Manipur women violence protest against rape incident
ಕೊಪ್ಪಳ: ಮಣಿಪುರ ಮಹಿಳಾ ದೌರ್ಜನ್ಯ ಅತ್ಯಾಚಾರ ಘಟನೆ ಖಂಡಿಸಿ ಪ್ರಗತಿಪರ ಮಹಿಳಾ ಸಂಘಟನೆಗಳ ಮುಖಂಡರು ಸೇರಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.
ಘಟನೆ ಖಂಡಸಿ ಬುದುವಾರ ಪ್ರತಿಭಟನಾ ಮೆರವಣಿಗೆ ನಡೆಸಿದ ಪದಾಧಿಕಾರಿಗಳು ಜಿಲ್ಲಾಡಳಿತ ಕಚೇರಿಗೆ ಆಗಮಿಸಿ ಕೆಲ ಕಾಲ ಪ್ರತಿಭಟಿಸಿದರು. ಪಾತಕಿಗಳ ವಿರುದ್ಧ ಘೋಷಣೆ ಕೂಗಿದರು, ಬಳಿಕ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿಗಳ ಪರವಾಗಿ ನಗರಾಭಿವೃದ್ಧಿ ಕೋಶದ ಪಿಡಿ ಕಾವ್ಯಾರಾಣಿ ಅವರು ಮನವಿ ಸ್ವೀಕರಿಸಿದರು.
ಈ ವೇಳೆ ಪ್ರಗತಿಪರ ಮಹಿಳಾ ಸಂಘಟನೆಗಳ ಅನೇಕ ಮುಖಂಡರು ಮಾತನಾಡಿ, ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ್ದು ತೀವ್ರ ಖಂಡನೀಯ, ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರ, ಕೃತ್ಯ ಎಸಗಿದ ಪಾತಕಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು, ಮಣಿಪುರದಲ್ಲಿ ಕಳೆದ ೮೦ ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಕೋಮು ಸಂಘರ್ಷ ಅತ್ಯಂತ ಗಂಭೀರ ಸ್ವರೂಪ ಪಡೆಯುತ್ತಿದ್ದು, ಕೇಂದ್ರ ಸರ್ಕಾರವಾಗಲಿ, ಅಲ್ಲಿನ ರಾಜ್ಯ ಸರ್ಕಾರವಾಗಲಿ ಯಾವುದೇ ದಿಟ್ಟ ಕ್ರಮಗಳನ್ನು ಕೈಗೊಳ್ಳದಿರುವುದು ಖಂಡನೀಯ, ಎರಡು ಬುಡಕಟ್ಟುಗಳ ಮಧ್ಯೆ ನಡೆದ ಸಂಘರ್ಷ ಅತಿರೇಕಕ್ಕೆ ಹೋಗಿ ಒಂದು ಬುಡಕಟ್ಟಿನ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಅವರ ಮೇಲೆ ಅಮಾನವೀಯವಾಗಿ ಗುಂಪು ಅತ್ಯಾಚಾರವೆಸಗಿ ಕ್ರೂರತ್ವ ಮೆರೆದ ಘಟನೆ ಇಡೀ ನಾಗರಿಕ ಸಮುದಾಯ ತಲೆತಗ್ಗಿಸುವಂತಾಗಿದೆ.
ಐತಿಹಾಸಿಕ ಹಾಗೂ ಭೌಗೋಳಿಕ ವಿಶೇಷತೆಗಳಿಂದ ಪ್ರವಾಸಿಗಳ ಆಕರ್ಷಣೀಯ ಕೇಂದ್ರ ಬಿಂದುವಾದ ಮಣಿಪುರದಲ್ಲಿಂದು ನಿರಂತರ ಕೋಮುಗಲಭೆಗಳಿಂದ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೋಮು ಹಿಂಸಾಚಾರದಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ನಿರ್ಗತಿಕರಾಗಿದ್ದರೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಮಣಿಪುರ ರಾಜ್ಯ ಸರ್ಕಾರಗಳು ಮೂಕಪ್ರೇಕ್ಷಕವಾಗಿರುವುದು ಅತ್ಯಂತ ಖಂಡನೀಯ ತುರ್ತಾಗಿ ಮಹಿಳೆಯರ ಧ್ವನಿಯಾದ ಮಹಿಳಾ ರಾಷ್ಟ್ರಪತಿಗಳು ಕಾನೂನು ಕ್ರಮಕ್ಕೆ ಮುಂದಾಗಬೇಕು, ಸವೋಚ್ಛ ನ್ಯಾಯಾಲಯವೂ ಎಚ್ಚರಿಕೆ ನೀಡಿದ್ದು ಸರಕಾರದ ಮೇಲೆ ಅನುಮಾನ ಬರುವಂತೆ ಮಾಡಿದೆ ಎಂದರು.
ಪ್ರತಿಭಟನೆಯಲ್ಲಿ ಹೋರಾಟಗಾರ್ತಿ ಸಾವಿತ್ರಿ ಮುಜುಮದಾರ, ಸಹಜಾ ಟ್ರಸ್ಟ್ ನ ಶೀಲಾ ಹಾಲ್ಕುರಿಕೆ, ಸಾಮಾಜಿಕ ಹೋರಾಟಗಾರ್ತಿ ಜ್ಯೋತಿ ಹಿಟ್ನಾಳ, ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ, ಧ್ವನಿ ಸ್ವಯಂ ಸೇವಾ ಸಂಸ್ಥೆಯ ಶಂಕರ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ವಿಜಯಲಕ್ಷ್ಮಿ ಹಂಚಾಟೆ, ಕದಳಿ ವೇದಿಕೆಯ ಅಧ್ಯಕ್ಷೆ ನಿರ್ಮಲಾ ಬಳ್ಳೊಳ್ಳಿ, ಸೌಭಾಗ್ಯಲಕ್ಷ್ಮೀ ಗೊರವರ್, ಸುಮಂಗಲಾ ಹಂಚಿನಾಳ, ಸವಿತಾ ಸವಡಿ, ಸುಧಾ ಶೆಟ್ಟರ್, ಸರೋಜಾ ಬಾಕಳೆ, ಶಿಲ್ಪಾ ಸಸಿಮಠ, ಶೋಭಾ ಪಲ್ಲೇದ, ಸಲಿಮಾ ಜಾನ್, ಹುಸೇನಬಿ ಭಕ್ಷಿ, ಗವಿಸಿದ್ಧಪ್ಪ ಹಲಗಿ, ವಿಸ್ತಾರ ಸಂಸ್ಥೆಯ ಜಾಸ್ಮಿನ್, ಅನ್ವರ ಭಾಷಾ, ಸೌಭಾಗ್ಯ ಕದ್ರಳ್ಳಿ, ಗೌರಿ, ಮೆಹಮೂದಾ ಕುದರಿಮೋತಿ, ನಸ್ರೀನ್ ಗೋಡೆಕಾರ ಮುಂತಾದವರು ಇದ್ದರು.