

Saptdhara' Kannada festival-202 spread the glory of Kannada land, language and culture
ಕನ್ನಡ ನಾಡು, ನುಡಿ, ಸಂಸ್ಕೃತಿಯ ವೈಭವ ಸಾರಿದ ‘ಸಪ್ತಧಾರ’ ಕನ್ನಡ ಹಬ್ಬ–202


ಎಂ.ಕೆ.ಪಿ.ಎಂ. ಆರ್.ವಿ. ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ವತಿಯಿಂದ ಕನ್ನಡ ಸಾಂಸ್ಕೃತಿಕ ಸಂಭ್ರಮ
ಬೆಂಗಳೂರು: ಕನ್ನಡ ಭಾಷೆ, ಕನ್ನಡ ನಾಡು, ನೆಲ, ಜಲ ಹಾಗೂ ಸಂಸ್ಕೃತಿಯ ಅಭಿಮಾನವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಉದ್ದೇಶದಿಂದ ಎಂ.ಕೆ.ಪಿ.ಎಂ. ಆರ್.ವಿ. ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ವತಿಯಿಂದ ಜಯನಗರದ ಕಾಲೇಜು ಆವರಣದಲ್ಲಿ ‘ಸಪ್ತಧಾರ–ಕನ್ನಡ ಸಾಂಸ್ಕೃತಿಕ ಸಂಭ್ರಮ 2026’ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯರು ಹಾಗೂ ವಕೀಲರಾದ ಎ.ಪಿ. ರಂಗನಾಥ್ ಅವರು ಮಾತನಾಡಿ, ಕರ್ನಾಟಕದ ಇತಿಹಾಸ, ಪರಂಪರೆ, ಕನ್ನಡ ಭಾಷೆಯ ಶ್ರೀಮಂತಿಕೆ ಹಾಗೂ ಕನ್ನಡಿಗರ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಕೊಂಡಾಡಿದರು.
ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯಲ್ಲಿ ಯುವಜನತೆ ಪ್ರಮುಖ ಪಾತ್ರ ವಹಿಸಬೇಕು. ಕನ್ನಡವನ್ನು ಕೇವಲ ಮಾತನಾಡುವುದಕ್ಕೆ ಸೀಮಿತಗೊಳಿಸದೆ, ಶಿಕ್ಷಣ, ಆಡಳಿತ, ಸಾಹಿತ್ಯ ಹಾಗೂ ದೈನಂದಿನ ಬದುಕಿನಲ್ಲಿ ಹೆಚ್ಚು ಹೆಚ್ಚು ಬಳಸುವ ಮೂಲಕ ಅದರ ಗೌರವವನ್ನು ಎತ್ತಿಹಿಡಿಯಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿ.ಎ. ಡಾ. ವಿಷ್ಣುಭರತ್ ಅಲಂಪಲ್ಲಿ, ಆಡಳಿತ ಮಂಡಳಿಯ ಸದಸ್ಯರು, ಎಂ.ಕೆ.ಪಿ.ಎಂ. ಆರ್.ವಿ. ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಹಾಗೂ ಆರ್.ವಿ. ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಅವರು ಮಾತನಾಡಿ, ಕರ್ನಾಟಕದ ವೈಭವ ಕೇವಲ ಅದರ ಭೌಗೋಳಿಕ ವಿಸ್ತಾರದಲ್ಲಿಲ್ಲ; ಸಾವಿರಾರು ವರ್ಷಗಳ ಇತಿಹಾಸ, ಸಾಹಿತ್ಯ, ಕಲೆ, ಸಂಗೀತ, ಶಿಲ್ಪಕಲೆ, ವಾಸ್ತುಶಿಲ್ಪ ಹಾಗೂ ಮಾನವೀಯ ಮೌಲ್ಯಗಳಲ್ಲಿ ಅಡಗಿದೆ ಎಂದು ತಿಳಿಸಿದರು.
ಕನ್ನಡಿಗರಾದ ನಾವು ನಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆ ಹೊಂದುವುದರ ಜೊತೆಗೆ ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸಿ, ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು. ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ನಮ್ಮ ಮಾತೃಭಾಷೆ ಮತ್ತು ತಾಯ್ನಾಡಿನ ಮೇಲಿನ ಅಭಿಮಾನವನ್ನು ಮರೆಯಬಾರದು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ, ಸಾಂಸ್ಕೃತಿಕ ಪ್ರಜ್ಞೆ ಹಾಗೂ ನಾಡಿನ ಬಗ್ಗೆ ಅಭಿಮಾನವನ್ನು ಬೆಳೆಸುತ್ತವೆ ಎಂದು ಅಭಿಪ್ರಾಯಪಟ್ಟರು.
ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದ ರಂಗಭೂಮಿ ಕಲಾವಿದರು ಹಾಗೂ ನಟರಾದ ಎಂ.ಎನ್. ಸುರೇಶ್ ಮತ್ತು ನೀನಾಸಂ ಅಶ್ವಥ್ ಅವರು ತಮ್ಮ ಮಾತುಗಳಲ್ಲಿ ಕನ್ನಡ ರಂಗಭೂಮಿ, ಚಲನಚಿತ್ರ ಹಾಗೂ ಕಲಾ ಕ್ಷೇತ್ರದ ಕೊಡುಗೆಯನ್ನು ಸ್ಮರಿಸಿದರು. ಕನ್ನಡ ಕಲೆಯ ಬೆಳವಣಿಗೆಯಲ್ಲಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಅಗತ್ಯವನ್ನು ಒತ್ತಿಹೇಳಿದರು. ಮತ್ತೊಬ್ಬ ಗೌರವಾನ್ವಿತ ಅತಿಥಿ ಎಸ್.ಬಿ. ರಾಜಣ್ಣ ಅವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ವರ್ಷದ ‘ಸಪ್ತಧಾರ’ ಎಂಬ ಶೀರ್ಷಿಕೆಯು ಕನ್ನಡದ ಒಂದೇ ಮೂಲದಿಂದ ಹರಿದುಬರುವ ಏಳು ಸಾಂಸ್ಕೃತಿಕ ಧಾರೆಗಳ ಸಂಗಮವನ್ನು ಪ್ರತಿನಿಧಿಸಿತು. ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಜನಪದ ಹಾಗೂ ಸೃಜನಶೀಲತೆಯ ವಿವಿಧ ಆಯಾಮಗಳನ್ನು ಒಳಗೊಂಡ ಕಾರ್ಯಕ್ರಮಗಳು ವಿದ್ಯಾರ್ಥಿಗಳು ಮತ್ತು ಪ್ರೇಕ್ಷಕರ ಮನಸೂರೆಗೊಂಡವು.
ವಿಶೇಷ ಆಕರ್ಷಣೆಯಾಗಿ ಖ್ಯಾತ ನಟ ಪ್ರೇಮ್ ಅವರ ಉಪಸ್ಥಿತಿ ಹಾಗೂ ದರ್ಶನ ನಾರಾಯಣ ಅವರ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು. ಸಂಗೀತ ಮತ್ತು ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಕನ್ನಡದ ವೈಭವವನ್ನು ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಆರ್.ವಿ. ಶಿಕ್ಷಣ ಸಂಸ್ಥೆಗಳ ಗೌರವಾನ್ವಿತ ಕಾರ್ಯದರ್ಶಿಗಳಾದ ಡಾ. (ಎಚ್.ಸಿ.) ಎ.ವಿ.ಎಸ್. ಮೂರ್ತಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಅಂಜಿನ ರೆಡ್ಡಿ ಕೆ.ಆರ್., ಆಡಳಿತ ಮಂಡಳಿಯ ಸದಸ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಬಗ್ಗೆ ಅತಿಥಿಗಳು ಹಾಗೂ ಅಧ್ಯಕ್ಷರು ವ್ಯಕ್ತಪಡಿಸಿದ ಅಭಿಮಾನಪೂರ್ಣ ಮಾತುಗಳು ಕಾರ್ಯಕ್ರಮಕ್ಕೆ ವಿಶೇಷ ಅರ್ಥ ಮತ್ತು ಮೆರುಗು ನೀಡಿದವು. ವಿದ್ಯಾರ್ಥಿಗಳಲ್ಲಿ ಕನ್ನಡದ ಬಗ್ಗೆ ಹೆಮ್ಮೆ ಹಾಗೂ ಸಾಂಸ್ಕೃತಿಕ ಜಾಗೃತಿ ಮೂಡಿಸುವಲ್ಲಿ ‘ಸಪ್ತಧಾರ–ಕನ್ನಡ ಹಬ್ಬ 2026’ ಒಂದು ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿಬಂದಿತು.


