Education Department Belgaum Divisional Level Progress Review Meeting
ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಹೆಚ್ಚಿಸುವಂತಹ ಪೂರಕ ವಾತಾವರಣ ಸೃಷ್ಟಿಸಬೇಕು: ಸಚಿವ ಮಧು ಬಂಗಾರಪ್ಪ
ಬೆಳಗಾವಿ, (ಕರ್ನಾಟಕ ವಾರ್ತೆ): ರಾಜ್ಯ ಸರಕಾರದಿಂದ ಸರಕಾರಿ ಶಾಲೆ ಹಾಗೂ ಶಾಲಾ ಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಅನೇಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸರಕಾರಿ ಶಾಲಾ ಮಕ್ಕಳ ದಾಖಲಾತಿ ಹಾಗೂ ಹಾಜರಾತಿಯನ್ನು ಹೆಚ್ಚಿಸಲು ಪೂರಕ ವಾತಾವರಣ ನಿರ್ಮಿಸುವಂತೆ ಶಾಲಾ ಶಿಕ್ಷಣ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬೆಳಗಾವಿ ಸುವರ್ಣಸೌಧದಲ್ಲಿ ಬುಧವಾರ (ಸೆ.11) ಜರುಗಿದ ಶಿಕ್ಷ ಇಲಾಖೆ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರಕಾರಿ ಶಾಲಾ ಮಕ್ಕಳು ನಿಯಮಿತವಾಗಿ ಶಾಲೆಗೆ ಹಾಜರಾಗುವಂತಂಹ ಪೂರಕ ವಾತಾವರಣ ನಿರ್ಮಿಸಲು ಶಾಲಾ ಶಿಕ್ಷಕರು, ಅಧಿಕಾರಿಗಳು ಕ್ರಮ ವಹಿಸಬೇಕು. ಈ ಕಾರ್ಯದಲ್ಲಿ ಎಸ್.ಡಿ.ಎಂ.ಸದಸ್ಯರೊಂದಿಗೆ ಸಮನ್ವಯ ಸಾಧಿಸಿ ಈ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದರು.
ಸರಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆ ಆಗುತ್ತಿರುವದಕ್ಕೆ ಕಾರಣಗಳನ್ನು ಹುಡುಕಿ ಅವುಗಳ ಪರಿಹಾರಕ್ಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸರಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಶಾಲೆಗಳಿಗೆ ಬೇಕಾದಂತಹ ಸಾಮಗ್ರಿಗಳಿಗಾಗಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಡಿ ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಉನ್ನತ ಸ್ಥಾನ ಮಾನಗಳಲ್ಲಿರುವಂತಹ ದಾನಿಗಳನ್ನು ಹುಡುಕಿ ಶಾಲೆಗಳನ್ನು ಹಾಗೂ ಸರಕಾರಿ ಶಾಲಾ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ತಿಳಿಸಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಸೂಚನೆ:
ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಸುಧಾರಣೆಗೆ ಸರ್ವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲ ಶಾಲೆಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಮಕ್ಕಳ ಕಲಿಕಾ ಕ್ರಮ ಹಾಗೂ ಫಲಿತಾಂಶ ಸುಧಾರಣೆಗೆ ಮುಂದಾಗಬೇಕು ಎಂದು ಸಚಿವ ಮಧು ಬಂಗಾರಪ್ಪ ಸೂಚನೆ ನೀಡಿದರು.
ಈಗಾಗಲೇ ಬೆಳಗಾವಿ ವಿಭಾಗದಲ್ಲಿ ಮಕ್ಕಳ ಕಲಿಕಾ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರತಿ ಶಾಲೆಗಳಿಗೆ ಉಸ್ತುವಾರಿಗಳನ್ನು ನೇಮಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಉಸ್ತುವಾರಿಗಳ ನೇಮಕಾತಿಯಿಂದ ಮಕ್ಕಳ ಕಲಿಕಾ ಗುಣಮಟ್ಟ ಸುಧಾರಣೆಯಾಗಿರುವದು ಕಂಡು ಬಂದಲ್ಲಿ ಇದನ್ನು ಇಡೀ ರಾಜ್ಯಾದ್ಯಂತ ಜಾರಿಗೊಳಿಲಾಗುವುದು ಎಂದರು.
ಪ್ರತಿ ಶಾಲೆಯಲ್ಲಿ ಅತೀ ಹೆಚ್ಚು ಹಾಗೂ ಅತೀ ಕಡಿಮೆ ಅಂಕಗಳನ್ನು ಪಡೆಯುವಂತಹ ವಿಧ್ಯಾರ್ಥಿಗಳು ಇದ್ದೇ ಇರುತ್ತಾರೆ. ಕಡಿಮೆ ಅಂಕಗಳನ್ನು ಪಡೆಯುವಂತಹ ವಿಧ್ಯಾರ್ಥಿಗಳನ್ನು ಗುರುತಿಸಿ ಅಂತಹ ಮಕ್ಕಳಿಗೆ ವಿಶೇಷ ತರಗತಿಗಳನ್ನು ಜರುಗಿಸಿ ಅವರ ಫಲಿತಾಂಶ ಸುಧಾರಣೆಯಾಗುವದರ ಜೊತೆಗೆ ಸಾರ್ವಜನಿಕರಲ್ಲಿ ಶಾಲೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿ ಶಾಲೆಗೆ ಮಕ್ಕಳ ದಾಖಲಾತಿಯಲ್ಲಿಯೂ ಸುಧಾರಣೆ ಕಾಣಬಹುದಾಗಿದೆ ಎಂದರು.
ಶಾಲಾ ಮಕ್ಕಳಿಗೆ ವಿತರಿಸಲಾಗುವ ಸಮವಸ್ತ್ರ, ಪುಸ್ತಕ, ಶೂ,ಸಾಕ್ಸಗಳನ್ನು ಕೂಡಲೇ ವಿತರಿಸಲು ಕ್ರಮವಹಿಸಬೇಕು. ಸರಕಾರದಿಂದ ಶಾಲಾ ಮಕ್ಕಳಿಗೆ ವಿತರಿಸಲಾಗುವ ಸಮವಸ್ತ್ರ, ಶೂ, ಸಾಕ್ಸ್ ವಿತರಣೆಯಲ್ಲಿ ವಿಳಂಭವಾಗಿರುವದು ಕಂಡು ಬಂದಲ್ಲಿ ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸೂಚನೆ ನೀಡಿದರು.
ಭಾರತದ ಸಂವಿಧಾನದ ಮಹತ್ವದ ಕುರಿತು ಇಂದಿನ ಮಕ್ಕಳಿಗೆ ತಿಳುವಳಿಕೆ ಮೂಡಿಸುವ ದು ಅವಶ್ಯಕವಾಗಿದ. ಮಕ್ಕಳಲ್ಲಿ ಸಂವಿಧಾನದ ಬಗ್ಗೆ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಪ್ರತಿ ದಿನ ಶಾಲೆಗಳಲ್ಲಿ ಸಂವಿಧಾನ ಪಿಠೀಕೆ ಓದಿಸಲು ತಿಳಿಸಿದರು.
ವಿವೇಕ ಶಾಲಾ ಯೋಜನೆಯಡಿ ಮಂಜೂರಾಗಿರುವ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಬೇಕು. ಶಾಲಾ ಕೊಠಡಿಗಳ ದುರಸ್ತಿ, ಬಾಕಿ ಇರುವ ಶೌಚಾಲಯಗಳನಿರ್ಮಾಣ ಕಾಮಗಾರಿಗಳಲ್ಲಿ ವಿಳಂಭವಾಗದಂತೆ ನಿಗಾವಹಿಸಬೇಕು. ಈ ಕುರಿತು ವಿಭಾಗ ಮಟ್ಟದ ಆಯುಕ್ತರು ನಿಯಮಿತವಾಗಿ ಸಭೆಗಳನ್ನು ಜರುಗಿಸಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸೂಚಿಸಿದರು.
ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ ಕುಮಾರ ಸಿಂಗ್ ಅವರು ಮಾತನಾಡಿ ಶಾಲೆಗಳಲ್ಲಿನ ಮಕ್ಕಳ ಕಡ್ಢಾಯ ಹಾಜರಾತಿ ಕುರಿತು ಗಮನ ಹರಿಸಬೇಕು. ಶಾಲೆಗಳಲ್ಲಿ ಹಾಜರಾತಿ ವಿಷಯದಲ್ಲಿ ಲೋಪಗಳು ಆಗದಂತೆ ನಿಗಾ ವಹಿಸಬೇಕು.
ಶಾಲೆಗಳಲ್ಲಿನ ಮಕ್ಕಳ ಹಾಜರಾತಿ ಹಾಗೂ ಪರೀಕ್ಷ ಫಲಿತಾಂಶ ಸುಧಾರಣೆಗೆ ಕೈಗೊಳ್ಳಲಾಗುತ್ತಿರುವ ಕುರಿತು ಮಾಹಿತಿ ಪಡೆದ ಅವರು ಪ್ರತಿ ಶಾಲೆಗಳಿಗೆ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ ಮಕ್ಕಳ ಕಲಿಕಾ ಗುಣಮಟ್ಟ ಸುಧಾರಿಸಲು ಮುಂದಾಗುವಂತೆ ತಿಳಿಸಿದರು.
ವಿವೇಕ ಶಾಲಾ ಯೋಜನೆಯಡಿ ಮಂಜೂರಾಗಿರುವ ಕಾಮಗಾರಿಗಳನ್ನು ಶೀಘ್ರವೆ ಪ್ರಾರಂಭವಾಗದೆ ಇದ್ದಲ್ಲಿ ಅಂತಹ ಕಾಮಗಾರಿಗಳ ಅನುದಾನವನ್ನು ಮರಳಿ ಪಡೆಯಲಾಗುವದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಕಾವೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೆಶಕಿ ಸಿಂಧೂ, ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ ವಿಭಾಗದ ಅಪರ ಆಯುಕ್ತರಾದ ಜಯಶ್ರೀ ಶಿಂತ್ರಿ ಸೇರಿದಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೆಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.