೆ, ಅಲ್ಪಸಂಖ್ಯಾತರ ಸಮುದಾಯದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸಹಾಯಧನ ಯೋಜನೆ, ಸಾಂತ್ವನ ಯೋಜನೆ, ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮಕ್ಕೆ ಪ್ರೋತ್ಸಾಹ ಯೋಜನೆಯಡಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಈ ಯೋಜನೆಗಳಡಿ ಅರ್ಜಿ ಸಲ್ಲಿಸಲು ಅಕ್ಟೋಬರ್ 16 ಕೊನೆಯ ದಿನವಾಗಿತ್ತು. ಅರ್ಜಿದಾರರ ಅನುಕೂಲಕ್ಕಾಗಿ ಅರ್ಜಿ ಸಲ್ಲಿಕೆ ಅವಧಿಯನ್ನು ಅಕ್ಟೋಬರ್ 21 ರವರೆಗೆ ವಿಸ್ತರಿಸಲಾಗಿದೆ. ಆಸಕ್ತ ಹಾಗೂ ಅರ್ಹ ಫಲಾನುಭವಿಗಳು ವೆಬ್‌ಸೈಟ್: kmdconline.karnataka.gov.in ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
ಫಲಾನುಭವಿಗಳು ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು. 18 ರಿಂದ 55 ವರ್ಷ ವಯೋಮಿತಿ ಒಳಗಿರಬೇಕು. ಯೋಜನೆಗಳ ಕುರಿತಾದ ಹೆಚ್ಚಿನ ವಿವರ ಹಾಗೂ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ದೂ.ಸಂ: 08539-225008 ಗೆ ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.