
ತೆರಿಗೆ ನೋಟೀಸ್ ವಿರುದ್ಧ- ಜು. 23 ರಿಂದ ಹಾಲು, ಬೇಕರಿ ಉತ್ಪನ್ನಗಳು, ಬೀಡಿ, ಸಿಗರೇಟು ಮಾರಾಟವನ್ನು ಬಂದ್ ಮಾಡುವುದಾಗಿ ಎಚ್ಚರಿಕೆ
ಬೆಂಗಳೂರು,ಜು.15: ವಾರ್ಷಿಕ 40 ಲಕ್ಷ ವಹಿವಾಟು ನಡೆಸಿರುವ ಸಣ್ಣ ಉದ್ದಿಮೆದಾರರಿಗೆ ಏಕಾಏಕಿ ನೋಟೀಸ್ ಜಾರಿಗೊಳಿಸಿರುವ ವಾಣಿಜ್ಯ ತೆರಿಗೆ ಇಲಾಖೆ ಕ್ರಮವನ್ನು ವಿರೋಧಿಸಿ ಇದೇ 23 ರಿಂದ ಎರಡು ದಿನಗಳ ಕಾಲ ಬಂದ್ ಆಚರಿಸಲು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು ನಿರ್ಧರಿಸಿದೆ. ಹಾಲು, ಬೇಕರಿ ಉತ್ಪನ್ನಗಳು, ಬೀಡಿ, ಸಿಗರೇಟು ಮಾರಾಟವನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದೆ.
Karnataka State Workers' Council warns of two-day state-wide milk, bakery product sale ban from July 23 against the Centre, which is issuing notices to pay crores of rupees in taxes
ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ಮಾತನಾಡಿ, ಜು. 23 ಮತ್ತು 24 ರಂದು ಬೇಕರಿ, ಬೀಡ ಅಂಗಡಿಗಳು, ಕೇಂದ್ರದ ವಿರುದ್ಧ ಇಡೀ ರಾಜ್ಯದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುತ್ತೇವೆ.

ನಂತರ 25 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸುತ್ತೇವೆ. ನಮ್ಮ ತಾತ, ಮುತ್ತಾತನ ಕಾಲದಿಂದ ಅಂಗಡಿ, ಮುಂಗಟ್ಟುಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಆದರೆ ಯಾವುದೇ ಮುನ್ಸೂಚನೆ ನೀಡದೇ ನೋಟೀಸ್ ನೀಡಿರುವುದು ಸರಿಯಲ್ಲ. ನಮ್ಮ ಅಂಗಡಿ ಎರಡರಿಂದ ಹತ್ತು ಲಕ್ಷ ರೂಪಾಯಿ ಬೆಲೆ ಬಾಳುತ್ತದೆ. ಆದರೆ ಕೋಟ್ಯಂತರ ತೆರಿಗೆ ಪಾವತಿಸುವಂತೆ ಸೂಚಿಸಿರುವುದು ಸರಿಯಲ್ಲ ಎಂದರು.
ವಾಣಿಜ್ಯ ತೆರಿಗೆ ಇಲಾಖೆಯಿಂದ ಸಣ್ಣ ಉದ್ಯಮಿದಾರರಿಗೆ ಕೋಟ್ಯಾಂತರ ರೂಪಾಯಿ ತೆರಿಗೆ ಪಾವತಿಸುವಂತೆ ಶೋಕಾಸ್ ನೋಟಿಸ್ ಕೊಟ್ಟಿರುವುದು ಕಾನೂನು ಬಾಹಿರ. ಕೇಂದ್ರ ಸರ್ಕಾರ ಸಣ್ಣ ಉದ್ದಿಮೆದಾರರ ವಿರೋಧಿ ನೀತಿ ಅನುಸರಿಸುತ್ತಿದ್ದು, ನಮಗೆ ನ್ಯಾಯ ಸಿಗುವ ತನಕ ಹೋರಾಟ ನಡೆಸುತ್ತೇವೆ ಎಂದು ರವಿ ಶೆಟ್ಟಿ ಬೈಂದೂರು ಹೇಳಿದರು.
ಚಾಲಕರ ಸಂಘದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮಾತನಾಡಿ, ಜಿ.ಎಸ್.ಟಿ ಮಂಡಳಿ ಅಧ್ಯಕ್ಷರೂ ಆಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡಲೇ ಮಧ್ಯಪ್ರವೇಶಿಸಿ ನೋಟಿಸ್ ಹಿಂಪಡೆಯಬೇಕು. ಜಿ.ಎಸ್.ಟಿ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ತಕ್ಷಣವೇ ಸಣ್ಣ ಉದ್ದಿಮದಾರರ ಪರವಾದ ತೀರ್ಮಾನ ತೆಗೆದುಕೊಳ್ಳಬೇಕು. ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ನಿರ್ಮಲಾ ಸೀತಾರಾಮನ್ ಉದ್ದಿಮೆದಾರರ ಪರವಾಗಿರಬೇಕು. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ಇಡೀ ದೇಶಕ್ಕೆ ಅನ್ವಯಿಸುತ್ತದೆ. ನಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ಕ್ರಮ ಕೈಗೊಂಡರೆ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದರು.
ಸಭೆಯಲ್ಲಿ ಕನ್ನಡ ಒಕ್ಕೂಟದ ಅಧ್ಯಕ್ಷ ನಟರಾಜ್ ಬೊಮ್ಮಸಂದ್ರ,, ಕನ್ನಡ ಭೂಷಣ, ತೆರಿಗೆ ಮಾಹಿತಿದಾರ ಸುಬ್ರಮಣ್ಯ, ಗೋವಿಂದ ಬಾಬು ಪೂಜಾರಿ, ಪೂಜಾಶೆಟ್ಟಿ, ಮುರುಳಿ, ಕೃಷ್ಣ, ಪ್ರಕಾಶ್ ಶೆಟ್ಟಿ, ಶಶಿಧರ್ ಗೌಡ, ನವೀನ್ ಕುಮಾರ್ ಹೆಗಡೆ, ರಾಜ್ಯ ಹೋಟೆಲ್ ಸಂಘದ ಅಧ್ಯಕ್ಷ ಜಿ ಕೆ ಶೆಟ್ಟಿ, ಶೋಭಾ ಗೌಡ, ನಾಗರಾಜ್, ಅನೂಪ್, ಪ್ರದೀಪ್, ಸುರೇಂದ್ರ ಶೆಟ್ಟಿ, ಶೈಲೇಶ್ ಪೂಜಾರಿ, ಮಣಿಕಂಠ ಮತ್ತಿತರರು ಉಪಸ್ಥಿತರಿದ್ದರು.