A lot of people may have these confusions about Lingayat religion, once you read it, you can get answers to many of your questions.
ಗಾಟ್ಸಪ್ ಕೃಪೆ
ಅಮರ ಪಾಟೀಲ ರಾಯಚೂರು ,ಬೆಂಗಳೂರು
1. ಏನು ಹೊಸ ಧರ್ಮದ ಪ್ರಚಾರ ಜೋರಾ? ಜಾತೀನ ಧರ್ಮ ಮಾಡ್ತಿದೀರಲ್ಲ!
ಉತ್ತರ : ಲಿಂಗಾಯತ ಜಾತಿ ಅಲ್ಲ ಅದೊಂದು ಧರ್ಮ. ಇದೇನು ಹೊಸದಾಗಿ ಸೃಷ್ಟಿಸುತ್ತಿರೋ ಧರ್ಮವಲ್ಲ ಬದಲಾಗಿ 12ನೇ ಶತಮಾನದಲ್ಲೇ ಬಸವಾದಿ ಶರಣರಿಂದ ಹುಟ್ಟಿದ ಧರ್ಮ. ಅಂದಿನಿಂದ ಹಿಡಿದು 19 ನೇ ಶತಮಾನದವರೆಗೂ ಬ್ರಿಟಿಷ್ ಆಡಳಿತದ ಗೆಜೆಟ್, ಕೋರ್ಟ್ ನ ದಾಖಲೆಗಳಲ್ಲೂ ಸ್ವತಂತ್ರ ಧರ್ಮವೆಂದೇ ದಾಖಲಾಗಿದೆಯೇ ಹೊರತು ಹಿಂದೂ ಧರ್ಮದ ಜಾತಿಯೆಂದಲ್ಲ. ಆನಂತರ ಕೆಲವರ ಕುತಂತ್ರದಿಂದಾಗಿ ಜಾತಿಯಾಗಿ ಬದಲಾಯ್ತು. ಅಂದಿನಿಂದಲೂ ಈ ಅನ್ಯಾಯದ ವಿರುದ್ಧ ಹೋರಾಟ ಆರಂಭವಾಗಿದೆ ಇಂದು ಅದರ ಕೂಗು ಹೆಚ್ಚಾಗಿದೆ. ನಾವು ನಮಗಾದ ಅನ್ಯಾಯವನ್ನು ಸರಿಪಡಿಸೋ ಯತ್ನದಲ್ಲಿದ್ದೇವೆ. ಈಗ ನಮ್ಮ ಧರ್ಮಕ್ಕೆ ಬೇಕಿರೋದು ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆಯಷ್ಟೇ. ಅದಕ್ಕಾಗಿ ಶಾಂತಿಯಿಂದಲೇ ನ್ಯಾಯಸಮ್ಮತ ಹೋರಾಟ ಮಾಡುತ್ತಿದ್ದೇವೆ.
2. ಹಿಂದೂ ಧರ್ಮದ ಭಾಗವಾಗೇ ಇರಬಹುದಲ್ಲ ನಿಮಗೇನು ತೊಂದರೆ?
ಉತ್ತರ : ಸಿಂಧೂ ನಾಗರಿಕತೆಗೆ ಹತ್ತಿರವಾಗಿರೋ ಜನರನ್ನು ಹಿಂದೂ ಎಂದು ಕರೆಯಲಾಗಿದೆ. ಹೀಗಾಗಿ ಹಿಂದೂ ಅನ್ನೋದು ಧರ್ಮವಲ್ಲ ಬದಲಾಗಿ ಜೀವನ ಪದ್ಧತಿ ಹಾಗಂತ ಕೋರ್ಟು ಕೂಡ ಸ್ಪಷ್ಟಪಡಿಸಿದೆ. ವೈದಿಕ ಧರ್ಮವನ್ನು ಹಿಂದೂ ಧರ್ಮ ಅಂತ ಬಿಂಬಿಸಿ ನಂಬಿಸಲಾಗಿದೆ ಅಷ್ಟೇ! ಅಲ್ಲಿ ಚಾತುರ್ವರ್ಣ ವ್ಯವಸ್ಥೆಯಿದೆ ಜಾತಿ ತಾರತಮ್ಯವಿದೆ ಮೇಲು-ಕೀಳು ಭಾವನೆಯಿದೆ. ಇದನ್ನು ಲಿಂಗಾಯತ ಧರ್ಮ ಸ್ಪಷ್ಟವಾಗಿ ವಿರೋಧಿಸುತ್ತೆ. ಬಸವತತ್ವ ವಿರೋಧಿ ವೈದಿಕ ಆಚರಣೆಗಳನ್ನು ನಾವು ಒಪ್ಪಲ್ಲ ಹೀಗಾಗಿ ನೀವು ಹೇಳೋ ಹಿಂದೂ ಧರ್ಮದ ಭಾಗವಾಗಿರಲು ನಮಗಿಷ್ಟವಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ 12 ನೇ ಶತಮಾನದ ಬಸವಾದಿ ಶರಣರ ಭವ್ಯ ಪರಂಪರೆಯ ಇತಿಹಾಸವಿರೋ ಧರ್ಮ ನಮ್ಮದಿರೋವಾಗ ನಾವ್ಯಾಕೆ ಇನ್ನೊಂದು ಧರ್ಮದ ಭಾಗವಾಗಬೇಕೆಂದು ನೀವು ಬಯಸುತ್ತೀರಿ ? ನಮ್ಮದು ಬಸವಾದಿ ಶರಣರ ಧರ್ಮ ಅಲ್ಲೆ ಇರಲು ನಮ್ಮ ಇಚ್ಛೆ.
3. ಲಿಂಗಾಯತ-ವೀರಶೈವ ಒಂದೇ ಅಲ್ವಾ! ಯಾಕೆ ವೀರಶೈವರ ಜೊತೆ ಮುನಿಸು?
ಉತ್ತರ : ಲಿಂಗಾಯತ, ವೀರಶೈವ ಖಂಡಿತ ಎರಡೂ ಬೇರೆ ಬೇರೆ. ವೀರಶೈವ ಅನ್ನೋದು ಶೈವ ಪರಂಪರೆಯ ಒಂದು ಭಾಗ. ಅವರು ವೈದಿಕ ಆಚರಣೆಗಳನ್ನು ಪಾಲಿಸುತ್ತಾರೆ ವೀರಶೈವ(ಅವ)ರೇ ಹೇಳುವಂತೆ ವೀರಶೈವ(ಅವ)ರು ಹಿಂದೂ ಧರ್ಮೀಯರೇ ಹೊರತು ಲಿಂಗಾಯತರಲ್ಲ. ಲಿಂಗಾಯತರು ವೀರಶೈವರೂ ಅಲ್ಲ, ಹಿಂದೂಗಳೂ ಅಲ್ಲ ಬದಲಾಗಿ ‘ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಿದ ಧರ್ಮವಿದು’. ನೀವೇಳುವಂತೆ ಯಾರೊಂದಿಗೂ ನಮ್ಮ ಮುನಿಸಿಲ್ಲ. ಬಸವೇಶ್ವರರನ್ನು ಧರ್ಮಗುರುವೆಂದು ಒಪ್ಪದ, ಅವರ ಭಾವಚಿತ್ರದ ಕೆಳಗೂ ಹೋಗಲಾರೆ ಎಂದು ದುರಂಹಕಾರಿ ಹೇಳಿಕೆ ನೀಡೋರನ್ನ ನಾವೂ ಒಪ್ಪಲಾಗದು. ಬಸವಾದಿ ಶರಣರನ್ನು ಒಪ್ಪಿ, ಬಸವ ವಿರೋಧಿ ತತ್ವಗಳನ್ನು ಬಿಟ್ಟು ಬರುವುದಾದರೆ ವೀರಶೈವರಾದಿಯಾಗಿ ಯಾರಿಗಾದರೂ ನಮ್ಮ ಧರ್ಮಕ್ಕೆ ಸ್ವಾಗತ.
4. ಹಾಗಾದ್ರೆ ಲಿಂಗಾಯತರೆಲ್ಲಾ ಶರಣಧರ್ಮವನ್ನು ಪಾಲಿಸ್ತಿದಾರಾ? ಅಲ್ಲೂ ತಾರತಮ್ಯವಿದೆಯಲ್ಲ !
ಉತ್ತರ : ಈ ಪ್ರಶ್ನೆಯಲ್ಲಿ ಅರ್ಥವಿದೆ. ಲಿಂಗಾಯತರು ಕೂಡ ಜಾತಿ-ಭೇಧ ಮಾಡೋದು ನಿಜ ಒಪ್ಪಿಕೊಳ್ಳುತ್ತೇನೆ. ಇದಕ್ಕೆ ಮೂಲ ಕಾರಣ ಅವರು ಇನ್ನೂ ವೈದಿಕ ಧರ್ಮದ ಭಾಗವಾಗೇ ಇರೋದು. ಅಂದು 12 ನೇ ಶತಮಾನದಲ್ಲಾದ ಕ್ರಾಂತಿಯನ್ನು ಸಹಿಸದ ಕೆಲವು ಕುತಂತ್ರಿ ಮೂಲಭೂತವಾದಿಗಳು ಅಂದು ಶರಣ ಧರ್ಮವನ್ನು ನಾಶ ಮಾಡಲು ಯತ್ನಿಸಿದರು. ವಚನಗಳನ್ನು ಸುಟ್ಟು, ಶರಣರನ್ನು ಕೊಂದು ಕೊನೆಗೆ ಬಸವಣ್ಣನವರನ್ನು ಗಡೀಪಾರು ಮಾಡಿಸಿದರು. ಶರಣರ ಧ್ವನಿ ಅಡಗಿಸಿ, ಭಯದ ವಾತಾವರಣ ನಿರ್ಮಿಸಿ ಲಿಂಗಾಯತರನ್ನು ಮತ್ತದೇ ವೈದಿಕ ವ್ಯವಸ್ಥೆಯ ಭಾಗವಾಗಿಸಿದರು. ಆನಂತರ ಆಂಧ್ರ ಮೂಲದ ಆಚಾರಿಗಳು ಲಿಂಗಾಯತ ಧರ್ಮ ಸೇರಿಕೊಂಡು ವೈದಿಕತೆ ತುಂಬಿ ಇನ್ನಷ್ಟು ಅಪಭೃಂಶಗೊಳಿಸಿದರು. ಇನ್ನೂ ಅದೇ ಪ್ರಭಾವ ಹೆಚ್ಚಿನ ಲಿಂಗಾಯತರಲ್ಲಿದೆ ಇದರಿಂದ ಅವರನ್ನು ಹೊರತಂದು ಮತ್ತೆ ಅವರನ್ನು ನೈಜ ಶರಣತತ್ವದೆಡೆಗೆ ಕರೆದೊಯ್ಯೋದೇ ಸ್ವತಂತ್ರ ಧರ್ಮದ ಮೂಲ ಉದ್ದೇಶವಾಗಿದೆ. ಬಸವತತ್ವಗಳ ಪ್ರಚಾರ ಹೆಚ್ಚಾದಷ್ಟೂ ಮೂಢನಂಬಿಕೆ, ಅಂಧಶ್ರದ್ಧೆಗಳು, ಅಮಾನವೀಯ ಆಚರಣೆಗಳು ನಿಧಾನವಾಗಿ ತೊಲಗುತ್ತವೆ. ಇಂದು ಲಿಂಗಾಯತರಿಗೆ ನೈಜ ಲಿಂಗಾಯತ ಧರ್ಮದ ಅರಿವು ಮೂಡಬೇಕಿದೆ. ಇಂದು ನಾವು ಆ ನಿಟ್ಟಿನಲ್ಲಿ ಸಾಗುತ್ತಿದ್ದೇವೆ. ಸಮಾವೇಶಗಳ ಮೂಲಕ ಲಕ್ಷಾಂತರ ಜನರು ಒಗ್ಗೂಡುತ್ತಿದ್ದಾರೆ. ಜನರಲ್ಲಿ ನಿಧಾನವಾಗಿ ಬಸವಪ್ರಜ್ಞೆ ಮೂಡುತ್ತಿದೆ ತಾವು ಬಸವಾದಿ ಶರಣರ ಪರಂಪರೆಯವರೆಂಬ ಸತ್ಯ ಅರಿವಾಗುತ್ತಿದೆ.
5. ಬಸವಣ್ಣನವರು ಲಿಂಗಾಯತ ಧರ್ಮ ಮಾಡಿ ಅಂತ ಎಲ್ಲಿ ಹೇಳಿದಾರೆ?
ಉತ್ತರ : ಬುದ್ಧ ಕೂಡ ಬೌದ್ಧ ಧರ್ಮ ಮಾಡಿ ಅಂತಲೂ, ಯೇಸು ಕೂಡ ಕ್ರಿಶ್ಚಿಯನ್ ಧರ್ಮ ಮಾಡಿ ಅಂತಲೂ ಎಲ್ಲೂ ಹೇಳಿಲ್ಲ. ಅವರ ಅನುಯಾಯಿಗಳೇ ಧರ್ಮ ಪ್ರಸಾರ ಮಾಡಿದ್ದು ಅಲ್ಲವೇ ? ಬಸವಾದಿ ಶರಣರ ತತ್ವಗಳ ಮೇಲೆಯೇ 12 ನೇ ಶತಮಾನದಲ್ಲಿ ಲಿಂಗಾಯತ ಧರ್ಮ ಹುಟ್ಟಿದ್ದು. ಅದಕ್ಕೂ ಮುಂಚೆ ಲಿಂಗಾಯತರು ಅಂತ ಇರಲೆ ಅಲ್ಲ ಹಾಗಿರಲು ನಾವು ಹಿಂದೂಗಳಾಗಲು ಹೇಗೆ ಸಾಧ್ಯ? ಶರಣರ ಅನೇಕ ವಚನಗಳಲ್ಲಿ ಲಿಂಗಾಯತ/ಲಿಂಗವಂತ ಪದ ಬಳಸಲಾಗಿದೆ. ಇನ್ನೂ ಕೆಲವು ವಚನಗಳಲ್ಲಿ ವೀರಶೈವ ಪದವೂ ಇದೆ ಆದರೆ, ಕೆಲವು ಕುತಂತ್ರಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಆನಂತರ ಲಿಂಗಾಯತ ಪದ ತೆಗೆದುಹಾಕಿ ವೀರಶೈವ ಎಂದು ಆಮೇಲೆ ತಿದ್ದಿದ್ದಾರೆ.
6. ಶಿವನನ್ನು ಪೂಜಿಸೋ ನೀವುಗಳು ಲಿಂಗಾಯತ ಹೇಗೆ ಆಗ್ತೀರಿ ? ಶಿವ ಹಿಂದೂ ದೇವರಲ್ಲವೇ ?
ಉತ್ತರ : ‘ಶಿವ’ ಭಾರತೀಯ ಮೂಲನಿವಾಸಿಗಳ ಮೂಲ ದೇವರು. ಅವನು ಮುಕ್ಕೋಟಿ ದೇವತೆ, ವೇದ-ಪುರಾಣಗಳಿಗಿಂತಲೂ ಮೊದಲೇ ಇದ್ದವನು. ಅವನನ್ನು ಆದಿಯೋಗಿ ಅನ್ನುತ್ತೇವೆ. ಆನಂತರ ಆ ಶಿವನಿಗೆ ಪುರಾಣದ ರೂಪ ನೀಡಿ ವೈದಿಕ ಧರ್ಮದ ಭಾಗವಾಗಿಸಿದರು. ಆತನೇ ತ್ರಿಮೂರ್ತಿಗಳಲ್ಲೊಬ್ಬನಾದ ಶಿವ. ಆದರೆ, ಲಿಂಗಾಯತರಾದ ನಾವು ಪೂಜಿಸೋ ಶಿವ ನಿರಾಕಾರ. ನಾವು ಇಷ್ಟಲಿಂಗವನ್ನು ಪೂಜಿಸುತ್ತೆವೆಯೇ ಹೊರತು ಸ್ಥಾವರಲಿಂಗವನ್ನಲ್ಲ. ದೇವರನ್ನು ಯಾವ ಹೆಸರಿನಿಂದಾದರೂ ಪೂಜಿಸಬಹುದು. ಪೂರ್ವಾಶ್ರಮದಲ್ಲಿ ಶೈವರೇ ಆಗಿದ್ದ ಬಸವಾದಿ ಶರಣರು ದೇವನನ್ನು ‘ಶಿವ’ ಎಂದು ಕರೆದರು. ನಾವು ಪೂಜಿಸೋ ಶಿವ ಕೆಲವರು ಭಾವಿಸಿರುವಂತೆ ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವ ಅಲ್ಲ ಬದಲಾಗಿ ಅವನು ನಿರಾಕಾರ, ನಿರ್ಗುಣ, ಅಪ್ರತಿಮನಾದ ಶಿವ. ಲಿಂಗಾಯತ ಧರ್ಮ ಸ್ಥಾವರ ಲಿಂಗದ ಪೂಜೆಯನ್ನು ಸ್ಪಷ್ಟವಾಗಿ ವಿರೋಧಿಸುತ್ತೆ.
7. ಬಸವಾದಿ ಶರಣರ ವಚನಗಳಲ್ಲಿನ ಅಂಕಿತನಾಮ ಕೂಡಲಸಂಗಮ, ಚೆನ್ನಮಲ್ಲಿಕಾರ್ಜುನ ಅಂದರೆ ಯಾರು? ಶಿವನೇ ಅಲ್ಲವೇ!
ಉತ್ತರ : ಬಸವಾದಿ ಶರಣರಿಗೆ ಸಾಕ್ಷಾತ್ಕಾರವಾದ ಮೇಲೆ ದೇವರ ಬಗ್ಗೆ ಸ್ಪಷ್ಟ ಅಭಿಪ್ರಾಯ ತಳೆದ ಮೇಲೆ ನಿರಾಕಾರ ಶಿವನನ್ನು ಇಷ್ಟಲಿಂಗದ ಮೂಲಕ ಪೂಜಿಸೋ ಧರ್ಮಕಾರ್ಯ ಆರಂಭವಾಯಿತು. ಬಸವಾದಿ ಶರಣರು ಕೂಡಲಸಂಗಮ, ಚೆನ್ನಮಲ್ಲಿಕಾರ್ಜುನರನ್ನು ಇಷ್ಟಲಿಂಗದ ಮೂಲಕ ನಿರಾಕಾರ ಶಿವನಲ್ಲಿ ಕಂಡರು ಆ ಹೆಸರುಗಳನ್ನೇ ತಮ್ಮ ವಚನಗಳ ಅಂಕಿತವನ್ನಾಗಿಸಿದರು. ಇಲ್ಲಿ ಕೂಡಲಸಂಗಮ, ಚೆನ್ನಮಲ್ಲಿಕಾರ್ಜುನ ಎಂದರೆ ನಿರಾಕಾರ ಶಿವನೇ ಹೊರತು ಸ್ಥಾವರ ಲಿಂಗವಲ್ಲ. ತ್ರಿಮೂರ್ತಿಗಳಲ್ಲೊಬ್ಬನಾದ ಶಿವನಲ್ಲ. ಅವರು ಸ್ಥಾವರ ಲಿಂಗವನ್ನು ಪೂಜಿಸಲಿಲ್ಲ ಬದಲಾಗಿ ವಿರೋಧಿಸಿದರು ಅದನ್ನು ಅವರ ಅನೇಕ ವಚನಗಳಲ್ಲಿ ಕಾಣಬಹುದು.
ಈಗ ಕೂಡಲಸಂಗಮದಲ್ಲಿ ಇರೋದು ಸ್ಥಾವರಲಿಂಗ ಅದು ವೀರಶೈವರ ಗುಡಿ ಅದನ್ನು ಲಿಂಗಾಯತರು ಪೂಜಿಸೋ ಅಗತ್ಯವಿಲ್ಲ. ಬಸವಣ್ಣನವರು ಕೂಡಲಸಂಗಮದಲ್ಲಿ ಐಕ್ಯ ಹೊಂದಿದರು ಎಂಬುದಕ್ಕೆ ಮಾತ್ರ ನಮಗೆ ಅದು ಪವಿತ್ರ ಸ್ಥಳವಾಗಿದೆ.
8. ಓಂ, ಶ್ರೀ, ವಿಭೂತಿ, ರುದ್ರಾಕ್ಷಿ, ಕೇಸರಿ ಇದು ಹಿಂದೂ ಧರ್ಮದ ಭಾಗವಲ್ಲವೇ? ಸ್ವತಂತ್ರ ಧರ್ಮದವರು ಯಾಕೆ ಬಳಸುತ್ತೀರಿ ?
ಉತ್ತರ : ಪ್ರಕೃತಿ ದತ್ತವಾದ ವಸ್ತುಗಳಾದ ವಿಭೂತಿ, ರುದ್ರಾಕ್ಷಿ ಯಾರ ಆಸ್ತಿಯೂ ಅಲ್ಲ. ನಮ್ಮ ಉಸಿರಾಟದ ಮೂಲಕ ಹೊರಡುವ ಶಬ್ದ ‘ಓಂ’. ‘ಓಂ’ ಅನ್ನು ನಾವು ತತ್ವವಾಗಿ ಬಳಸುತ್ತೇವೆ ಹೊರತು ಮಂತ್ರವಾಗಿಯಲ್ಲ. ‘ಓಂ’ ಅನ್ನು ಜೈನ, ಬೌದ್ಧ ಧರ್ಮೀಯರು ಕೂಡ ಬಳಸುತ್ತಾರೆ. ಇವೆಲ್ಲಾ ಭಾರತೀಯ ಸಂಸ್ಕೃತಿಯ ಭಾಗವೇ ಹೊರತು ನಿರ್ಧಿಷ್ಟ ಧರ್ಮದ ಆಸ್ತಿಯಲ್ಲ. ಯಾರು ಯಾವ ಬಣ್ಣದ ಬಟ್ಟೆ ಧರಿಸಬೇಕು ಎಂದು ನಿರ್ಧರಿಸೋ ಹಕ್ಕು ಯಾರಿಗೂ ಇಲ್ಲ. ಅಲ್ಲದೇ ಹಿಂದೂ ಅನ್ನೋ ಧರ್ಮವೇ ಇಲ್ಲದಿರುವಾಗ ಅವರ ಆಸ್ತಿಯಾಗಲು ಹೇಗೆ ಸಾಧ್ಯ? ಸುಖಾಸುಮ್ಮನೆ ವಿರೋಧಿಸೋ ಮೂಢರು ಧರ್ಮದ ಆಚರಣೆಗಳಿಗೂ, ಭಾರತೀಯ ಸಂಸ್ಕೃತಿಯ ನಡುವಿನ ವ್ಯತ್ಯಾಸ ಮೊದಲು ಅರಿಯಬೇಕು.
9. ಮೀಸಲಾತಿಗಾಗಿ ಈ ಹೋರಾಟ, ಇದೆಲ್ಲಾ ಕಾಂಗ್ರೆಸ್ ಷಡ್ಯಂತ್ರ ರಾಜಕೀಯವಿದೆ ಅಂತಾರಲ್ಲ ಇದಕ್ಕೇನಂತೀರಿ ?
ಉತ್ತರ : ನೋಡಿ ಮೀಸಲಾತಿ ಪಡೆಯೋಕೆ ಸ್ವತಂತ್ರ ಧರ್ಮವಾಗಬೇಕೆಂತಿಲ್ಲ ಜಾತಿಯಿಂದಲೂ ಮೀಸಲಾತಿ ಪಡೆಯಬಹುದು ಮತ್ತು ಹಲವು ಪಂಗಡಗಳು ಪಡಿತಾಯಿವೆ. ವಿಶ್ವವ್ಯಾಪಿಯಾಗಬೇಕಿದ್ದ ಧರ್ಮದ ನಾಶಕ್ಕೆ ಯತ್ನಿಸಿ, ಜಾತಿಯನ್ನಾಗಿಸಿ ವೈದಿಕ ಧರ್ಮದಾಚರಣೆಯಲ್ಲಿ ಇಷ್ಟು ವರ್ಷಗಳ ಕಾಲ ನಮ್ಮನ್ನು ಬಂಧಿಸಿದ್ದು ಇನ್ನು ಸಾಕು ಈ ಗುಲಾಮಗಿರಿಯಿಂದ ಹೊರಬಂದು ನೈಜ ಶರಣಧರ್ಮದತ್ತ ಸಾಗೋದೇ ನಮ್ಮ ಮುಖ್ಯ ಉದ್ದೇಶವಾಗಿದೆಯೇ ಹೊರತು ಮೀಸಲಾತಿಯಷ್ಟೆಯಲ್ಲ. ಕಾಮಾಲೆ ಕಣ್ಣೋರಿಗೆ ಕಾಣೋದೆಲ್ಲಾ ಹಳದಿಯೆಂಬಂತೆ ವಿರೋಧಿಗಳಿಗೆ ಲಿಂಗಾಯತ ಧರ್ಮದ ಆಶಯಗಳು ಬಿಟ್ಟು ಕೇವಲ ಮೀಸಲಾತಿ ಕಾಣುತ್ತಿದೆ ಅಷ್ಟೇ. ಇವರಿಗೆ ಟೀಕಿಸಲು ಏನಾದರೂ ಒಂದು ಕಾರಣಬೇಕು. ಲಿಂಗಾಯತ ಧರ್ಮ 12ನೇ ಶತಮಾನದಲ್ಲೇ ಸ್ವತಂತ್ರವಾಗಿದೆ ಈಗ ಬೇಕಿರೋದು ಸಾಂವಿಧಾನಿಕ ಮಾನ್ಯತೆ ಮಾತ್ರ ಜೊತೆಗೆ ಮೀಸಲಾತಿ ಪ್ರಯೋಜನ ಕೊಟ್ಟರೂ ಅದು ಸಾಂವಿಧಾನಿಕ ಹಕ್ಕಾಗಿರುತ್ತದೆಯೇ ವಿನಹಃ ಯಾರಪ್ಪನ ಆಸ್ತಿಯೂ ಅಲ್ಲ. ಹಾಗೆಯೇ, ಸ್ವತಂತ್ರ ಧರ್ಮದ ಹೋರಾಟ ಮೊದಲಿನಿಂದಲೂ ಇದೆ ಈಗ ಶುರುವಾದುದಲ್ಲ. BSY ಕಾಲದಲ್ಲೂ ಎರಡು ಸಲ ಪ್ರತ್ಯೇಕ ಧರ್ಮಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು ಅದನ್ನು ಪುರಸ್ಕರಿಸಿ ಅವರು ಕೇಂದ್ರಕ್ಕೆ ಎರಡು ಸಲ ಶಿಫಾರಸ್ಸು ಸಹ ಮಾಡಿದ್ದರು. ವೀರಶೈವ ಹೆಸರಿನ ಕಾರಣಕ್ಕೆ ಆ ಪ್ರಸ್ತಾವನೆಗಳು ತಿರಸ್ಕೃತಗೊಂಡವು. ಅಂದು ಕೇವಲ ಲಿಂಗಾಯತ ಧರ್ಮ ಎಂದು ಅರ್ಜಿ ಸಲ್ಲಿಸಿದ್ದರು. ಇದೆಲ್ಲಾ ಸಿದ್ರಾಮಯ್ಯನವರ ಕಾಲದಲ್ಲೇ ಶುರುವಾದದ್ದು ಎಂದು ಕೆಲವರು ಭಾವಿಸಿರೋದು ಹಾಸ್ಯಾಸ್ಪದ. ರಾಜಕೀಯ ಕಾರಣ ಏನೇ ಇರಲಿ, ಸಿದ್ದರಾಮಯ್ಯನವರೂ ಬೆಂಬಲ ಸೂಚಿಸಿದ್ದರಿಂದ ಹೋರಾಟದ ತೀವ್ರತೆ ಹೆಚ್ಚಾಗಿ ಲಿಂಗಾಯತದ ಧರ್ಮದ ಅರಿವು ಇನ್ನಷ್ಟೂ ಹೆಚ್ಚಾದದ್ದು ಒಳ್ಳೆಯದು. ಕಾಂಗ್ರೆಸ್ ನಾಯಕರಲ್ಲದೆ, ಜೆಡಿಎಸ್ ನ ಹೊರಟ್ಟಿಯಂತವರು, ಮಹಾರಾಷ್ಟ್ರದ ಬಿಜೆಪಿ ನಾಯಕರ ಬೆಂಬಲ ಸಹ ಸಿಕ್ಕಿದೆ ಹೀಗಿರೋವಾಗ ಕೇವಲ ಒಂದು ಪಕ್ಷಕ್ಕೆ ಈ ಹೋರಾಟವನ್ನು ಸೀಮಿತಗೊಳಿಸೋದು ಮೂರ್ಖತನ.
10. ಸ್ವತಂತ್ರ ಧರ್ಮಕ್ಕೆ ಮಾನ್ಯತೆ ಸಿಗುತ್ತೆ ಅಂತ ವಿಶ್ವಾಸವಿದೆಯಾ ?
ಉತ್ತರ : ಖಂಡಿತ. ನಾವು ಏಕದೇವನನ್ನು ಪೂಜಿಸುತ್ತೇನೆ ವಚನ ಸಾಹಿತ್ಯವೇ ನಮ್ಮ ಧರ್ಮಗ್ರಂಥ. ಸ್ವತಂತ್ರ ಧರ್ಮಕ್ಕೆ ಬೇಕಾಗಿರೋ ಎಲ್ಲಾ ಅರ್ಹತೆಯನ್ನೂ ಹೊಂದಿದೆ. ಸ್ವತಂತ್ರ ಧರ್ಮಕ್ಕೆ ಅಡ್ಡಗಾಲು ಹಾಕುತ್ತಿರೋ, ಹಿಂದಿನಿಂದ ಕುಮ್ಮಕ್ಕು ನೀಡುತ್ತಿರೋ, ಲಿಂಗಾಯತ ಧರ್ಮದ ಬಗ್ಗೆ ಚೂರೂ ತಿಳಿಯದೇ ಬಾಯಿಗೆ ಬಂದಹಾಗೆ ಮಾತಾಡುತ್ತಿರೋ ಲಿಂಗಾಯತ ವಿರೋಧಿಗಳು ಬಾಯಿಮುಚ್ಚಿಕೊಂಡರೇ ಸಾಕಷ್ಟೇ. ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಕ್ಕರೆ ನಿಮಗೇನೂ ನಷ್ಟವಿಲ್ಲ ವೃಥಾ ಚಿಂತಿಸದೇ, ಭಯ ಪಡದೇ ಜೈನ ಧರ್ಮಕ್ಕೆ ದಾರಿ ಮಾಡಿಕೊಟ್ಟಂತೆ ನಿಮಗೆ ಸಂಬಂಧಿಸಿರದ ಲಿಂಗಾಯತ ಧರ್ಮದ ಬಗ್ಗೆ ಮೌನ ವಹಿಸಿದರೆ ಒಳ್ಳೆಯದು. ಇದು ನಮ್ಮ, ಸರ್ಕಾರ ಹಾಗೂ ನ್ಯಾಯಾಲದ ನಡುವಿನ ವಿಷಯ ಇದರಲ್ಲಿ ಮೂರನೇಯವರು ಮೂಗು ತೂರಿಸೋ ಅಗತ್ಯವಿಲ್ಲ. ನಮ್ಮ ಧಾರ್ಮಿಕ ಹಕ್ಕನ್ನು ನಾವು ಕಾನೂನಿನ ಮೊರೆ ಹೊಕ್ಕಾದರೂ ಪಡೆಯುತ್ತಿವೆ. ಅದರ ದಾಖಲೆಗಳನ್ನು ಕಂಡವರಿಗೆಲ್ಲಾ ತೋರಿಸೋ ಅಗತ್ಯವಿಲ್ಲ.
11. ಸ್ವತಂತ್ರ ಧರ್ಮದ ಬೆಂಬಲಕ್ಕೆ ಕೆಲವು ಲಿಂಗಾಯತ ರಾಜಕಾರಣಿ, ಸ್ವಾಮಿಗಳೇ ದೂರವಿದ್ದಾರಲ್ಲ ? ಸ್ವತಂತ್ರ ಧರ್ಮವಾದರೆ ಲಿಂಗಾಯತರು ಇಲ್ಲಿವರೆಗೂ ಆಚರಿಸಿಕೊಂಡು ಬಂದ ಆಚರಣೆಗಳನ್ನು ಏನು ಮಾಡಬೇಕು ?
ಉತ್ತರ : ಹಿಂದೆ ಪ್ರತ್ಯೇಕ ಧರ್ಮಕ್ಕಾಗಿ ತಮ್ಮ ಅಧಿಕಾರಾವಧಿಯಲ್ಲಿ ಪ್ರಯತ್ನಿಸಿರೋರು ಇಂದು ಮಗುಮ್ಮಾಗಿರಲು ಕಾರಣ ಧರ್ಮಕ್ಕಿಂತಲೂ ಅವರಿಗೆ ಪಕ್ಷ, ಅಧಿಕಾರದ ಆಸೆ ಹೆಚ್ಚಾಗಿರೋದೆ ಕಾರಣ. ಇಂತವರಿಗೆ ತಕ್ಕ ಪಾಠವನ್ನು ಲಿಂಗಾಯತರು ಮುಂದಿನ ದಿನಗಳಲ್ಲಿ ಕಲಿಸುತ್ತಾರೆ. ಇದರ ನಡುವೆಯೂ ಪಕ್ಷಭೇದ ಮರೆತು ಕಾಂಗ್ರೆಸ್, ಜೆಡಿಎಸ್ ನ ಹೊರಟ್ಟಿಯಂತಹ ನಾಯಕರು, ಮಹಾರಾಷ್ಟ್ರದ ಬಿಜೆಪಿ ನಾಯಕರು ಸಹ ಲಿಂಗಾಯತ ಧರ್ಮದ ಬೆಂಬಲಕ್ಕೆ ನಿಂತಿದ್ದಾರೆ. ಜೊತೆಗೆ ನಾಡಿನ ಅನೇಕ ಮಠಾಧೀಶರುಗಳು ಒಗ್ಗೂಡಿರೋದು ಸಂತೋಷದ ವಿಚಾರ.
ಅಂದಿನ ಶೋಷಿತ, ದಲಿತ ವರ್ಗಗಳೇ ಇಂದಿನ ಲಿಂಗಾಯತರು ಇದನ್ನು ಈಗಿನ ಲಿಂಗಾಯತರು ಅರ್ಥ ಮಾಡಿಕೊಳ್ಳಬೇಕು ಇನ್ನೂ ನಮ್ಮಲ್ಲಿ ಸಾಕಷ್ಟು ಜಾಗೃತಿ ಮೂಡಬೇಕಿದೆ. ದಿನೇ ದಿನೇ ಇದರ ಬಗ್ಗೆ ಲಿಂಗಾಯತರಲ್ಲಿ ಜಾಗೃತಿ ಹೆಚ್ಚಾಗುತ್ತಿದೆ ಇದಕ್ಕೆ ಲಿಂಗಾಯತ ಸಮಾವೇಶಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಸೇರುತ್ತಿರೋದು ಸಾಕ್ಷಿ ಆಗಿದೆ ಲಿಂಗಾಯತ ಧರ್ಮದ ಪ್ರಕಾರವೇ ಜನನ, ಮದುವೆ, ಮರಣ ಇವುಗಳಿಗೆಲ್ಲಾ ನಮ್ಮದೇ ಆಚರಣೆಗಳು ಅಲ್ಪ ಪ್ರಮಾಣದಲ್ಲಿ ನಡೆಯುತ್ತಿವೆ ಅವು ಹೆಚ್ಚಾಗಬೇಕು ಅಂಧ ವೈದಿಕ ಆಚರಣೆಗಳನ್ನು ನಾವು ತೊರೆಯಬೇಕು ಲಿಂಗಾಯತ ಧರ್ಮದ ತತ್ವದಡಿಯಲ್ಲಿ ಸಾಗಬೇಕು. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಲಿಂಗಾಯತ ಮಠಗಳು, ಮಠಾಧೀಶರು ಮುಂದಿನ ದಿನಗಳಲ್ಲಿ ಅಧಿಕವಾಗಿ ಶ್ರಮಿಸಬೇಕು.
12. ಮುಸ್ಲಿಮರ ಜೊತೆ ಕೈ ಜೋಡಿಸಿದ್ದೀರಿ. ಹಿಂದೂ ಧರ್ಮವನ್ನು ಒಡೆಯುತ್ತಿದ್ದೀರಿ ಎಂದು ಸಾಮಾಜಿಕ ತಾಣಗಳಲ್ಲಿ ಬಡಬಡಿಸೋರಿಗೆ ಏನು ಹೇಳುತ್ತೀರಿ ? ಕೊನೆಯದಾಗಿ, ಲಿಂಗಾಯತ ಧರ್ಮ ವಿರೋಧಿಗಳಿಗೆ ಏನು ಹೇಳ ಬಯಸುತ್ತೀರಿ?
ಉತ್ತರ : ಹಿಂದೂ ಸಮಾಜೋತ್ಸದಲ್ಲಿ ಮುಸ್ಲಿಮರು ತಂಪು ನೀರಿನ ವ್ಯವಸ್ಥೆ ಮಾಡಿದರೆ ಅದು ಸೌಹಾರ್ದತೆ ; ಆದರೆ ಅದೇ ಲಿಂಗಾಯತ ಸಮಾವೇಶದಲ್ಲಿ ದೂರದಿಂದ ಬಂದವರಿಗೆ ಮುಸ್ಲಿಂ ಭಾಂದವರು ನೀರು, ಹಣ್ಣಿನ ವ್ಯವಸ್ಥೆ ಮಾಡಿದರೆ ನಿಮಗೆ ಅಲ್ಲೇಕೆ ತಪ್ಪು ಕಾಣುತ್ತದೆ ? ಜೊತೆಗೆ, ಧರ್ಮ ವಿಭಜನೆ ಮಾಡುತ್ತಿದ್ದಾರೆ ಅದಕ್ಕೆ ಮುಸ್ಲಿಮರು ಸಹಕರಿಸುತ್ತಿದ್ದಾರೆ ಎಂಬ ವೃಥಾ ಆರೋಪ. ಇದೇ ನಿಮ್ಮ ಇಬ್ಬಂದಿತನ ಸಂಘದ ಶಾಖೆಗಳಲ್ಲಿ ಮುಸ್ಲಿಮರಿದ್ದರೆ ಅದು ರಾಷ್ಟ್ರೀಯವಾದ. ನಿಮ್ಮ ಸಮಾವೇಶಗಳಲ್ಲಿ ಭಾಂದವರು ನೀರಿನ ವ್ಯವಸ್ಥೆ ಮಾಡಿದರೆ ಅದು ಸೌಹಾರ್ದತೆ ಆದರೆ, ಲಿಂಗಾಯತರ ಜೊತೆ ಮುಸ್ಲಿಮರು ಇದ್ದರೆ ನಿಮ್ಮ ಕಣ್ಣು ಉರಿಯುತ್ತದೆ ಅದೇಕೋ ? ಕಾಮಾಲೆ ಕಣ್ಣೋರಿಗೆ ಕಾಣೋದೆಲ್ಲಾ ಹಳದಿ ಎಂಬಂತಾಯಿತು ನಿಮ್ಮ ಕಥೆಯಲ್ಲವೇ ?
ಲಿಂಗಾಯತ ಧರ್ಮ ಯಾವುದೇ ಒಬ್ಬ ರಾಜಕಾರಣಿ, ಸ್ವಾಮೀಜಿಗೆ ಸಂಬಂಧಿಸಿದ ಹೋರಾಟವಲ್ಲ. ಅವರ ಹೇಳಿಕೆಯನ್ನು ಹಿಡಿದುಕೊಂಡು ಅದಕ್ಕೆ ದೊಡ್ಡ ಬಣ್ಣ ಕಟ್ಟಿ ನಿಮ್ಮ ಎಂಜಲು ಮಾಧ್ಯಮಗಳ ಮೂಲಕ ಪ್ರಚಾರಮಾಡಿ ಲಿಂಗಾಯತ ಧರ್ಮದ ಹೋರಾಟಕ್ಕೆ ಮಸಿ ಬಡಿಯೋ ತೆವಲು ನಿಮಗೇಕೆ ? ಮುಂದೆ ನಮಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಕ್ಕು ಅದರಿಂದಾಗಿ ನಮಗೆ ಸಾಂವಿಧಾನಿಕವಾಗಿ ಮೀಸಲಾತಿ ಸಿಕ್ಕರೆ ಅದರಿಂದ ತೊಂದರೆಗೊಳಗಾಗೋರು ಇತರ ಅಲ್ಪಸಂಖ್ಯಾತರಾದ ಜೈನ, ಬೌದ್ಧ, ಸಿಖ್, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿಗಳು ಯಾಕೆಂದರೆ ಅವರ ಮೀಸಲಾತಿಯಲ್ಲಿ ಕಡಿತವಾಗುತ್ತೆ. ಆದರೆ ಅವರಿಗೇನೇ ಸ್ವತಂತ್ರ ಲಿಂಗಾಯತ ಧರ್ಮದ ಬಗ್ಗೆ ತಕರಾರಿಲ್ಲದಿರುವಾಗ ನಿಮಗಾಗೋ ತೊಂದರೆಯೇನು ?
ಶಾಂತಿ, ಸಹಬಾಳ್ವೆಗೆ ಹೆಸರಾಗಿರೋ ನಮ್ಮ ನಾಡಿನಲ್ಲಿ ಕನ್ನಡ ನಾಡಿನಲ್ಲೇ ಹುಟ್ಟಿ ಬೆಳೆದ ಧರ್ಮಕ್ಕಾಗಿ ಹೀಗೆ ಶಾಂತಿಯುತವಾಗಿ ಒಂದು ವರ್ಗ ತಮ್ಮ ಸಾಂವಿಧಾನಿಕ ಹಕ್ಕಿಗಾಗಿ ಬೇಡಿಯಿಟ್ಟಿರೋವಾಗ ಅದಕ್ಕೆ ಅಪಪ್ರಚಾರದ ಮೂಲಕ ತಡೆಯೊಡ್ಡೋದು, ಲಿಂಗಾಯತ ಧರ್ಮದ ಪರ ಒಲವಿರೋ ರಾಜಕೀಯ ಧುರೀಣರಿಗೆ, ಸ್ವಾಮೀಜಿಗಳಿಗೆ, ಲಿಂಗಾಯತ ಮುಖಂಡರಿಗೆ ಕೊಲೆ ಬೆದರಿಕೆ ಒಡ್ಡೋದು, ನಿಂದಿಸೋದು ಸಿಂಧುವಲ್ಲ. ಸಾಮಾಜಿಕ ತಾಣಗಳಲ್ಲಿ ಸುಖಾಸುಮ್ಮನೆ ವಿರೋಧಿಸೋದು ಸಹ ತರವಲ್ಲ .ಇದು ನಮ್ಮ, ಸರ್ಕಾರ ಹಾಗೂ ನ್ಯಾಯಾಲಯದ ನಡುವಿನ ವಿಷಯ. ಅಗತ್ಯ ದಾಖಲೆಗಳ ಮೂಲಕ ಸಾಂವಿಧಾನಿಕ ಮಾನ್ಯತೆ ಪಡೆಯೋದು ನಮ್ಮ ಮೇಲಿನ ಜವಾಬ್ದಾರಿ ಈ ಮಧ್ಯೆ ಅಡ್ಡವಾಗಿ ನಿಲ್ಲಲು ನೀವ್ಯಾರು ? ಇಷ್ಟನ್ನು ಅರ್ಥಮಾಡಿಕೊಂಡು ತೆಪ್ಪಗಿದ್ದು ವಿನಾಕಾರಣ ದ್ವೇಷಿಸದೇ ಲಿಂಗಾಯತರೊಂದಿಗೆ ಸೌಹಾರ್ದತೆ ಬೆಳೆಸಿಕೊಂಡು ಹೋಗೋದು ಎಲ್ಲಾ ದೃಷ್ಟಿಯಿಂದಲೂ ಉತ್ತಮ ಯೋಚಿಸಿ. ಪ್ರೀತಿಯೋ ? ದ್ವೇಷವೋ ?
✍️ಅಮರ ಪಾಟೀಲ ರಾಯಚೂರು ,ಬೆಂಗಳೂರು