Supreme Court bans Patanjali advertisement
ಹೊಸದಿಲ್ಲಿ : ಸುಪ್ರೀಂ ಕೋರ್ಟ್ ಮಂಗಳವಾರ ತನ್ನ ಮಧ್ಯಂತರ ಆದೇಶದಲ್ಲಿ ಪತಂಜಲಿ ಆಯುರ್ವೇದ ಔಷಧಿಗಳ ಜಾಹೀರಾತುಗಳ ಮೇಲೆ ನಿಷೇಧ ಹೇರಿದೆ ಎಂದು barandbench.com ವರದಿ ಮಾಡಿದೆ.
ಯಾವುದೇ ಪ್ರಾಯೋಗಿಕ ಪುರಾವೆಗಳಿಲ್ಲದಿದ್ದರೂ, ಪತಂಜಲಿಯು ತನ್ನ ಔಷಧಿಗಳು ಕೆಲವು ರೋಗಗಳನ್ನು ಗುಣಪಡಿಸುತ್ತದೆ ಎಂದು ದಾರಿತಪ್ಪಿಸುತ್ತಿದೆ. ಆ ಮೂಲಕ ದೇಶದ ಜನರ ಆರೋಗ್ಯದ ಮೇಲೆ ಸವಾರಿ ಮಾಡುತ್ತಿದೆ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಹೇಳಿದೆ.
ಆದ್ದರಿಂದ, ಪತಂಜಲಿಯು ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆಯಲ್ಲಿ ನಿರ್ದಿಷ್ಟಪಡಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತದೆ ಎಂದು ಅವರು ಹೇಳಿಕೊಳ್ಳುವ ಯಾವುದೇ ಔಷಧೀಯ ಉತ್ಪನ್ನಗಳನ್ನು ಜಾಹೀರಾತು ಮಾಡಲು ಅಥವಾ ಮಾರಾಟ ಮಾಡಲು ಅವಕಾಶವಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.
ಪತಂಜಲಿ ಉತ್ಪನ್ನಗಳ ಬಗ್ಗೆ ಸುಳ್ಳು ಮಾಹಿತಿಯಿರುವ ಜಾಹಿರಾತು ನೀಡುವುದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಆದರೂ, ತಡೆಯಾಜ್ಞೆ ಉಲ್ಲಂಘಿಸಿ ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿಗಳನ್ನು ಪ್ರಚಾರ ಮಾಡುವುದನ್ನು ಪತಂಜಲಿ ಮುಂದುವರೆಸಿತ್ತು. ಈ ಕಾರಣಕ್ಕಾಗಿ ಪತಂಜಲಿಯ ಸಂಸ್ಥಾಪಕರಾದ ಯೋಗ ಗುರು ರಾಮ್‌ದೇವ್ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಚಾರ್ಯ ಬಾಲಕೃಷ್ಣ ಅವರಿಗೆ ನ್ಯಾಯಾಲಯವು ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿತು.
2022 ರಲ್ಲಿ ಪತಂಜಲಿಯ ಸುಳ್ಳು ಜಾಹಿರಾತು ಕುರಿತು ಅರ್ಜಿ ಸಲ್ಲಿಸಲಾಗಿದ್ದರೂ, ದಾರಿತಪ್ಪಿಸುವ ಪ್ರಚಾರಕ್ಕೆ ಕಡಿವಾಣ ಹಾಕದ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು.”ಔಷಧಿ ಕಾಯ್ದೆ ಪ್ರಕಾರ ಪತಂಜಲಿ ಉತ್ಪನ್ನಗಳನ್ನು ನಿಷೇಧಿಸಲಾಗಿದೆ ಎಂದು ಹೇಳಿದರೂ, ನೀವು ಎರಡು ವರ್ಷಗಳ ಕಾಲ ಕಾಯುತ್ತೀರಾ? ಹೀಗೆ ಮಾಡುವ ಮೂಲಕ ಇಡೀ ದೇಶವನ್ನೇ ಅಪಾಯಕ್ಕೆ ತಳ್ಳಲಾಗಿದೆ” ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.