
ಕಾರ್ಖಾನೆಗಳ ವಿಷಾನೀಲ, ತ್ಯಾಜ್ಯ, ಧೂಳು, ಕಪ್ಪು ಹೊಗೆಯ ಮೊದಲ ಭಾದಿತರೇ ನಗರದ ಪ್ರತಿಷ್ಠಿತ ಬಡಾವಣೆ ಎನಿಸಿಕೊಂಡ ಗವಿಶ್ರೀ ನಗರ-ಗುರುರಾಜ ಹಲಗೇರಿ


The first victims of the toxic fumes, waste, dust, and black smoke from factories are the prestigious Gavishree Nagar-Gururaja Halageri
ಕೊಪ್ಪಳ: ಇಲ್ಲಿಗೆ ಸಮೀಪದಲ್ಲಿರುವ ಅನೇಕ ಕಾರ್ಖಾನೆಗಳ ವಿಷಾನೀಲ, ತ್ಯಾಜ್ಯ, ಧೂಳು, ಕಪ್ಪು ಹೊಗೆಯ ಮೊದಲ ಭಾದಿತರೇ ನಗರದ ಪ್ರತಿಷ್ಠಿತ ಬಡಾವಣೆ ಎನಿಸಿಕೊಂಡ ಗವಿಶ್ರೀ ನಗರ ಎಂದು ನಗರಸಭೆ ಸದಸ್ಯರಾದ ಗುರುರಾಜ ಹಲಗೇರಿ ಅವರು ಅಳಲು ತೋಡಿಕೊಂಡರು.
ಅವರು ನಗರಸಭೆ ಮುಂದೆ ನಡೆದಿರುವ ಕಾರ್ಖಾನೆಗಳ ವಿರೋಧಿ ಹೋರಾಟದ 56ನೇ ದಿನ ಶ್ರೀ ಗುರುಬಸವ ಬಣಜಿಗ ಪತ್ತಿನ ಸಹಕಾರ ಸಂಘದಿಂದ ಬೆಂಬಲ ನೀಡಿ ಮಾತನಾಡಿದರು.
ಬಲ್ಡೋಟಾ ತೊಲಗಿಸುವದರ ಜೊತೆಗೆ ಇಲ್ಲಿ ಕೆಲವು ಸಣ್ಣ ಸ್ಪಾಂಜ್ ಐರನ್, ಕೆಮಿಕಲ್ ಮತ್ತು ರಸಗೊಬ್ಬರ ಕಾರ್ಖಾನೆಗಳು ಸಹ ಸಾಕಷ್ಟು ಸಮಸ್ಯೆ ಮಾಡುತ್ತಿದ್ದು ಸರಕಾರ ಅವುಗಳನ್ನು ಸೀಜ್ ಮಾಡಲು ಕ್ರಮ ತೆಗೆದುಕೊಳ್ಳುವ ಕೆಲಸ ಮಾಡಲಿ. ಹೋರಾಟಕ್ಕೆ ಸದಾ ಬೆಂಬಲ ಕೊಡುವ ಜೊತೆಗೆ ಸರ್ವ ರೀತಿಯ ಸಹಕಾರ ನೀಡುವದಾಗಿ ಘೋಷಿಸಿದರು.
ಇದೇ ವೇಳೆ ಮಾತನಾಡಿದ ವೇದಿಕೆಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ಜನರ ಬದುಕು, ಉಸಿರು ಮತ್ತು ಆರೋಗ್ಯ ಹಾಗೂ ನಗರಗಳ ಬೆಳವಣಿಗೆಗಾಗಿ ಹೋರಾಡುತ್ತಿರುವ ಒಂದು ವೇದಿಕೆಯ ವಿರುದ್ಧ ಮತ್ತೊಂದು ಪ್ರಾಯೋಜಿತ ಹೋರಾಟವೂ ನಡೆದಿದೆ. ಅದು ಕಾರ್ಖಾನೆಯ ಸವಲತ್ತು ಸಹಕಾರದಿಂದ ನಡೆದಿರುವದು ಎಲ್ಲರಿಗೂ ಗೊತ್ತಿದೆ. ಹೋರಾಟ ವೇದಿಕೆ ಕೇವಲ ಬಲ್ಡೋಟಾ ಕಂಪನಿ ವಿರುದ್ಧಿದೆ ಎಂದು ಸುಳ್ಳು ಹೇಳುವ ಒಂದು ಬಣಕ್ಕೆ ವಾಸ್ತವದ ಅರಿವಿಲ್ಲ, ಈಗ ನಗರಕ್ಕೆ ಪ್ರಮುಖ ಸಮಸ್ಯೆ ಆಗಿರುವ ಬಲ್ಡೋಟಾ ವಿರುದ್ಧ ನಗರದ ಜನ ಹೋರಾಟ ಮಾಡುತಿದ್ದಾರೆ, ಅದರ ಜೊತೆಗೆ ಗ್ರಾಮೀಣ ಜನರ ಬದುಕು ಕಸಿದು ಮೋಸ ಮಾಡಿರುವ ಕಿರ್ಲೋಸ್ಕರ್, ಕಲ್ಯಾಣಿ, ಮುಕುಂದ ಸುಮಿ, ಎಕ್ಸ್ ಇಂಡಿಯಾ ಸೇರಿ ಅನೇಕ ಕಾರ್ಖಾನೆಗಳ ವಿರುದ್ಧ ಕರಪತ್ರ, ಹೇಳಿಕೆ, ಬ್ಯಾನರ್ ಕಟ್ಟುವ ಮೂಲಕ ಹೋರಾಟ ಮಾಡಲಾಗುತ್ತಿದೆ. ಇಲ್ಲಿ ಯಾವುದೇ ಪೂರ್ವಾಗ್ರಹ ಇಲ್ಲ ಹಗೆತನ ಇಲ್ಲ ಕೇವಲ ಜನರ ಕಾಳಜಿ ಇದೆ ಎಂದರು. ಇನ್ನು ಕಾರ್ಖಾನೆ ಬೇಕು ಎನ್ನುವವರು ತಮ್ಮ ಹೋರಾಟ ಮಾಡಲಿ, ಆದರೆ ಅನಾವಶ್ಯಕವಾಗಿ ಜಂಟಿ ಕ್ರಿಯಾ ವೇದಿಕೆಯ ಪ್ರಾಮಾಣಿಕ ಹೋರಾಟದ ಕಡೆಗೆ ಬೊಟ್ಟು ತೋರಿಸಬಾರದು, ಅದು ಮತ್ತೆ ಮುಂದುವರಿದರೆ ಬೇರೆ ರೀತಿಯಲ್ಲಿ ಉತ್ತರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾರ್ಖಾನೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ ಎಂದು ಅದರ ಪ್ರಾಯೋಜಿತ ಹೋರಾಟದ ವೇದಿಕೆಯಲ್ಲಿ ದಾರಿಹೋಕನೊಬ್ಬ ಮಾತನಾಡುತ್ತಾನೆಂದರೆ ಅದನ್ನು ಕೇಳಿಕೊಂಡು ಕೂಡಲು ಸಾಧ್ಯವಿಲ್ಲ, ಈಗಾಗಲೇ ನಿವೃತ್ತ ಇಂಜಿನಿಯರಗಳೇ ಹೋರಾಟ ಬೆಂಬಲಿಸಿ ಇಲ್ಲಿನ ಎಲ್ಲಾ ಕಾರ್ಖಾನೆಗಳ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಸಂಸದ ರಾಜಶೇಖರ ಹಿಟ್ನಾಳ ಅವರ ಸಲಹೆಯಂತೆ ಭೂಮಿ ಮರಳಿ ಪಡೆದು ರೈತರನ್ನೇ ಮಾಲೀಕರನ್ನಾಗಿ ಮಾಡಲಿ ಎಂದರು. ಅಲ್ಲದೇ ಘನ ನ್ಯಾಯಾದೀಶರು ಬಸಾಪುರ ಕೆರೆ ಉಳಿಸಲು ಕೊಟ್ಟ ಹೇಳಿಕೆ ಮತ್ತು ಕ್ರಮವನ್ನು ವೇದಿಕೆಯಲ್ಲಿ ಗೌರವದಿಂದ ಸ್ವಾಗತಿಸಲಾಗಿದ್ದು, ನ್ಯಾಯ ವ್ಯವಸ್ಥೆ ಈಗಲೂ ಗಟ್ಟಿಯಾಗಿದೆ ಎಂಬ ಭಾವನೆ ಬಂದಿರುವದಾಗಿ ಹೇಳಿದರು. ಈ ಸಂದರ್ಭದಲ್ಲಿ ಶ್ರೀ ಗುರುಬಸವ ಬಣಜಿಗರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸಂಗಪ್ಪ ವಾರದ, ನಿರ್ದೇಶಕರಾದ ಈಶ್ವರಪ್ಪ ದಿನ್ನಿ, ಶಿವಯೋಗಿ ಹಾವಿನಾಳ, ನಟರಾಜ ಸವಡಿ, ಪ್ರಕಾಶ ವದ್ನಾಳ, ಉಮಾ ಅಂಗಡಿ, ಸೌಮ್ಯ ನಾಲ್ವಾಡ, ಜಗದೀಶ ಗುತ್ತಿ, ವೀರಣ್ಣ ಬಳ್ಳೊಳ್ಳಿ, ಗವಿಸಿದ್ದಪ್ಪ ಮುದಗಲ್, ಮಾರುತಿ ಅಂಗಡಿ, ಖಜಾಂಚಿ ಸಹನಾ ಶೆಟ್ಟರ, ಸಿಇಓ ಪ್ರಕಾಶ ಕೋರಿ ಬೆಂಬಲಿಸಿದರು. ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಹಾಂತೇಶ ಕೊತಬಾಳ, ಡಿ. ಎಂ. ಬಡಿಗೇರ, ಡಿ. ಹೆಚ್. ಪೂಜಾರ, ಪುಷ್ಪಲತಾ ಏಳುಬಾವಿ, ರಾಜಶೇಖರ ಏಳುಬಾವಿ, ಮಹೇಶ ಮನ್ನಾಪೂರ, ಮಹಾದೇವಪ್ಪ ಮಾವಿನಮಡು, ರವಿ ಕಾಂತನವರ, ಗಂಗಾಧರ ಖಾನಾಪೂರ, ಸಾವಿತ್ರಿ ಮುಜುಂದಾರ, ಜಗದೀಶ ಗುತ್ತಿ, ಬಸವರಾಜ ನರೇಗಲ್, ಎಸ್. ಬಿ. ರಾಜೂರ ಇತರರು ಇದ್ದರು.


