Poverty can be eradicated through education: Arjun Devaiah
ವರದಿ : ಪಂಚಯ್ಯ ಹಿರೇಮಠ,
ಕೊಪ್ಪಳ : ಪ್ರತಿಯೊಬ್ಬರು ಉನ್ನತ ಶಿಕ್ಷಣ ಹೊಂದಿದಾಗ ಮಾತ್ರ ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲು ಸಾಧ್ಯ ಎಂದು ಏಶಿಯನ್ ಗೇಮ್ಸ್ ಬಂಗಾರ ಪದಕ ವಿಜೇತರು, ಏಕಲವ್ಯ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅರ್ಜುನ್ ಮಹಾದೇವಯ್ಯ ಹೇಳಿದರು.
ಅವರು ಕುಕನೂರು ಪಟ್ಟಣದ ವಿದ್ಯಾಶ್ರೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಯಲಬುರ್ಗಾ ಹಾಗೂ ಕುಕನೂರು ತಾಲೂಕುಗಳ ಅನುದಾನ ರಹಿತ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಗಳ ಒಕ್ಕೂಟದಿಂದ ಹಮ್ಮಿಕೊಂಡ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ 136 ನೇ ಜನ್ಮದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆ ಹಾಗೂ ಅತ್ಯುತ್ತಮ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಶಿಕ್ಷಕರು ಯಾವಾಗ ಮೊಬೈಲ್ ನಿಂದ ದೂರವಿರುತ್ತಾರೋ ಅಂದೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ದೇಶದಲ್ಲಿ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಕೆಲಸ ಶಿಕ್ಷಕರಿಂದಾಗಬೇಕು, ಪಾಲಕರು ಮಕ್ಕಳ ಬಗ್ಗೆ ಚಿಂತನೆ ಮಾಡಿದಂತೆ, ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ತಮ್ಮ ಮಕ್ಕಳಂತೆ ಶಿಕ್ಷಣ ನೀಡಲು ಮುಂದಾಗಬೇಕು ಎಂದರು.
ಇಂದು ಶಿಕ್ಷಣ ವ್ಯಾಪಾರೀಕರಣವಾಗುತ್ತಿದೆ ದುಡ್ಡಿಗಾಗಿ ಹಲವಾರು ಶಿಕ್ಷಣ ಸಂಸ್ಥೆಗಳು ತಲೆ ಎತ್ತಿದ್ದು ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ಕೋಚಿಂಗ್ ತರಬೇತಿಯಂತೆ ಶಾಲೆಗಳ ಶಿಕ್ಷಕರು ಸಹ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಿ ಸಂಸ್ಥೆಯ ಪ್ರಗತಿಯ ಬಗ್ಗೆ ಕಾಳಜಿ ಹೊಂದಿ ಮಾದರಿ ಶಿಕ್ಷಣ ಸಂಸ್ಥೆಗಳನ್ನಾಗಿಸಲು ಮುಂದಾಗಬೇಕು ಎಂದು ತಿಳಿಸಿದರು.
ನಂತರದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ಸರ್ಕಾರ ರಾಜಕೀಯ ಲಾಭಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳ ವಿವಿಧ ಯೋಜನೆಗಳಿಗೆ ನೀಡುತ್ತಿದೆ ಆದರೆ ಶಿಕ್ಷಣಕ್ಕೆ ಆದ್ಯತೆ ನೀಡುವಲ್ಲಿ ವಿಫಲವಾಗಿದೆ.
ಶಾಲೆಯ ಆಡಳಿತ ಗುಣಮಟ್ಟದ ಶಿಕ್ಷಣ ನೀಡಿದಾಗ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ನೋಂದಣಿಯಾಗಲು ಸಹಕಾರಿಯಾಗುತ್ತದೆ ಹಾಗೂ ಸಂಸ್ಥೆಗಳು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ನಂತರದಲ್ಲಿ ಪ್ರಧಾನ ಕಾರ್ಯದರ್ಶಿ ನಾಗರಾಜ ಕೊಪ್ಪಳ ಪ್ರಾಸ್ತಾವಿಕವಾಗಿ ಮಾತನಾಡಿ ಅನುದಾನಿತ – ಅನುದಾನ ರಹಿತ ಶಾಲೆಗಳು ಪ್ರಾರಂಭಿಸಿ ನಡೆಸಿಕೊಂಡು ಹೋಗುವುದು ಕಷ್ಟಕರವಾಗಿದ್ದು, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಖಾಸಗಿ ಶಾಲೆಗಳು ಹಾಗೂ ಶಿಕ್ಷಕರನ್ನು ಸರಕಾರ ಗುರುತಿಸುವ ಕಾರ್ಯವಾಗಬೇಕಿದೆ ಎಂದರು.
ಈ ವೇಳೆ ಕೊಪ್ಪಳ ರಾಮಕೃಷ್ಣ ವಿವೇಕಾನಂದ ಆಶ್ರಮದ ಚೈತನ್ಯಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ಶಿಕ್ಷಕರಿಗೆ, ನಿವೃತ್ತ ಸೈನಿಕರಿಗೆ ಸನ್ಮಾನ ವಿವಿಧ ಮಹನೀಯರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಜಸ್ವಂತರಾಜ ಜೈನ, ಸತ್ಯನಾರಾಯಣ ಹರಪನಹಳ್ಳಿ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಲಲಿತಮ್ಮ ಯಡಿಯಾಪೂರ, ಕೊಪ್ಪಳ ಒಕ್ಕೂಟ ಅಧ್ಯಕ್ಷರು ಶಾಹೀದ ತಹಶೀಲ್ದಾರ, ಸಂಗಣ್ಣ ಟೆಂಗಿನಕಾಯಿ, ಶರಣಪ್ಪ ಮುತ್ತಾಳ, ರಾಜಶೇಖರ ಹೊಂಬಳ, ಬಸವರಾಜ ಉಳ್ಳಾಗಡ್ಡಿ, ಶೇಖರಗೌಡ ಉಳ್ಳಾಗಡ್ಡಿ, ಶಿವಕುಮಾರ ನಾಗಲಾಪೂರಮಠ, ರಾಜಶೇಖರ ಹೊಸ್ಮನಿ, ಅನ್ವರ್ ಮಕಾಂದರ, ಕೃಷ್ಣ ವಿದ್ಯಾಪತಿ, ರವಿ ನಾಲ್ವಾಡ, ಪ್ರಭು ಸರ್, ಮಾರುತಿ ಯಾಳಗಿ, ಪವನಕುಮಾರ, ಮಧೂಸೂದನ ದೇಸಾಯಿ, ಜಯಶ್ರೀ, ಮಂಜುಳಾ, ಶ್ವೇತಾ, ನೇತ್ರಾ ಇನ್ನಿತರರು ಇದ್ದರು.