Breaking News

“ಕರ್ನಾಟಕದಸಾಂಸ್ಕೃತಿಕ ನಾಯಕನಾಗಿ ಬಸವಣ್ಣ : ಡಾ|| ಎಸ್ ಎಮ್ ಜಾಮದಾರ”

basavaṇṇa: Ḍā|| es em jāmadāra””Basavanna as Cultural Leader of Karnataka : Dr.|| SM Jamadara”

ಜಾಹೀರಾತು
Screenshot 2024 02 18 22 09 26 24 6012fa4d4ddec268fc5c7112cbb265e7 268x300

ಸಂಸ್ಕ್ರತಿ ಎನ್ನುವುದು ಒಂದು ಬಹುವ್ಯಾಪಕ ಸಂಕೀರ್ಣ ಪರಿಕಲ್ಪನೆ. ಅದರಲ್ಲಿ ಧರ್ಮ, ಭಾಷೆ, ಶಿಕ್ಷಣ, ಸಂಪ್ರದಾಯ, ನ್ಯಾಯ, ನೀತಿ, ಸಾಹಿತ್ಯ, ಸಂಗೀತ, ನಾಟಕ, ಇತ್ಯಾದಿ ಪರಿಕರಗಳು ಅಡಕವಾಗಿರುತ್ತವೆ. “ನಾವು ಏನಾಗಿದ್ದೇವೆಯೋ, ಹೇಗಿದ್ದೇವೆಯೋ ಅದು ಸಂಸ್ಕೃತಿ, ನಮ್ಮಲ್ಲಿ ಏನಿದೆಯೋ ಅದು ನಾಗರಿಕತೆ” ಎನ್ನುವುದು ಸಂಸ್ಕೃತಿಯ ಸಮಾಜಶಾಸ್ತ್ರಿಯ ಪರಿಭಾಷೆ. ಇವೆಲ್ಲವೂ ಬಸವಣ್ಣನಲ್ಲಿ ಅರ್ಥವತ್ತಾಗಿ ಮೇಳೈಸಿವೆ ಎಂದರೆ ಅತಿಶಯೋಕ್ತಿಯಲ್ಲ. ಸಾವಿರಾರು ವರ್ಷಗಳಿಂದ ಜಡ್ಡು ಹಿಡಿದ ಗೊಡ್ಡು ಧಾರ್ಮಿಕ ಆರ್ಥಿಕ ಸಾಮಾಜಿಕ ಆಚರಣೆಗಳಿಗೆ ತಿಲಾಂಜಲಿ ನೀಡಿ ಹೊಸ ಧಾರ್ಮಿಕ ಆರ್ಥಿಕ ರಾಜಕೀಯ ಸಂಸ್ಕ್ರತಿಯನ್ನು ಕಟ್ಟಿದವ ಬಸವಣ್ಣ.

ಕಾರ್ಲ್ ಮಾರ್ಕ್ಸ್ ನಿಗಿಂತ 800 ವರ್ಷಗಳ ಹಿಂದೆ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯುಳ್ಳ ಸಮಾಜದ ಕನಸು ಕಂಡಿದ್ದ ಬಸವಣ್ಣ ಅದನ್ನು ನಿರ್ಮಿಸಲು ಪ್ರಯತ್ನಿಸಿದ. ‘ಕಾಯಕವೇ ಕೈಲಾಸ’ ಎಂಬ ಮಹಾಮಂತ್ರದ ಮೂಲಕ ಆರ್ಥಿಕ ಕ್ಷೇತ್ರದಲ್ಲಿ ಸಮಾನತೆ ಸಾರುತ್ತ ಶ್ರಮಜೀವಿಗಳಿಗೆ ಮಹತ್ವ ನೀಡಿದ ಭಾರತದ ಮೊದಲ ದಾರ್ಶನಿಕ ಬಸವಣ್ಣ. ಆ ದೃಷ್ಟಿಯಿಂದ ಇಂದಿನ ಎಡಪಂಥೀಯರಿಗೆ ಬಸವಣ್ಣ ಬಹಳ ಇಷ್ಟ ಏಕೆಂದರೆ ಅವನ ತತ್ವಗಳು ಮಾರ್ಕ್ಸ್ ನ ಏಲಿಯನೇಶನ್ನಿಗೆ ಹತ್ತಿರವಾಗಿವೆ.

ಆದರೆ ಬಸವಣ್ಣನನ್ನು ಹತ್ತೊಂಬತ್ತನೆಯ ಶತಮಾನದಿಂದ ಬೆಳೆದು ಬಂದಿರುವ ಎಡ, ಬಲ, ಕೇಂದ್ರೀಯ ಎಂಬ ಸೀಮಿತ ಮಿತಿಯೊಳಗೆ ಬಂಧಿಸಲಾಗದು. ಅವನು ಅಪಾರ ಭಕ್ತಿ ಭಂಡಾರಿ, ಏಕದೇವೋಪಾಸಕ ಎಂದರೆ ಎಡಪಂಥಿಯರಿಗೆ ಅದು ಅಪಥ್ಯವಾಗುತ್ತದೆ. ಏಕೆಂದರೆ ಅದು ಮಾರ್ಕ್ ನ ವಿರುದ್ಧದ ಹೆಗೆಲ್ಲನ ಏಲಿಯನೇಶನ್ನಿಗೆ ಸಮೀಪವಾಗಿದೆ. ಆದರೆ ಅದು ಸತ್ಯ! ಬಸವಣ್ಣ ಓರ್ವ ಪರಿಪೂರ್ಣ ಚಿಂತಕ, ಅವನಲ್ಲಿ ಎಡ ಬಲ ಕೇಂದ್ರಗಳೆಲ್ಲವೂ ಮಿಶ್ರಿತ. ದಾಸೋಹ ಎಂಬುದು ಆದೇ ಅರ್ಥದ ವಿಶಾಲ ಪರಿಕಲ್ಪನೆ.

ಪ್ರಾಮಾಣಿಕ ದುಡಿಮೆಯಿಂದ ಬಂದ ಆದಾಯದಲ್ಲಿ ತನ್ನ ಅವಶ್ಯಕತೆ ಪೂರೈಸಿ ಉಳಿದದ್ದು ಸಮಾಜದ ಆಸ್ತಿ. ಅದು ಸಮಾಜಕ್ಕೆ ಸಂದಾಯವಾಗಬೇಕಾದ ಸಾಮಗ್ರಿ. ಅದರ ಆಧುನಿಕ ಅಸ್ತ್ರವೆ ತೆರಿಗೆ ಪದ್ಧತಿ. ಧಾರ್ಮಿಕವಾಗಿ ಸಮಾನತೆ, ವೈಯಕ್ತಿಕ ಸ್ವಾತಂತ್ರ್ಯ, ಏಕದೇವೋಪಾಸನೆಯುಳ್ಳ ಹೊಸ ಧರ್ಮವನ್ನು ಸ್ಥಾಪಿಸಿದವನು ಬಸವಣ್ಣ. ಅದರ ನಿಜವಾದ ಅನುಯಾಯಿಗಳು ಇಂದಿನ ಲಿಂಗಾಯತರಲ್ಲ, ಆದರೆ ಕೆಳವರ್ಗದ ಕಾಯಕಜೀವಿಗಳು. ಇಂದಿನ ಉನ್ನತ ವರ್ಗದ ಬಹುತೇಕ ಲಿಂಗಾಯತರು ಮತ್ತು ಅನೇಕ ಲಿಂಗಾಯತ ಮಠಗಳು ಮಹಾಜಾತಿವಾದಿಗಳಾಗಿ, ವರ್ಗವಾದಿಗಳಾಗಿ ಹೆಜ್ಜೆಹೆಜ್ಜೆಗೂ ಬಸವಣ್ಣನಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದರೆ ಅದು ವಾಸ್ತವ ಸತ್ಯ.

ಭಾಷೆಯ ದೃಷ್ಟಿಯಿಂದ ಜೈನ ಕವಿಗಳ ನಂತರ ಕನ್ನಡವನ್ನು ಅಪಾರವಾಗಿ ಬೆಳೆಸಿದವರು ಹನ್ನೆರಡನೆಯ ಶತಮಾನದ ಶರಣ ಜೀವಿಗಳು, ಅವರ ನಾಯಕನೇ ಬಸವಣ್ಢ! ಇಂದಿನ ಅಪಾರವಾದ ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಬೃಹತ್ ಭಂಡಾರವಾಗಿ ಬೆಳೆಯುತ್ತಿದೆ.

ಅಸ್ಪ್ರಶ್ಯತೆಯ ಸಾಮಾಜಿಕ ಅನಿಷ್ಟ ಸಂಪ್ರದಾಯಕ್ಕೆ ಮೊಟ್ಟಮೊದಲ ಕೊಡಲಿಯ ಪೆಟ್ಟುಕೊಟ್ಟವರು ಬಸವಣ್ಢ. ಅದಕ್ಕೆ ಆಧಾರವಾಗಿದ್ದ ವೈದಿಕ ಧರ್ಮದ ವಿರುದ್ಧ ಸೆಡ್ಡು ಹೊಡಿದವರು ಬಸವಣ್ಢ. ಆದ್ದರಿಂದಲೇ ಎಲ್ಲೆಲ್ಲೂ ಬಸವಣ್ಢನ ತತ್ವಗಳನ್ನು ಇಂದಿಗೂ ವಿರೋಧಿಸುತ್ತಿರುವವರು ಅದೇ ಗುಂಪಿನ ಜನರು. ಅದು ಒಂದು ಮಹತ್ವದ ಸಾಮಾಜಿಕ ಧಾರ್ಮಿಕ ಬದಲಾವಣೆಗೆ ನಾಂದಿ ಹಾಡಿತು.

ಸರ್ವಕ್ಷೇತ್ರಗಳಲ್ಲಿ ಸಮಾನತೆಯ ಮೊದಲ ಹರಿಕಾರ ಬಸವಣ್ಣ. ಅದು ಪೊಳ್ಳು ಘೋಷಣೆಯಾಗಿರಲಿಲ್ಲ, ಸಾಮಾಜಿಕ ಕ್ರಾಂತಿಯ ಕಹಳೆಯಾಗಿತ್ತು. ಇಂದಿನ ಸ್ತ್ರೀ ಸ್ವಾತಂತ್ರ್ಯದ ಆಂದೋಲನಕ್ಕೆ ಅಂದಿನ ಸೀಮಿತ ಪರಿಸರದಲ್ಲಿ ಅಡಿಪಾಯ ಹಾಡಿದವರು ಶರಣರು, ವಿಶೇಷವಾಗಿ 34 ಜನ ಮಹಿಳಾ ಶರಣೆಯರು. ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಷ್ಮಮ್ಮ, ರೇಮಮ್ಮ, ನೀಲಾಂಬಿಕೆ, ರೇಕಮ್ಮ, ಬೋಂತಾದೇವಿ ಮುಂತಾದ ಶರಣೆಯರು.

ರಾಜಕೀಯ ಕ್ಷೇತ್ರದಲ್ಲಿ ಇಂದಿನ ಪ್ರಜಾಪ್ರಭುತ್ವದ ಮಾದರಿಯಲ್ಲಿ 900 ವರ್ಷದ ಹಿಂದೆ ಅನುಭವ ಮಂಟಪವನ್ನು ಕಟ್ಟಿ ಬೆಳಸಿದವರು ಬಸವಣ್ಣ. ಸಂಗೀತ ನೃತ್ಯ ಸಿನೆಮಾ ನಾಟಕಗಳ ಕ್ಷೇತ್ರಗಳಲ್ಲಿ ಶರಣರ ವಚನಗಳ ಅಭಿವ್ಯಕ್ತಿಗೆ ಸಾಕ್ಷಿಯಾಗಿ ಅನೇಕ ಸಿನೆಮಾ, ನಾಟಕ, ನೃತ್ಯ, ವಚನ ಸಂಗೀತ ಕರ್ನಾಟಕದಲ್ಲಿ ಬೆಳೆದು ಬಂದಿವೆ.

ಹೀಗೆ ಯಾವುದೇ ರೀತಿಯಿಂದ ನೋಡಿದರೂ ಬಸವಣ್ಣನವರಿಗೆ ಸರಿಸಮನಾಗಿ ಆ ಎತ್ತರಕ್ಕೆ ನಿಲ್ಲಬಲ್ಲ ಇನ್ನೋರ್ವ ವ್ಯಕ್ತಿ ನಮಗೆ ದೊರೆಯುವುದು ವಿರಳ.

ಬಸವಣ್ಣನ ತತ್ವಗಳನ್ನು ಚೆನ್ನಾಗಿ ತಿಳಿದು ಆಚರಿಸುತ್ತಿರುವ ಇಂದಿನ ಕನಾ೯ಟಕದ ಮುಖ್ಯ ಮಂತ್ರಿಯಾದ ಸಿದ್ದರಾಮಯ್ಯ ಮಾತ್ರ “ಬಸವಣ್ಣನ್ನು ಕರ್ನಾಟಕದ ಸಾಂಸ್ಕ್ರತಿಕ ನಾಯಕ” ನನ್ನಾಗಿ ಘೋಷಿಸ ಬಲ್ಲವರು. ಅದು ಇಲ್ಲಿಯವರೆಗೆ ಕರ್ನಾಟಕವನ್ನಾಳಿದ ಯಾವುದೇ ಲಿಂಗಾಯತ ಮುಖ್ಯಮಂತ್ರಿಗೆ ಸಾಧ್ಯವಾಗದಿದ್ದುದು ಒಂದು ದುರಂತ!

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.