Celebrate the festival with peace and harmony : SP Dr. Rama L. Arasiddi
ಕೊಪ್ಪಳ (ಗಂಗಾವತಿ) :ಮುಂಬರುವ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಎಲ್ಲರೂ ಸೇರಿ ಅತ್ಯಂತ ಸೌಹಾರ್ದಯುತವಾಗಿ ಆಚರಣೆ ಮಾಡಬೇಕು ಎಂದು ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ ಹೇಳಿದರು.
ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಐ,ಎಂ.ಎ. ಹಾಲನಲ್ಲಿ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಸರಕಾರದ ಆದೇಶಗಳನ್ನು ಪಾಲಿಸಿ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಆಚರಿಸಿ ಹಾಗೂ ಯಾವುದೇ ಆಹಿತಕರ ಘಟನೆಗಳಿಗೆ ಅವಕಾಶ ಕೊಡದಂತೆ ತಮ್ಮ ತಮ್ಮ ಗ್ರಾಮಗಳಲ್ಲಿ ಹಬ್ಬಗಳನ್ನು ಶಾಂತಿಯಿಂದ ಆಚರಿಸಬೇಕು.
ಗಣೇಶ ಮೂರ್ತಿ ಪ್ರತಿಷ್ಠಾಪಿಸುವಾಗ ನಗರಸಭೆ ಅಗ್ನಿಶಾಮಕ, ಕೆಇಬಿ ಮತ್ತು ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಠಾಣೆ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಧ್ವನಿವರ್ಧಕ ಬಳಕೆಗೆ ಪೊಲೀಸರಿಂದ ಮತ್ತು ವಿದ್ಯುತ್ ದೀಪ ಬಳಸಲು ಜೆಸ್ಕಾಂ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಯ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಂಡಳಿಯವರು ಜಾಗೃತಿ ವಹಿಸಬೇಕು.
ಗಣೇಶ ಮೂರ್ತಿಯನ್ನು ಕಾಯಲು ಸದಸ್ಯರ ಸಮಿತಿಯನ್ನು ರಚಿಸಬೇಕು ಹಾಗೂ ಗಣೇಶನ ದರ್ಶನಕ್ಕೆ ಆಗಮಿಸುವ ಮಹಿಳೆಯರಿಗೆ ಪ್ರತ್ಯೇಕ ವಾಗಿ ದರ್ಶನದ ವ್ಯವಸ್ಥೆ ಕಲ್ಪಿಸಿ ಕೊಡಬೇಕು. ಪೊಲೀಸ್ ಠಾಣೆ ಅನುಮತಿ ಪಡೆಯುವ ಸಂದರ್ಭದಲ್ಲಿ ನೀವು ಕೇಳಿದ ದಿನದಂದೆ ರಾತ್ರಿ ಹತ್ತು ಗಂಟೆಯ ಒಳಗಾಗಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಬೇಕು.
ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಹೇಳಿದರು.
ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ಅವರು ಮಾತನಾಡಿ ಠಾಣೆ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮದ ಮುಖಂಡರು ಹಾಗೂ ಎಲ್ಲಾ ಸಮುದಾಯದವರು ಅಣ್ಣ ತಮ್ಮಂದಿರಂತೆ ಶಾಂತಿ ಯುತವಾಗಿ ಯಾವುದೇ ಗದ್ದಲ ಗಲಾಟೆಗಳಿಗೆ ಅವಕಾಶ ನೀಡದಂತೆ ಹಬ್ಬಗಳನ್ನು ಆಚರಿಸಿರಿ.
ಸರಕಾರ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಿರಿ ಕಾನೂನು ಸುವ್ಯವಸ್ಥೆ ಪಾಲಿಸಿ ನಿಮ್ಮ ಒಳ್ಳೆ ಕಾರ್ಯ ಕೆಲಸಗಳಿಗೆ ಪೊಲೀಸ್ ಇಲಾಖೆ ಸದಾ ನಿಮ್ಮ ಜೊತೆ ಇರುತ್ತದೆ ಎಂದು ಸಾರ್ವಜನಿಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿನಗರಸಭೆ ಅಧ್ಯಕ್ಷ ಮೌಲಸಾಬ,ಉಪಾಧ್ಯಕ್ಷ ಪಾರ್ವತಿ ದೊಡ್ಡಮನಿ, ತಹಶಿಲ್ದಾರ ಯು. ನಾಗರಾಜ, ಎಇಇ ವಿಶ್ವನಾಥ, ನಗರ ಪೊಲೀಸ್ ಠಾಣೆ ಪಿಐ ಪ್ರಕಾಶ ಮಾಳೆ, ಗ್ರಾಮೀಣ ಠಾಣೆ ಸಿಪಿಐ ಸೋಮಶೇಖರ್ ಜುಟ್ಟಲ್, ವಿವಿಧ ಇಲಾಖೆಯ ಅಧಿಕಾರಿಗಳಾದ ವಿರೇಶ, ಸುಭಾಷ್, ರಂಗನಾಥ, ಹರಿಪ್ರಶಂಕರ್, ಮುಖಂಡರಾದ ಶಾಮೀದ್ ಮನಿಯಾರ್,ಸಂತೋಷ ಕೆಲೋಜಿ, ಹನುಮಂತಪ್ಪ ನಾಯಕ್, ಹುಸೇನಪ್ಪ ಹಂಚಿನಾಳ, ಎಸ್.ಬಿ.ಖಾದ್ರಿ, ಹೊಸಹಳ್ಳಿ ಶಂಕರಗೌಡ, ನೀಲಕಂಠ ನಾಗಶೆಟ್ಡಿ, ದಳಪತಿ, ನಗರಸಭೆ ಸದಸ್ಯರು ಹಾಗೂ ಗ್ರಾಮೀಣ ಭಾಗದ ಮುಖಂಡರು ಸೇರಿದಂತೆ ಇತರರು ಇದ್ದರು.