
ಬೆಂಗಳೂರು; ಬಿಎಂಟಿಸಿ, ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳದ ನಂತರ ಇದೀಗ ನಗರದ ಆಟೋ ಮೀಟರ್ ದರ ಹೆಚ್ಚಳ ಮಾಡುವಂತೆ ಕೆಲ ಚಾಲಕ ಸಂಘಟನೆಗಳು ಪಟ್ಟು ಹಿಡಿದಿದ್ದು, ಕೆಲ ಸಂಘಟನೆಗಳು ದರ ಏರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ.
ಬೆಂಗಳೂರಿನಲ್ಲಿ ರಾಪಿಡೋ ಬೈಕ್, ಬಹುರಾಷ್ಟ್ರೀಯ ಸಂಸ್ಥೆಗಳ ಸಂಚಾರಿ ಸೇವೆಗಳು ಆಟೋ ಚಾಲಕರ ಜೀವನಕ್ಕೆ ಮಾರಕವಾಗಿ ಪರಿಣಮಿಸಿವೆ. ದರ ಹೆಚ್ಚಳ ಬೇಡ. ಆಟೋಗಳಿಗೆ ಹೆಚ್ಚುವರಿ ಪರ್ಮಿಟ್ ನೀಡುವುದು ಸೂಕ್ತವಲ್ಲ ಎಂದು ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಮತ್ತು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಸಂಘಟನೆ ಪ್ರತಿನಿಧಿಗಳು ಪ್ರತಿಪಾದಿಸಿದರು.
ಆದರೆ ಇನ್ನೂ ಕೆಲ ಸಂಘಟನೆಗಳು ಕಿಲೋಮೀಟರ್ ಗೆ 5 ರಿಂದ 10 ರುಪಾಯಿವರೆಗೆ ದರ ಏರಿಕೆ ಮಾಡಬೇಕೆಂದು ಪಟ್ಟು ಹಿಡಿದ್ದಿದ್ದವು. ಡಿಸಿಪಿ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಚಾಲಕ ಸಂಘಟನೆಗಳ ಸಭೆ ನಡೆಸಲಾಗಿತ್ತು. ಸಾಧಕ – ಬಾಧಕಗಳನ್ನು ಪರಿಶೀಲಿಸಿ ಇನ್ನೊಂದು ವಾರದಲ್ಲಿ ಸೂಕ್ತ ತೀರ್ಮಾನ ಹೊರ ಬೀಳುವ ನಿರೀಕ್ಷೆಯಿದೆ.
ಇಂದು ಪೂರ್ವ ಸಂಚಾರಿ ವಿಭಾಗದ ವಿಭಾಗದ ಡಿಸಿಪಿ ಸಾಹಿಲ್ ಬಾಗ್ಲಾ ನೇತೃತ್ವದಲ್ಲಿ ಆಟೋ ಮೀಟರ್ ದರ ಪರಿಷ್ಕರಣೆಗಾಗಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ನಗರದ ಎಲ್ಲಾ ಚಾಲಕ ಸಂಘಟನೆಗಳು ಭಾಗಿಯಾಗಿದ್ವು. 17 ಸಂಘಟನೆಗಳ ಪೈಕಿ 16 ಸಂಘಟನೆಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿವೆ.
ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಪಿ ಸಾಹಿಲ್ ಬಾಗ್ಲಾ. ಒಂದು ವಾರ ಸಮಯಾವಕಾಶ ನೀಡಿದ್ದೇವೆ. ಶಾಂತಿನಗರ ಆರ್.ಟಿ.ಓಗೆ ದರ ಪರಿಷ್ಕರಣೆಗೆ ಅರ್ಜಿ ಸಲ್ಲಿಸಲು ಸೂಚಿಸಿದ್ದು, ಅರ್ಜಿ ಸ್ವೀಕೃತಿಯಾದ ಬಳಿಕ ಬೆಂಗಳೂರು ಡಿಸಿ ಗಮನಕ್ಕೆ ತರಲಾಗುವುದು. ಆಟೋ ಚಾಲಕರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅದನ್ನು ಪರಿಶೀಲಿಸಿ ನಂತರ ತೀರ್ಮಾನ ಮಾಡುತ್ತೇವೆ ಎಂದರು.
ಎರಡು ಕಿಮೀಗೆ 10 ರುಪಾಯಿ ಏರಿಕೆ ಮಾಡುವಂತೆ ಕೆಲ ಸಂಘಟನೆಗಳು ಮನವಿ ಮಾಡಿವೆ. ಬೆಂಗಳೂರಲ್ಲಿ ಕನಿಷ್ಠ ಆಟೋ ಮೀಟರ್ ದರ ಎರಡು ಕಿಮೀ ಗೆ 30 ರುಪಾಯಿ ಇದೆ. ಕನಿಷ್ಠ ದರವನ್ನು 40 ರುಪಾಯಿಗೆ ಏರಿಕೆ ಮಾಡುವಂತೆ ಪಟ್ಟು ಹಿಡಿದಿವೆ. ದರ ಏರಿಕೆಗೆ ವಿರೋಧವೂ ವ್ಯಕ್ತವಾಗಿವೆ. ಹೀಗಾಗಿ ಈ ಎಲ್ಲಾ ಅಭಿಪ್ರಾಯಗಳನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರ ಗಮನಕ್ಕೆ ತಂದು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮತ್ತು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ, ರಾಪಿಡೋ ಬೈಕ್ ನಿಂದಾಗಿ ಆಟೋ ಚಾಲಕರು ಬದುಕು ತೀವ್ರ ಸಂಕಷ್ಟದಲ್ಲಿದೆ. ದರ ಏರಿಕೆ ಮಾಡಿದರೆ ಆಟೋ ಹತ್ತುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ. ಆದ್ದರಿಂದ ದರ ಏರಿಕೆಯೂ ಬೇಡ. ಹೊಸ ಆಟೋಗಳಿಗೆ ಪರವಾನಗಿ ನೀಡುವುದೂ ಬೇಡ. ಸಧ್ಯಕ್ಕೆ ಯಥಾ ಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಸಭೆಯಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು.