Blood donation camp organized as part of the 118th birth anniversary of Shri Shivakumara Swami of Siddaganga Mutt




ಶಶಿಕುಮಾರ್ ಎಸ್ (ಜೆ ಎಸ್ ಬಿ):
ಕೊಳ್ಳೇಗಾಲ, ಏ ೧:ರಕ್ತದಾನದಿಂದ ರಕ್ತದೊತ್ತಡ, ಮಧುಮೇಹದಂತಹ ರೋಗಗಳು ನಿಯಂತ್ರಣಕ್ಕೆ ಬರುವುದರ ಜತೆಗೆ ಆತ್ಮತೃಪ್ತಿ ಸಿಗುತ್ತದೆ ಎಂದು ಚಾಮರಾಜನಗರ ಜಿಲ್ಲಾಸ್ಪತ್ರೆ ರಕ್ತನಿಧಿ ಘಟಕದ ಹಿರಿಯ ತಂತ್ರಜ್ಞ ಸತ್ಯಣ್ಣ ತಿಳಿಸಿದರು.
ಜೆ ಎಸ್ ಬಿ ಪ್ರತಿಷ್ಠಾನದ ವತಿಯಿಂದ ಪಟ್ಟಣದ ಶ್ರೀ ಶಿವಕುಮಾರ ಸ್ವಾಮೀಜಿ ಬಡಾವಣೆಯಲ್ಲಿರುವ ಶ್ರೀ ಪತಂಜಲಿ ಯೋಗ ಮಂದಿರದಲ್ಲಿ, ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳ ೧೧೮ನೇ ಜನ್ಮದಿನದ ಅಂಗವಾಗಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ನಮ್ಮ ಜಿಲ್ಲೆಯಲ್ಲೇ ಪ್ರತಿವರ್ಷ ಹಲವು ಸಾವಿರ ಯುನಿಟ್ ರಕ್ತದ ಕೊರತೆ ಎದುರಾಗುತ್ತಿದೆ. ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ, ಗರ್ಭಿಣಿ-ಬಾಣಂತಿಯರು, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ಅಪಘಾತದಿಂದ ಗಾಯಾಳುಗಳು ಮೃತಪಡುತ್ತಿದ್ದಾರೆ. ಅಂತಹವರ ಅಮೂಲ್ಯವಾದ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅತಿ ಅಗತ್ಯವಾಗಿದ್ದು, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು.
ಜನಸಾಮಾನ್ಯರಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿದ್ದು ಹೋಗಲಾಡಿಸಬೇಕು. ಹೆಚ್ಚು ಜನರು ಸೇರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಿಯಮಿತವಾಗಿ ರಕ್ತದಾನ ಶಿಬಿರ ಆಯೋಜಿಸಿದರೆ ದೇಶದಲ್ಲಿನ ರಕ್ತದ ಕೊರತೆ ನೀಗಿಸಬಹುದು. ಧಾರ್ಮಿಕ ಕಾರ್ಯಕ್ರಮಗಳು ಪೂಜೆ-ಪ್ರಾರ್ಥನೆಗಳಿಗೆ ಸೀಮಿತವಾಗಿರದೆ, ಸಮಾಜಮುಖಿಯಾಗಿ ಸ್ಪಂದಿಸಬೇಕು ಎಂದರು.
ಜೆ ಎಸ್ ಬಿ ಪ್ರತಿಷ್ಠಾನದ ಅಧ್ಯಕ್ಷ ಶಶಿಕುಮಾರ್ ಮಾತನಾಡಿ, ಒಬ್ಬರ ರಕ್ತದಾನದಿಂದ ಕನಿಷ್ಠ ಮೂವರ ಪ್ರಾಣ ಉಳಿಸಬಹುದು. ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಮನುಷ್ಯ ದೇಹದಲ್ಲಷ್ಟೇ ರಕ್ತದ ಉತ್ಪಾದನೆ ಸಾಧ್ಯ. ಅದ್ದರಿಂದ ಎಲ್ಲರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ತಿಳಿಸಿದರು.
ಪಟ್ಟಣ ಮಾತ್ರವಲ್ಲದೆ, ಸುತ್ತಲಿನ ಹಳ್ಳಿಗಳಿಂದಲೂ ಹಲವಾರು ಜನರು ಸ್ವಯಂಪ್ರೇರಿತವಾಗಿ ಬಂದು ರಕ್ತದಾನ ಮಾಡಿದರು. ಸುಮಾರು ೪೫ ಯೂನಿಟ್ ಗಳಷ್ಟು ರಕ್ತ ಸಂಗ್ರಹ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳಾದ ಸರಸ್ವತಿ, ಡಯಾನ, ಮಹದೇವಸ್ವಾಮಿ, ಮಹೇಶ, ಚಾಂದಿನಿ, ಜೆ ಎಸ್ ಬಿ ಪ್ರತಿಷ್ಠಾನದ ಮಹದೇವಪ್ರಸಾದ, ಲಿಂಗರಾಜು, ಚಂದ್ರು, ಶಿವಕುಮಾರ, ವೆಂಕಟೇಶ, ನಾಗಪ್ಪ, ಮುಂತಾದವರಿದ್ದರು.
ಶಶಿಕುಮಾರ್ ಎಸ್ (ಜೆ ಎಸ್ ಬಿ):
ಜೆಎಸ್’ಬಿ ಪ್ರತಿಷ್ಠಾನದ ವತಿಯಿಂದ ಪಟ್ಟಣದ ಶ್ರೀ ಶಿವಕುಮಾರ ಸ್ವಾಮೀಜಿ ಬಡಾವಣೆಯಲ್ಲಿರುವ ಶ್ರೀ ಪತಂಜಲಿ ಯೋಗ ಮಂದಿರದಲ್ಲಿ ರಕ್ತದಾನ ಶಿಬಿರ ನಡೆಯಿತು.