Athletes from Kishkinda Nadu selected for national-level Khelo India Games

” ಗ್ರಾಮೀಣ ಪ್ರತಿಭೆಗೆ ರಾಷ್ಟ್ರ ಮಟ್ಟದ ವೇದಿಕೆ : ಮಹಿಳಾ ವುಶೂ ಕ್ರೀಡಾಪಟುಗಳ ಐತಿಹಾಸಿಕ ಹೆಜ್ಜೆ” : ಬಾಬುಸಾಬ್
ಕೊಪ್ಪಳ :- ಭಾರತೀಯ ಕ್ರೀಡಾ ಪ್ರಾಧಿಕಾರ, ಯುವ ವ್ಯವಹಾರಗಳ ಕ್ರೀಡಾ ಸಚಿವಾಲಯ ಭಾರತ ಸರ್ಕಾರ ಮತ್ತು ವುಶೂ ಅಸೋಸಿಯೇಷನ್ ಆಫ್ ಇಂಡಿಯಾ ಇವರ ನೇತೃತ್ವದಲ್ಲಿ ಛತ್ತೀಸಗಡ ರಾಜ್ಯದ ಬಿಲಾಸಪೂರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಷ್ಟ್ರೀಯ ಖೇಲೋ ಇಂಡಿಯಾ ಮಹಿಳೆಯರ ಸೀನಿಯರ್ ವುಶೂ ಲೀಗ್ ಸ್ಪರ್ಧೆಗೆ ಬೇತಲ್ ಮಹಿಳಾ ಪದವಿ ಮಹಾವಿದ್ಯಾಲಯದ ಕ್ರೀಡಾಪಟುಗಳಾದ ಕು.ಐಶ್ವರ್ಯ ಮತ್ತು ಕು.ಆಶಾ ಆಯ್ಕೆಯಾಗಿದ್ದಾರೆ.

ಕೇಂದ್ರ ಸರ್ಕಾರದ ASMITA (Achieving Sports Milestone by Inspiring Women through Action) ಎಂಬ ಧ್ಯೇಯದಡಿಯಲ್ಲಿ ಮಾರ್ಚ್ 20 ರಿಂದ 23 ರ ವರೆಗೆ ನಡೆಯಲಿರುವ ಈ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಕಲ್ಯಾಣ ಕರ್ನಾಟಕದ ಪ್ರಥಮ ವುಶೂ ಕ್ರೀಡಾಪಟುಗಳಾಗಿ ದಕ್ಷಿಣ ಭಾರತದ ಪರವಾಗಿ ಆಯ್ಕೆಯಾಗಿರುವುದು ಹೆಮ್ಮೆ ತರುವ ವಿಚಾರ. ಸಂಗಾಪುರ ಗ್ರಾಮದ ಸಾವಿತ್ರಿ ಗಂ.ಶ್ರೀನಿವಾಸ್ ಅವರ ಪುತ್ರಿ ಕು.ಐಶ್ವರ್ಯ (-45 ಕೆಜಿ) ಮತ್ತು ಹಿರೇಜಂತಕಲ್ನ ಸಾವಿತ್ರಿ ಗಂ.ಲಕ್ಷ್ಮಣ ಅವರ ಪುತ್ರಿ ಕು.ಆಶಾ (-52 ಕೆಜಿ) ಸೀನಿಯರ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಈ ಕ್ರೀಡಾಕೂಟದಲ್ಲಿ ದೇಶದ ನಾಲ್ಕು ವಲಯಗಳಾದ ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ಉತ್ತರ ಭಾರತ ವಲಯಗಳ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಆಟಗಾರರೇ ಮಾತ್ರ ಭಾಗವಹಿಸುವ ಅವಕಾಶ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಬೇತಲ್ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಹೇಮಾ ಸುಧಾಕರ್ ಮಾತನಾಡಿ, “ಕ್ರೀಡೆ ಜೀವನದ ಅವಿಭಾಜ್ಯ ಅಂಗ. ನಮ್ಮ ಕಾಲೇಜಿನ ವಿದ್ಯಾರ್ಥಿನಿಯರು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸದ ಸಂಗತಿ. ಗ್ರಾಮೀಣ ಭಾಗದ ಮಕ್ಕಳಿಗೆ ಈ ಅವಕಾಶ ಲಭ್ಯವಾಗಿರುವುದು ನಿಜಕ್ಕೂ ಪ್ರಶಂಸನೀಯ. ಪರಿಶ್ರಮದ ಪ್ರತಿಫಲ. ಅವರು ಇನ್ನಷ್ಟು ಅಭ್ಯಾಸ ಮಾಡಿ, ಜಿಲ್ಲೆ ಹಾಗೂ ರಾಜ್ಯದ ಕೀರ್ತಿಯನ್ನು ಹೆಚ್ಚಿಸಲಿ” ಎಂದು ಹಾರೈಸಿದರು.
ಮುಖ್ಯ ತರಬೇತಿದಾರರಾದ ಬಾಬುಸಾಬ ಮಾತನಾಡಿ, “ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಕರ್ನಾಟಕದ ಮೊದಲ ಮಹಿಳಾ ವುಶೂ ಕ್ರೀಡಾಪಟುಗಳಾಗಿ ಆಯ್ಕೆಯಾಗಿರುವುದು ಹೆಮ್ಮೆ ತರುವ ವಿಚಾರ. ಹೆಣ್ಣುಮಕ್ಕಳ ಸಾಧನೆಗೆ ಇದು ಅಮೃತಹಾದಿಯಾಗಲಿದೆ.ಮತ್ತು ಕೇಂದ್ರ ಸರ್ಕಾರದ ASMITA ಧ್ಯೇಯದಡಿಯಲ್ಲಿ ಈ ಅವಕಾಶ ದೊರೆಕಿರುವುದು ಮಹಿಳಾ ಕ್ರೀಡಾಪಟುಗಳ ಪ್ರೋತ್ಸಾಹಕ್ಕೆ ಹೊಸಬಾಗಿಲು ತರೆದಂತಾಗಿದೆ. ಇಂತಹ ಪ್ರತಿಭಾವಂತ ಕ್ರೀಡಾಪಟುಗಳಿಗೆ ತಾಲೂಕು ಮತ್ತು ಜಿಲ್ಲಾಡಳಿತ ಪ್ರೋತ್ಸಾಹ ನೀಡಿದರೆ, ಜಿಲ್ಲೆ ಮತ್ತು ರಾಜ್ಯದ ಕ್ರೀಡಾಕ್ಷೇತ್ರ ಇನ್ನಷ್ಟು ಉನ್ನತ ಮಟ್ಟಕ್ಕೆ ಬೆಳೆಯಲು ಸಹಾಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಬೇತಲ್ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಹೇಮಾ ಸುಧಾಕರ್, ಅಧ್ಯಕ್ಷರಾದ ರಾಜು ಸುಧಾಕರ್, ಕಾರ್ಯದರ್ಶಿಗಳು ಮತ್ತು ಬೇತಲ್ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಬ್ಯಾಬೇಜ್ ಮಿಲ್ಟನ್, ಖಜಾಂಚಿ ಸುಜಾತ ರಾಜು, ಮುಖ್ಯ ತರಬೇತಿದಾರರಾದ ಬಾಬುಸಾಬ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.