
Kannada Week: Awareness Jatha


ಕನಕಗಿರಿಯ ಎಕ್ಸೆಲ್ ಪಬ್ಲಿಕ್ ಶಾಲೆಯ ವತಿಯಿಂದ ಕನ್ನಡ ಸಪ್ತಾಹ ಕಾರ್ಯಕ್ರಮದ ನಿಮಿತ್ತ ಶನಿವಾರ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು
ಕನಕಗಿರಿ: ಇಲ್ಲಿನ ಎಕ್ಸೆಲ್ ಪಬ್ಲಿಕ್ ಶಾಲೆಯ ವತಿಯಿಂದ ಕನ್ನಡ ರಾಜ್ಯೋತ್ಸವದ ನಿಮಿತ್ತ ಕನ್ನಡ ಸಪ್ತಾಹದ ಜಾಗೃತಿ ಜಾಥಾ ಕಾರ್ಯಕ್ರಮ ಶನಿವಾರ ನಡೆಯಿತು.
ಮುಖ್ಯಶಿಕ್ಷಕಿ ಅರುಣಕುಮಾರಿ ವಸ್ತ್ರದ ಮಾತನಾಡಿ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ, ವಿದ್ಯಾರ್ಥಿಗಳಲ್ಲಿ ಮಾತೃಭಾಷೆಯ ಕುರಿತು ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಶಾಲೆಯಲ್ಲಿ ಕನ್ನಡ ಸಪ್ತಾಹ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ, ವೇಷಭೂಷಣ ಸ್ಪರ್ಧೆ ಸೇರಿದಂತೆ ಪ್ರತಿ ದಿನ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಮೆಹಬೂಬಹುಸೇನ ಮಾತನಾಡಿ ಕನ್ನಡ ಭಾಷೆಯು ಸುಲಿದ ಬಾಳೆಹಣ್ಣಿನಂತೆ ಇದ್ದು ಅದರ ವಿಶಿಷ್ಟತೆಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕೆಂದು ಹೇಳಿದರು. ಅನ್ಯ ಭಾಷೆಗೆ ಹೋಲಿಸಿಕೊಂಡರೆ ಕನ್ನಡವನ್ನು ಸರಳವಾಗಿ ಕಲಿಯಲು, ಬರೆಯಲು ಹಾಗೂ ಮಾತನಾಡಲು ಸಾಧ್ಯವಿದೆ ಎಂದರು. ಗೌರವ ಕಾರ್ಯದರ್ಶಿ ಕನಕರೆಡ್ಡಿ ಕೆರಿ, ನಿವೃತ್ತ ಮುಖ್ಯಶಿಕ್ಷಕ ಶ್ರೀಶೈಲ ಪಾಟೀಲ, ಶಿಕ್ಷಕ ಪ್ರಶಾಂತ ಸೇರಿದಂತೆ ಶಿಕ್ಷಕರು ಇದ್ದರು. ವಿದ್ಯಾರ್ಥಿಗಳು ಕಲ್ಮಠದಿಂದ ರಾಜಬೀದಿ ಸೇರಿದಂತೆ ಪಟ್ಟಣದ ವಿವಿಧ ಬೀದಿಗಳಲ್ಲಿ ಕನ್ನಡ ಭಾಷೆಯ ಕುರಿತು ಜಾಥಾ ನಡೆಸಿ ಜಾಗೃತಿ ಮೂಡಿಸಿದರು. ನಾಡು ನುಡಿಗೆ ಸಂಬಂಧಿಸಿದಂತೆ ಘೋಷಣೆ ಕೂಗಲಾಯಿತು. ವಿದ್ಯಾರ್ಥಿಗಳು ವಿವಿಧ ವೇಷಭೂಷಣ ಧರಿಸಿ ಗಮನ ಸೆಳೆದರು. ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ನೃತ್ಯ ಪ್ರದರ್ಶಿಸಲಾಯಿತು.




