Breaking News

7ನೇವೇತನಆಯೋಗದ ವರದಿಜಾರಿಗೆಒತ್ತಾಯಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯಿಂದ ಅನಿರ್ದಿಷ್ಟಾವಧಿ ಧರಣಿ: ಜಸ್ಟೀಸ್ ಸಂತೋಷ್ ಹೆಗಡೆ ಚಾಲನೆ

Indefinite sit-in by Karnataka Retired Employees’ Forum demanding implementation of 7th Pay Commission report: Justice Santosh Hegde

ಜಾಹೀರಾತು

ಬೆಂಗಳೂರು, ಫೆ, 29;  7ನೇ ವೇತನ ಆಯೋಗದ ವರದಿ ಜಾರಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು, ಜಸ್ಟೀಸ್ ಸಂತೋಷ್ ಹೋರಾಟಕ್ಕೆ ಚಾಲನೆ ನೀಡಿದರು.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ನ್ಯಾಯಮೂರ್ತಿ ಸಂತೋಷ್ ಹೆಗಡೆ, ಸಂವಿಧಾನದ 14 ಪರಿಚ್ಛದದ ಪ್ರಕಾರ ಯಾವುದೇ ಗುಂಪಿಗೆ ಸೇರಿದ ವ್ಯಕ್ತಿಗಳಿಗೆ ತಾರತಮ್ಯ ತೋರಬಾರದು. ಇದು ನಮ್ಮ ಮೂಲಭೂತ ಹಕ್ಕು. ಸರ್ಕಾರಿ ನಿವೃತ್ತ ನೌಕರರ ಬಗ್ಗೆ ಸರ್ಕಾರ ಬೇಧ ಭಾವ ಮಾಡುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಹೋರಾಟ ಅನಿವಾರ್ಯವಾಗಿದೆ. ಪ್ರತಿಯೊಬ್ಬ ಪ್ರಜೆಯ ಹಿತ ರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿವೃತ್ತ ನೌಕರರಿಗೆ ಕೂಡಲೇ 7 ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ನಿವೃತ್ತ ನೌಕರರನ್ನು ಎರಡು ರೀತಿಯಲ್ಲಿ ನೋಡುವುದು ಸರಿಯಲ್ಲ. ಸರ್ಕಾರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕು. ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದೆ. ಅನ್ಯಾಯದ ವಿರುದ್ಧ ಹೋರಾಟ ಮಾಡಿದಾಗ ಮಾತ್ರ ನ್ಯಾಯ ಪಡೆಯಲು ಸಾಧ್ಯ ಎಂದು ಜಸ್ಟೀಸ್ ಸಂತೋಷ್ ಹೆಗಡೆ ಹೇಳಿದರು.
ನಿವೃತ್ತ ನೌಕರರ ವೇದಿಕೆ ರಾಜ್ಯಾಧ್ಯಕ್ಷ ಡಾ. ಎಮ್.ಪಿ.ಎಮ್. ಷಣ್ಮುಖಯ್ಯ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಇಂದಿನ ಪ್ರತಿಭಟನೆಯಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಪಾಲ್ಗೊಳ್ಳಬೇಕಿತ್ತು. ಆದರೆ ಇಂದು ಬೆಳಿಗ್ಗೆ ಅವರಿಗೆ ಆರೋಗ್ಯ ಹದಗೆಟ್ಟ ಕಾರಣ ಬೆಂಗಳೂರಿಗೆ ಆಗಮಿಸಲಿಲ್ಲ. ಆದರೆ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿ ಪತ್ರ ಬರೆದಿದ್ದಾರೆ. ಕಳೆದ 2002 ರ ಜುಲೈನಿಂದ 2024 ರ ಜುಲೈ ಅವಧಿಯಲ್ಲಿ ನಿವೃತ್ತರಾದ ಅಧಿಕಾರಿ ಹಾಗೂ ನೌಕರರುಗಳಿಗೆ 7 ನೇ ವೇತನ ಆಯೋಗದ ಸೌಲಭ್ಯಗಳನ್ನು ಕಲ್ಪಿಸಿ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ ಎಂದರು.
ನಿವೃತ್ತ ನೌಕರರಿಗೆ 7ನೇ ವೇತನ ಆಯೋಗದ ಪ್ರಕಾರ ನಿವೃತ್ತಿ ಸೌಲಭ್ಯ ನೀಡಲು ಪರಿಷ್ಕೃತ  ಆದೇಶ ಹೊರಡಿಸಬೇಕು.  ಈ ಹೋರಾಟ ಅತ್ಯಂತ ನಿರ್ಣಾಯಕವಾಗಿದೆ. ರಾಜ್ಯದ 28 ಸಚಿವರು  ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಫೆ. 20 ರ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಾರದ ಕಾರಣ ಅನಿರ್ದಿಷ್ಟ ಅವಧಿ ಮುಷ್ಕರ ನಡೆಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ನಿವೃತ್ತರಾದ ನಾವು ಮನೆಯಲ್ಲಿರುವುದಕ್ಕಿಂತ ಫ್ರೀಡಂಪಾರ್ಕ್ ನಲ್ಲಿ ಹೋರಾಟ ಮಾಡುವುದೇ ನಮ್ಮ ಆಯ್ಕೆಯಾಗಿದೆ. ಎಲ್ಲಾ ಜಿಲ್ಲೆಗಳಿಂದ ಸಹಸ್ರಾರು ನೌಕರರು ಕುಟುಂಬ ಸಮೇತರಾಗಿ ಹೋರಾಟದಲ್ಲಿ ನಿರತರಾಗಿದ್ದಾರೆ ಎಂದರು.
ಕಳೆದ 30. 40 ವರ್ಷಗಳ ಕಾಲ ಸರ್ಕಾರಿ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದು ನಮ್ಮ ನೆರವಿಗೆ ಸರ್ಕಾರ ಧಾವಿಸಬೇಕು. ಎಷ್ಟೋ ಜನ ನಿವೃತ್ತರು ಬಾಡಿಗೆ ಕಟ್ಟಲು ಸಾಧ್ಯವಾಗದೇ ಸಂಕಷ್ಟದಲ್ಲಿದ್ದಾರೆ. ಎರಡು ತಿಂಗಳ ಅವಧಿಯಲ್ಲಿ 17 ಬಾರಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ನೀಡಿದ್ದೇವೆ. ಕಳೆದ ವರ್ಷ ಡಿಸೆಂಬರ್ 4 ರಂದು ಬೆಳಗಾವಿಯ ಸುವರ್ಣ ಸೌಧದಿಂದ ಬೆಂಗಳೂರಿನ ವಿಧಾನಸೌಧಕ್ಕೆ ಜಾಗೃತಿ ರಥಯಾತ್ರೆ ನಡೆಸಿದ್ದೇವೆ.  ನಾವು ಒಟ್ಟು 26,000 ಮಂದಿ ನಿವೃತ್ತ ನೌಕರರಿದ್ದು, ಬೇಡಿಕೆ ಈಡೇರುವ ತನಕ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಪಂಚ ಗ್ಯಾರೆಂಟಿಗಳಿಗೆ 56 ಸಾವಿರ ಕೋಟಿ ರೂ ಹಣ ಹೊಂದಿಸುತ್ತಿರುವ ಸರ್ಕಾರ ಇದೀಗ ನಮ್ಮದು ಸಹ ಒಂದು ಭಾಗ್ಯ ಎಂದು ಪರಿಗಣಿಸಿ ಬೇಡಿಕೆ ಈಡೇರಿಸಬೇಕು ಎಂದರು.
ನಿವೃತ್ತ ನೌಕರರ ವೇದಿಕೆ ಮುಖಂಡರಾದ ಅಶೋಕ ಎಮ್. ಸಜ್ಜನ, ಶಂಕರಪ್ಪ ಲಮಾಣಿ, ಎಸ್. ಜಿ. ಬಿಸೇರೊಟ್ಟಿ, ಮಹಾಂತೇಶ ವಿ. ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.
**

About Mallikarjun

Check Also

ಜಿಲ್ಲೆಯನ್ನು ಕ್ರೀಡೆಯಲ್ಲಿ ಮುಂದೆ ತರಲು ಪೂರ್ಣ ಯತ್ನ : ಹಿಟ್ನಾಳ

All efforts are being made to bring the district forward in sports: Hitnala ಕುಷ್ಟಗಿ (ಹನುಮಸಾಗರ): …

Leave a Reply

Your email address will not be published. Required fields are marked *