Dr. Kambar's plays deal with contemporary issues - Hanumanthappa Andagi
ಅಳವಂಡಿ:ಕವಿ,ಕತೆಗಾರ,ಕಾದಂಬರಿಕಾರ,ನಾಟಕಕಾರ, ಜಾನಪದ ತಜ್ಞರಾದ ಡಾ. ಚಂದ್ರಶೇಖರ ಕಂಬಾರ ಅವರು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿ, ಕನ್ನಡ ಸಾಹಿತ್ಯಕ್ಕೆ 8ನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟು ಕನ್ನಡ ಸಾಹಿತ್ಯದ ಹಿರಿಮೆಯನ್ನು ಜಗತ್ತಿಗೆ ಪರಿಚಯಿಸಿದವರು. ಸಿರಿಸಂಪಿಗೆ, ತಿರುಕನ ಕನಸು, ಶಿವರಾತ್ರಿ, ಋಷ್ಯಶೃಂಗ, ಜೋಕುಮಾರಸ್ವಾಮಿ, ಸಂಗ್ಯಾ ಬಾಳ್ಯಾ, ಬೆಪ್ಪುತಕ್ಕಡಿ ಬೋಳೆಶಂಕರ ಮುಂತಾದ ನಾಟಕಗಳನ್ನು ರಚಿಸುವುದರ ಮೂಲಕ ಕನ್ನಡ ಮಾತ್ರವಲ್ಲದೆ ಭಾರತೀಯ ರಂಗಭೂಮಿಗೂ ಗಮನಾರ್ಹ ಕೊಡುಗೆ ನೀಡಿದ್ದಾರೆ. ಅವರ ನಾಟಕಗಳು ಮುಖ್ಯವಾಗಿ ಸಮಕಾಲಿನ ಸಮಸ್ಯೆಗಳೊಂದಿಗೆ ಪರಸ್ಪರ ಸಂಬಂಧ ಹೊಂದಿವೆ. ಅವರ ನಾಟಕಗಳಲ್ಲಿ ಜಾನಪದ ಹಾಗೂ ಆಧುನಿಕ ನಾಟಕೀಯ ಪ್ರಕಾರಗಳ ಮಿಶ್ರಣವಿದೆ ಎಂದು ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು. ಅವರು ಮಂಗಳವಾರ ಅಳವಂಡಿ ಸಮೀಪದ ಹಿರೇಸಿಂದೋಗಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಡಾ. ಚಂದ್ರಶೇಖರ ಕಂಬಾರ ಅವರ ಬೆಪ್ಪುತಕ್ಕಡಿ ಬೋಳೆಶಂಕರ ನಾಟಕ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಮಹಾವಿದ್ಯಾಲಯದ ಜೀವಶಾಸ್ತ್ರ ಉಪನ್ಯಾಸಕರಾದ ವೀರಶೇಖರ ಪತ್ತಾರ ಅವರು ಮಾತನಾಡುತ್ತಾ, ಇಂದು ನಮ್ಮ ಮಹಾವಿದ್ಯಾಲಯದಲ್ಲಿ ಪ್ರದರ್ಶನಗೊಂಡ ನಾಟಕಗಳ ಪ್ರತಿಯೊಂದು ಪಾತ್ರಗಳು ಜೀವಂತವಾಗಿದ್ದು, ಮಕ್ಕಳಿಗೆ ಮನನವಾದವು ಮತ್ತು ರಂಜನೀಯವಾಗಿದ್ದವು. ಪಠ್ಯಕ್ಕೆ ಪೂರಕವಾಗಿದ್ದು ವಿದ್ಯಾರ್ಥಿಗಳ ಮನಗಳಿಗೆ ಅಚ್ಚೋತ್ತಿದ್ದಷ್ಟೇ ಅಲ್ಲದೆ, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹಾಗೂ ವೈಯಕ್ತಿಕ ಪ್ರಜ್ಞೆ ಎಚ್ಚರಗೊಳಿಸುವಂತಿದ್ದವು ಎಂದರು. ನಾಟಕದ ನಿರ್ದೇಶಕರು ಹಾಗೂ ಕೊಪ್ಪಳದ ಯುವ ರಂಗಕರ್ಮಿ ಮತ್ತು ರಂಗದಾರ ರೆಪರ್ಟಿಯ ಸಂಚಾಲಕರಾದ ಲಕ್ಷ್ಮಣ ಪೀರಗಾರ ಅವರು ಮಾತನಾಡುತ್ತಾ, ಸಮಾಜದ ಓರೆ ಕೋರೆಗಳನ್ನು ತಿದ್ದುವಿಕೆಯಲ್ಲಿ ರಂಗಭೂಮಿ ಕಲೆ ಅತ್ಯಂತ ಪರಿಣಾಮಕಾರಿಯಾಗಿದೆ. ನಮ್ಮ ತಂಡದ ಮೂಲಕ ಶಾಲಾ-ಕಾಲೇಜುಗಳ ಪಠ್ಯಗಳನ್ನು ರಂಗಭೂಮಿ ಮುಖೇನ ವಿದ್ಯಾರ್ಥಿಗಳನ್ನು ತಲುಪುವುದು ನಮ್ಮ ಉದ್ದೇಶವಾಗಿದೆ ಎಂದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು , ತಾವು ಪಿಯುಸಿ ಓದುವಾಗ ಅಭಿನಯಿಸಿದ “ಮದನ ಮೋಹನ”ನಾಟಕದ ಒಂದು ಡೈಲಾಗ್ ಹೇಳುವುದರ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಉಪನ್ಯಾಸಕರಾದ ವೀರಣ್ಣ ಜೋಗಿನ್ ,ಐ.ಎನ್.ಪಾಟೀಲ, ಅನಿತಾ ದಲಬಂಜನ್, ಗುಜ್ಜಲ ಆಂಜನೇಯ, ಜಯಪಾಲರೆಡ್ಡಿ ಚಲ್ಲಾ, ಸಂಗೀತ ಬಿಳಗಿಮಠ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.